Homeನ್ಯಾಯ ಪಥಸ್ಮರಣೆ; ಮಾನವ ಹಕ್ಕುಗಳ ಹೋರಾಟಕ್ಕೆ ಸೈದ್ಧಾಂತಿಕ ಆಯಾಮ ನೀಡಲು ಶ್ರಮಿಸಿದ್ದ ಕೆ. ಬಾಲಗೋಪಾಲ್

ಸ್ಮರಣೆ; ಮಾನವ ಹಕ್ಕುಗಳ ಹೋರಾಟಕ್ಕೆ ಸೈದ್ಧಾಂತಿಕ ಆಯಾಮ ನೀಡಲು ಶ್ರಮಿಸಿದ್ದ ಕೆ. ಬಾಲಗೋಪಾಲ್

- Advertisement -
- Advertisement -

ಹನ್ನೆರಡು ವರ್ಷಗಳ ಹಿಂದೆ ದುರದೃಷ್ಟವಷಾತ್ ನಿಧನರಾದ ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತ ಕೆ. ಬಾಲಗೋಪಾಲ್ ಅವರ 69ನೇ ಜನ್ಮದಿನವನ್ನು ಜೂನ್ 10, 2021ರಂದು ನಾವು ಆಚರಿಸಿದ್ದೇವೆ. 2010ರಲ್ಲಿ ಗೌರಿ ಲಂಕೇಶ್ ಬಿಡುಗಡೆ ಮಾಡಿದ ಲಂಕೇಶ್ ಪ್ರಕಾಶನದ ’ಇನ್ನರ್ ವಾಯ್ಸ್ ಆಫ್ ಅನದರ್ ಇಂಡಿಯಾ: ಬಾಲಗೋಪಾಲ್ಸ್ ರೈಟಿಂಗ್ಸ್’ ಕೃತಿಯ ಕನ್ನಡ ಅನುವಾದದ ಮೂಲಕ ಕನ್ನಡ ಬಲ್ಲ ಸಾರ್ವಜನಿಕರಿಗೆ ಬಾಲಗೋಪಾಲ್ ಅವರನ್ನು ಪರಿಚಯಿಸಲಾಯಿತು. ಕಾಶ್ಮೀರದಿಂದ ಪೂರ್ವದ ಛತ್ತೀಸ್‌ಗಡ್ ಮತ್ತು ಜಾರ್ಖಂಡ್ ಸೇರಿ ಗುಜರಾತ್, ಕರ್ನಾಟಕ ಮತ್ತು ಆಂಧ್ರಪ್ರದೇಶ-ತೆಲಂಗಾಣಗಳ ರಾಜ್ಯಗಳ ಮಾನವ ಹಕ್ಕುಗಳ ಹೋರಾಟಗಾರರಿಗೆ ಬಾಲಗೋಪಾಲ ಸ್ಪೂರ್ತಿಯಾಗಿದ್ದಾರೆ. ಭಾರತದ ಮಾನವ ಹಕ್ಕುಗಳ ಇತಿಹಾಸವನ್ನು ಅರ್ಥಮಾಡಿಕೊಳ್ಳಲು,

www.balagopal.org ವೆಬ್‌ಸೈಟ್ ಒಂದು ಅದ್ಭುತ ಸಾಮಗ್ರಿಯನ್ನು ಒದಗಿಸುತ್ತದೆ. ಅಲ್ಲಿ ಅವರ ಬರಹಗಳು ಮತ್ತು ಉಪನ್ಯಾಸಗಳನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಅವರ ಸಹೋದ್ಯೋಗಿಗಳು ಉತ್ತಮವಾಗಿ ಸಂಗ್ರಹಿಸಿದ್ದಾರೆ.

ಬಾಲಗೋಪಾಲ್ ಒಬ್ಬ ಅಸಾಧಾರಣ 24/7 ಸಾಮಾಜಿಕ ಕಾರ್ಯಕರ್ತ ಮಾತ್ರವಲ್ಲದೆ, ಭಾರತೀಯ ಸಂದರ್ಭದಲ್ಲಿ ಮಾನವ ಹಕ್ಕುಗಳಿಗೆ ಸೈದ್ಧಾಂತಿಕ ಆಯಾಮ ನೀಡಲು ಸಹಕರಿಸಿದ ವಕೀಲ ಮತ್ತು ಚಿಂತಕ. ಮಾನವ ಹಕ್ಕುಗಳು ಎಂದರೇನು ಎಂಬ ಅವರ ಚಿಂತನೆಯು, ಮಾನವ ಹಕ್ಕುಗಳ ಭವಿಷ್ಯವು ದುರ್ಬಲಗೊಂಡಿರುವ ಇಂದಿನ ದಿನಗಳಲ್ಲಿ ಅವತ್ತಿಗಿಂತಲೂ ಹೆಚ್ಚು ಅತಿಹೆಚ್ಚು ಪ್ರಸ್ತುತವಾಗಿದೆ.

ನಾವು ಪಠ್ಯಪುಸ್ತಕಗಳಲ್ಲಿ ಮಾನವ ಹಕ್ಕುಗಳನ್ನು ಅಧ್ಯಯನ ಮಾಡುವಾಗ ಅದು ಅಂತರರಾಷ್ಟ್ರೀಯ ಕಾನೂನಿನಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಪ್ಪಂದದ ಅಥವಾ ಸಂವಿಧಾನದ ಮೂಲಭೂತ ಹಕ್ಕುಗಳ ಅಧ್ಯಾಯದ ಒಣ ಕಾನೂನು ದಾಖಲೆಗಳು ಎನಿಸುತ್ತದೆ. ಹೋರಾಟದಿಂದ ಹುಟ್ಟಿದ ಉತ್ಪನ್ನವಲ್ಲದೆ ನಾವು ಹಕ್ಕುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬಾಲಗೋಪಾಲ್ ಪ್ರತಿಪಾದಿಸುತ್ತ ಬಂದರು. ಅವರು ಹೇಳಿದಂತೆ, ’ಕೆಲವು ಹೋರಾಟ ಅಥವಾ ಚಳವಳಿವಿಲ್ಲದೆ, ಹಕ್ಕುಗಳು ಸಿದ್ಧಿಸುವುದಿಲ್ಲ….’.

ಮಾನವ ಹಕ್ಕುಗಳ ಬಗ್ಗೆ ಈ ರೀತಿ ಯೋಚಿಸುವುದರಿಂದ ಅದು ’ಸಂವಿಧಾನಕ್ಕೆ ಜೀವ ತುಂಬುತ್ತದೆ’. ಉದಾಹರಣೆಗೆ ಅಂಗಡಿಗಳು, ಜಲಮೂಲಗಳು ಇತ್ಯಾದಿ ಸಾರ್ವಜನಿಕ ಸ್ಥಳಗಳ ಪ್ರವೇಶದಲ್ಲಿ ಜಾತಿಯ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವ ಸಾಂವಿಧಾನಿಕ ನಿಯಮ ಆರ್ಟಿಕಲ್ 15 (2)ರ ಹಿಂದೆ ಬಾಬಾ ಅಂಬೇಡ್ಕರ್ ಅವರ ಹೋರಾಟವಿದೆ. ಬಾಬಾಸಾಹೇಬ್ ಅಂಬೇಡ್ಕರ್ ನೇತೃತ್ವದ ಪ್ರಸಿದ್ಧ ಮಹಾಡ್ ಸತ್ಯಾಗ್ರಹ ಜಾತಿ ತಾರತಮ್ಯವಿಲ್ಲದೆ ಕೆರೆಯ ನೀರನ್ನು ಪಡೆಯುವ ಹಕ್ಕಿಗೆ ಜೀವ ತುಂಬಿತು. ಅದೇ ರೀತಿ ಆರ್ಟಿಕಲ್ 17 (ಅಸ್ಪೃಶ್ಯತೆಯ ನಿಷೇಧ) ದಲಿತ ಸಮುದಾಯದ ಸಮಾನತೆ ಮತ್ತು ಘನತೆಯ ಹಕ್ಕನ್ನು ಉಲ್ಲಂಘಿಸುವುದು ಅಪರಾಧ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಈ ಘನತೆಯನ್ನು ಗುರುತಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್ ನಡೆಸಿದ ಹೋರಾಟದ ಒಂದು ಫಲವಾಗಿದೆ.

ಆದುದರಿಂದ, ಹಕ್ಕುಗಳು ಹೋರಾಟದ ಉತ್ಪತ್ತಿ ಎಂದು ನಾವು ಪರಿಭಾವಿಸಿದರೆ, ಸಂವಿಧಾನವು ಜೀವಂತವಾಗಿ ಹೊರಹೊಮ್ಮುತ್ತದೆ ಮತ್ತು ಆಗ ಒಣ ನಿಯಮಗಳು ಸಹ ಹೊಸ ಕಥೆಯನ್ನು ಹೇಳುತ್ತವೆ. ಬಾಲಗೋಪಾಲ್ ಹೇಳಿದಂತೆ, ’ಅಂತಹ ಪ್ರತಿಯೊಂದು ಹಕ್ಕು, ಮಾರ್ಕ್ಸ್ ಬಹಳವಾಗಿ ಮೆಚ್ಚಿಕೊಂಡಿದ್ದ ಸ್ಟೀಮ್ ಎಂಜಿನ್‌ನಷ್ಟೇ, ಮಾನವ ನಾಗರಿಕತೆಯ ಶಾಶ್ವತ ಸಂಪನ್ಮೂಲವಾಗಿ ಉಳಿದುಕೊಳ್ಳುವ ಮೌಲ್ಯವನ್ನು ವ್ಯಕ್ತಪಡಿಸುತ್ತದೆ’

ಮೌಲ್ಯವನ್ನು ನಿರೂಪಿಸಲು ಅದು ಸಾಕಾಗಲಾರದು. ’ಯಾವುದೇ ಹಕ್ಕಿನ ರಕ್ಷಣೆಗೆ ಹೋರಾಟ ಅಗತ್ಯ’ ಅಂದರೆ ’ಆ ಹಕ್ಕುಗಳ ಮೂಲ ತತ್ವಗಳ ಹಾಗೂ ಅವುಗಳು ಸಾಕಾರಗೊಳ್ಳಲು ಕಟ್ಟಲಾಗಿರುವ ಸಂಸ್ಥೆಗಳ ಬಗೆಗಿನ ರಚನೆಗಳು ಮತ್ತು ನಿಲುವುಗಳ ಬೂರ್ಶ್ವ ಅಭಿವ್ಯಕ್ತಿಯನ್ನು’ ಮೆಟ್ಟಿ ನಿಲ್ಲುವ ಹೋರಾಟವಾಗಬೇಕು. ತಾತ್ವಿಕ ಮಾನದಂಡವು ನೆಲಮಟ್ಟದ ವಾಸ್ತವಕ್ಕೆ ತಲುಪಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮಾನವ ಹಕ್ಕುಗಳ ಚಳವಳಿಯ ಪಾತ್ರ ಇದಾಗಿತ್ತು.

ಅವರು 1998ರಲ್ಲಿ ಮಾನವ ಹಕ್ಕುಗಳ ವೇದಿಕೆಯನ್ನು ಸ್ಥಾಪಿಸುವ ಮೂಲಕ ಇದನ್ನು ಮಾಡಿದರು. ಅಂದಿನಿಂದ ಎನ್ಕೌಂಟರ್ ಹತ್ಯೆಗಳು, ಚಿತ್ರಹಿಂಸೆ ಮತ್ತು ಸ್ಥಳಾಂತರ (ಒಕ್ಕಲೆಬ್ಬಿಸುವಿಕೆ) ಮತ್ತು ಇತರ ಮಾನವ ಹಕ್ಕುಗಳ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟವನ್ನು ನಡೆಸಿದರು. ಸದ್ಯದ ತೆಲಂಗಾಣ ಸರ್ಕಾರವು ಹಲವಾರು ಮಾನವ ಹಕ್ಕುಗಳ ಸಂಘಟನೆಗಳನ್ನು ನಿಷೇಧಿಸಿರುವ ಈ ದಿನಗಳಲ್ಲಿ, ತೆಲುಗು ಮಾತನಾಡುವ ರಾಜ್ಯಗಳಲ್ಲಿ ಮಾನವ ಹಕ್ಕುಗಳ ಹೋರಾಟ ಹಿಂದೆಂದಿಗಿಂತಲೂ ಹೆಚ್ಚು ಪ್ರಸಕ್ತವಾಗಿದೆ.

ಆಕ್ಟಿವಿಸ್ಟ್ ಬುದ್ಧಿಜೀವಿ ಎಂಬ ಅವರ ವಿಶಿಷ್ಟ ದೃಷ್ಟಿಕೋನದಿಂದ ಅವರು ಮಾನವ ಹಕ್ಕುಗಳ ’ಸಾರ್ವತ್ರಿಕತೆಯ’(universality) ಕಲ್ಪನೆಗೆ ಹೊಸ ತಿಳಿವಳಿಕೆಯನ್ನು ನೀಡಿದರು. ವಿಶೇಷವಾಗಿ ಅಕಾಡೆಮಿಕ್ ವಲಯದಲ್ಲಿ ಆಧುನಿಕೋತ್ತರ (ಪೋಸ್ಟ್ ಮಾಡರ್ನ್) ಚಿಂತನೆಯ ಆಗಮನದೊಂದಿಗೆ, ಸಾರ್ವತ್ರಿಕತೆಯ ಭಾಷೆಯನ್ನು ತೀವ್ರ ವಿಮರ್ಶೆಗೆ ಒಳಪಡಿಸಲಾಗಿತ್ತು. ಹಕ್ಕುಗಳ ಸಾರ್ವತ್ರಿಕತೆಯ (universalisation of rights) ಕಲ್ಪನೆಯ ಕುರಿತ ಬಾಲಗೋಪಾಲ್ ಅವರ ಸಮರ್ಥನೆಯು ಹೋರಾಟದಿಂದ ಉದ್ಭವಿಸಿದ ಸಂಕೀರ್ಣ ಪ್ರಶ್ನೆಗಳಿಂದ ಹೊರಹೊಮ್ಮಿದೆ.

ಮಾನವ ಹಕ್ಕುಗಳ ಗುಂಪಿನ ಭಾಗವಾಗಿ, ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ರಾಜಕೀಯ ಕೈದಿಯನ್ನು (political prisoner) ಬಿಡುಗಡೆ ಮಾಡಲು ಅಥವಾ ನ್ಯಾಯಾಲಯದ ಮುಂದೆ ಆತ/ಆಕೆಯನ್ನು ಹಾಜರುಪಡಿಸಬೇಕು ಎಂದು ಒತ್ತಾಯಿಸಲು ಪೊಲೀಸ್ ಠಾಣೆಗೆ ಹೋದಾಗ, ’ಪೊಲೀಸರು ನಮ್ಮನ್ನು ಗೇಲಿ ಮಾಡುತ್ತಿದ್ದರು’ ಎಂದು ಬಾಲಗೋಪಾಲ್ ಒಮ್ಮೆ ಹೇಳಿದ್ದರು. ನೀವು ’ಪೋಲಿಸ್ ಲಾಕ್‌ಅಪ್‌ನಲ್ಲಿರುವ ವಿಚಾರವಾದಿಯ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದೀರಿ’ ಎಂದು ಅವರು ಹೇಳುತ್ತಿದ್ದರು. ಆದರೆ ’ಆತನ ಜೊತೆಗೆ ಇನ್ನೂ ಹತ್ತು ಜನರು ಲಾಕ್‌ಅಪ್‌ನಲ್ಲಿದ್ದಾರೆ, ನೀವು ಅವರ ಬಗ್ಗೆ ಏಕೆ ಮಾತನಾಡಬಾರದು?’ ಎನ್ನುವುದು ಪೊಲೀಸರ ಪ್ರತಿಕ್ರಿಯೆಯಾಗಿತ್ತು. ನಾವು ಆ ಇತರರ ಬಗ್ಗೆ ಮಾತನಾಡಬೇಕು ಎಂಬುದು ಪೊಲೀಸರ ಆಸಕ್ತಿಯಾಗಿರಲಿಲ್ಲ ಬದಲಿಗೆ ನಮ್ಮ ಏಕಪಕ್ಷೀಯತೆಯನ್ನು ಬಹಿರಂಗಪಡಿಸಲು ಅವರು ಆಸಕ್ತಿ ಹೊಂದಿದ್ದರು ಅಷ್ಟೇ’ ಎಂದು ಬಾಲ್‌ಗೋಪಾಲ್ ಹೇಳಿದ್ದರು.

ಈ ಕುರಿತಂತೆ ಬಾಲಗೋಪಾಲ್ ಹೇಳುತ್ತಾರೆ: ನಾವು ಪೊಲೀಸರಿಂದ ಪಾಠವನ್ನು ಕಲಿತೆವು, ’ನಕ್ಸಲನೊಬ್ಬನ ಚಿತ್ರಹಿಂಸೆ ತಪ್ಪಾಗಿದೆ ಎಂದು ನಾವು ಹೇಳುವಂತಿಲ್ಲ, ಚಿತ್ರಹಿಂಸೆಯೇ ತಪ್ಪು ಎಂದು ಮಾತ್ರ ಹೇಳಬಹುದು. ಚಿತ್ರಹಿಂಸೆ ತಪ್ಪು ಎಂದು ಒಮ್ಮೆ ನೀವು ಹೇಳಿದಾಗ ಬೇರೆ ಯಾರನ್ನು ಹಿಂಸಿಸಲಾಗುತ್ತಿದೆ ಎಂಬುದನ್ನು ನೀವು ನೋಡಬೇಕಾಗುತ್ತದೆ….’

PC : Indian Cultural Forum

ಹೀಗೆ ಬಾಲಗೋಪಾಲ್ ಹೇಳುವುದು ’ತತ್ವಬದ್ಧ ಕಾಳಜಿಗಳ ನಿರಂತರ ವಿಸ್ತರಣೆಗೆ’ ಕಾರಣವಾಗುತ್ತದೆ ಮತ್ತು ಮಾನವ ಹಕ್ಕು ಸಾರ್ವತ್ರಿಕವಾಗಿರಬೇಕು ಎಂಬ ಅವರ ವಾದವನ್ನು ಪುಷ್ಟೀಕರಿಸುತ್ತದೆ. ಬಾಲಗೋಪಾಲ್ ’ತತ್ವಬದ್ಧ ಕಾಳಜಿಗಳ ವಿಸ್ತರಣೆ’ ಎಂಬ ಈ ತರ್ಕವನ್ನು ಅನ್ವಯಿಸಿಯೇ ವಿವಿಧ ಮಾನವ ಹಕ್ಕುಗಳ ಹೋರಾಟಗಳ ಪರ ನಿಂತರು. ಪಿಯುಸಿಎಲ್-ಕೆ ಪ್ರಕಟಿಸಿದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಾದ ಮೊದಲ ವರದಿಯನ್ನು ಬಾಲಗೋಪಾಲ್ ಈ ಕಾರಣಕ್ಕಾಗಿಯೇ ಬೆಂಬಲಿಸಿದರು, ಏಕೆಂದರೆ ಇದು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳನ್ನು, ’ಹಕ್ಕಿನ ತತ್ವಬದ್ಧ ರಕ್ಷಣೆ’ಯೊಳಗೆ ಇರಿಸಿದೆ. ಚಿತ್ರಹಿಂಸೆಯಿಂದ ಮುಕ್ತವಾಗುವ ಹಕ್ಕು ಮತ್ತು ಘನತೆಯ ಹಕ್ಕನ್ನು ಇದು ಬೆಂಬಲಿಸುತ್ತದೆ.

ಮಾನವ ಹಕ್ಕುಗಳ ಕಾರ್ಯಕರ್ತರಾಗಿ ಬಾಲಗೋಪಾಲ್ ಭಾರತದಾದ್ಯಂತ ಫ್ಯಾಕ್ಟ್ ಫೈಂಡಿಂಗ್ (ಸತ್ಯಾನ್ವೇಷಣೆ) ಕಾರ್ಯಾಚರಣೆಗಳಿಗೆ ತೆರಳಿದರು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿಶದವಾದ ವರದಿಗಳನ್ನು ನೀಡಿದರು. ವರದಿಗಳು ಮಾನವ ಹಕ್ಕುಗಳ ಸಂಸ್ಥೆಗಳಿಂದ ರಚಿಸಲ್ಪಟ್ಟಿವೆ ಮತ್ತು ವೈಯಕ್ತಿಕ ಹೆಸರುಗಳನ್ನು ನಮೂದಿಸಲಾಗಿಲ್ಲ. ಈ ಸ್ವರೂಪವು ಒಂದು ರೀತಿಯ ಸಾಮೂಹಿಕ ಕಾರ್ಯ ಮತ್ತು ಸಾಮೂಹಿಕ ಕರ್ತೃತ್ವಕ್ಕೆ ಗೌರವವಾಗಿದೆ. ಇದರಲ್ಲಿ ಬಾಲಗೋಪಾಲ್ ಅವರು ಬಹಳಷ್ಟು ಬರಹಗಳನ್ನು ಮಾಡಿದ್ದರೂ ಕೂಡ ಅವರ ಹೆಸರು ಅಲ್ಲಿ ಕಾಣದಂತೆ-ಮುಖ್ಯವಾಗದಂತೆ ನೋಡಿಕೊಂಡರು.

ಅವರು ಸಾಮೂಹಿಕವಾಗಿ ಬರೆದ ಮಾನವ ಹಕ್ಕುಗಳ ವರದಿಗಳು ಯಾವಾಗಲೂ ಮಿಂಚಿನ ಒಳನೋಟವನ್ನು ಹೊಂದಿರುತ್ತಿದ್ದವು ಮತ್ತು ಅದು ಆ ತಕ್ಷಣದ ಸಂದರ್ಭವನ್ನು ಮೀರಿ ವರದಿಯ ಮೌಲ್ಯವನ್ನು ಹೆಚ್ಚಿಸುತ್ತಿತ್ತು ಹಾಗೂ ಆಳವಾದ ಐತಿಹಾಸಿಕ ಹಾಗೂ ತಾತ್ವಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿತ್ತು.

1991 ರಲ್ಲಿ ನಡೆದ ಸುಂಡೂರು (Tsunduru) ಹತ್ಯಾಕಾಂಡದ ಕುರಿತ ಸತ್ಯ ಶೋಧನೆಯ ವರದಿಯನ್ನು ನೋಡಬಹುದು. ಒಂಬತ್ತು ದಲಿತರನ್ನು ಮೇಲ್ಜಾತಿಯವರು ಕೊಂದಿದ್ದರು, ಸುಂಡೂರಿನ ದಲಿತರು ಜಾತಿಯ ಧಾರ್ಮಿಕ ನಿಯಮಗಳನ್ನು ಮುರಿಯುತ್ತಿದ್ದಾರೆ ಮತ್ತು ದಲಿತರ ಈ ರೂಪಾಂತರವು, ಮೇಲ್ಜಾತಿಗಳ ’ಪಾರಂಪರಿಕೆ ಅಧಿಕಾರ’ಕ್ಕೆ ಬೆದರಿಕೆ ಒಡ್ಡಿದೆ’ ಎಂದು ವರದಿ ಉಲ್ಲೇಖಿಸಿದೆ. ಈ ಅಸಮಾಧಾನದ ಹಿನ್ನೆಲೆಯೇ ದಲಿತರ ಬಹಿಷ್ಕಾರ ಮತ್ತು ನಂತರದ ಹತ್ಯಾಕಾಂಡದ ಮೂಲವಾಗಿದೆ. ಸಿನೆಮಾ ಹಾಲ್‌ನಲ್ಲಿ ’ವಿದ್ಯಾವಂತ ದಲಿತ ಯುವಕನೊಬ್ಬ ಮೇಲ್ಜಾತಿಯ ಹುಡುಗ ಕುಳಿತ ಆಸನದ ಮೇಲೆ ಕಾಲು ಹಾಕಿದ’ ಎಂಬ ಸಂಗತಿಯೇ ಹತ್ಯಾಕಾಂಡಕ್ಕೆ ತಕ್ಷಣದ ಕಾರಣವಾಗಿತ್ತಷ್ಟೇ ಎಂದು ವರದಿ ಹೇಳುತ್ತದೆ. ’ಜಾತಿ ಸಂಬಂಧಗಳ ಬದಲಾಗುತ್ತಿರುವ ಸ್ವಭಾವ’ದಲ್ಲಿ ಲಂಗರು ಹಾಕಿರುವ ’ದೌರ್ಜನ್ಯದ ಈ ಮಾದರಿಯನ್ನು, ಇತರ ಪ್ರಮುಖ ಜಾತಿ ದೌರ್ಜನ್ಯಗಳನ್ನು ಅರ್ಥಮಾಡಿಕೊಳ್ಳಲು ಅನ್ವಯಿಸಬಹುದು, ಅದು ಕರ್ನಾಟಕದ ಕಂಬಾಲಪಲ್ಲಿ (2000) ಅಥವಾ
ಮಹಾರಾಷ್ಟ್ರದ ಖೈರ್ಲಾಂಜಿ (2006) ಕೂಡ ಆಗಿರಬಹುದು.

ಕಂದಮಹಲ್‌ನಲ್ಲಿ ಕ್ರಿಶ್ಚಿಯನ್ ಸಮುದಾಯದ ವಿರುದ್ಧದ ಹತ್ಯಾಕಾಂಡ ಕುರಿತ ಸತ್ಯಶೋಧನಾ ವರದಿಯು ತೀರಾ ಬಡವರ ಘನತೆಯನ್ನು ಬೆಳಕಿಗೆ ತರುತ್ತದೆ. ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಭಜರಂಗದಳದಿಂದ ಅಪಾರ ಒತ್ತಡ ಮತ್ತು ಪ್ರಚೋದನೆಗಳ ಹೊರತಾಗಿಯೂ, ಆದಿವಾಸಿಗಳು ಮತಾಂತರಗೊಳ್ಳಲು ನಿರಾಕರಿಸಿದರು. ಇದರರ್ಥ ಅವರು ತಮ್ಮ ಮನೆಯನ್ನು ತೊರೆಯಬೇಕಾಗಿದ್ದರೂ ಕೂಡ ಅವರು ಅಚಲರಾಗಿ ನಿಂತಿದ್ದರು. ಆತ್ಮಸಾಕ್ಷಿಯ ಸ್ವಾತಂತ್ರ್ಯವು ಮನುಷ್ಯನ ಒಂದು ಅವಿಭಾಜ್ಯ ಅಂಶವಾಗಿದೆ ಎಂಬುದಕ್ಕೆ ಇದು ಒಂದು ಪುರಾವೆಯಾಗಿದೆ. ಇದು ವ್ಯಕ್ತಿಯೋರ್ವ ತನ್ನ ಘನತೆಯನ್ನು ಬಿಟ್ಟುಕೊಡಲು ನಿರಾಕರಿಸುವುದನ್ನು ಸೂಚಿಸುತ್ತದೆ. ಇದು ಮಾನವ ಅಸ್ತಿತ್ವವನ್ನು ಇತರ ಪ್ರಾಣಿಗಳ ಅಸ್ತಿತ್ವಕ್ಕಿಂತ ಮೇಲಕ್ಕೆ ಏರಿಸುತ್ತದೆ ಎಂಬುದನ್ನೂ ಸೂಚಿಸುತ್ತದೆ.

ಬಾಲಗೋಪಾಲ್ ಅವರ ಸತ್ಯ ಶೋಧನಾ ವರದಿಗಳು ಕೇವಲ ವರದಿಗಳಲ. ಎ.ಆರ್. ದೇಸಾಯಿ ವಿಶ್ಲೇಷಿಸುವಂತೆ, ’ಹೋರಾಟಗಳ ಅಗ್ನಿ ದಿವ್ಯದಿಂದ ಉದ್ಭವಿಸಿದ ವರದಿಗಳು. ಆದ್ದರಿಂದ ಅವು ದೇಶದ ವಿವಿಧ ಭಾಗಗಳಲ್ಲಿ ಜನರು ನಡೆಸುತ್ತಿರುವ ಧೀರೋದ್ಧಾತ ಕದನಗಳ ಸಂಕೇತಗಳಾಗಿವೆ….’

ಬಾಲಗೋಪಾಲ್ ಬರಹಗಳನ್ನು ಒಟ್ಟಾರೆ ನೋಡಿದಾಗ, ಸಿದ್ಧಾಂತದಿಂದ ಪ್ರಾಕ್ಟಿಕಲ್‌ನಡೆಗೆ ಈ ನಿರಂತರ ಬದಲಾವಣೆಯಾಗಿದ್ದನ್ನು ನೋಡಬಹುದು. ಈ ಪ್ರಾಕ್ಟಿಸ್‌ನಿಂದ ಹುಟ್ಟಿದ ಪ್ರತಿಯೊಂದು ಪ್ರಶ್ನೆಯಿಂದ ತಮ್ಮ ಸಿದ್ಧಾಂತವನ್ನು ಪರಿಷ್ಕರಿಸುತ್ತ ಹೋದರು. ಅವರ ಸಹೋದ್ಯೋಗಿ ಕೋದಂಡರಾಮ್ ಹೇಳುವಂತೆ, ’ಅವರ ಈ ಪ್ರಯತ್ನಗಳು ಸ್ವವಿಮರ್ಶೆಯ ಮೂರ್ತರೂಪ ಪಡೆಯುವ ಸಂದರ್ಭದಲ್ಲೇ ಅವರು ನಮ್ಮಿಂದ ಅಗಲಿದರು…’ ಎನ್ನುತ್ತಾರೆ.

ಪೀಪಲ್ಸ್ ಡೆಮಾಕ್ರಟಿಕ್ ಫೋರಂನ ಪ್ರೊ. ಬಾಬಯ್ಯ ಅವರು ಹೇಳುವಂತೆ, ನೀವು ಬಾಲಗೋಪಾಲ್ ಬಗ್ಗೆ ಮಾತನಾಡದೆ ಭಾರತದಲ್ಲಿ ಮಾನವ ಹಕ್ಕುಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಬಾಲಗೋಪಾಲ್ ಅವರಲ್ಲಿ ಸಮಗ್ರತೆ ಮತ್ತು ಧೈರ್ಯ, ನಮ್ರತೆ ಮತ್ತು ಉತ್ಸಾಹ, ಮಾನವೀಯತೆಯ ಉದಾತ್ತ ಗುಣಗಳು ಅವರ ಅಭಿವ್ಯಕ್ತಿಯಾಗಿದ್ದವು. ಅವರನ್ನು ನೆನಪಿಟ್ಟುಕೊಳ್ಳುವುದು ಈ ಮೌಲ್ಯಗಳಿಗೆ ನಿಷ್ಠೆಯನ್ನು ತೋರಿದಂತೆ ಮತ್ತು ’ಪರ್ಯಾಯ ಭಾರತದ ಕಲ್ಪನೆಯ’ ಕಡೆಗೆ ಕೆಲಸ ಮಾಡಿದಂತೆ’.

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಅರವಿಂದ್ ನಾರಾಯಣ್ ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.

(ಕನ್ನಡಕ್ಕೆ): ಪಿ ಮಲ್ಲನಗೌಡರ್


ಇದನ್ನೂ ಓದಿ: ಬಹುಜನ ಭಾರತ; ಬಸ್ತರ್ – ಹುಟ್ಟಿದ ನೆಲದಲ್ಲೇ ತಬ್ಬಲಿಗಳಾಗಿರುವ ಆದಿವಾಸಿಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...