ತನ್ನ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಕೋರಿ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನ ಸೋಮವಾರ ಕೇರಳ ಹೈಕೋರ್ಟ್‌ನ್ನು ಸಂಪರ್ಕಿಸಿದ್ದಾರೆ. ದೂರದರ್ಶನ ಚರ್ಚೆಯೊಂದರಲ್ಲಿ ಅವರು ನೀಡಿದ್ದ ಹೇಳಿಕೆಯ ಬಗ್ಗೆ ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಸಿ. ಅಬ್ದುಲ್ ಖಾದರ್ ಹಾಜಿ ನೀಡಿದ ದೂರಿನ ಮೇರೆಗೆ ಜೂನ್ 10 ರಂದು ದ್ವೀಪದ ಪೊಲೀಸರು ಆಯಿಷಾ ಸುಲ್ತಾನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಮಲಯಾಳಂ ಟಿವಿ ಚಾನೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದ ಆಯಿಷಾ ಸುಲ್ತಾನ, “ಶೂನ್ಯ ಕೊರೊನಾವಿದ್ದ ಪ್ರದೇಶದಲ್ಲಿ ದಿನಕ್ಕೆ ನೂರು ಪ್ರಕರಣಗಳು ವರದಿಯಾಗುತ್ತಿವೆ. ಒಕ್ಕೂಟ ಸರ್ಕಾರ ಹೊಸದಾಗಿ ನೇಮಕಮಾಡಿದ್ದ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ಪ್ರಯೋಗಿಸಿದ್ದು ‘ಜೈವಿಕ ಅಸ್ತ್ರ’ ರೀತಿಯಲ್ಲಾಗಿದೆ. ನನಗೆ ಸ್ಪಷ್ಟವಾಗಿ ಹೇಳಲು ಸಾಧ್ಯ, ಒಕ್ಕೂಟ ಸರ್ಕಾರವು ಕೊರೊನಾವನ್ನು ಜೈವಿಕ ಅಸ್ತ್ರವಾಗಿ ಪ್ರಯೋಗಿಸಿದೆ” ಎಂದು ಹೇಳಿದ್ದರು. ಇದನ್ನು ಬಿಜೆಪಿ ವಿವಾದವನ್ನಾಗಿ ಮಾಡಿತ್ತು.
ಇದನ್ನೂ ಓದಿ: #SaveLakshadweep-ಬಿಜೆಪಿಯ ದ್ವೇಷ ರಾಜಕೀಯಕ್ಕೆ ಹೊಸ ಬಲಿ; ಲಕ್ಷದ್ವೀಪದಲ್ಲಿ ಏನಾಗುತ್ತಿದೆ?
ಆಯಿಷಾ ಸುಲ್ತಾನ ಅವರ ಹೇಳಿಕೆಯನ್ನು ವಿವಾದವನ್ನಾಗಿಸಿದ ಬಿಜೆಪಿ ಅವರ ವಿರುದ್ದ ದೇಶದ್ರೋಹದ ಆರೋಪ ಹೊರಿಸಿ ದೂರು ನೀಡಿತ್ತು. ಅದರ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಮತ್ತು 153 ಬಿ (ದ್ವೇಷಪೂರಿತ ಭಾಷಣ) ಅಡಿಯಲ್ಲಿ ಲಕ್ಷದ್ವೀಪದ ಕವರತ್ತಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಎಫ್‌ಐಆರ್ ದಾಖಲಾದ ಹಿನ್ನಲೆಯಲ್ಲಿ ಜೂನ್ 20 ರಂದು ಪೊಲೀಸರ ಮುಂದೆ ಹಾಜರಾಗುವಂತೆ ಆಯಿಷಾ ಅವರನ್ನು ಕೇಳಲಾಗಿದೆ.
ತಮ್ಮ ಹೇಳಿಕೆಯನ್ನು ಬಿಜೆಪಿ ವಿವಾದ ಮಾಡಿದ ಹಿನ್ನಲೆಯಲ್ಲಿ ಆಯಿಷಾ ಸ್ಪಷ್ಟೀಕರಣ ಕೂಡಾ ನೀಡಿದ್ದರು. “ನಾನು ಪಟೇಲ್ ಅವರ ಕೆಲವು ನಿರ್ಧಾರಗಳನ್ನು ಉಲ್ಲೇಖಿಸಿ ಟೀಕಿಸಿದ್ದೆನೆಯೆ ಹೊರತು ದೇಶದ ವಿರುದ್ದ ಅಲ್ಲ. ಅವರ ನಡೆಯ ಕಾರಣದಿಂದಾಗಿ ಶೂನ್ಯವಿದ್ದ ಲಕ್ಷದ್ವೀಪದಲ್ಲಿ ಕೊರೊನಾ ತೀವ್ರವಾಗಿ ಹರಡುತ್ತಿದೆ. ಆದ್ದರಿಂದಲೆ ಅವರನ್ನು ನಾನು ಜೈವಿಕ ಅಸ್ತ್ರ ಎಂದು ಕರೆದಿದ್ದೇನೆ” ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದರು.
ಆಯಿಷಾ ಸುಲ್ತಾನ ಅವರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸುತ್ತಿದ್ದಂತೆ ಅನೇಕ ಸ್ಥಳೀಯ ಬಿಜೆಪಿ ನಾಯಕರು ಪಕ್ಷವನ್ನು ತೊರೆದು ಪ್ರತಿಭಟಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ, ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಪರಿಚಯಿಸಿದ ಹೊಸ ನಿಯಮಗಳ ವಿರುದ್ದ ದ್ವೀಪದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹೊಸ ನೀತಿಗಳು ದ್ವೀಪವಾಸಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ


