Homeಅಂತರಾಷ್ಟ್ರೀಯಪ್ಯಾಲೆಸ್ಟೀನೀಯರ ಹೋರಾಟ; ದಬ್ಬಾಳಿಕೆಯ ವಿರೋಧ ಅದು ಜಗಳಗಂಟತನವಲ್ಲ

ಪ್ಯಾಲೆಸ್ಟೀನೀಯರ ಹೋರಾಟ; ದಬ್ಬಾಳಿಕೆಯ ವಿರೋಧ ಅದು ಜಗಳಗಂಟತನವಲ್ಲ

- Advertisement -
- Advertisement -

ಮೇ 22ರ ಪ್ರಜಾವಾಣಿ ದಿನಪತ್ರಿಕೆಯ ‘ಸಂಗತ’ದಲ್ಲಿ ಸುಚಿತ್ ಕೋಟ್ಯಾನ್ ಕುರ್ಕಾಲು ಅವರು ‘ನಾವು ಯುದ್ಧ ಮಾಡಬೇಕಾಗಿದೆ!’ ಎಂದು ಹೇಳುತ್ತ ಶಾಂತಿಯ ಪಾರಿವಾಳ ಹಾರಿಸಿದ್ದಾರೆ. ಅವರದ್ದು ವಾಸ್ತವತೆಯ ಅರಿವಿಲ್ಲದ ಮಾತು ಮಾತ್ರವಲ್ಲ ಅದನ್ನು ಅಸಡ್ಡೆ ಮಾಡುವ ಮಾತು ಎಂದೇ ಹೇಳಬೇಕಿದೆ.

‘ಮೂಲಭೂತವಾಗಿ ಚರಿತ್ರೆಯ ನಿರ್ಮಾಣವೇ ಕಟ್ಟುಕಥೆ, ವೈಜ್ಞಾನಿಕ ಸತ್ಯವು ಪೌರಾಣಿಕ ಸತ್ಯದಷ್ಟೇ ಅರ್ಥಪೂರ್ಣ ಅಥವಾ ಅರ್ಥಹೀನ, ಇದು ಮಹಾಕಥನ, ಗ್ರ್ಯಾಂಡ್ ನ್ಯಾರೇಟಿವ್‍ಗಳ ಕಾಲವಲ್ಲ’ ಎಂಬಂಥ ಆಧುನಿಕೋತ್ತರವಾದಿ ಚಿಂತನೆಗಳನ್ನು ಒಂದು ಅತಿಗೆ ಕೊಂಡುಹೋದಾಗ ಎಲ್ಲ ಚಿಂತನೆ ಮತ್ತು ಎಲ್ಲ ಘಟನೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿ, ನ್ಯಾಯತೀರ್ಮಾನ ಮಾಡುವ ಅಪಾಯ ಎದುರಾಗುತ್ತದೆ. ಅಂಥ ನ್ಯಾಯಾಲಯದ ಕಣ್ಣಿನಲ್ಲಿ, ಉತ್ತರ ವಿಯತ್ನಾಂ ಮೇಲೆ ಫ್ರಾನ್ಸ್ ಮತ್ತು ಅಮೇರಿಕಾ ದೇಶಗಳ ನಿಷ್ಕರುಣ ದಾಳಿಯೂ, ಇದಕ್ಕೆ ಪ್ರತಿಯಾಗಿ ಸ್ವಾತಂತ್ರ್ಯಪ್ರಿಯ ವಿಯತ್ನಾಮೀಯರು ನಡೆಸಿದ ದಿಟ್ಟ ಹೋರಾಟವೂ ಸಮಾನ ಮಟ್ಟದ ಅಪರಾಧಗಳು.  ಈ ಬಗೆಯ ನ್ಯಾಯದ ಪರಿಕಲ್ಪನೆಯನ್ನು, ಕೆಲವರ ಮೆದುಳಿನಲ್ಲಿ ಬಹಳ ಯಶಸ್ವಿಯಾಗಿ ನೆಡಲಾಗಿದೆ. ಅದರ ಪರಿಣಾಮ, ಸುಚಿತ್ ಕೋಟ್ಯಾನ್ ಅವರ ಲೇಖನದುದ್ದಕ್ಕೂ ಕಾಣುತ್ತದೆ.

ಇಸ್ರೇಲ್-ಪ್ಯಾಲೆಸ್ಟೀನ್ ಕದನವು ಎರಡು ದೇಶಗಳ ಜಗಳವಲ್ಲ. ಇಸ್ರೇಲ್, ಸಂಪೂರ್ಣ ಸ್ವಯಂ-ಆಡಳಿತದ ಹಕ್ಕನ್ನೂ, ವಿಶ್ವ ಸಂಸ್ಥೆಯ ಮಾನ್ಯತೆಯನ್ನೂ ಪಡೆದಿರುವ ಆಧುನಿಕ ‘ರಾಷ್ಟ್ರ’.  ಇದು, ಬಿಲಿಯಾಂತರ ಡಾಲರ್‍ ಬೆಲೆಬಾಳುವ ಯುದ್ಧೋಪಕರಣ ಹಾಗೂ ತಂತ್ರಜ್ಞಾನದ ವ್ಯಾಪಾರ-ವಹಿವಾಟಿನಲ್ಲಿ ತೊಡಗಿರುವ ‘ಬಲಿಷ್ಠ’ ರಾಷ್ಟ್ರವಾಗಿದೆ. ಸಾಕಷ್ಟು ಅಣ್ವಸ್ತ್ರಗಳನ್ನೂ ಹೊಂದಿದೆಯೆಂದು ಬಹುತೇಕ ರಾಷ್ಟ್ರಗಳು ನಂಬಿವೆ.  ಇನ್ನು, ಪ್ಯಾಲೆಸ್ಟೀನ್ ಒಂದು ಸ್ವತಂತ್ರ ರಾಷ್ಟ್ರವೆಂದು ವಿಶ್ವಸಂಸ್ಥೆಯು ಘೋಷಿಸಿ, ಖಾಯಂ ಸದಸ್ಯತ್ವ ನೀಡಬೇಕು ಎಂಬ ದಶಕಗಳ ನ್ಯಾಯಸಮ್ಮತವಾದ ಬೇಡಿಕೆಯು, ಪಾಶ್ಚಾತ್ಯ ದೇಶಗಳ ಅಡ್ಡಗಾಲಿನಿಂದಾಗಿ, ಇನ್ನೂ ಈಡೇರಿಲ್ಲ. ಎಲ್ಲಿಯವರೆಗೆ ವಿಶ್ವಸಂಸ್ಥೆಯು ಪ್ಯಾಲೆಸ್ಟೀನನ್ನು ಅದೊಂದು ಸ್ವತಂತ್ರ ರಾಷ್ಟ್ರ ಎಂದು ಗುರುತಿಸುವುದಿಲ್ಲವೋ, ಅಲ್ಲಿಯವರೆಗೆ ಪ್ಯಾಲೆಸ್ಟೀನೀಯರ ಹೋರಾಟವು, ಅದು ಎಷ್ಟೇ ನ್ಯಾಯಯುತವಾಗಿದ್ದರೂ, ಭಯೋತ್ಪಾದನೆ ಎಂದು ಬಿಂಬಿತವಾಗುತ್ತದೆ. ಅಲ್ಲದೆ, ಇಸ್ರೇಲ್‍ಗೆ ಹೋಲಿಸಿದರೆ ಪ್ಯಾಲೆಸ್ಟೀನ್‍ಗೆ ಸಿಗುತ್ತಿರುವ ಆರ್ಥಿಕ ಹಾಗೂ ಶಸ್ತ್ರಾಸ್ತ್ರಗಳ ನೆರವು ಸಾಗರದ ಮುಂದೆ ಸಾಸಿವೆಯಷ್ಟು! ಹಾಗಾಗಿ, ಈ ಇಬ್ಬರ ನಡೆಗಳನ್ನು ವಿಮರ್ಶಿಸುವ ಮಾನದಂಡಗಳು ಬೇರೆಬೇರೆಯಾಗಿರಲೇಬೇಕು.

ಇನ್ನು ಈ ಸಂಘರ್ಷವು ‘ಎಂದೂ ಮುಗಿಯದ ಮೆಗಾ ಸೀರಿಯಲ್’ ಎಂದು ಉಡಾಫೆಯಿಂದ ಮಾತನಾಡುವಷ್ಟು ಹಗುರಾದ ವಿಷಯವಂತೂ ಅಲ್ಲ. ಪ್ಯಾಲೆಸ್ಟೀನೀಯರು ಒಂದು ಶತಮಾನವನ್ನೂ ಮಿಕ್ಕುಮೀರಿ ದೌರ್ಜನ್ಯಕ್ಕೆ, ದಬ್ಬಾಳಿಕೆಗೆ ತುತ್ತಾಗಿದ್ದಾರೆ. ಮತಾಂಧಪೀಡಿತರಲ್ಲ ಅವರು. ಅವರಲ್ಲಿ ಮುಸಲ್ಮಾನರು, ಕ್ರೈಸ್ತರೂ, ಡ್ರೂಜ಼ರೂ ಎಲ್ಲರೂ ಇದ್ದಾರೆ.  ಅವರು, ಮೊದಮೊದಲು, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಇಬ್ಬಗೆಯ ನೀತಿಯಿಂದ ತಮ್ಮ ನೆಲೆಯನ್ನು ಕಳೆದುಕೊಳ್ಳಲಾರಂಭಿಸಿದರು. ಬಳಿಕ, ಅಮೆರಿಕಾ ಹಾಗೂ ನೆರೆಯ ಅರಬ್ ರಾಷ್ಟ್ರಗಳ ‘ಬಳಸಿ ಬಿಸಾಡುವ’ ನೀತಿಗೆ ಬಲಿಪಶುಗಳಾದರು. ಈಗ, ಇಸ್ರೇಲ್‍ನ ‘ನಾಡಿಲ್ಲದ ಜನರಿಗಾಗಿ ಜನರಿಲ್ಲದ ನಾಡು’ ಸಿದ್ಧಾಂತದ ಪ್ರಕಾರ ಆ ಬಲಿಷ್ಠ ದೇಶವು ನಿರಂತರವಾಗಿ ನಡೆಸುತ್ತಿರುವ ಜನಾಂಗೀಯ ಶುದ್ಧೀಕರಣದಿಂದಾಗಿ ಪ್ಯಾಲೆಸ್ಟೀನೀಯರು ಅಕ್ಷರಶಃ ಕನಲಿದ್ದಾರೆ. ಪ್ಯಾಲೆಸ್ಟೀನ್ ಎಂಬ ಆ ನಾಡಿನಲ್ಲಿ ಎಲ್ಲ ಪಂಗಡ ಮತ್ತು ಮತಧರ್ಮಗಳ ಜನರೂ ಶತಮಾನಗಳಿಂದ ಸಹಬಾಳ್ವೆ ನಡೆಸುತ್ತ ಬಂದಿದ್ದರು. ಆದರೆ, 1947ರಲ್ಲಿ ವಿಶ್ವಸಂಸ್ಥೆಯು ಸಹಬಾಳ್ವೆಯ ಆ ನಾಡನ್ನು ಎರಡಾಗಿ ಒಡೆಯುವ ಪ್ರಸ್ತಾಪ ಮಾಡಿತು. ಅದನ್ನು ಪ್ಯಾಲೆಸ್ಟೀನೀಯರು ನ್ಯಾಯವಾಗಿಯೆ ವಿರೋಧಿಸಿದರು. ಮುಂದೆ, ಇಸ್ರೇಲ್ ದೇಶವು ವಿಶ್ವಸಂಸ್ಥೆಯ ಅಧಿಕೃತ ಮಾನ್ಯತೆ ಪಡೆದ ಬಳಿಕ ಆ ದೇಶದ ಒಳಗೂ, ಹೊರಗೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದರು. ಇಸ್ರೇಲ್‍ನ ಅಸ್ತಿತ್ವವನ್ನು ನಾವು ಮಾನ್ಯ ಮಾಡುತ್ತೇವೆ, ಹಾಗೆಯೇ, ವಿಶ್ವಸಂಸ್ಥೆಯೇ ಪ್ರಸ್ತಾಪಿಸಿದ ಪ್ಯಾಲೆಸ್ಟೀನ್ ಎಂಬ ಸ್ವಯಂ-ಆಡಳಿತ ಪ್ರದೇಶವನ್ನು ನೀವೂ ಮಾನ್ಯಮಾಡಿ ಎಂದು ಇಸ್ರೇಲ್‍ ಹಾಗೂ ಅದರ ಮಿತ್ರರಾಷ್ಟ್ರಗಳಿಗೆ ಮನವಿ ಮಾಡಿಕೊಂಡರು. ಆದರೆ ಪ್ಯಾಲೆಸ್ಟೀನೀಯರನ್ನು ಒಕ್ಕಲೆಬ್ಬಿಸಿ ಶುದ್ಧಾಂಗವಾಗಿ ಯಹೂದಿಗಳೇ ಇರುವ ರಾಷ್ಟ್ರದ  ನಿರ್ಮಾಣವಾಗಬೇಕು ಹಾಗೂ ಅವಿಭಜಿತ ಜೆರೂಸಲೆಂ ಪಟ್ಟಣವು ಆ ರಾಷ್ಟ್ರದ ರಾಜಧಾನಿಯಾಗಬೇಕು ಎನ್ನುವ ಧೋರಣೆಯನ್ನು ಕೈಬಿಡಲೊಲ್ಲದ ಇಸ್ರೇಲ್, ಆ ಮನವಿಗೆ ಸೊಪ್ಪು ಹಾಕಲಿಲ್ಲ. ಅಲ್ಲದೆ, ಅವರ ವಿರುದ್ಧ ಹೇಳತೀರದ ದೌರ್ಜನ್ಯ ಮುಂದುವರಿಸುತ್ತಲೇ ಇದೆ; ತಾನು ಅವರೊಡನೆ ಮಾಡಿಕೊಂಡ ಎಲ್ಲ ಒಪ್ಪಂದಗಳನ್ನೂ ಮುರಿದು ತನ್ನ ನೆಲೆಯನ್ನು ವಿಸ್ತರಿಸುವ ಕೆಲಸದಲ್ಲಿ ತೊಡಗಿದೆ. ನಿಜಸ್ಥಿತಿ ಹೀಗಿರುವಾಗ, ಇಸ್ರೇಲ್‍ನ ದಬ್ಬಾಳಿಕೆಯಂತೆ ಪ್ಯಾಲೆಸ್ಟೀನೀಯರ ನ್ಯಾಯಯುತ ಪ್ರತಿರೋಧವೂ ‘ನಾಯಕರ ಪ್ರತಿಷ್ಠೆಗಾಗಿ, ಯಾವುದೋ ತುಂಡು ನೆಲದ ಹಕ್ಕಿಗಾಗಿ, ಮೂಲಭೂತವಾದಿಗಳ ಹಟಕ್ಕಾಗಿ’ ನಡೆಯುತ್ತಿದೆ ಎಂದು ಹೀಯಾಳಿಸುವುದು ಸರಿಯಲ್ಲ.

ಪ್ಯಾಲೆಸ್ಟೀನೀಯರ ಈ ಹೋರಾಟದ ನೇತೃತ್ವವನ್ನು ಈಗ ಪ್ರಧಾನವಾಗಿ ಹಮಾಸ್ ಸಂಘಟನೆ ವಹಿಸಿಕೊಂಡಿದೆ. ಆ ಸಂಘಟನೆಯಲ್ಲಿ ‘ಎಂದೋ ಸಿಗುವ ಸ್ವರ್ಗದ ಕಲ್ಪನೆಯಲ್ಲಿ ಭೂಮಿಯನ್ನು ನರಕವಾಗಿಸುವವರು’ ಕೆಲವರಿದ್ದಾರೆ, ನಿಜ. ಆದರೆ, ಇಂಥ ಮತೀಯ ಸಂಘಟನೆಯು ಬೆಳೆಯುವ ಮುನ್ನ ಹೋರಾಟದ ನೇತೃತ್ವ ವಹಿಸಿದ್ದು ಪ್ಯಾಲೆಸ್ಟೀನ್ ಲಿಬರೇಶನ್ ಆರ್ಗನೈಸೇಶನ್ (ಪಿ.ಎಲ್.ಒ) ಎನ್ನುವ, ಮತೀಯವಲ್ಲದ, ಸಂಘಟನೆ; ಒಂದು ಕಾಲದಲ್ಲಿ ಯಾಸರ್ ಅರಫಾತ್ ಅವರ ಮುಂದಾಳ್ತನವಿದ್ದ ಸಂಘಟನೆ. ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಮತ್ತು ಖುದ್ದು ವಿಶ್ವಸಂಸ್ಥೆಯೇ ಆ ಸಂಘಟನೆಯು ‘ಪ್ಯಾಲೆಸ್ಟೀನೀಯರ ಅಧಿಕೃತ ಪ್ರತಿನಿಧಿ’ ಎಂದು ಮಾನ್ಯ ಮಾಡಿತ್ತು. ಹೀಗಿದ್ದೂ ಆ ಸಂಘಟನೆಯ ಬೇಡಿಕೆಗಳಿಗೆ ಇಸ್ರೇಲ್ ಮಣೆ ಹಾಕಲಿಲ್ಲ. ಅದು ಭಯೋತ್ಪಾದಕ ಸಂಘಟನೆ ಎಂದು ವಿಶ್ವಾದ್ಯಂತ ಬಿಂಬಿಸಿತು. ಅಲ್ಲದೆ, ಈ ಸಂಘಟನೆಗೆ ಪ್ರತಿಯಾಗಿ ಬೆಳೆಯುತ್ತಿದ್ದ ಮತೀಯ ಸಂಘಟನೆಗಳ ಕುರಿತು ಇಸ್ರೇಲ್, ಪ್ಯಾಲೆಸ್ಟೀನೀಯರ ಒಗ್ಗಟ್ಟು ಮುರಿಯಲೆಂದೇ ಕೆಲಕಾಲದವರೆಗೆ ಜಾಣ ಕುರುಡಾಗಿತ್ತು. ಪ್ಯಾಲೆಸ್ಟೀನೀಯರಿಗೆ ಅವರ ನೆಲ, ಅವರ ಹಕ್ಕು ಸಿಕ್ಕಬೇಕು. ಪ್ಯಾಲೆಸ್ಟೀನ್ ಒಂದು ಸ್ವತಂತ್ರ ರಾಷ್ಟ್ರವೆಂದು ವಿಶ್ವಸಂಸ್ಥೆಯೇ ಮೊದಲಾಗಿ ಅಮೆರಿಕಾ, ಇಸ್ರೇಲ್‍ಗಳವರೆಗೆ ಎಲ್ಲರೂ ಒಪ್ಪಬೇಕು.  ಸಮಸ್ಯೆ ಕೊನೆಗೊಳ್ಳುವುದು ಆಗ ಮಾತ್ರ. ಅದಕ್ಕಾಗಿ ವಾದಿಸುವುದನ್ನು ಬಿಟ್ಟು, ಸುಚಿತ್ ಕೋಟ್ಯಾನ್ ಅವರು ಮಾಡಿದಂತೆ, ಪ್ಯಾಲೆಸ್ಟೀನೀಯರ ಮೇಲೂ ಗೂಬೆ ಕೂರಿಸುವುದು ತರವಲ್ಲ.

1948ನೆಯ ಇಸವಿಯಲ್ಲಿ ಭಾರತವು ಇಸ್ರೇಲ್ ರಾಷ್ಟ್ರಕ್ಕೆ ಮಾನ್ಯತೆ ಕೊಡುವುದರ ವಿರುದ್ಧ ಮತ ಚಲಾಯಿಸಿತ್ತು ಮತ್ತು, ದಶಕಗಳ ಕಾಲ, ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರದ ರಚನೆಯ ಪರವಾಗಿ ಧ್ವನಿ ಎತ್ತುತ್ತಲೇ ಇತ್ತು. ಅಂಥ ನಮ್ಮ ದೇಶ, 90ರ ದಶಕದಲ್ಲಿ ಆರ್ಥಿಕ ಉದಾರೀಕರಣ ನೀತಿಗಳಿಗೆ ತಾನು ತೆರೆದುಕೊಂಡಾಗಿನಿಂದ ನಿದನಿದಾನವಾಗಿ ಇಸ್ರೇಲ್ ಕಡೆಗೆ ವಾಲುತ್ತ ಬಂದಿದೆ. ಇನ್ನು, 2015ನೆಯ ಇಸವಿಯಿಂದ, ಪೂರ್ವ ಜೆರೂಸಲೆಂ ಪಟ್ಟಣವು ಪ್ಯಾಲೆಸ್ಟೀನೀಯರ ಸ್ವತ್ತು ಎಂದು ನ್ಯಾಯದ ಪರವಾಗಿ ವಾದಿಸುವುದನ್ನೂ ಭಾರತವು ಕೈಬಿಟ್ಟಿದೆ. ಇದು ಅವಕಾಶವಾದಿ ಮೌನ. ಈ ನಡೆಗೂ, ಬಂಡವಾಳಶಾಹಿ ವ್ಯವಸ್ಥೆ ಹಾಗೂ ಮತಧರ್ಮಾಧಾರಿತವಾದ ರಾಷ್ಟ್ರೀಯತೆಗಳು ಭಾರತದಲ್ಲಿ ಬಲಗೊಳ್ಳುತ್ತಿರುವ ವಿದ್ಯಮಾನಕ್ಕೂ ಸಂಬಂಧವಿದೆ.

ಪ್ಯಾಲೆಸ್ತೀನ್
PC: The Electronic Intifada

ಇನ್ನು, ಕೋಟ್ಯಾನ್ ಅವರು ಮಹಾತ್ಮಾ ಗಾಂಧಿಯವರ ಆತ್ಮಕಥೆಯಲ್ಲಿನ ಮಾತನ್ನು ಉಲ್ಲೇಖಿಸುವ ಮುನ್ನ ಇಸ್ರೇಲ್ ರಾಷ್ಟ್ರ ರಚನೆಯ ವಿಚಾರದಲ್ಲಿ ಗಾಂಧೀಜಿ ಹಾಗೂ ಅವರ ಒಡನಾಡಿಗಳ ನಿಲುವು ಏನಾಗಿತ್ತು ಎನ್ನುವುದನ್ನು ತಿಳಿದುಕೊಳ್ಳಬೇಕಿತ್ತು. ಗಾಂಧೀಜಿ ಅವರು ತಮ್ಮ ‘ಹರಿಜನ್’ ಪತ್ರಿಕೆಯ ನವೆಂಬರ್ 26, 1938ರ ಸಂಚಿಕೆಯಲ್ಲಿ ಇಸ್ರೇಲ್ ಎಂಬ ಯಹೂದಿ ರಾಷ್ಟ್ರ ರಚನೆಯ ವಿರುದ್ಧ ಬರೆಯುತ್ತ, ಯಹೂದಿಗಳು ಪ್ಯಾಲೆಸ್ಟೀನನ್ನು ಭಾಗಶಃ ಆಕ್ರಮಿಸಿಕೊಂಡರೂ ಅದು ಮಾನವಧರ್ಮದ ವಿರುದ್ಧದ ಘೋರ ಅಪರಾಧವಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಮುಂದೆ, ಅದೇ ಪತ್ರಿಕೆಯ ಜುಲೈ 21, 1946ರ ಲೇಖನವೊಂದರಲ್ಲಿ ಗಾಂಧೀಜಿ, ಯುರೋಪ್‍ನಲ್ಲಿ ಹಲವೆಡೆ ದೌರ್ಜನ್ಯಕ್ಕೊಳಗಾದ ಯಹೂದಿಗಳ ಕುರಿತು ಸಹಾನುಭೂತಿ ತೋರುತ್ತಲೇ, ಪ್ಯಾಲೆಸ್ಟೀನ್ ವಿಚಾರದಲ್ಲಿ ತಮ್ಮ ಮುಂಚಿನ ನಿಲುವನ್ನೇ ಹೀಗೆ ಪುನರುಚ್ಚರಿಸುತ್ತಾರೆ –

ಅಮೇರಿಕಾ ಮತ್ತು ಬ್ರಿಟನ್ ಸಹಾಯದಿಂದ ಹಾಗೂ ಇತ್ತೀಚೆಗೆಭಯೋತ್ಪಾದನೆಯ ಕೃತ್ಯಗಳ ನೆರವಿನಿಂದ ಪ್ಯಾಲೆಸ್ಟೀನನ್ನು ಆಕ್ರಮಿಸಲು ಮುಂದಾಗಿರುವ ಯಹೂದಿಗಳುನನ್ನ ಅಭಿಪ್ರಾಯದಲ್ಲಿಘೋರ ತಪ್ಪನ್ನು ಎಸಗುತ್ತಿದ್ದಾರೆ.

ಸಮಸ್ಯೆಯ ಹಿಂದುಮುಂದುಗಳ ಅಧ್ಯಯನವನ್ನು ಮಾಡದೆ, ದಮನಿತರ ಪಾಡನ್ನು ಅಲಕ್ಷ್ಯಿಸಿ, ‘ಮಾನವನ ಮೂಲ ವ್ಯಕ್ತಿತ್ವದಲ್ಲೇ ಹಿಂಸೆಯ ಛಾಯೆಯಿದೆ’ ಎಂದು ವೇದಾಂತ ನುಡಿಯುವುದು ಶ್ರೀಯುತರ ರಾಜಕೀಯ ಅಜ್ಞಾನವನ್ನು ತೋರಿಸುತ್ತದೆ, ಅಷ್ಟೆ.

(ಪ್ರಜಾವಾಣಿ ದೈನಿಕದ ಮೇ 22, 2021ರ ಸಂಚಿಕೆಯ ‘ಸಂಗತ’ ಅಂಕಣದಲ್ಲಿ ಸುಚಿತ್ ಕೋಟ್ಯಾನ್ ಕುರ್ಕಾಲು ಅವರ ‘ನಾವು ಯುದ್ಧ ಮಾಡಬೇಕಾಗಿದೆ…!’ ಎಂಬ ಲೇಖನ ಪ್ರಕಟವಾಯಿತು. ಅದಕ್ಕೆ ಪ್ರತಿಕ್ರಿಯಿಸಿ ಅಮರ ಹೊಳೆಗದ್ದೆ ಅವರು ಬರೆದ ಲೇಖನ ಇದು. ಹೊಳೆಗದ್ದೆ ಅವರು ಈ ಬರಹವನ್ನು ಮೊದಲು ಪ್ರಜಾವಾಣಿಗೆ ಕಳಿಸಿ, ಪ್ರಕಟಿಸಬೇಕಾಗಿ ಅವರಲ್ಲಿ ಕೋರಿದರು. ಪ್ರಜಾವಾಣಿಯವರು ಈವರೆಗೆ ಅದನ್ನು ಪ್ರಕಟಿಸಿಲ್ಲ. ಸುಚಿತ್ ಕೋಟ್ಯಾನ್ ಅವರ ಬರಹವನ್ನು ಇಲ್ಲಿ ಓದಬಹುದು).

(ಇಲ್ಲಿ ಹೇಳಿರುವುದೆಲ್ಲವೂ, ಸಾಕಷ್ಟು ಮಟ್ಟಿಗೆ, ಪ್ರಜಾವಾಣಿಯಲ್ಲಿಯೆ ಪ್ರಕಟವಾದ ಮತ್ತೊಂದು ಲೇಖನಕ್ಕೂ ಅನ್ವಯಿಸುತ್ತದೆ. ಸುಧೀಂದ್ರ ಕುಲಕರ್ಣಿ ಅವರು ಮೇ 28ರಂದು ಬರೆದ ಆ ಲೇಖನವನ್ನು ಇಲ್ಲಿ ಓದಬಹುದು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಸುಪ್ರೀಂ ಮೊರೆ ಹೋಗಲಿರುವ ವಕ್ಪ್‌‌ ಮಂಡಳಿ | Naanu Gauri

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಸುಪ್ರೀಂ ಮೊರೆ ಹೋಗಲಿರುವ ವಕ್ಪ್‌‌ ಮಂಡಳಿ

0
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನವು ತಮ್ಮ ಮಾಲೀಕತ್ವದಲ್ಲಿ ಇಲ್ಲ ಎಂದು ಬಿಬಿಎಂಪಿ ಹೇಳಿದ ನಂತರವೂ ಬಿಜೆಪಿ ಸರ್ಕಾರ ವಿವಾದವನ್ನು ಜೀವಂತವಾಗಿಡಲು ಶ್ರಮಿಸುತ್ತಿವೆ. ಇದೀಗ ಈದ್ಗಾ ಮೈದಾನವನ್ನು ಕಂದಾಯ ಭೂಮಿ ಎಂದು ಸರ್ಕಾರ ಹೇಳಿದೆ....