ಸತತ ಒಂದೂವರೆ ತಿಂಗಳುಗಳ ಕರ್ಫ್ಯೂ, ಲಾಕ್‌ಡೌನ್ ನಂತರ ಕರ್ನಾಟಕ ಜೂನ್ 14 ರಿಂದ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “COVID-19 ಲಾಕ್‌ಡೌನ್ ಅಂತ್ಯಗೊಳ್ಳುವುದರಿಂದ ಜೂನ್ 14ರ ನಂತರ ರಾಜ್ಯದಲ್ಲಿ ನಾಲ್ಕರಿಂದ ಐದು ಹಂತಗಳಲ್ಲಿ ಅನ್ಲಾಕ್ ಮಾಡುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
“COVID ಸೋಂಕಿನ ಪ್ರಮಾಣವನ್ನು ಮತ್ತಷ್ಟು ತಗ್ಗಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು, ಒಂದೇ ಸಮಯದಲ್ಲಿ ಲಾಕ್‌ಡೌನ್ ಅನ್ನು ಸಡಿಲಿಸುವುದು ಸಾಧ್ಯವಿಲ್ಲ. ಈ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್ ಮತ್ತು ನಾನು ಮುಖ್ಯಮಂತ್ರಿಯೊಂದಿಗೆ ವಿವರವಾದ ಚರ್ಚೆ ನಡೆಸಿದ್ದೇವೆ” ಎಂದು ತಿಳಿಸಿದ್ದಾರೆ.
“ಆದರೆ, ಜೂನ್ 14ರ ನಂತರ ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಬಹುಶಃ ಇದನ್ನು ನಾಲ್ಕರಿಂದ ಐದು ಹಂತಗಳಲ್ಲಿ ಮಾಡಬಹುದು. ಮೊದಲ ಹಂತದಲ್ಲಿ ಈಗ ಬೆಳಿಗ್ಗೆ 6 ರಿಂದ 10 ರ ನಡುವೆ ಇರುವ ವಿಶ್ರಾಂತಿ (ಶಾಪಿಂಗ್‌ಗಾಗಿ) ಸಮಯವನ್ನು ಇನ್ನಷ್ಟು ವಿಸ್ತರಿಸಬಹುದು. ವಾಕಿಂಗ್‌ಗೆ ಸಮಯಾವಕಾಶ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ರಫ್ತು ಆಧಾರಿತ ವಲಯಗಳು, ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ತಯಾರಕರಿಗೆ ಈಗಾಗಲೇ ವಿನಾಯಿತಿ ನೀಡಲಾಗಿದೆ. ಈ ಪಟ್ಟಿಗೆ ಮತ್ತಷ್ಟು ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಅನ್ಲಾಕ್ ಪ್ರಕ್ರಿಯೆಯ ಕುರಿತು ಚರ್ಚಿಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಜೂನ್ 11 ಅಥವಾ 12 ರಂದು ಸಚಿವರು, ಅಧಿಕಾರಿಗಳು ಮತ್ತು ತಜ್ಞರ ಸಭೆ ಕರೆಯುವ ಸಾಧ್ಯತೆ ಇದೆ. ತಜ್ಞರನ್ನು ಒಳಗೊಂಡ ರಾಜ್ಯ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಹ ರಾಜ್ಯದಲ್ಲಿ ಕ್ರಮೇಣ ಚಟುವಟಿಕೆಗಳನ್ನು ಅನ್‌ಲಾಕ್ ಮಾಡಲು ಶಿಫಾರಸು ಮಾಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಾನ್ಸೂನ್ ಮಳೆಯ ಆರ್ಭಟಕ್ಕೆ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತ


