ಈ ದುರಂತ (ಕೊರೊನಾ ಎರಡನೆ ಅಲೆ) ಕಾಲದಲ್ಲಿ ಕನ್ನಡದ ನಮ್ಮೆಲ್ಲರ ಪ್ರೀತಿಯ ಜನಕವಿ ಡಾ. ಸಿದ್ಧಲಿಂಗಯ್ಯನವರು ನಮ್ಮನ್ನಗಲಿದ ಈ ದುಃಖ ಬಹುದಿನ ನಮ್ಮನ್ನು ಕಾಡಲಿದೆ. ಜೊತೆಗೆ ಕನ್ನಡದ ಎಪ್ಪತ್ತರ ದಶಕದ ದಲಿತ ಬಂಡಾಯ ಚಳವಳಿಯ ಪ್ರಮುಖ ಕೊಂಡಿಯೊಂದು ಕಳಚಿದೆ. ಯಾವುದೇ ಚಳವಳಿ ರೂಪುಗೊಳ್ಳುವುದರ ಹಿಂದೆ ಯಾವುದೇ ಪೂರ್ವನಿರ್ಧಾರಿತ ತಯಾರಿ ಇರುವುದಿಲ್ಲವಾದರೂ, ಕಾಲ ಮತ್ತು ಸಂದರ್ಭಗಳೇ ಚಳುವಳಿಗಳನ್ನು ರೂಪಿಸುತ್ತವೆ. ಹಾಗಾಗಿ, ಕನ್ನಡ ಕವಿ ಸಿದ್ಧಲಿಂಗಯ್ಯನವರು ಭೂಸಾ ಆಂದೋಲನದಿಂದ ಹೋರಾಟಗಾರರಾಗಿ ರೂಪುಗೊಂಡಿದ್ದು ಎಷ್ಟು ವಿಶೇಷವೂ ಅದು ಅಷ್ಟೇ ಆಕಸ್ಮಿಕವೂ ಇರಬಹುದು.
ಚಳವಳಿಗಳನ್ನು ಹೋರಾಟಗಾರರು ರೂಪಿಸುತ್ತಾರೋ ಅಥವಾ ಚಳವಳಿಗಳೇ ಹೋರಾಟಗಾರರನ್ನು ರೂಪಿಸುತ್ತವೆಯೋ ಎಂಬ ಚರ್ಚೆ ಬಂದಾಗ ಜನರು ಚಳವಳಿಗಳನ್ನು ರೂಪಿಸಿದರೆ ಚಳವಳಿಗಳು ಹೋರಾಟಗಾರರನ್ನು, ಕವಿಗಳನ್ನು, ಬರಹಗಾರರನ್ನು ಚಿಂತಕರನ್ನು ರೂಪಿಸುತ್ತವೆ. ಹಾಗೆಯೇ ಪ್ರಜ್ಞಾವಂತ ಹೋರಾಟಗಾರರು ಮತ್ತು ಅವರ ಬರಹಗಳು ರೂಪಿಸುವ ಆಂದೋಲನಗಳು ಕೇವಲ ಒಂದು ಜನಾಂಗವನ್ನು ಮಾತ್ರವಲ್ಲ ದೊಡ್ಡ ಸಮುದಾಯವನ್ನೇ ಬಿಡುಗಡೆಗೊಳಿಸಬಲ್ಲವು. ಅದಕ್ಕೆ ಕನ್ನಡದ ದಲಿತ ಚಳವಳಿ ಒಂದು ತಾಜಾ ಉದಾಹರಣೆ. ಆಕಾರಣಕ್ಕೆ ಚಳವಳಿಯ ಸ್ವರೂಪ ಮತ್ತು ಆಶಯಗಳ ದೃಷ್ಟಿಯಿಂದ 12ನೇ ಶತಮಾನದ ವಚನ ಚಳವಳಿಯೊಂದಿಗೆ ಕನ್ನಡದ ದಲಿತ ಚಳವಳಿಯನ್ನು ಸಮೀಕರಿಸಬಹುದು.
ಸಾಮಾನ್ಯವಾಗಿ ಒಂದು ಜನಾಂದೋಲನವೆಂದರೆ ಬರೀ ಕರಪತ್ರ, ಘೋಷಣೆ, ಭಾಷಣ ಮತ್ತು ಬೇಡಿಕೆಗಳು, ನಿರ್ಣಯಗಳಷ್ಟೇ ಆಗಿರುವುದಿಲ್ಲ. ಬದಲಿಗೆ ಜನಸಮುದಾಯವನ್ನು ಸರಳವಾಗಿ ತಲುಪುವಂತ ಮತ್ತು ಅವರ ಆಲೋಚನೆಗಳನ್ನು ಪ್ರಭಾವಿಸುವಂತ ಜನಪರ ಸಾಹಿತ್ಯವು ಪ್ರಮುಖ ಪಾತ್ರ ವಹಿಸುತ್ತದೆ. ಆ ದೃಷ್ಟಿಯಲ್ಲಿ ನೋಡಿದರೆ ಜಗತ್ತಿನ ಮಹಾನ್ ಜನಕ್ರಾಂತಿಗಳನ್ನೆಲ್ಲ ಕಾವ್ಯವೆ ಮುನ್ನಡೆಸಿದೆ ಅನ್ನುವುದು ಚಾರಿತ್ರಿಕ ಸತ್ಯ. ಹಾಗಾಗಿ ಕನ್ನಡದ ದಲಿತ ಚಳವಳಿಯ ಕಾವು ತೀವ್ರಗೊಳ್ಳುವುದರಲ್ಲಿ, ಜನರನ್ನು ಪ್ರಭಾವಿಸುವುದರಲ್ಲಿ ಕವಿ ಸಿದ್ಧಲಿಂಗಯ್ಯನವರ ಕಾವ್ಯ ನಿರ್ವಹಿಸಿದ ಪಾತ್ರ ಅಪಾರವಾದದ್ದು ಮತ್ತು ಮುಂದೆಯೂ ಇನ್ನೊಂದು ಜನಾಂದೋಲನವನ್ನು ಮುನ್ನೆಡೆಸುವ ಶಕ್ತಿ ಇವರ ಕಾವ್ಯಕ್ಕಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು.
ನೋಡಲು ಅತ್ಯಂತ ಸರಳವಾಗಿ ಕಾಣುವ, ನಡೆ ನಡಿಯಿಲ್ಲ ತಣ್ಣಗೆ ಹರಿವ ನದಿಯಂತೆ ಕಾಣುವ ಈ ಕವಿಯಲ್ಲಿ ಅಷ್ಟು ಆಕ್ರೋಶ ಕಿಚ್ಚು ಹುಟ್ಟಿದ್ದಾದರೂ ಹೇಗೆ ಎಂಬ ಪ್ರಶ್ನೆ ಯಾರನ್ನಾದರೂ ಕಾಡಬಹುದು. ಬಡತನ ಮತ್ತು ಹಸಿವುಗಳಷ್ಟೇ ಆಗಿದ್ದರೇ ಒಬ್ಬ ವ್ಯಕ್ತಿಯ ಆಕ್ರೋಶ ಬಹುಬೇಗ ಕಡಿಮೆಯಾಗಿಬಿಡುತ್ತದೆ. ಆದರೆ ಈ ಕವಿಯ ಸಿಟ್ಟು ಬರಿ ಹಸಿವು ಬಡತನಗಳದ್ದಲ್ಲ. ಬದಲಿಗೆ ಸಾವಿರಾರು ವರ್ಷಗಳಿಂದ ಈ ರೋಗಗ್ರಸ್ತ ಜಾತಿ ಸಮಾಜ ಸೃಷ್ಟಿಸಿದ ಕ್ರೂರ ಅಸಮಾನತೆ, ದೌರ್ಜನ್ಯ ಮತ್ತು ದಬ್ಬಾಳಿಕೆಗಳು ಸಹಜವಾಗಿಯೇ ಈ ಕವಿಯಲ್ಲಿ ಕಾವ್ಯವಾಗಿ ಆಸ್ಪೋಟಗೊಂಡಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಕವಿ ಸಿದ್ಧಲಿಂಗಯ್ಯ ಬರೆದದ್ದು ಕೇವಲ ತನ್ನ ನೋವಲ್ಲ ಬದಲಿಗೆ ಇಡೀ ಜನಾಂಗದ ನೋವು. ಆ ಕಾರಣಕ್ಕೆ ಇವರ ಯಾವುದೇ ಪ್ರಮುಖ ಕವಿತೆಯನ್ನು ಈ ದೇಶದ ಯಾವುದೇ ಭಾಷೆಗೆ ಅನುವಾದಿಸಿದರು ಅಲ್ಲಿ ಶೋಷಣೆಗೆ ಒಳಗಾದ ಎಲ್ಲಾ ವಂಚಿತರ ನೋವುಗಳನ್ನು ಪ್ರತಿನಿಧಿಸುವ ಶಕ್ತಿ ಅದಕ್ಕಿದೆ.
ಸಿದ್ಧಲಿಂಗಯ್ಯನವರ ಕಾವ್ಯದಲ್ಲಿನ ನೋವು, ಸಿಟ್ಟು ಆಕ್ರೋಶಗಳಿಗೆ ಅವರು ತಮ್ಮ ಆತ್ಮಕಥೆಯಲ್ಲಿ ದಾಖಲಿಸುವ ಒಂದು ಘಟನೆಯನ್ನು ನೋಡಬಹುದು. “ಕೇರಿಯಲ್ಲಿ ನಮ್ಮದೇ ಕಡೆಯ ಮನೆ. ಅಲ್ಲಿಂದ ನೋಡಿದರೆ ಗದ್ದೆ ಬಯಲು, ಶ್ರೀಮಂತರ ತೋಟಗಳೆಲ್ಲವೂ ಕಾಣೋವು. ನಾವು ನಾಲ್ಕಾರು ಹುಡುಗರು ಆಟ ಆಡುತ್ತಾ ಆ ಭೂಮಾಲಿಕರ ಗದ್ದೆಯ ಕಡೆಗೆ ನೋಡುತ್ತಿದ್ದೆವು. ಅಲ್ಲಿ ಇಬ್ಬರು ವ್ಯಕ್ತಿಗಳನ್ನು ನೇಗಿಲಿನ ನೊಗಕ್ಕೆ ಎತ್ತುಗಳಂತೆ ಹಾಕಿ ಇನ್ನೊಬ್ಬ ವ್ಯಕ್ತಿ ಉಳುಮೆ ಮಾಡುತ್ತಿದ್ದ..! ನಾವು ಕುತೂಹಲದಿಂದ ಹತ್ತಿರಕ್ಕೆ ಹೋಗಿ ನೋಡಬೇಕಾದರೆ ಅದರಲ್ಲಿ ಒಂದು ಎತ್ತಾಗಿದ್ದವನು ನನ್ನಪ್ಪ ಎಂಬುದು ಕಂಡು ನನ್ನ ಮನಸ್ಸಿಗೆ ಸಂಕಟವಾಯಿತು. ಹಾಗಾಗಿ ನನ್ನ ಬಾಲ್ಯದ ನೆನಪುಗಳೆಂದರೆ ಅದು ಬರಿ ನೋವಿನ ನೆನಪುಗಳು ಅಷ್ಟೆ” ಎಂಬ ಅಂಶವನ್ನು ಗಮನಿಸಿದರೆ ಒಂದು ಸಮಾಜ ಅಸ್ಪೃಶ್ಯ ಸಮುದಾಯಗಳನ್ನು ಪ್ರಾಣಿಗಳಂತೆ ನಡೆಸಿಕೊಂಡಿದೆ ಮತ್ತು ಪ್ರಾಣಿಗಳಿಗಿಂತ ಕೀಳಾಗಿ ಕಂಡಿದೆ ಎಂಬುದು ಸುಲಭವಾಗಿ ಮನದಟ್ಟಾಗುತ್ತದೆ. ಈ ರೀತಿಯ ಘಟನೆಗಳು, ನೋವು ಅಪಮಾನಗಳು ಸಹಜವಾಗಿಯೇ ಸಿದ್ಧಲಿಂಗಯ್ಯನವರನ್ನು ಒಬ್ಬ ಕ್ರಾಂತಿ ಕವಿಯನ್ನಾಗಿ ರೂಪಿಸಿದವು ಎನ್ನುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಪೂರಕವಾಗಿ ಅವರ ’ನಗ್ಬೇಕು’ ಎಂಬ ಕವಿತೆಯ ಸಾಲುಗಳನ್ನು ಗಮನಿಸುವುದಾದರೆ:
ದೇವ್ರು ದಿಂಡ್ರುಗ್ ಕಡ್ಡಿಹಚ್ಚಿ
ಸಾಕಾಗೋಯ್ತಪ್ಪ
ನನ್ ಮಗ್ನವ್ ಹಂಗೇ ಕುಂತವೆ
ಉಸ್ರೇ ವಂಡಲ್ಲ
ಸನ್ಕೆ ಗುದ್ಲಿ ತಗಂಡು
ದೆವ್ಗುಳ್ ವಂಟಂಗ್ ಹೋಗ್ಬೇಕು
ಕಳೇ ಕಿತ್ತಂಗ್ ಕೀಳ್ಬೇಕು
ಕುಂಟೆ ವಡ್ದಂಗ್ ವಡಿಬೇಕು
ಏರು ಪೇರು ನ್ಯಾರಮಾಡಿ
ಬಾಡು ತಿಂದಂಗ್ ನಗ್ಬೇಕು॒
ಎಂಬ ಈ ಕವಿತೆಯ ಜೊತೆಗೆ ಮರಾಠಿ ದಲಿತ ಸಾಹಿತ್ಯದಲ್ಲಿ ಸಂಚಲನ ಮೂಡಿಸಿದ ಮತ್ತೊಬ್ಬ ಕವಿ ನಾಮದೇವ ಢಸಾಳರ ’ಸೂರ್ಯರಥದ ಏಳು ಕುದುರೆ ಕೊಂದೆ’ ಎಂಬ ಪದ್ಯವನ್ನು ಉಲ್ಲೇಖಿಸಬಹುದು.
ನಾವೇ ಬೆಳೆದ ಪೈರು ಕದಿಯಲು ದುಷ್ಟರ ಛೂ ಬಿಟ್ಟಿರುವೆ
ಹಸಿವೆಯಲಿ ಮುಳುಗಿಸಿ ಕೊಲೆಗೈವ
ಕ್ರೂರಿಗಳಿಗೆ
ನಮ್ಮನ್ನು ಹಂಚಿಬಿಟ್ಟಿರುವೆ
ಅವ್ವ, ಅಕ್ಕ, ತಂಗಿಯರ
ಕೆಡಿಸಿ ಅವಮಾನಗೊಳಿಸಲು ಬಿಟ್ಟೆ
.. .. .. .. .. .. .. ..
ದೇಹಕಚ್ಚಿ ಜಿಗಣೆಗಳಂತೆ ಅವರು
ನಮ್ಮ ನೆತ್ತರು ಹೀರುವಾಗ
ನಿನ್ನ ಕಣ್ಣು ಮುಚ್ಚಿಬಿಟ್ಟೆ
ಅನ್ಯಾಯದ ಮುಳು ಕೋಲಲ್ಲಿ ಬೆತ್ತಲೆ ಬೆನ್ನುಗಳ
ಚರ್ಮ ಸುಲಿದು ರಕ್ತ ಹರಿವವರೆಗೆ ಬಾರಿಸಿದರೂ
ನಿನಗೆ ಕರುಣೆ ನಿಟ್ಟುಸಿರೂ ಬರಲಿಲ್ಲ.
ಕೋಳ ತೊಡಿಸಿ ನಮ್ಮ ಸ್ವಾತಂತ್ರ್ಯ ಕದ್ದರು
ತಮ್ಮ ಗುಲಾಮರಾಗೇ ಬಿದ್ದಿರಲೆಂದು
ಜಾತಿಧರ್ಮಗಳ ವಿಷಜಾಲದಲ್ಲಿ ಕೆಡವಿ
ಕಗ್ಗತ್ತಲ ಹಗೇವುಗಳಿಗೆ ದೂಡಿದರು
ಹೀಗೆ ಮುಂದುವರಿಯುವ ಕವಿತೆಯಲ್ಲಿ ಕವಿ ಢಸಾಳರು ’ಸೂರ್ಯ ದೇವರನ್ನು’ ತರಾಟೆಗೆ ತೆಗೆದುಕೊಂಡು, ನಾವು ತಲೆಮಾರುಗಳಿಂದ ದಾಸ್ಯದಲ್ಲಿ ಸತ್ತರೂ, ಇದುವರೆಗೂ ನಮ್ಮ ನೆರವಿಗೆ ಬರದೆ, ನಮ್ಮ ಬದುಕಲ್ಲಿ ಕತ್ತಲನ್ನೇ ಉಳಿಸಿದ್ದೀಯ, ಇನ್ನು ಮುಂದೆಯಾದರೂ ನಮ್ಮವರ ಜೊತೆ ಸೇರಿಕೋ, ನಮ್ಮ ನೆಂಟನಾಗು, ಇಲ್ಲದಿದ್ದರೆ ನಿನ್ನ ರಥದ ಚಕ್ರ ಮುರಿದು ಅದರ ಏಳು ಕುದುರೆಗಳನ್ನು ಕೊಂದು ಬಿಡುತ್ತೇನೆ ಎಂಬುದಾಗಿ ಎಚ್ಚರಿಕೆಯನ್ನು ನೀಡುತ್ತಾರೆ. ಮುಂಬೈನ ಕಾಮಾಟಿಪುರದ ಕೊಳಗೇರಿಯಲ್ಲಿ ಬೆಳೆದ ನಾಮದೇವ ಢಸಾಳರಿಗೂ ಬೆಂಗಳೂರಿನ ಶ್ರೀರಾಮಪುರದ ಕೊಳಗೇರಿಯಲ್ಲಿ ತಮ್ಮ ಬಾಲ್ಯವನ್ನು ಕಳೆದ ಡಾ ಸಿದ್ಧಲಿಂಗಯ್ಯನವರ ನಡುವೆ ಅನೇಕ ಸಾಮ್ಯತೆಗಳಿವೆ. ಈ ಮೇಲಿನ ಇಬ್ಬರು ಕವಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ಒಂದು ತಲೆಮಾರನ್ನು ಪ್ರಭಾವಿಸಿದ್ದಾರೆ, ಒಂದು ಜನಾಂಗದ ಕಣ್ಣು ಮತ್ತು ಹೃದಯಗಳೆರಡನ್ನು ತೆರೆಸಿದ್ದಾರೆ ಎಂದರೆ ತಪ್ಪಾಗಲಾರದು.
ಆಂಶಿಕವಾಗಿ ಈ ಮೇಲೆ ಉಲ್ಲೇಖಿಸಿರುವ ಇಬ್ಬರು ಕವಿಗಳ ಎರಡೂ ಕವಿತೆಗಳು ಅಭಿವ್ಯಕ್ತಿಸುತ್ತಿರುವುದು ಸಾವಿರಾರು ವರ್ಷಗಳು ದೇವರು ಮತ್ತು ಧರ್ಮಗಳ ನೆರಳಿನಲ್ಲಿ ಒಂದು ಮಾನವ ಜನಾಂಗವನ್ನು ವಂಚಿಸಿದ ಬಗೆಯನ್ನು ಹಾಗೂ ಅವರ ಮೇಲೆ ನಡೆಸಿದ ಕೌರ್ಯ, ವಂಚನೆಗಳನ್ನು ಆಕ್ರೋಶದಿಂದ ಪ್ರಶ್ನೆ ಮಾಡುತ್ತವೆ.
ಈ ದೃಷ್ಟಿಯಿಂದ ದಲಿತರ ಕಾವ್ಯದಲ್ಲಿ ಕಾಣುವ ಸಿಟ್ಟು, ಆಕ್ರೋಶಗಳು ಅವರು ಅನುಭವಿಸಿದ ಅವಮಾನ, ನೋವು, ದೌರ್ಜನ್ಯಗಳು ಎಷ್ಟು ಭೀಕರವಾಗಿತ್ತು ಎಂಬುದರ ಪ್ರತೀಕವಾಗಿದೆ.
ಆ ನಿಟ್ಟಿನಲ್ಲಿ ಸಿದ್ಧಲಿಂಗಯ್ಯನವರ ’ಕೆಂಪು ಸೂರ್ಯ ಎಂಬ ಕವಿತೆಯನ್ನು ಗಮನಿಸುವುದಾದರೆ
ಎಲ್ಲಿದ್ದರೋ ಅವರು ಯಂಗಿದ್ದರೊ ಅವರು
ಎಚ್ಚೆತ್ತ ಸಿಂಹಗಳು ನನ್ನ ಜನರು
ಎಷ್ಟು ಲೋಕದ ಕನಸ ಕಾಣುತ್ತಿದ್ದರೋ ಅವರು
ಎದ್ದ ಬಿರುಗಾಳಿಗಳು ನನ್ನ ಜನರು
.. .. .. .. .. .. .. .. .. .. .. .. .. ..
ಸಾಹುಕಾರರ ಬಲೆಗೆ ಪಾರಿವಾಳಗಳಂತೆ
ಸಿಕ್ಕಿ ಸುಸ್ತಾದಂಥ ನನ್ನ ಜನರು
ಎಲ್ಲರೂ ತಲೆಯೆತ್ತಿ ಬಲೆಯೊಡನೆ ಹಾರಿದರು
ಎದುರಾದ ಮೋಡಗಳ ಸೀಳಿಕೊಂಡು
.. .. .. .. .. .. .. .. .. .. ..
ದಟ್ಟ ಅಡವಿಯ ನಡುವೆ ಬಿದ್ಧಂಥ ಬೀಜಗಳು
ಹೂವಾಗಿ ಊರೊಳಗೆ ಬಂದವಲ್ಲೊ
ಹೂವ ಮುಡಿಯುವ ಧೈರ್ಯ ಊರ ದೇವತೆಗಿಲ್ಲ
ಕ್ರಾಂತಿ ಕನ್ಯೆಯ ಕಣ್ಣ ಸೆಳೆದವಲ್ಲೊ
ಹೀಗೆ ಸಿದ್ಧಲಿಂಗಯ್ಯನವರ ಬಹುತೇಕ ಎಲ್ಲಾ ಕವಿತೆಗಳಲ್ಲಿಯೂ ಈ ದೇಶದ ತಿರಸ್ಕೃತ ಜನಾಂಗಗಳ (Rejected People) ನೋವು, ಆಕ್ರೋಶಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ಕನ್ನಡದ ದಲಿತ, ರೈತ, ಪ್ರಗತಿಪರ, ಕಾರ್ಮಿಕ ಎಲ್ಲಾ ಅಂದೋಲನಗಳ ಆಶಯವನ್ನು ಇವರ ಕಾವ್ಯ ಪ್ರತಿನಿಧಿಸುತ್ತದೆ.
ಹಾಗಾಗಿ ಇವರು ಜನಕವಿ, ಜನಪರ ಕವಿ. ಅವರ ಕಾವ್ಯ ಜನರ ನಡುವಿನಿಂದ ಸಿಡಿದ ನೋವಿನ ಕೂಗು. ಈ ದೃಷ್ಟಿಯಿಂದಲೇ ಕನ್ನಡದ ಪ್ರಸಿದ್ಧ ವಿಮರ್ಶಕ ಡಿ.ಆರ್ ನಾಗರಾಜ್ ಅವರು ಸಿದ್ಧಲಿಂಗಯ್ಯ ಅವರನ್ನು ’ಮಹಾ ಸಾರ್ವಜನಿಕ ಕವಿ’ ಎಂದು ಕರೆದಿರಬೇಕು. ಈ ಮಹಾ ಸಾರ್ವಜನಿಕ ಕವಿ ಈಗ ಭೌತಿಕವಾಗಿ ನಮ್ಮನ್ನು ಅಗಲಿರಬಹುದು ಆದರೆ ಇವರ ಕಾವ್ಯ ನಿರಂತರವಾಗಿ ಹೊಸ ಜನಾಂಗಗಳಲ್ಲಿ ಜೀವಂತವಾಗಿರುತ್ತದೆ ಮತ್ತು ಪ್ರಭಾವಿಸುತ್ತಲೇ ಇರುತ್ತದೆ. ಹೋಗಿ ಬನ್ನಿ ಸರ್. ನಿಮ್ಮನ್ನು ಮುಂದಿನ ಜನಾಂಗವೂ ಸ್ಮರಿಸಲಿದೆ.

ಡಾ. ನಾರಾಯಣ್ ಕ್ಯಾಸಂಬಳ್ಳಿ
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರು. ಹಲವು ಚಳವಳಿ ಮತ್ತು ಹೋರಾಟಗಳ ಸಂಗಾತಿ.


