ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರಂ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಪೊಲೀಸರು ನ್ಯಾಯಾಲಯದ ನಿರ್ದೇಶನದಂತೆ ಎಫ್‍ಐಆರ್ ದಾಖಲಿಸಿದ್ದಾರೆ.
ಮಂಜೇಶ್ವರಂನಲ್ಲಿ ಸ್ಪರ್ಧಿಸಿದ್ದ ಬಿಎಸ್‍ಪಿ ಅಭ್ಯರ್ಥಿ ಕೆ. ಸುಂದರ ಅವರಿಗೆ ಕಣದಿಂದ ಹಿಂದೆ ಸರಿಯಲು ಸುರೇಂದ್ರನ್ 2.5 ಲಕ್ಷ ರೂ. ಲಂಚ ನೀಡಿದ ಆರೋಪ ಎದುರಿಸುತ್ತಿದ್ದಾರೆ. ನಾಮಪತ್ರ ಹಿತೆಗೆದುಕೊಂಡು ಬಿಜೆಪಿ ಸೇರಿದ್ದ ಸುಂದರ ಅವರೇ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಎಕೆಎಂ ಅಶ್ರಫ್ ಈ ಕ್ಷೇತ್ರದಲ್ಲಿ 2 ಸಾವಿರ ಮತಗಳಿಂದ ಗೆದ್ದಿದ್ದಾರೆ.
ಫಲಿತಾಂಶದಲ್ಲಿ ಮೂರನೇ ಸ್ಥಾನದಲ್ಲಿದ್ದ ಸಿಪಿಎಂ ಮುಖಂಡ ವಿ.ವಿ.ರಮೇಶನ್‌ರ ಮನವಿಗೆ ಸ್ಥಳೀಯ ನ್ಯಾಯಾಲಯ ಸ್ಪಂದಿಸಿದ್ದು, ‘ಚುನಾವಣೆಗಳನ್ನು ಹಾಳುಮಾಡುವ ಉದ್ದೇಶದಿಂದ ಲಂಚ’ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು, ಕೆ ಸುಂದರ ಅವರ ಹೇಳಿಕೆಯನ್ನು ದಾಖಲಿಸಲಾಗಿದ್ದು, ಹಣ ಹೇಗೆ ವಿನಿಮಯವಾಯಿತು ಮತ್ತು ಯಾರು ಅದನ್ನು ನೀಡಿದರು ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಕೆ. ಸುರೇಂದ್ರನ್ ವಿರುದ್ಧದ ಈ ಆರೋಪಗಳು ಇತ್ತೀಚಿನವು. ಅವರು ಮತ್ತು ಅವರ ಪಕ್ಷವು ಕೆಲವು ಮುಜುಗರದ ಆರೋಪಗಳನ್ನು ಎದುರಿಸುತ್ತಿದೆ. ಇದರಲ್ಲಿ ಒಂದು, ಜನತಿಪತ್ಯ ರಾಷ್ಟ್ರೀಯ ಪಕ್ಷ (ಜೆಆರ್‌ಪಿ) ಮುಖಂಡ ಪರಿಸಿಥಾ ಅಝಿಕೊಡೆ ಕೂಡ ಇಂಥದ್ದೇ ಆರೋಪ ಮಾಡಿದ್ದಾರೆ. ಜೆಆರ್‍ಪಿ ನಾಯಕ ಸಿ.ಕೆ. ಜಾನು ಅವರಿಗೆ ಎನ್‍ಡಿಎ ಸೇರಲು ಕೆ. ಸುರೇಂದ್ರನ್ 10 ಲಕ್ಷ ರೂ. ಲಂಚ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸುರೇಂದ್ರನ್ ಈ ಆರೋಪವನ್ನು ನಿರಾಕರಿಸಿದ್ದಾರೆ.
3.5 ಕೋಟಿ ದರೋಡೆ ಪ್ರಕರಣ
ಏಪ್ರಿಲ್ 6ರ ಚುನಾವಣೆಗೂ ಮೂರು ದಿನ ಮುನ್ನ ಕೇರಳ ಹೆದ್ದಾರಿಯಲ್ಲಿ 3.5 ಕೋಟಿ ರೂ.ಗಳ ದರೋಡೆ ನಡೆದಿದೆ ಮತ್ತು ಇದು ಹವಾಲಾ ಹಣ ಎಂಬ ಆರೋಪವಿದೆ. ಇದರಲ್ಲೂ ಕೆ.ಸುರೇಂದ್ರನ್ ಹೆಸರು ಕೇಳಿ ಬಂದಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
“ಕದ್ದ ಹವಾಲಾ ಹಣದ ಬಗ್ಗೆ ಕನಿಷ್ಠ ಇಬ್ಬರು ಬಿಜೆಪಿ ನಾಯಕರನ್ನು ಪ್ರಶ್ನಿಸಲಾಗಿದೆ. ಹಣದ ಮೂಲ ಮತ್ತು ಅದನ್ನು ಹಸ್ತಾಂತರಿಸಿದ ವಿವಿಧ ಜನರನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಹೆಚ್ಚಿನ ಬಿಜೆಪಿ ನಾಯಕರನ್ನು ಪ್ರಶ್ನಿಸುವ ಸಾಧ್ಯತೆಯಿದೆ. ನಾವು ಸತ್ಯಗಳನ್ನು ಕಂಡುಹಿಡಿಯುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಎರ್ನಾಕುಲಂ ವಲಯದ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಎಲ್ ಪದ್ಮಕುಮಾರ್ ಮತ್ತು ತ್ರಿಶೂರ್ ಜಿಲ್ಲಾ ಬಿಜೆಪಿ ಮುಖ್ಯಸ್ಥ ಕೆ.ಕೆ. ಅನೀಶ್ ಕುಮಾರ್ ಅವರನ್ನು ಪ್ರಶ್ನಿಸಲಾಗಿದೆ. ಇವರಿಬ್ಬರು ಹಣ ಸಾಗಿಸುತ್ತಿದ್ದರು ಎಂಬ ಆರೋಪವಿದೆ. ಇವರಿಬ್ಬರನ್ನೂ ಈಗಾಗಲೇ ಪ್ರಶ್ನಿಸಲಾಗಿದೆ. ಹಣವಿದ್ದ ಇವರ ಕಾರನ್ನು ಅಡ್ಡಗಟ್ಟಿ 3.5 ಕೋಟಿ ರೂ ಹವಾಲಾ ಹಣವನ್ನು ದರೋಡೆ ಮಾಡಲಾದ ಆರೋಪವಿದ್ದು, ಇದರಲ್ಲೂ ಕೆ. ಸುರೇಂದ್ರನ್ ಅವರ ಕೈವಾಡ ಇದೆ ಎನ್ನಲಾಗಿದೆ.
ಈ ಹಣವು ಬಿಜೆಪಿಗೆ ಸಂಬಂಧಿಸಿದ ಹವಾಲಾ ನಗದು ಆಗಿರಬಹುದು ಎಂದು ಇದುವರೆಗೆ ನಡೆದ ತನಿಖೆಯಿಂದ ತಿಳಿದುಬಂದಿದೆ.
ಈಗ, ಈ ಪ್ರಕರಣವನ್ನು ತನಿಖೆ ಮಾಡುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸುರೇಂದ್ರನ್ ಮತ್ತು ಅವನ ಮಗ ಹರಿ ಕೃಷ್ಣನ್ ಅವರನ್ನು ಪ್ರಶ್ನಿಸಲಿದೆ ಎಂದು ತಿಳಿದುಬಂದಿದೆ. ಕರೆ ವಿವರ ದಾಖಲೆಗಳನ್ನು ಆಧರಿಸಿ ಕೆ.ಸುರೇಂದ್ರನ್ ಅವರ ಮೇಲೆ ಶಂಕೆ ಶುರುವಾಗಿದೆ.
ಈ ಪ್ರಕರಣದಲ್ಲಿ ಸುರೇಂದ್ರನ್ ಅವರ ಚಾಲಕ ಮತ್ತು ಕಾರ್ಯದರ್ಶಿಯನ್ನು ಎಸ್ಐಟಿ ಈಗಾಗಲೇ ಪ್ರಶ್ನಿಸಿದೆ. ಆರೋಪಗಳನ್ನು ಪರಿಶೀಲಿಸಲು ಬಿಜೆಪಿ ಎರಡು ಸಮಿತಿಗಳನ್ನು ರಚಿಸಿದೆ.
ಚುನಾವಣಾ ನಿಧಿಯೂ ದುರ್ಬಳಕೆ
ಇದರ ಜೊತೆಗೆ ಬಿಜೆಪಿ ಪಕ್ಷವು ನೀಡಿದ ಚುನಾವಣಾ ನಿಧಿಯನ್ನೂ ಕೆ, ಸುರೇಂದ್ರನ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪಕ್ಷದ ಹಲವರು ಆರೋಪಿಸಿದ್ದಾರೆ.
ಈ ಎಲ್ಲ ಆರೋಪಗಳು ರಾಜ್ಯ ಬಿಜೆಪಿಯನ್ನು ಚುನಾವಣೆಯಲ್ಲಿ ಸೋತ ಕೆಲವೇ ವಾರಗಳ ನಂತರ ಬಿಕ್ಕಟ್ಟಿಗೆ ಸಿಲುಕಿಸಿವೆ. ಈ ಸಲ ಬಿಜೆಪಿ ಕೇರಳದಲ್ಲಿ ಇದ್ದ ಏಕೈಕ ಸ್ಥಾನವನ್ನೂ ಕಳೆದುಕೊಂಡಿದೆ.
ಇದನ್ನೂ ಓದಿ: ಪ್ರಧಾನಿ ಭಾಷಣ ಪೂರ್ಣ ಪೊಳ್ಳು- ವೈರಲ್ ಆದ ಶಿವಸುಂದರ್ ಪತ್ರ


