ಅಮೆರಿಕದಲ್ಲಿ ವೈದ್ಯರಾಗಿರುವ ಡಾ. ಅಮರ್‌ಕುಮಾರ್ ಅವರು ಕಳೆದ ವರ್ಷ ದೊರೆಸ್ವಾಮಿಯವರನ್ನು ಭೇಟಿ ಮಾಡಿ ಹಿಂದಿರುಗಿದ ಮೇಲೆ ನನಗೆ ಫೋನ್ ಮಾಡಿದ್ದರು. ಅವರು ದೊರೆಸ್ವಾಮಿಯವರ ರಾಜಕೀಯ ಒಳನೋಟ, ವಿಶ್ಲೇಷಣಾ ಕ್ರಮ ಮತ್ತು ಅಗಾಧ ನೆನಪಿನ ಶಕ್ತಿಯ ಕುರಿತು ಮಾತಾಡಿದರು. ‘ನೂರು ವರ್ಷ ದಾಟಿದ ಯಾವ ವ್ಯಕ್ತಿಗೂ ಈ ಬಗೆಯ ಹರಿತ ಮುನ್ನೋಟ ಮತ್ತು ನೆನಪಿನ ಶಕ್ತಿಗಳಿರುವುದು ತುಂಬಾ ಅಪರೂಪ. ಮೆದುಳಿನ ಜೀವಕೋಶಗಳು ಅರವತ್ತು ಎಪ್ಪತ್ತರ ನಂತರ ತಮ್ಮ ಸಹಜ ಚಟುವಟಿಕೆಗಳಿಂದ ದಿನೇದಿನೇ ವಿಮುಖವಾಗುತ್ತಾ ಹೋಗುತ್ತವೆ. ಅರಳುಮರಳು, ಕ್ರಿಯೆ ಮತ್ತು ಆಲೋಚನಾ ಕ್ರಮದ ಮೇಲೆ ಹಿಡಿತವಿಲ್ಲದಂತಾಗುತ್ತದೆ. ಆದರೆ ದೊರೆಸ್ವಾಮಿಯಂತವರು ಇಂತಹ ಮಿತಿಯನ್ನು ಮೀರಿ ತಮ್ಮ ಪ್ರಜ್ಞೆಯನ್ನು ಜಾಗೃತವಾಗಿಟ್ಟುಕೊಂಡಿದ್ದಾರೆ.’ ಎಂದರು. ಅಮರ್‌ಕುಮಾರ್ ತಮಗಿರುವ ವೈದ್ಯವಿಜ್ಞಾನದ ತಿಳಿವಳಿಕೆಯಿಂದ ಈ ಮಾತನ್ನು ಹೇಳಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ದೊರೆಸ್ವಾಮಿಯವರನ್ನು ಹತ್ತಿರದಿಂದ ನೋಡಿದ್ದ ನನಗೆ ಅಮರ್‌ಕುಮಾರ್ ಅವರ ಹೇಳಿಕೆಯಿಂದ ಆಶ್ಚರ್ಯವೇನಾಗಲಿಲ್ಲ. ಆದರೆ ಅಮರ್‌ಕುಮಾರ್ ದೊರೆಸ್ವಾಮಿಯವರಿಂದ ಸಹಜವಾಗಿಯೇ ತುಂಬಾ ಪ್ರಭಾವಿತರಾಗಿದ್ದರು.

ತಾಂತ್ರಿಕ ಪಂಥದ ಯತಿಗಳು ತಾವು ಜ್ಞಾನದ ಅತ್ಯುನ್ನತ ಹಂತಕ್ಕೆ ತಲುಪಬೇಕೆಂಬ ಹಠದಲ್ಲಿ ತಮ್ಮನ್ನು ಸದಾ ಜಾಗೃತವಾಗಿಟ್ಟುಕೊಳ್ಳುತ್ತಾರೆ ಎಂದು ಓದಿದ ನೆನಪು. ತಾಂತ್ರಿಕರು, ತೀವ್ರತರ ನೋವಿನಲ್ಲಿ ಮತ್ತು ಸುಖದ ತುತ್ತತುದಿಯಲ್ಲಿರುವಾಗಲು ತಮ್ಮ ಪ್ರಜ್ಞೆಯನ್ನು ಸೋಲಲು ಬಿಡುವುದಿಲ್ಲವಂತೆ. ಈ ಹಠಯೋಗದ ಮೂಲಕ ತಮ್ಮ ವ್ಯಕ್ತಿತ್ವ ಮತ್ತು ಪ್ರಜ್ಞೆಯನ್ನು ತಾಂತ್ರಿಕರು ನಿರಸನಗೊಳಿಸದೆ ಮುಂದುವರೆಸುತ್ತಾರೆ. ಹಾಗಾಗಿ ಅವರಿಗೆ
ಲೌಕಿಕದ ನೋವು ಮತ್ತು ಸುಖಗಳೆರಡೂ ಜ್ಞಾನದ ಕಡೆಗೆ ಕೈಗೊಂಡ ಪ್ರಯಾಣಕ್ಕೆ ಮೆಟ್ಟಿಲುಗಳೇ ಆಗಿಬಿಡುತ್ತವೆ. ಅದಕ್ಕೆ ತಾಂತ್ರಿಕರು ಏಕಾಗ್ರತೆಗಾಗಿ, ಎಚ್ಚರವಾಗಿರುವುದಕ್ಕಾಗಿ ಲೌಕಿಕದ ಜೊತೆ ಯುದ್ಧವನ್ನೇ ನಡೆಸುತ್ತಾರೆ. ಈ ಯುದ್ಧ ಒಂದು ದಿನ ನಡೆದು ಮುಗಿದುಹೋಗುವುದಿಲ್ಲ. ಜಾಗೃತವಾಗಿರಲು ಅವರು ಸದಾ ಯುದ್ಧದಲ್ಲಿ ತೊಡಗಿರಲೇಬೇಕಾಗುತ್ತದೆ. ದೊರೆಸ್ವಾಮಿಯವರು ತಾಂತ್ರಿಕರಾಗಿರಲಿಲ್ಲ. ಆದರೆ ಸದಾ ಜಾಗೃತವಾಗಿರುತ್ತಿದ್ದ ಅವರು ತಮ್ಮ ಸುತ್ತಲಿದ್ದ ಯಾರೂ ಮೈಮರೆಯಲು ಅವಕಾಶವನ್ನು ನೀಡುತ್ತಿರಲಿಲ್ಲ.

ನೂರರ ಹರೆಯದಲ್ಲೂ ಅವರು ನಿಶಿತಮತಿಯಾಗಿದ್ದರು. ಅವರ ಸೂಕ್ಷ್ಮ ಸಂವೇದಿ ನಡವಳಿಕೆಗಳಿಗೆ ಅನೇಕ ಉದಾಹರಣೆಗಳನ್ನು ನೀಡಬಹುದು. ಇದಕ್ಕೆ ಪೂರಕವಾಗಿ ಒಂದು ಪ್ರಸಂಗ ನೆನಪಾಗುತ್ತದೆ. ಗೌರಿ ಲಂಕೇಶರ ಹತ್ಯೆಯ ನಂತರ ಅವರ ಹೆಸರಲ್ಲಿ ಟ್ರಸ್ಟೊಂದನ್ನು ಪ್ರಾರಂಭಿಸಲಾಯಿತು. ಈ ಟ್ರಸ್ಟ್ ಮಾಡಲು ಬೇಕಾದ ಬೈಲಾ ತಯಾರಿಯಲ್ಲಿ ಹಲವು ಹಿರಿಯರು ತೊಡಗಿಕೊಂಡರು. ಶ್ರೀ ದಿನೇಶ್ ಅಮೀನ್‌ಮಟ್ಟು, ರಹಮತ್ ತರೀಕೆರೆ, ಪ್ರೊ. ವಿ ಎಸ್ ಶ್ರೀಧರ್, ಪ್ರೊ. ನಗರಗೆರೆ ರಮೇಶ್, ತೀಸ್ತಾ ಸೆತಲ್‌ವಾಡ್, ಶಿವಸುಂದರ್, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಕೆ. ನೀಲಾ ಮುಂತಾದ ಹಿರಿಯರು ತಿಂಗಳುಗಳ ಕಾಲ ಈ ಕೆಲಸದಲ್ಲಿ ತೊಡಗಿಕೊಂಡು ಅದನ್ನು ಅಂತಿಮಗೊಳಿಸಿದರು. ಟ್ರಸ್ಟ್‌ನ ಅಧ್ಯಕ್ಷರಾಗಿ ದೊರೆಸ್ವಾಮಿಯವರೂ ಈ ಬೈಲಾ ರಚನೆಯ ಸಂದರ್ಭದಲ್ಲಿ ಅನೇಕ ಸೂಚನೆಗಳನ್ನು ನೀಡಿದ್ದರು. ಕನ್ನಡದಲ್ಲಿದ್ದ ಬೈಲಾವನ್ನು ಇಂಗ್ಲಿಷಿಗೆ ಅನುವಾದಿಸಿದ ನಂತರ ಅನೇಕ ಇಂಗ್ಲಿಷ್ ಪರಿಣಿತರು ಅದನ್ನು ಪರಿಷ್ಕರಿಸಿದರು. ಯಾವುದೋ ಕಾರಣಕ್ಕೆ ಆ ಇಂಗ್ಲಿಷ್ ಅನುವಾದವನ್ನು ದೊರೆಸ್ವಾಮಿಯವರಿಗೆ ತಲುಪಿಸಲಾಗಿರಲಿಲ್ಲ.

ಟ್ರಸ್ಟ್‌ನ ನೋಂದಣಿಯ ದಿನ ಮಲ್ಲೇಶ್ವರದ ರಿಜಿಸ್ಟ್ರಾರ್ ಕಚೆರಿಗೆ ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ನನಗೆ ವಹಿಸಿದ್ದಲ್ಲದೆ, ಇಂಗ್ಲಿಷ್ ಅನುವಾದವನ್ನು ಒಮ್ಮೆ ಅವರು ನೋಡಲಿ ಎಂದು ಅಂತಿಮ ಪ್ರತಿಯನ್ನು ನನಗೆ ನೀಡಲಾಯಿತು. ಸರಿಯಾದ ವೇಳೆಗೆ ಮನೆಯಲ್ಲಿ ಸಿದ್ಧರಾಗಿ ಕೂತಿದ್ದ ದೊರೆಸ್ವಾಮಿಯವರನ್ನು ಕಾರಲ್ಲಿ ಕೂಡಿಸಿಕೊಂಡು ಹೊರಟೆ. ದಾರಿಯ ಮಧ್ಯೆ ಬೈಲಾದ ಇಂಗ್ಲಿಷ್ ಅನುವಾದವನ್ನು ಅವರಿಗೆ ಕೊಟ್ಟೆ. ಬರಿಗಣ್ಣಲ್ಲಿ ತದೇಕಚಿತ್ತದಿಂದ ಬೈಲಾ ಓದಿದರು. ನನ್ನ ಬಳಿಯಿದ್ದ ಪೆನ್ನನ್ನು ತೆಗೆದುಕೊಂಡು ಬೈಲಾದಲ್ಲಿದ್ದ ವಾಕ್ಯ ರಚನೆ, ಅಕ್ಷರ ದೋಷಗಳನ್ನೆಲ್ಲ ತಿದ್ದಲಾರಂಭಿಸಿದರು. ಯಾವ ಕಾರಣಕ್ಕೋ ಏನೋ ಕೆಲವು ತಪ್ಪುಗಳು ಬೈಲಾದಲ್ಲಿ ಉಳಿದುಬಿಟ್ಟಿದ್ದವು. ಮಲ್ಲೇಶ್ವರಮ್‌ನ ರಿಜಿಸ್ಟ್ರಾರ್ ಕಚೆರಿ ತಲುಪುವ ಮೊದಲೇ ಓಡುವ ಕಾರಲ್ಲಿ ೯೯ ಹರೆಯದ ದೊರೆಸ್ವಾಮಿಯವರು ಇಡೀ ಬೈಲಾವನ್ನು ಮತ್ತೆ ತಿದ್ದುಪಡಿ ಮಾಡಿದ್ದರು. ಎಲ್ಲ ಹಿರಿಯರು ಓದಿ ಅಂತಿಮಗೊಳಿಸಿದ್ದ ಬೈಲಾದ ತುಂಬ ಸಾಲುಸಾಲು ತಿದ್ದುಪಡಿಗಳಾಗಿದ್ದವು. ಕಾರಿಂದ ಇಳಿದವರೆ ‘ಮೊದಲು ಬೈಲಾದಲ್ಲಿರುವ ತಪ್ಪುಗಳನ್ನು ತಿದ್ದಿ ಅಂತಿಮಗೊಳಿಸಿ’ ಎಂದು ಶಾಲಾ ಹೆಡ್‌ಮಾಸ್ಟರ್ ತರಹ ಎಲ್ಲರನ್ನೂ ಚಿಕ್ಕದಾಗಿ ಗದರಿದರು. ಇನ್ನೇನು ಅರ್ಧ ಗಂಟೆಯಲ್ಲಿ ನೋಂದಣಿ ಕೆಲಸ ಮುಗಿದುಹೋಗುತ್ತದೆ ಎಂದುಕೊಂಡಿದ್ದ ನಾವು ಅವರು ಮಾಡಿದ್ದ ತಿದ್ದುಪಡಿಗಳನ್ನು ಕ್ಯಾರಿ ಮಾಡುವಷ್ಟರಲ್ಲಿ ಮಧ್ಯಾಹ್ನವಾಗಿತ್ತು.

ಆದರೆ ಅಂದೇ ನೋಂದಣಿ ಕೆಲಸ ಮುಗಿಯಿತು. ದೊರೆಸ್ವಾಮಿಯವರ ಸೂಕ್ಷ್ಮಮತಿಗೆ ಇದೊಂದು ಉದಾಹರಣೆಯಷ್ಟೆ. ಇಂತಹ ಅನೇಕ ಪ್ರಸಂಗಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಅನೇಕ ಬಾರಿ ಕಂಡಿದ್ದೇನೆ.
ದೊರೆಸ್ವಾಮಿಯವರನ್ನು ಎಲ್ಲರೂ ವಾಡಿಕೆಯಂತೆ ಗಾಂಧೀವಾದಿಗಳು ಎಂದೇ ಕರೆಯುತ್ತಾರೆ. ಗಾಂಧಿ ಯುಗದ ನಂತರ ಬದುಕಿರುವ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನೆಲ್ಲ ಹೀಗೆ ಗಾಂಧೀವಾದಿಗಳು ಎಂದು ಕರೆದುಬಿಡುವುದು ಕೆಲವೊಮ್ಮೆ ಅಸಹಜವಾಗಿಯೂ ಕಾಣುತ್ತದೆ. ಸ್ವಾತಂತ್ರ್ಯಾನಂತರ ದೇಶದ ವಿಮೋಚನೆಗೆ ಹೋರಾಡಿದ ಅನೇಕರು ಬೇರೆಬೇರೆ ಸೈದ್ಧಾಂತಿಕ ನೆಲೆಗಳಿಂದಲೂ ಬಂದವರಾಗಿದ್ದರು. ಮತ್ತು ಗಾಂಧೀವಾದಿಗಳಾಗಿದ್ದವರೂ ಸಹ, ಆ ಯುಗಾಂತ್ಯದ ನಂತರ ಚಾರಿತ್ರಿಕವಾಗಿ ಅನೇಕ ರಾಜಕೀಯ ಬಿಕ್ಕಟ್ಟುಗಳಲ್ಲಿ ಹಾದುಬಂದು, ಹಲವು ವೈಚಾರಿಕ ಧಾರೆಗಳನ್ನು ಅಂತರ್ಗತವಾಗಿಸಿಕೊಂಡಿದ್ದವರೂ ಇದ್ದರು. ಗಾಂಧೀವಾದಿಗಳಾಗಿದ್ದೂ ಹೀಗೆ ತಮ್ಮನ್ನು ವರ್ತಮಾನಕ್ಕೆ ತೆರೆದುಕೊಂಡ ಹಲವರು ತಾವು ನಂಬಿದ್ದ ಗಾಂಧೀವಾದವನ್ನು ಸೃಜನಶೀಲವಾಗಿ ವಿಸ್ತರಿಸಿದರು. ಕೆಲ ಗಾಂಧೀವಾದಿಗಳು ಸ್ವಾತಂತ್ರ್ಯಾನಂತರ ವಿಶ್ರಮಿಸಿದರು.

ಇನ್ನು ಕೆಲವರು ಪರಂಪರೆಯ ಹಳಹಳಿಕೆಯಲ್ಲಿ ಕೊರಗಿ ಸಿನಿಕರಾಗಿ ವರ್ತಮಾನದಲ್ಲಿ ಗೈರುಹಾಜರಾದರು. ಮತ್ತೆ ಕೆಲವೇ ಕೆಲವರು ನಿತ್ಯದ ಬದುಕಿನ ಜೊತೆ ಸಾವಯವ ಸಂಬಂಧಗಳನ್ನು ಇಟ್ಟುಕೊಂಡರು. ಹೀಗೆ ಲೌಕಿಕದ ಜೊತೆ ಅನುಸಂಧಾನ ಮಾಡಿದ ಗಾಂಧೀವಾದಿಗಳು ತಾವು ನಂಬಿದ್ದ ಗಾಂಧೀವಾದವನ್ನು ಬದುಕಿನ ಬೇರೆಬೇರೆ ಆಯಾಮಗಳಲ್ಲಿಟ್ಟು ಪರೀಕ್ಷಿಸಿದರು. ಅಂತಹ ಕೆಲವೇ ಕೆಲವು ಗಾಂಧೀವಾದಿಗಳಲ್ಲಿ ದೊರೆಸ್ವಾಮಿಯವರೂ ಒಬ್ಬರು. ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹಲವರು ದೊರೆಸ್ವಾಮಿಯವರಂತೆ ವರ್ತಮಾನದ ಬದುಕಿನಲ್ಲಿ ಗಾಂಧೀಜಿಯ ಹಲವು ಚಿಂತನೆಗಳನ್ನು ಅನ್ವಯ ಮಾಡಲೆತ್ನಿಸಿದ್ದಾರೆ. ಇಂತಹ ಕೆಲವೇ ಕೆಲವರಲ್ಲಿ ನನಗೆ ತಕ್ಷಣಕ್ಕೆ ನೆನಪಿಗೆ ಬರುವ ಎರಡು ಹೆಸರುಗಳೆಂದರೆ, ಒಬ್ಬರು ಜಯಪ್ರಕಾಶ್ ನಾರಾಯಣ್ ಮತ್ತು ಇನ್ನೊಬ್ಬರು ಅರ್ಥಶಾಸ್ತ್ರಜ್ಞ ಜೆ. ಸಿ. ಕುಮಾರಪ್ಪನವರು. ಗಾಂಧೀಜಿಯ ಅತ್ಯಾದರ್ಶದ ಸರ್ವೋದಯವನ್ನು ಜಾರಿಗೊಳಿಸಲು ಜಯಪ್ರಕಾಶ್ ನಾರಾಯಣ್ ಅವರು ಹಲವು ಪ್ರಯೋಗಗಳನ್ನೇ ಮಾಡಿದರು. ಜೆ. ಸಿ. ಕುಮಾರಪ್ಪನವರು ಗಾಂಧೀಜಿಯ ಗ್ರಾಮ ಸ್ವರಾಜ್ಯಕ್ಕೆ ಆರ್ಥಿಕ ತಳಹದಿಯನ್ನು ಹಾಕಿಕೊಟ್ಟರು. ದೊರೆಸ್ವಾಮಿಯವರು, ಗಾಂಧೀಜಿಯ ಹರಿಜನೋದ್ಧಾರ, ಕೋಮುಸಾಮರಸ್ಯ, ವೈಯಕ್ತಿಕ ನೈತಿಕತೆ ಮತ್ತು ಸತ್ಯಾಗ್ರಹದ ಪರಿಕಲ್ಪನೆಗಳನ್ನು ದೈನಂದಿನ ಬದುಕಲ್ಲಿ ಅನೇಕ ಪ್ರಯೋಗಗಳಿಗೆ ಒಳಪಡಿಸಿದರು. ಒಂದು ಅರ್ಥದಲ್ಲಿ ಗಾಂಧೀವಾದದ ತತ್ವವನ್ನು ಹೀರಿ ಅದನ್ನು ವರ್ತಮಾನಕ್ಕೆ ಪ್ರಸ್ತುತಗೊಳಿಸುವ ಮಾದರಿ ಇದು.

ಈ ಕಾರಣಕ್ಕಾಗಿಯೇ ಗಾಂಧೀಜಿಯ ನಂತರ ಅವರ ವೈಚಾರಿಕ ಧಾರೆಯು ಬೇರೆಯದೇ ಆದ ಹೊಸ ಹುಟ್ಟು ಪಡೆಯುತ್ತಾ ಹೋಯಿತು. ದೊರೆಸ್ವಾಮಿಯವರು ಗಾಂಧೀಜಿಯ ಲೆಗಸಿಯಲ್ಲಿ ಕಳೆದುಹೋಗಲಿಲ್ಲ. ಅವರ ಅನೇಕ ಚಿಂತನೆಗಳನ್ನು ಅನ್ವಯಿಸುವ ನಿಟ್ಟಿನಲ್ಲಿ ಹತ್ತು ಹಲವು ಸಂಘಟನೆಗಳ ವೈಚಾರಿಕ ವಲಯಗಳನ್ನು ದೊರೆಸ್ವಾಮಿಯವರು ಹಾದು ಬಂದರು. ವರ್ತಮಾನದಲ್ಲಿ ಸಾಮಾಜಿಕರು ಎದುರಿಸಿದ ಹಲವು ದುಗುಡಗಳಲ್ಲಿ ಪಾಲ್ಗೊಂಡರು. ಗಾಂಧೀವಾದದ ಪ್ರಮುಖ ಆದರ್ಶಗಳಾದ ಸ್ವಯಂ ನಿಯಂತ್ರಣ ಮತ್ತು ಸತ್ಯಾಗ್ರಹಗಳನ್ನು ತಮ್ಮ ಹೋರಾಟಗಳ ಮೂಲ ಮಾದರಿಗಳನ್ನಾಗಿಟ್ಟುಕೊಂಡೇ ಬದುಕಿದರು. ಈ ಕಾರಣಕ್ಕಾಗಿಯೇ ಗಾಂಧೀಜಿಯನ್ನು ಕೊಂದ ಫ್ಯಾಸಿಸ್ಟ್ ರಾಜಕಾರಣವನ್ನು ಧಿಕ್ಕರಿಸಿದರು. ಗೋಡ್ಸೆಗಿದ್ದ ಆರ್‌ಎಸ್‌ಎಸ್ ನಂಟನ್ನು ಸಾಕ್ಷಿಸಮೇತ ನಿರೂಪಿಸಲು ಮುಂದಾದರು. ತುರ್ತುಪರಿಸ್ಥಿತಿಯನ್ನು ಹೇರಿದ ಕಾಂಗ್ರೆಸ್ ಪಕ್ಷಕ್ಕೆ ಆಗಲೇ ರಾಜೀನಾಮೆ ಸಲ್ಲಿಸಿದರು. ಧಾರ್ಮಿಕ ಮೂಲಭೂತವಾದ ಮತ್ತು ಊಳಿಗಮಾನ್ಯ ರಾಜಕಾರಣಗಳು ಭಾರತದ ಬಹುಸಂಖ್ಯಾತ ದುಡಿವ ಸಮುದಾಯಗಳ ವಿಮೋಚನೆಗೆ ಅನುವು ಮಾಡಿಕೊಡುವುದಿಲ್ಲ ಎಂಬುದನ್ನು ಎಂಬತ್ತರ ದಶಕದಲ್ಲಿಯೇ ಅವರು ಕಂಡುಕೊಂಡರು.

ಈ ಕಾರಣಕ್ಕಾಗಿಯೇ ಅವರು ಜೆಪಿ ಪ್ರಣೀತ ಸರ್ವೋದಯ ಮತ್ತು ವಿನೋಬಾರ ಭೂದಾನ ಚಳುವಳಿಯಲ್ಲಿ ದುಡಿವ ಸಮುದಾಯಗಳ ವಿಮೋಚನೆಯ ದಾರಿಗಳಿವೆ ಎಂದೇ ನಂಬಿದ್ದರು. ಸರ್ವೋದಯ ಮತ್ತು ಭೂದಾನ ಚಳುವಳಿಗಳು ಚಾರಿತ್ರಿಕವಾಗಿ ಪರಿಣಾಮದಲ್ಲಿ ಏನಾದವು ಎಂಬ ಪ್ರಶ್ನೆಗಳು ಇದ್ದೇ ಇವೆ. ಆದರೆ ಹಲವರು ಈ ಎರಡೂ ಸುಧಾರಣಾವಾದಿ ಚಳುವಳಿಗಳನ್ನು ದುಡಿವ ಜನರ ಬದುಕನ್ನು ಬದಲಾಯಿಸಲು ಪರಿಣಾಮಕಾರಿಯಾಗಿ ಬಳಸಿದರು. ಜೊತೆಗೆ ಈ ಸುಧಾರಣಾ ಚಳವಳಿಗಳ ಮಿತಿಗಳನ್ನು ಅರಿತು ಹೊಸ ಚಳವಳಿಗಳನ್ನು ಕಟ್ಟಿದರು. ದೊರೆಸ್ವಾಮಿಯವರು ಇತ್ತೀಚೆಗೆ ಭೂಮಿ ಮತ್ತು ವಸತಿ ವಂಚಿತ ಹತಭಾಗ್ಯ ಸಮುದಾಯಗಳನ್ನೇ ಮುಖ್ಯವಾಗಿಟ್ಟುಕೊಂಡು ರೂಪಿಸಿದ ಹೋರಾಟವು ಅತ್ಯಂತ ಮಹತ್ವದ್ದು. ಹಗಲೂರಾತ್ರಿ ಆ ಇಳಿವಯಸ್ಸಿನಲ್ಲೂ ದೊರೆಸ್ವಾಮಿಯವರು ಹೋರಾಟಗಾರರ ಜೊತೆಗಿದ್ದು ಅವರಿಗೆ ಕಸುವು ತುಂಬುತ್ತಿದ್ದರು. ನೈಸ್ ಭೂಕಬಳಿಕೆ, ಕೈಗಾ ಅಣುಸ್ಥಾವರ ವಿರುದ್ಧದ ಚಳವಳಿ, ಬೆಂಗಳೂರು ಸುತ್ತಲ ನಡೆದಿರುವ ಭೂಕಬಳಿಕೆಯ ವಿರುದ್ಧದ ಹೋರಾಟಗಳು ಸುಧಾರಣಾವಾದಿ ಮಾದರಿಯ ಹೋರಾಟಗಳಲ್ಲ.

ಇದೇ ಸಂದರ್ಭದಲ್ಲಿ ವ್ಯಕ್ತಿಗತ ನೈತಿಕತೆ ಮತ್ತು ಸಾರ್ವಜನಿಕ ನಿಷ್ಠೂರತೆಯನ್ನು ಅವರು ಸದಾ ರಕ್ಷಿಸಿಕೊಂಡು ಬಂದರು. ಸ್ವತಃ ತನ್ನ ಅಣ್ಣ ಬೆಂಗಳೂರಿನ ಮೇಯರ್ ಆಗಿದ್ದ ಸಂದರ್ಭದಲ್ಲೂ ಅವರು ತಾವು ಇರಲಿಕ್ಕಾಗಿ ಒಂದು ಜಾಗ ಮಾಡಿಕೊಳ್ಳಲು ಮುಂದಾಗಲಿಲ್ಲ. ತಾವೇ ಇಷ್ಟಪಟ್ಟು ಬಡತನದ ಬದುಕನ್ನು ಆಯ್ಕೆ ಮಾಡಿಕೊಂಡರು. ಸಿದ್ದರಾಮಯ್ಯನವರು ಅವರಿಗೆ ಸರಕಾರದಿಂದ ಮನೆ ಮಂಜೂರು ಮಾಡಲು ಹೊರಟಾಗ ಅದನ್ನು ತಿರಸ್ಕರಿಸಿದರು. ಬರುವ ಪಿಂಚಣಿಯಲ್ಲಿಯೇ ಬದುಕಿದರು. ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಅವರು ಅನಾರೋಗ್ಯ ಮತ್ತು ವಯೋಸಹಜ ದೈಹಿಕ ಸಮಸ್ಯೆಗಳಿಂದ ಹಲವು ಆಸ್ಪತ್ರೆಗಳಿಗೆ ದಾಖಲಾದರು. ಇನ್ನೇನು ದೊರೆಸ್ವಾಮಿಯವರು ಎದ್ದೇಳಲಾರರು ಎಂದುಕೊಂಡ ಸಂದರ್ಭದಲ್ಲಿ ಹೊಸ ಹೋರಾಟಗಳನ್ನು ಕಟ್ಟಲು ಮುಂದಾಗುತ್ತಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಲೆಂದು ತಮ್ಮ ಮನೆಯಲ್ಲಿ ಸಭೆ ಕರೆದು ಚಳುವಳಿ ರೂಪಿಸಲು ಹೊಸ ದಾರಿಗಳನ್ನು ಹುಡುಕುತ್ತಿದ್ದರು.

ಫ್ಯಾಸಿಸಮ್‌ನಿಂದ ದೇಶದ ಜನತಂತ್ರ ಅಪಾಯದಲ್ಲಿದೆ ಎಂದು ತಳಮಳಗೊಳ್ಳುತ್ತಿದ್ದರು. ಒಬ್ಬ ಗಾಂಧಿವಾದಿಯಾಗಿ ಅಂಬೇಡ್ಕರ್ ಕನಸಿದ್ದ ದಲಿತರ ಹಿಂದುಳಿದವರ ವಿಮೋಚನೆ ಶೈಕ್ಷಣಿಕ ಮತ್ತು ಆರ್ಥಿಕ ಭದ್ರತೆಯಿಂದ ಸಾಧ್ಯ ಎಂಬುದನ್ನು ದೊರೆಸ್ವಾಮಿಯವರು ಅರಿತಿದ್ದರು. ಪ್ರಭುತ್ವದ ನಡೆಗಳನ್ನು ಒಬ್ಬ ಸಂದೇಹವಾದಿಯಾಗಿದ್ದುಕೊಂಡೇ ಅರ್ಥೈಸುತ್ತಿದ್ದರು. ಅವು ಜೀವವಿರೋಧಿಯಾಗಿದ್ದಲ್ಲಿ ಸತ್ಯಾಗ್ರಹಗಳ ಮೂಲಕ ಪ್ರತಿರಾಜಕಾರಣವನ್ನು ಕಟ್ಟಲು ಮುಂದಾಗುತ್ತಿದ್ದರು. ಹೀಗೆ ಸದಾ ಜಾಗೃತಿರಾಗಿರುತ್ತದ್ದ ದೊರೆಸ್ವಾಮಿಯವರು ನಮ್ಮಲ್ಲಿ ಎಚ್ಚರದ ಬೀಜಗಳನ್ನು ಬಿತ್ತಿದ್ದಾರೆ. ಭೌತಿಕವಾಗಿ ಅವರೀಗ ನಮ್ಮ ಜೊತೆಯಲ್ಲಿಲ್ಲ. ಆದರೆ ಅವರು ಕನಸಿದ ಜಾತ್ಯತೀತ, ಸಮಾಜವಾದಿ ಭಾರತವನ್ನು ಕಟ್ಟುವ ನಮ್ಮೆಲ್ಲರ ಪ್ರಯತ್ನಗಳಲ್ಲಿ ಅವರು ಸದಾ ನಮ್ಮ ಜೊತೆಗಿರುತ್ತಾರೆ.

ಡಾ. ಎ ಎಸ್ ಪ್ರಭಾಕರ
ಹಂಪಿ ವಿವಿಯ ಬುಡಕಟ್ಟು ವಿಭಾಗದ ಅಧ್ಯಾಪಕರಾದ ಡಾ.ಎ.ಎಸ್.ಪ್ರಭಾಕರ, ಮೂಲತಃ ಹರಪನಹಳ್ಳಿಯವರು. ಕರ್ನಾಟಕದ ಜನಪರ ಚಳವಳಿಗಳ ಸಂಗಾತಿಯೂ ಆಗಿರುವ ಅವರ ಹೊಸ ಪುಸ್ತಕ ‘ಚಹರೆಗಳೆಂದರೆ ಗಾಯಗಳೂ ಹೌದು’ ಸದ್ಯದಲ್ಲೇ ಬಿಡುಗಡೆಯಾಗಲಿದೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಡಾ. ಎ ಎಸ್ ಪ್ರಭಾಕರ
+ posts

LEAVE A REPLY

Please enter your comment!
Please enter your name here