ಇ-ರುಪಿ ವ್ಯವಸ್ಥೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ | Naanu gauri

ನಿನ್ನೆ ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿದರು. ವ್ಯಾಕ್ಸಿನ್ ನೀತಿಯಲ್ಲಿ ಬದಲಾವಣೆ ತಂದು ಕೇಂದ್ರವೇ 75% ಲಸಿಕೆ ವಿತರಣೆಯ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ಕುರಿತು ಚಿಂತಕ ಮತ್ತು ಸಾಮಾಜಿಕ ಹೋರಾಟಗಾರರಾದ ಶಿವಸುಂದರ್‌ರವರು “ಉಚಿತ ವ್ಯಾಕ್ಸಿನ್ – ಉಚಿತ ಪಡಿತರ ಉದ್ರೀ ವಾಗ್ದಾನಗಳನ್ನು ನೀಡಿದ ಪ್ರಧಾನಿಗಳಿಗೊಂದು ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ನಾನುಗೌರಿ ಓದುಗರಿಗಾಗಿ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

“ಉಚಿತ ಭಾಷಣ ಹುಟ್ಟಿಸುವ ಕೆಲವು ಖಚಿತ ಪ್ರಶ್ನೆಗಳು-ಅನುಮಾನಗಳು!??”

ಮಾನ್ಯ ಪ್ರಧಾನಿಗಳೇ

ಕೋವಿಡ್ ಪ್ರಾರಂಭವಾದ ಒಂದೂವರೆ ವರ್ಷಗಳನಂತರ ತಾವು ಇಂದು ಮಾಡಿದ ಉಚಿತ ಭಾಷಣ ಸಂತ್ರಸ್ತ ಜನರಿಗೆ ಅತ್ಯಗತ್ಯವಿದ್ದ ಕೆಲವಿದ್ದ ಪರಿಹಾರಗಳನ್ನು ಉದ್ರಿಯಾಗಿ ನೀಡುವಂತಿತ್ತು.!!

ಆದರೆ ದುರದೃಷ್ಟವಶಾತ್, ಅವು ಒತ್ತಡಕ್ಕೆ ಹಣ್ಣಾದ- ಅಥವಾ ಕೊಳೆತ ಭರವಸೆಗಳೇ ಆಗಿದ್ದು….

ದುರದೃಷ್ಟವಶಾತ್ ಅವು ಕೆಲವೇ ಕೆಲವು ಅನಿವಾರ್ಯ ಕ್ರಮಗಳು-
ಹಲವಾರು ಸುಳ್ಳುಗಳು –
ಮತ್ತು ಬೇಕಾದಷ್ಟು ಉತ್ಪ್ರೇಕ್ಷೆಗಳಿಂದ ಕೂಡಿದ್ದವೂ..

ಆದ್ದರಿಂದಲೇ ನಿಮ್ಮ ಭಾಷಣ ಹಲವು ಅನುಮಾನಗಳನ್ನು ಮತ್ತು ಪ್ರಶ್ನೆಗಳನ್ನು ಮೂಡಿಸುವಂತಿದೆ…

ಪ್ರಶ್ನೆ-1: ಜೂನ್ 21ರಿಂದ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಕೊಡಲು ವ್ಯಾಕ್ಸಿನ್ ಲಭ್ಯವಿದೆಯೇ?

ಎಲ್ಲೆಲ್ಲಿಂದ ಎಷ್ಟೆಷ್ಟು ಸರಬರಾಜಾಗಲಿದೆ ಎಂಬ ಖಚಿತ ಅಂದಾಜಾದರು ತಮ್ಮ ಸರ್ಕಾರಕ್ಕಿದೆಯೇ?

-ವಾಸ್ತವದಲ್ಲಿ ಮೊದಲಿಂದಲೂ , ಎಲ್ಲರಿಗು ಉಚಿತವಾಗಿ ವ್ಯಾಕ್ಸಿನ್ ಕೊಡಬೇಕೆಂಬುದೇ ತಮ್ಮ ಸರ್ಕಾರದ ನೀತಿಯಾಗಿದ್ದಲ್ಲಿ , 2021ರ ಜನವರಿ 13 ರಂದು ಕೇಂದ್ರ ಕೋವಿಡ್ ಟಾಸ್ಕ್ ಪೋರ್ಸ್ ನ ಅಧ್ಯಕ್ಷ ಡಾ. ವಿ.ಕೆ. ಪಾಲ್ ಅವರು ಕೇಂದ್ರ ಸರ್ಕಾರ ಕೇವಲ ಮೊದಲ 30 ಕೋಟಿ ವ್ಯಾಕ್ಸಿನ್ ಅನ್ನು , ಅದು Frontline warriors ಗೆ ಮಾತ್ರ ಉಚಿತವಾಗಿ ಕೊಡಲಾಗುವುದು ಎಂದು ಘೋಷಿಸಿದ್ದೇಕೆ?

-ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ತಾವು ಫುಲೆ- ಅಂಬೇಡ್ಕರ್ ಹೆಸರಿನಲ್ಲಿ ಏಪ್ರಿಲ್ 11-14 ರ ತನಕ ಸಕಲರಿಗೂ ಲಸಿಕೋತ್ಸವದ ಹೆಸರಿನಲ್ಲಿ ಉಚಿತ ವ್ಯಾಕ್ಸಿನೇಷನ್ ಅನ್ನು ಪ್ರಾರಂಭಿಸಿದ್ದು ನೆನಪಿದೆಯಷ್ಟೆ.. . ಆದರೆ ವ್ಯಾಕ್ಸಿನ್ ಸರಬರಾಜೇ ಇಲ್ಲದಿದ್ದರಿಂದ ಆ ಯೋಜನೆ ಘೋರವಾಗಿ ವಿಫಲವಾಯಿತು. ಆದರೇನಂತೆ .. ಲಸಿಕೋತ್ಸವ ಲಾಭವನ್ನು ಚುನಾವಣೆಯಲ್ಲಿ ಬಳಸಿಕೊಳ್ಳುವ ಪ್ರಯತ್ನವನ್ನು ತಾವು ಹಾಗು ತಮ್ಮ ಬಿಜೆಪಿ ಮಾಡಿತ್ತು. .

-ಆ ನಂತರ ಮೇ 1ರಿಂದ 18-45 ವಯಸ್ಸಿನ ಎಲ್ಲರಿಗು ವ್ಯಾಕ್ಸಿನ್ ಕೊಡಲಾಗುವದೂ ಎಂದು ಘೋಷಿಸಲಾಯಿತು. ಆದರೆ ಅದ್ಯಾವುದು ಜಾರಿಯಾಗಲಿಲ್ಲ. ಏಕೆಂದರೆ ಅಷ್ಟು ವ್ಯಾಕ್ಸಿನ್ ಲಭ್ಯವೇ ಇರಲಿಲ್ಲ. .

ಈಗ ಮತ್ತೆ ಜೂನ್ 21ರಿಂದ ಎಲ್ಲರಿಗೂ ಹಂತ ಹಂತವಾಗಿ ವ್ಯಾಕ್ಸಿನ್ ಎಂದು ಹೇಳುತ್ತಿದ್ದೀರಿ…!!

ಆದರೆ ಈಗಲಾದರೂ ದೇಶಕ್ಕೆ ಬೇಕಾಗಿರುವ ಅಂದಾಜು 200 ಕೋಟಿ ವ್ಯಾಕ್ಸಿನ್ ಗಳನ್ನೂ ಎಲ್ಲಿಂದ ಮತ್ತು ಹೇಗೆ ಪಡೆದುಕೊಳ್ಳಲಾಗುವುದು ಎಂಬ ಬಗ್ಗೆ ತಮ್ಮ ಸರ್ಕಾರ ತಿಳಿಸಿಲ್ಲ… ತಮ್ಮ ಭಾಷಣದಲ್ಲೂ ಅದರ ಬಗ್ಗೆ ಪೂರ್ವ ನಿರ್ಧಾರಿತ ಮೌನ.. !?

ಹೀಗಾಗಿ ಇದೂ ಕೂಡಾ ಮತ್ತೊಂದು ಚುನಾವಣಾ ಜುಮ್ಲಾನೇ?

ವಾಸ್ತವದಲ್ಲಿ ಲಸಿಕೆಗಳ ಲಭ್ಯತೆಯ ಬಗ್ಗೆ ನಾಲ್ಕು ಅಸಲಿ ಸಮಸ್ಯೆಗಳಿವೆ.

ಅವ್ಯಾವುದುಕಕ್ಕೂ ತಮ್ಮ ಇಂದಿನ 32 ನಿಮಿಷಗಳ ಭಾಷಣದಲ್ಲಿ ಯಾವುದೇ ಉತ್ತರವನ್ನು ನೀಡಿಲ್ಲವೇಕೆ? ..

– ಮೊದಲನೆಯದಾಗಿ: ಇಂದು ದೇಶದೊಳಗೆ ತಯಾರಾಗುತ್ತಿರುವ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಜಂಟಿ ಸಾಮರ್ಥ್ಯ ಜುಲೈ ವೇಳೆಗೆ ಹೆಚ್ಚೆಂದರೆ ತಿಂಗಳಿಗೆ 10-12 ಕೋಟಿ ಯಾಗಲಿದೆ ಎಂದು ಆ ಕಂಪನಿಗಳ ಮಾಲೀಕರೇ ಹೇಳಿದ್ದಾರೆ. ಅದರಲ್ಲಿ ಕೋವಿಷೀಲ್ಡ್ ಉತ್ಪಾದಿಸುವ SII ಸಂಸ್ಥೆಯು ಅಂತರರಾಷ್ಟ್ರೀಯ ಸಂಸ್ಥೆಗಳಿಂದ 2020ರ ಜೂನ್ ನಲ್ಲೆ 3000 ಕೋಟಿ ರೂ. ಮುಂಗಡ ಪಡೆದಿದ್ದು 100 ಕೋಟಿ ವ್ಯಾಕ್ಸಿನ್‌ಗಳನ್ನೂ ಡಿಸೆಂಬರ್ ವೇಳೆಗೆ ಸರಬರಾಜು ಮಾಡಬೇಕಿದೆ.

ಹೀಗಾಗಿ ಅದರ ಉತ್ಪಾದನಾ ಸಾಮರ್ಥ್ಯದ ಅರ್ಧ ಭಾಗ ಮಾತ್ರ ಭಾರತಕ್ಕೆ ದಕ್ಕುತ್ತದೆ.

– ಎರಡನೇಯದಾಗಿ: ರಷ್ಯಾದ ಸ್ಪುಟ್ನಿಕ್ ವ್ಯಾಕ್ಸಿನ್ ಭಾರತದಲ್ಲಿ ತಯಾರಾಗಲು ಸಮಯ ಬೇಕು. ಮತ್ತದರ ಉತ್ಪ್ರೇಕ್ಷಿತ ಸಾಮರ್ಥ್ಯವೂ ತಿಂಗಳಿಗೆ ಕೆಲವು ಕೋಟಿಗಳಿಗಿಂತ ಜಾಸ್ತಿಯಿಲ್ಲ.

ಜೊತೆಗೆ ವ್ಯಾಕ್ಸಿನ ಸರಬರಾಜಿನ ಬಗ್ಗೆ ಯಾವುದೇ ಪೂರ್ವತಯಾರಿಯನ್ನು ಮಾಡಿಕೊಳ್ಳದ ತಮ್ಮ ಸರ್ಕಾರ ಈ ಬೇಜವಾಬ್ದಾರಿಯನ್ನು ಮುಚ್ಚಿಕೊಳ್ಳಲು ವಿದೇಶೀ ವ್ಯಾಕ್ಸಿನ್‌ಗಳನ್ನು ಬಳಸುವ ಮುಂಚೆ ಭಾರತದಲ್ಲಿ ನಡೆಸಬೇಕಾದ ಬ್ರಿಡ್ಜ್ ಟ್ರಯಲ್ ಗಳನ್ನೇ ರದ್ದು ಮಾಡಿಬಿಟ್ಟಿದೆ.. .

ಆದ್ದರಿಂದ ಈ ಕ್ರಮವು ಬ್ರಿಡ್ಜ್ ಟ್ರಯಲ್ ನಡೆಸದ ವಿದೇಶೀ ಲಸಿಕೆಗಳ ಬಗ್ಗೆ ಜನರು ಆತಂಕ ಪಟ್ಟರೆ ಅದು ದೇಶದ್ರೋಹವಾಗುವುದೇ ಪ್ರಧಾನಿಗಳೇ?

– ಮೂರನೆಯದಾಗಿ: ತಮ್ಮ ಸರ್ಕಾರ ಹೊಸದಾಗಿ ಅನುಮತಿ ನೀಡಿರುವ Bio e Sub Vaccine, Zydus Cadilla, SII Novavax, BB Nasal, Genova mRna ಕಂಪನಿಗಳು ಇನ್ನು ಮೊದಲನೇ ಮತ್ತು ಎರಡನೇ ಟ್ರಯಲ್‌ಗಳನ್ನೇ ಪೂರೈಸಿಲ್ಲ.

ಅದರ ಫಲಿತಾಂಶ ಏನೆಂದು ಗೊತ್ತಾಗುವುದಕ್ಕೆ ಮುಂಚೆಯೇ ಅವುಗಳ ಉತ್ಪಾದನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಜನರನ್ನು ಮೋಸಪಡಿಸಲಿಕ್ಕೆ ಹೊರತು ಬೇರೇನಲ್ಲ.

ಅಥವಾ .. ಸರಿಯಾದ ಫಲಿತಾಂಶ ಬರದಿದ್ದರೂ ತಮ್ಮ ಸರ್ಕಾರ ಅವನ್ನು ಜನರ ಮೇಲೆ ಪ್ರಯೋಗಿಸುವುದೇ??

– ನಾಲ್ಕನೆಯದಾಗಿ: ಅಮೇರಿಕದಿಂದ ಆಮದು ಮಾಡಿಕೊಳ್ಳಬೇಕೆಂದಿರುವ Moderana, Pfizer ಹಾಗೂ ಚೀನಾದ Sinopharma ವ್ಯಾಕ್ಸಿನ್‌ಗಳ ದಾಸ್ತಾನು ಆ ದೇಶದಲ್ಲಿ ಈ ಸದ್ಯಕ್ಕೆ ಲಭ್ಯವಿಲ್ಲ. ಏಕೆಂದರೆ ತಮ್ಮ ಸರ್ಕಾರಕ್ಕಿಂತ ಹಲವಾರು ತಿಂಗಳುಗಳು ಮುಂಚೆಯೇ ಜಗತ್ತಿನ ಇತರ ದೇಶಗಳು ಆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಬಿಟ್ಟಿದ್ದವು.

ಹೀಗಾಗಿ ಮೊದಲು ಆರ್ಡರ್ ಮಾಡಿದ ದೇಶಗಳಿಗೆ ಪೂರೈಕೆ ಮಾಡಿದ ನಂತರವಷ್ಟೇ ಅವು ಭಾರತಕ್ಕೆ ಲಭ್ಯವಾಗಲಿದೆ. ಅದು ಡಿಸೆಂಬರ್ ಆಗಬಹುದು..

ಬೇರೆ ದೇಶಗಳ ರೀತಿ ತಮ್ಮ ಸರ್ಕಾರ ಕೂಡ ಮೊದಲೇ ಆ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳದಿರಲು ಕಾರಣವೇನು, ಪ್ರಧಾನಿಗಳೇ?

ಕೋವಿಡ್ ಯುದ್ಧವನ್ನು ಭಾರತ ಗೆದ್ದುಬಿಟ್ಟಿತು ಎಂದು ತಾವು ಮಾಡಿಕೊಂಡ ಪ್ರಚಾರವೇ ಅದಕ್ಕೆ ಕಾರಣವಲ್ಲವೇ?

INSACOG ಸಮಿತಿ ಎರಡನೇ ಅಲೆ ದೇಶಕ್ಕೆ ಅಪ್ಪಳಿಸಲಿದೆ ಎಂದು ವರದಿ ಕೊಟ್ಟಿದ್ದರು ಭಾರತಕ್ಕೆ ಅದರಿಂದ ಏನು ಅಪಾಯವಿಲ್ಲ ಎಂದು ಭಾವಿಸಿದ ನಿಮ್ಮ ಸರ್ಕಾರದ ನಿಲುವು ವಿಜ್ಞಾನ ವಿರೋಧಿಯಲ್ಲವೇ?

ಈ ಕ್ರಿಮಿನಲ್ ಬೇಜವಾಬ್ದಾರಿಯಿಂದಾಗಿಯೇ ತಮ್ಮ ಸರ್ಕಾರ ಇತರ ದೇಶಗಳ ರೀತಿ ವ್ಯಾಕ್ಸಿನ್ ಕಂಪೆನಿಗಳ ಜೊತೆ ಮೊದಲೇ ಒಪ್ಪಂದ ಮಾಡಿಕೊಳ್ಳಲಿಲ್ಲ … ಅಲ್ಲವೇ?

ಈ ಮೊದಲೇ ಆ ರೀತಿಯ ಒಪ್ಪಂದ ಮಾಡಿಕೊಂಡಿದ್ದಾರೆ 2021ರ ಮಾರ್ಚ್ ನಿಂದ ಸಂಭವಿಸಿದ ಲಕ್ಷಕ್ಕೂ ಹೆಚ್ಚು ಸಾವುಗಳನ್ನು ತಡೆಹಿಡಿಯಬಹುದಿತ್ತಲ್ಲವೇ?

ಇಷ್ಟಾದರೂ ನಮ್ಮ ಸರ್ಕಾರ ಮಾಡಬೇಕಾದದ್ದೆಲ್ಲವನ್ನು ಮಾಡಿದೇ ಎಂದೇ ಭಾಷಣ ಮಾಡಿದ ಈ ದೇಶದ ಪ್ರಧಾನಿಯಾದ ತಮ್ಮಲ್ಲಿ ಮಾನವ ಸಂವೇದನೆ ಉಳಿದಿದೆ ಎಂದು ಭಾರತೀಯರು ನಂಬುವುದು ಹೇಗೆ.. ಪ್ರಧಾನಿಗಳೇ..

ಇನ್ನು ಆ ಕಂಪನಿಗಳು ಭಾರತದಲ್ಲೇ ಬಂದು ಉತ್ಪಾದನೆ ಮಾಡಬೇಕೆಂದರೆ ಅವು ಹಾಕುತ್ತಿರುವ ಷರತ್ತುಗಳು ಭಾರತವನ್ನು ಮತ್ತಷ್ಟು ಆಪತ್ತಿಗೆ ದೂಡುವಂತಿವೆ… ಮತ್ತು ಆಗಲು ಅವರ ಉತ್ಪಾದನೆ ಪ್ರಾರಂಭಿಸಲು ಹಲವು ತಿಂಗಳು ಬೇಕಾಗುತ್ತವೆ.

ಲಸಿಕೆ ಸರಬರಾಜುಗಳಿಗೆ ಇರುವ ಈ ಅಡ್ಡಿಗಳನ್ನು ಮೀರಲು ತಮ್ಮ ಸರ್ಕಾರ ಯಾವುದೆ ನೈಜ ಕ್ರಮಗಳನ್ನು ತೆಗೆದುಕೊಳ್ಳದಿದ್ದರೂ….ಮತ್ತೊಮ್ಮೆ ಜೂನ್ 21ರಿಂದ ಎಲ್ಲರಿಗು ವ್ಯಾಕ್ಸಿನ್ ಎಂದು ಹೇಳುತ್ತಿದ್ದೀರಿ…!!! ಇದು ಜನದ್ರೋಹವಲ್ಲವೇ ಪ್ರಧಾನಿಗಳೇ….

ಪ್ರಶ್ನೆ 2: ಕೇಂದ್ರದಿಂದಲೇ ಉಚಿತವಾಗಿ ವ್ಯಾಕ್ಸಿನ್ ಕೊಡಲಾಗುವುದು ಎಂಬುದು ಸರ್ಕಾರ ಬಜೆಟ್ ನಲ್ಲಿ ಕೊಟ್ಟ ಹಳೆಯ ಭರವಸೆಯಲ್ಲವೇ?

ಅದಕ್ಕಾಗಿಯೇ ಎಲ್ಲಾ ರಾಜ್ಯಗಳ ಜನ ಕೊಟ್ಟ ತೆರಿಗೆ ಹಣದಲ್ಲಿ 35,000 ಕೋಟಿಯನ್ನು ಎತ್ತಿಡಲಾಗಿತ್ತಲ್ಲವೇ?

ಆದರೆ ರಾಜ್ಯಗಳು ಲಸಿಕೆಯ ವಿತರಣೆಯ ಜವಾಬ್ದಾರಿಯನ್ನು ಕೇಳಿದರೆ ಏಪ್ರಿಲ್ ನಂತರ ವ್ಯಾಕ್ಸಿನ್‌ಗಳನ್ನು ಪಡೆದುಕೊಳ್ಳುವ ಹೊಣೆಗಾರಿಕೆಯನ್ನು ರಾಜ್ಯಗಳಿಗೆ ವರ್ಗಾಯಿಸಿದ ತಮ್ಮ ಸರ್ಕಾರ ವ್ಯಾಕ್ಸಿನ್ ಪಡೆದುಕೊಳ್ಳಲೆಂದೇ ಎತ್ತಿಡಲಾಗಿದ್ದ 35,000 ಕೋಟಿಯಲ್ಲಿ ಒಂದು ಪೈಸ್ಯೆಯನ್ನು ರಾಜ್ಯಗಳ ಜೊತೆ ಹಂಚಿಕೊಳ್ಳದಿದ್ದುದೇಕೆ?

ಹೀಗಾಗಿ ವ್ಯಾಕ್ಸಿನ್‌ಗಳನ್ನು ಪಡೆದುಕೊಳ್ಳಲು ವಿಫಲವಾಗಿರುವ ರಾಜ್ಯ ಸರ್ಕಾರದ ವೈಫಲ್ಯದ ಹಿಂದೆ ತಮ್ಮ ಸರ್ಕಾರದ ಘೋರ ಅಪರಾಧವಿಲ್ಲವೇ?

ಇವತ್ತಾದರೂ ತಾವು ಅದನ್ನು ವಿನಮ್ರತೆಯಿಂದ ತಿದ್ದುಕೊಳ್ಳುತ್ತಿದ್ದೇವೆ ಎಂದು ಹೇಳಲಿಲ್ಲ..

ಬದಲಿಗೆ, ರಾಜ್ಯ ಸರ್ಕಾರಗಳು ವಿಫಲವಾದದ್ದರಿಂದ ಕೇಂದ್ರ ಜನರ ರಕ್ಷಣೆಗೆ ಧಾವಿಸುತ್ತಿದೆ ಎಂಬಂತೆ ಚಿತ್ರಿಸುತ್ತಾ ಸಾವಿನಲ್ಲೂ ಸಂಕಷ್ಟದಲ್ಲೂ ರಾಜ್ಯಗಳನ್ನು ವಿಲನ್ ಮಾಡುವ ಕ್ಷುದ್ರ ರಾಜಕಾರಣ ಮಾಡುತ್ತಿರುವುದು ಏಕೆ?

ಪ್ರಶ್ನೆ 3: ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಭಾರತದ ದೇಸೀ (ಆತ್ಮನಿರ್ಭರ) ವ್ಯಾಕ್ಸಿನ್‌ಗಳೆಂಬುದು ಸುಳ್ಳಲ್ಲವೆ?

ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲಸಿಕೆಯಲಿ ಆತ್ಮ ನಿರ್ಭರತೆಯನ್ನು ಸಾಧಿಸಿದ್ದರಿಂದಲೇ ಇಂದು ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎಂಬ ಎರಡು ದೇಸೀಯ ಲಸಿಕೆಗಳಿವೆ ಎಂದು ಹೇಳಿದಿರಿ..

ಆದರೆ, ಪ್ರಧಾನಿಗಳೇ
ಕೋವಿಶೀಲ್ಡ್ ಲಸಿಕೆಯು ಇಂಗ್ಲೆಂಡಿನ Astra -Zeneca ಸಂಸ್ಥೆಯು ಅಲ್ಲಿನ Oxford Univeristy ಯ ಸಹಯೋಗದೊಂದಿಗೆ ಕಂಡು ಹಿಡಿದ ವ್ಯಾಕ್ಸಿನ್ ಹೊರತು ಭಾರತದ್ದಲ್ಲ, ಅಲ್ಲವೇ?

Astra -Zeneca ಸಂಸ್ಥೆ ಭಾರತದ Serun Institute Of India (SII ) ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವುದಷ್ಟೇ… ಅಲ್ಲವೇ?

ತಮ್ಮ ಸರ್ಕಾರ ಆ ಸತ್ಯವನ್ನು ಮುಚ್ಚಿಟ್ಟು ಕೋವಿಶೀಲ್ಡ್ ಅನ್ನು ದೇಸೀ ವ್ಯಾಕ್ಸಿನ್ ಎಂದು ಹೇಳುತ್ತಿರುವುದು ಆತ್ಮದ್ರೋಹವಲ್ಲವೇ? ಜನದ್ರೋಹವು ಅಲ್ಲವೇ?

ಕೊವ್ಯಾಕ್ಸಿನ್ ಉತ್ಪಾದಿಸುವ Bharat Biotech ಈ ವರೆಗೆ ಉತ್ಪಾದಿಸಿರುವ ಎಲ್ಲಾ ವ್ಯಾಕ್ಸಿನ್‌ಗಳಿಗೂ ಅಮೇರಿಕಾದ ಮೆಲಿಂದಾ ಗೇಟ್ಸ್ ಸಂಸ್ಥೆಯ ಹಣಕಾಸು ಮತ್ತು ಪರಿಜ್ಞಾನದ ಸರಬರಾಜಿಲ್ಲವೇ?

ಹಾಗೂ ಇಲ್ಲಿಯವರೆಗೂ ಕೊವ್ಯಾಕ್ಸಿನ್ ಗೆ WHO ಇಂದ ಅನುಮತಿ ಪಡೆದುಕೊಳ್ಳುವ ಪ್ರಯತ್ನವನ್ನೇ ಮಾಡದಿರಲು ಕಾರಣ ಅದರ ಮೂರನೇ ಟ್ರಯಲ್ ಫಲಿತಾಂಶಗಳು ಅಧಿಕೃತವಾಗಿ ಹೊರಬಂದದ್ದೇ ಇತ್ತೀಚೆಗೆ ಎಂಬುದಲ್ಲವೇ ?

ಆದರೆ ಅದಕ್ಕೆ ಮುಂಚೆಯೇ ಭಾರತದ ಜನರ ಮೇಲೆ ಕೊವ್ಯಾಕ್ಸಿನ್ ಬಳಕೆ ಪ್ರಾರಂಭಿಸಲು ನಿಮ್ಮ ಸರ್ಕಾರ ಅನುಮತಿ ನೀಡಲು ಕಾರಣ ಈ ಆತ್ಮಬರ್ಬರ ರಾಜಕಾರಣವೇ ಅಲ್ಲವೇ?

ಪ್ರಶ್ನೆ 4: ಲಸಿಕೆಯ ಬಗ್ಗೆ ಜನರಲ್ಲಿ ವಿಶ್ವಾಸವನ್ನು ತುಂಬಿ-ಅಪನಂಬಿಕೆಯನ್ನು ಬಿತ್ತಬೇಡಿ ಎಂದು ಕರೆ ನೀಡಿದ್ದೀರಿ..

ಒಳ್ಳೆಯದು.. ಹಾಗಿದ್ದಲ್ಲಿ ..

– ಲಸಿಕೆಯ ಬಗ್ಗೆ ಹಾಗೂ ಲಸಿಕಾ ವಿಜ್ಞಾನದ ಬಗ್ಗೆ ನಿರಂತರವಾಗಿ ಅಪನಂಬಿಕೆ ಬಿತ್ತುತ್ತಿರುವ ಬಾಬಾ ರಾಮ್‌ದೇವ್…

– ನಿಮ್ಮ ಅಚ್ಚುಮೆಚ್ಚಿನ ಸುದರ್ಶನ್ ಚಾನೆಲ್ ಮತ್ತು ಇನ್ನಿತರ ಬುರುಡೆ ಚಾನೆಲ್‌ಗಳು..

– ಲಸಿಕೆಯಿಂದಲ್ಲದೆ ಗಂಜಲದಿಂದ ಕೋವಿಡ್ ಹೋಗುತ್ತದೆ ಎಂದು ಪ್ರಚಾರ ಮಾಡುತ್ತಿರುವ ನಿಮ್ಮ ಪಕ್ಷದ ಸಂಸದೆ ಪ್ರಗ್ಯಾ ಸಿಂಗ್ ಹಾಗೂ ಇನ್ನಿತರ ಬುರುಡೆ ಬಾಬಾಗಳ ಬಗ್ಗೆ ಏನು ಕ್ರಮ ಕೈಗೊಳ್ಳುವಿರಿ?

ಅವರ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲವೆಂದರೆ ನಿಮ್ಮ ಭಾಷಣದ ಗುರಿ ಕೊವ್ಯಾಕ್ಸಿನ್ ಅಂಥ ಪ್ರಯೋಗ ಪಲಿತಾಂಶ ದೊರೆಯದ ವ್ಯಾಕ್ಸಿನ್‌ಗಳ ಬಗ್ಗೆ ಸಕಾರಣ ವೈಜ್ಞಾನಿಕ ಸಂದೇಹ ವ್ಯಕ್ತಪಡಿಸಿದ ವಿಜ್ಞಾನಿಗಳು, ಪರಿಣಿತರು ಹಾಗೂ ವಿರೋಧ ಪಕ್ಷಗಳೇ ಅಲ್ಲವೇ?

ಇದು ಕ್ಷುದ್ರ ರಾಜಕಾರಣವೇ ಅಲ್ಲವೇ?

ಪ್ರಶ್ನೆ 5: ಕೋವಿಡ್ ನಿಗ್ರಹಿಸಲು ಬೇಕಿದ್ದ ಮಾಸ್ಕ್ ಧಾರಣೆ ಮತ್ತು ಎರಡು ಗಜ ದೈಹಿಕ ದೂರಗಳನ್ನು ಪಾಲಿಸಿರಿ ಎಂದಿರಿ….

ನಿಜ….ಆದರೆ, ಮಾರ್ಚ್ ನಂತರ ಅವನ್ನು ಈ ದೇಶದ ಜನ ಪಾಲಿಸದಂತಾಗಲೂ ನಿಮ್ಮ ಸರ್ಕಾರ ಕುಂಭ ಮೇಳ ಹಾಗು ಚುನಾವಣಾ ರ್ಯಾಲಿಗಳಲ್ಲಿ ಜನರನ್ನು ಸೇರಿಸಿದ್ದು, ಉತ್ತೇಜಿಸಿದ್ದು, ಗಂಗಾ ತಾಯಿ, ದೇವಾನುದೇವತೆಗಳು ಜನರನ್ನು ಕಾಪಾಡುತ್ತಾರೆ, ಕೋವಿಡ್ ಇಂದ ಏನು ಆಗುವುದಿಲ್ಲ ಎಂದು ಸತತವಾಗಿ ಸುಳ್ಳು ಪ್ರಚಾರ ಮಾಡಿದ ನಿಮ್ಮ ಪಕ್ಷ ಹಾಗು ನಿಮ್ಮ ಮುಖ್ಯಮಂತ್ರಿಗಳು ಕಾರಣ ಎಂದು ಈಗಲಾದರೂ ಒಪ್ಪಿಕೊಳ್ಳುತ್ತೀರಾ?
ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೀರಾ?

ಪ್ರಶ್ನೆ 6: ಈಗಲೂ ಕಂಪನಿಗಳು ಉತ್ಪಾದಿಸುವ ಶೇ. 25 ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಕೊಳ್ಳಬಹುದೆಂದು ಅನುಮತಿ ನೀಡುತ್ತಿದ್ದೀರ..

ನಿಮ್ಮ ಈ ನೀತಿಯಿಂದಾಗಿ, ಲಸಿಕೆ ಕಂಪನಿಗಳು ಅಧಿಕ ಬೆಲೆ ನೀಡಬಲ್ಲ ಇಂಥಾ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಆದ್ಯತೆಯಲ್ಲಿ ಲಸಿಕೆಯನ್ನು ಮಾರುವುದರಿಂದ ಅವು ಉತ್ಪಾದಿಸಿರುವ ಹಲವು ಕೋಟಿ ವ್ಯಾಕ್ಸಿನ್ ಗಳು ಈಗಾಗಲೇ… ಅಪೋಲೋ, ನಿಮ್ಮ ಆಪ್ತ ಮಿತ್ರ ಅಂಬಾನಿ ಪ್ರಾಯೋಜಿತ ಆಸ್ಪತ್ರೆ, ನಿಮ್ಮ ಬ್ಲೂ ಐಯ್ಡ್ ಬಾಯ್ ದೇವೇಶೆಟ್ಟಿಯ ನಾರಾಯಣ ಹೃದಯಾಲಯ ದಂಥ ದೇಶದ ಒಂಭತ್ತು ಬೃಹತ್ ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನಾಗಿವೇ. ಇದರಿಂದ ಕಂಪನಿಗಳು ಲಸಿಕೆ ಉತ್ಪಾದಿಸಿದರೂ ಅತ್ಯಗತ್ಯವಾಗಿರುವ ಬಡಜನರಿಗೆ ನಿಮ್ಮ ಈ ಕಾರ್ಪೊರೇಟ್ ಪರ ನೀತಿಯಿಂದಾಗಿಯೇ ಲಸಿಕೆಗಳು ಸಿಗುತ್ತಿಲ್ಲ.

ಇವೆಲ್ಲ ಗೊತ್ತಿದ್ದರೂ ಮತ್ತೆ ಶೇ. 25 ರಷ್ಟು ದಾಸ್ತಾನು ಮಾಡಿಕೊಳ್ಳಲು ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಅವಕಾಶ ನೀಡುತ್ತಿರಲು ತಮ್ಮ ಕಾರ್ಪೊರೇಟ್ ನಿಷ್ಠೆಯೇ ಕಾರಣವಲ್ಲವೇ???

ಹೀಗಾಗಿ ಪ್ರಧಾನಿಗಳೇ…

ಇಂದಿನ ನಿಮ್ಮ ಭಾಷಣ … ದೇಶವನ್ನು ಮತ್ತು ಜನರನ್ನು ಕೋವಿಡ್‌ನಿಂದ ಬಚಾವು ಮಾಡಲು ಯಾವುದೇ ನೈಜ ಕ್ರಮಗಳನ್ನೂ ತೆಗೆದುಕೊಳ್ಳದ, ಕೇವಲ ರಾಜಕೀಯ ಅನಿವಾರ್ಯದಿಂದ ಮಾಡಿದ ವಂಚನೆಯ ಭಾಷಣವಾಗಿತ್ತು…

ಆದರೆ ನಿಮ್ಮ ಈ ದಿಢೀರ್ ಉಚಿತ ಹಾಗು ಉದ್ರಿ ಭಾಷಣದ ಹಿಂದಿನ ನೈಜ ಕಾರಣ ಜನರಿಗೆ ಅರ್ಥವಾಗಿದೆ.

ಅವು:

ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯತೆಯಿಂದಾಗಿ ಚುನಾವಣಾ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಕುಸಿಯುತ್ತಿರುವ ನಿಮ್ಮ ಹಾಗೂ ಬಿಜೆಪಿಯ ಜನಪ್ರಿಯತೆ,

ಉತ್ತರ ಪ್ರದೇಶದ ಚುನಾವಣೆಗೆ ಮುಂಚೆ ತಮ್ಮ ಹಾಗೂ ಬಿಜೆಪಿಯ ಜನಪ್ರಿಯತೆಗಳನ್ನು ಹೆಚ್ಚಿಸಿಕೊಳ್ಳಲು ಇತ್ತೀಚಿಗೆ ತಾವು, ತಮ್ಮ ಪಕ್ಷದ ಹಿರಿಯ ಮುಖಂಡರು ಹಾಗು ಆರೆಸ್ಸೆಸ್ಸಿನ ಮುಖ್ಯಸ್ಥರು ನಡೆಸಿದ ಚಿಂತನ ಮಂಥನದ ಪ್ರತಿಫಲವೇ ಇಂದಿನ ತಮ್ಮ ಭಾಷಣ…

ಹೀಗಾಗಿ ನಿಮ್ಮ ಭಾಷಣದಲ್ಲಿ ಘೋಷಿಸರುವ ಅಲ್ಪಸ್ವಲ್ಪ ಪರಿಹಾರಗಳು ಸಹ ಉತ್ತರ ಪ್ರದೇಶಕ್ಕೆ ಲಾಭವಾಗುವುದೇ ವಿನ್ನ ಇತರ ರಾಜ್ಯಗಳಿಗಲ್ಲ ಎಂಬ ಬಗ್ಗೆ ಈ ದೇಶದ ಯಾರಿಗೂ ಸಂದೇಹವಿಲ್ಲ…

ಎರಡನೆಯದಾಗಿ ಐದು ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ನಿರೀಕ್ಷೆಗೆ ತಕ್ಕನಾಗಿರದ ಫಲಿತಾಂಶ…

ಹಾಗೂ..

ಬೋಬ್ಡೆಯವರ ನಂತರದ ಸುಪ್ರೀಂ ಕೋರ್ಟು ಸದ್ಯಕ್ಕೆ ನಿಮ್ಮ ಆಜ್ಞಾನುವರ್ತಿಯಾಗಿರದಿರುವದರಿಂದ ಸೃಷ್ಟಿಯಾಗಿರುವ ಇಕ್ಕಟ್ಟು …

ಈ ಅನಿವಾರ್ಯಗಳು ನಿಮ್ಮ ಭಾಷಣಕ್ಕೆ ಕಾರಣವೇ ವಿನಾ ಜನರ ಬಗ್ಗೆ ಕಾಳಜಿಯಲ್ಲ…

ಇದು ಈ ದೇಶದ ದೌರ್ಭಾಗ್ಯ ..

ಆದರೆ ಜನ ಅರ್ಥಮಾಡಿಕೊಳ್ಳುತ್ತಿದ್ದಾರೆ ..

ಆದರೆ ಜನರು ಅರ್ಥಮಾಡಿಕೊಳ್ಳಬಲ್ಲರು ಎಂಬುದನ್ನು ಜಗತ್ತಿನ ಇತಿಹಾಸದಲ್ಲಿ ಯಾವ ಸರ್ವಾಧಿಕಾರಿಯೂ ಒಪ್ಪಿಕೊಳ್ಳಲಿಲ್ಲ..

ಆದ್ದರಿಂದಲೇ ಯಾವ ಸರ್ವಾಧಿಕಾರಿಯೂ ಉಳಿಯಲಿಲ್ಲ.

ಆದರೆ ತಾವು ಓದಿದ ಎಂಟೈರ್ ಪೊಲಿಟಿಕಲ್ ಸೈನ್ಸ್ ಪದವಿಯಲ್ಲಿ ಈ ಪಠ್ಯಗಳು ಇರಲಿಲ್ಲ.

ಅಲ್ಲವೇ…ಪ್ರಧಾನಿಗಳೇ?

– ಶಿವಸುಂದರ್


ಇದನ್ನೂ ಓದಿ: ಲಸಿಕಾ ನೀತಿಯಲ್ಲಿ ಯು-ಟರ್ನ್: ಲಸಿಕೆ ಜವಾಬ್ದಾರಿ ಕೇಂದ್ರದ್ದು ಎಂದ ಮೋದಿ

LEAVE A REPLY

Please enter your comment!
Please enter your name here