ಕರೀನಾ ಕಪೂರ್ ಸೀತೆಯ ಪಾತ್ರ ಮಾಡಬಾರದು ಎಂದು ಭಾನುವಾರ ಒಂದು ಟ್ವಿಟರ್ ಅಭಿಯಾನ ನಡೆಯಿತು. ಕರೀನಾ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪತ್ನಿ ಎಂಬುದೇ ಇವರರೆಲ್ಲರ ಆಕ್ಷೇಪ! ಇದರ ಹಿಂದೆ ತೀವ್ರವಾದಿ ರಾಷ್ಟ್ರೀಯತೆ ಬೆಂಬಲಿಸುವ ಗುಂಪಿದೆ.
ಲಕ್ಷದ್ವೀಪದ ಹೊಸ ಲೆಫ್ಟಿನೆಂಟ್ ಗವರ್ನರ್ ತನ್ನ ನೆಲದ ಅಸ್ಮಿತೆಯನ್ನೇ ನಾಶ ಮಾಡುತ್ತಿದ್ದಾರೆ ಎಂದು ಅಲ್ಲಿನ ಜನತೆ ಆರೋಪಿಸಿದ್ದಾರೆ. ಆತನನ್ನು ‘ಬಯೋಲಾಜಿಕಲ್ ವೆಪನ್’ ಎಂದು ಕರೆದ ಯುವ ಪ್ರತಿಭಾನ್ವಿತ ನಿರ್ಮಾಪಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಆಯಿಷಾ ಸುಲ್ತಾನ ವಿರುದ್ಧ ದೇಶದ್ರೋಹದ ಕೇಸನ್ನು ದಾಖಲಿಸಲಾಗಿದೆ. ಮತ್ತೆ ಇದರ ಹಿಂದೆ ತೀವ್ರವಾದಿ ರಾಷ್ಟ್ರೀಯತೆ ಬೆಂಬಲಿಸುವ ಗುಂಪಿದೆ.
ಟಿವಿ ಚರ್ಚೆಯಲ್ಲಿ ಬಿಜೆಪಿಯನ್ನು ವಸ್ತುನಿಷ್ಠವಾಗಿ ಟೀಕಿಸಿದ ಕರ್ನಾಟಕ ಕಾಂಗ್ರೆಸ್‍ನ ಯುವ ವಕ್ತಾರೆ ಭವ್ಯ ನರಸಿಂಹಮೂರ್ತಿ ಅವರಿಗೆ ಅವಾಚ್ಯ ಕರೆಗಳನ್ನು ಮತ್ತು ಜಾಲತಾಣಗಳಲ್ಲಿ ಅವಾಚ್ಯ ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ. ಮತ್ತೆ ಇದರ ಹಿಂದೆ ತೀವ್ರವಾದಿ ರಾಷ್ಟ್ರೀಯತೆ ಬೆಂಬಲಿಸುವ ಗುಂಪಿದೆ.
ಕರೀನಾ, ಆಯಿಷಾ ಮತ್ತು ಭವ್ಯ ಈ ಮೂವರು ಸೀತೆಯರು ಈಗ ಅಗ್ನಿಪರೀಕ್ಷೆ ಎದುರಿಸುವ ಕಾಲ ಬಂದಿದೆ. 14 ವರ್ಷಗಳ ವನವಾಸದಿಂದ ಆ ಸೀತೆ ಇನ್ನೂ ಹೊರಕ್ಕೆ ಬರಲು ಈ ಸಮಾಜ ಬಿಡಲೇ ಇಲ್ಲ ಎಂಬುದಕ್ಕೆ ಇವು ಸಾಂಕೇತಿಕ ಪ್ರಸಂಗಗಳಷ್ಟೇ..

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಎರಡನೇ ಬಾರಿಗೆ ತಾಯಿಯಾದ ನಂತರ ಮತ್ತೊಮ್ಮೆ ಸಿನಿಮಾದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಹಿಂದೂ ಮಹಾಕಾವ್ಯವಾದ ರಾಮಾಯಣದ ರೂಪಾಂತರದಲ್ಲಿ ಸೀತಾ ಎಂಬ ಪೌರಾಣಿಕ ಪಾತ್ರವನ್ನು ನಿರ್ವಹಿಸಲು ಆಕೆಗೆ ಆಫರ್ ನೀಡಲಾಗಿದೆ. ಚಿತ್ರದ ನಿರ್ಮಾಪಕರಿಂದ 12 ಕೋಟಿ ರೂ.ಗಳ ಸಂಭಾವನೆಯನ್ನು ಕೋರಿದ್ದಾರೆ ಎಂಬ ವರದಿಗಳಿವೆ. ಸಾಮಾನ್ಯವಾಗಿ ಒಂದು ಚಿತ್ರಕ್ಕಾಗಿ 6ಕೋಟಿಯಿಂದ 8 ಕೋಟಿ ರೂ. ಪಡೆಯುತ್ತಿದ್ದ ಕರೀನಾ 12 ಕೋಟಿ ಕೇಳಿದ್ದಕ್ಕೆ ತೀವ್ರವಾದಿ ರಾಷ್ಟ್ರೀಯತೆ ಬೆಂಬಲಿಸುವ ಗುಂಪಿಗೆ ವಿಪರೀತ ಸಿಟ್ಟು ಬಂದಿದೆ. ಕೊನೆಗೆ ಅದು ಕರೀನಾ ‘ಖಾನ್’ಗೆ ಆ ಪಾತ್ರ ಮಾಡುವ ಯೋಗ್ಯತೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದೆ.
“ಸಿನಿಮಾ ಎಂಬ ಸೃಜನಶೀಲ ಮಾದ್ಯಮದಲ್ಲಿ ನಿರ್ದೇಶಕನ ಪಾತ್ರ ಆಯ್ಕೆಯೇ ಅಂತಿಮ. ನಿರ್ದೇಶಕನಿಗೆ ಸೀತೆ ಪಾತ್ರಕ್ಕೆ ಕರೀನಾ ಸರಿ ಅನಿಸಿದ್ದರೆ ಆತ ಯಾವ ಕಾರಣಕ್ಕೂ ಹಿಂದಕ್ಕೆ ಸರಿಯಬಾರದು. ಅದ್ಯಾರೋ ‘2 ರೂಪೀಸ್ ಪರ್ ಮೆಸೆಜ್ ಗ್ಯಾಂಗ್’ ಬಾಯಿ ಬಡಿಕೊಂಡರೆ ಅದನ್ನು ನೆಗ್ಲೆಕ್ಟ್ ಮಾಡಿ ಮುಂದುವರಿಯಬೇಕು ಅಷ್ಟೇ” ಎಂದು ನಿರ್ದೇಶಕ, ಬರಹಗಾರ ಎನ್.ಎಸ್ ಶಂಕರ್ ಹೇಳುತ್ತಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಹೈಕೋರ್ಟ್ ವಕೀಲೆ ರಾಜಲಕ್ಷ್ಮಿ ಅಂಕಲಗಿ, ‘ದೇಶ ಅಂದರೆ ಬಿಜೆಪಿ, ಬಿಜೆಪಿ ಅಂದರೆ ದೇಶ ಎಂದು ಭ್ರಮಿಸಿರುವ, ಸ್ವಂತ ವ್ಯಕ್ತಿತ್ವ, ಆತ್ಮಸಾಕ್ಷಿಯನ್ನು ಮಾರಾಟ ಮಾಡಿಕೊಂಡಿರುವವರು ಈ ತರಹದ ಹುಚ್ಚಾಟ ಮಾಡುತ್ತಿದ್ದಾರೆ. ಸೈಫ್ ಅಲಿಖಾನ್ ತಾಯಿ ಶರ್ಮಿಳಾ ಟ್ಯಾಗೋರ್ ಬಗ್ಗೆ ಎಂದೂ ಆಕ್ಷೇಪ ಎತ್ತದವರು ಈಗ ಅವರ ಸೊಸೆ ಕರೀನಾ ಬಗ್ಗೆ ಕಿಡಿ ಕಾರುತ್ತಿದ್ದಾರೆ ಎಂದರೆ ಈ ಏಳು ವರ್ಷಗಳಲ್ಲಿ ಆದ ವಿಕ್ಷಿಪ್ತ ಬದಲಾವಣೆ ಇದಕ್ಕೆ ಕಾರಣ. ಬಾಲಿವುಡ್‍ನಲ್ಲಿ ಎಷ್ಟೊಂದು ಖಾನ್‍ಗಳು ಹಿಂದೂ ಪೌರಾಣಿಕ ಪಾತ್ರಗಳನ್ನು ಮಾಡಿದ್ದಾರೆ. ಆಗ ಇಲ್ಲದ ಆಕ್ಷೇಪ ಈಗೇಕೆ?’ ಎಂದು ಪ್ರಶ್ನೆ ಎತ್ತಿದರು.
‘ಆಯಿಶಾ ಕುರಿತು ನೋಡುವುದಾದರೆ, ಅಲ್ಲಿಗೆ ಆಡಳಿತಾಧಿಕಾರಿಯಾಗಿ ಬಂದ ಬಿಜೆಪಿ ಮನುಷ್ಯ ಅಲ್ಲಿದ್ದ ಲಾಕ್‍ಡೌನ್ ತೆಗೆದು ಪ್ರವಾಸಿಗರ ಸಂಖ್ಯೆ ಹೆಚ್ಚಿಸುತ್ತಾನೆ. ಝೀರೋ ದೈನಂದಿನ ಕೇಸುಗಳು ಈಗ 100ಕ್ಕೆ ತಲುಪಿವೆ. ಜೊತೆಗೆ ಲಕ್ಷದ್ವೀಪದ ಸಾಂಸ್ಕೃತಿಕ, ಸಾಮಾಜಿಕ ಅಸ್ಮಿತೆಯನ್ನೇ ಈ ಮನುಷ್ಯ ಬರ್ಬಾದ್ ಮಾಡಲು ಹೊರಟಿದ್ದಾನೆ. ಆತನನ್ನು ‘ಬಯೋ ವೆಪನ್’ ಎಂದು ಕರೆದರೆ ಅದು ದೇಶದ್ರೋಹ ಹೇಗೆ ಆಗುತ್ತದೆ? ಆ ಮನುಷ್ಯ ದೇಶವನ್ನು ಪ್ರತಿನಿಧಿಸುವುದಿಲ್ಲ. ವ್ಯಕ್ತಿಯೋರ್ವನ ಕುರಿತಾದ ಈ ಟೀಕೆ ದೇಶದ್ರೋಹದ ವ್ಯಾಪ್ತಿಗೆ ಬರುವುದೇ ಇಲ್ಲ…. ಮೂರನೆ ವಿಷಯ ಭವ್ಯಾ ಕುರಿತಾಗಿ. ಇದನ್ನು ಈ ಹಿಂದೆಯೂ ಅನೇಕ ಮಹಿಳೆಯರು ಅನುಭವಿಸಿದ್ದಾರೆ. ಕಾಂಗ್ರೆಸ್‍ನ ಪುರುಷ ವಕ್ತಾರನ ಟೀಕೆಗಳನ್ನು ಸಹಿಸಿಕೊಳ್ಳಬಲ್ಲ ಬಿಜೆಪಿ, ಅದೇ ಮಹಿಳೆ ಧ್ವನಿ ಎತ್ತಿದ ಕೂಡಲೇ ಅವಾಚ್ಯ ಕ್ರಮಗಳಿಗೆ ಮುಂದಾಗುತ್ತದೆ. ಈ ಏಳು ವರ್ಷಗಳಲ್ಲಿ ಇದು ತುಂಬಾ ಓವರ್ ಆಗಿದೆ. ಮನುವಾದ ಹೇರುವ ಸಂಘದ ಸಿದ್ದಾಂತಕ್ಕೆ ತಕ್ಕಂತೆ ಇದು ನಡೆಯುತ್ತಿದೆ. ಆ ಸೀತೆಗೂ ಇನ್ನು ಮುಕ್ತಿ ಸಿಕ್ಕಿಲ್ಲ. ಇಲ್ಲಿ ಶ್ರೀರಾಮನ ಹೆಸರಲ್ಲಿ ಅಂಧಾದುಂಧಿ ಮಾಡಲಾಗುತ್ತಿದೆ’ ಎಂದು ರಾಜಲಕ್ಷ್ಮಿ ವಿವರಿಸುತ್ತಾರೆ.
‘ಅಲ್ರಿ ಒಂದ್ ಆರ್‌ಎಸ್‍ಎಸ್ ವೈರಸ್ ತಗೊಂಡು ಹೋಗಿ ಲಕ್ಷದ್ವೀಪದ ಮ್ಯಾಲ ಹಾಕ್ಯಾರ. ಅಲ್ಲಿ ಈ ವೈರಸ್ ಆ ಪ್ರದೇಶದ ಶಾಂತಿನೇ ಹಾಳ್ ಮಾಡಾಕ್ ಹತ್ಯೈತಿ. ಆ ಪ್ರದೇಶದ ಒಂದು ಹುಡ್ಗಿ ಅದನ್ನ ಬಯೋ ವೆಪನ್ ಅನ್ನೋದು ಸಹಜ ಐತಿ. ಆನಂದ ತೇಲ್ದುಂಬೆ, ವರವರರಾವ್, ಫಾದರ್ ಸ್ಟಾನ್ ಸ್ವಾಮಿ ಮ್ಯಾಲೆಯೇ ಸುಮ್ಮಸುಮ್ಮನೆ ದೇಶದ್ರೋಹದ ಕೇಸು ಹಾಕೋರು ಈ ಹುಡುಗಿಯನ್ನ ಬಿಡ್ತಾರಾ? ಸರ್ವಾಧಿಕಾರಿ ಆಡಳಿತ ಇದು. ಮೊದಲು ಈ ಸರ್ಕಾರವನ್ನು ಚುನಾವಣೆ ಮೂಲಕವೇ ಕಿತ್ ಹಾಕಬೇಕು…’ ಎಂದು ಹೋರಾಟಗಾರ್ತಿ ಕಲಬುರ್ಗಿಯ ಮೀನಾಕ್ಷಿ ಬಾಳಿ ಆಕ್ರೋಶ ವ್ಯಕ್ತಪಡಿಸಿದರು.

‘ಸುರಯ್ಯ, ಮೀನಾಕುಮಾರಿ, ದಿಲೀಪ್‍ಕುಮಾರ್ ಇವರೆಲ್ಲ ಹಿಂದೂ ಪೌರಾಣಿಕ ಪಾತ್ರಗಳನ್ನು ಮಾಡಿದ್ದಾರೆ. ಈಗ ಕರೀನಾ ಕಪೂರ್ ಮಾಡುವುದಕ್ಕೆ ವಿರೋಧ ಎಂದರೆ, ರಾಮನ ಹೆಸರಲ್ಲಿ ದಂಧೆ ಮಾಡೋರು, ಚುನಾವಣೆ ಮಾಡೋರು ಇದರ ಹಿಂದೆ ನಿಂತಾರ ಅಂಥಾನೇ ಅಲ್ವೆ?’ ಎಂದು ಬಾಳಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಹಿಂದುತ್ವ ಅಜೆಂಡಾದ ಪ್ರಯೋಗಕ್ಕೆ ಈಗ ನೂತನ ಬಲಿ ಲಕ್ಷದ್ವೀಪ
‘ಮೊನ್ನೆ ಮೊನ್ನೆ ‘ರಾಣೆಬೆನ್ನೂರಿನ ವಕೀಲೆಯೊಬ್ಬರು ಪ್ರಸಾರ ಮಾಡಿದ ವಿಡಿಯೋದಲ್ಲಿ ಈ ಗ್ಯಾಂಗ್ ವಿರುದ್ಧ ವಿಪರೀತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರೀನಾ, ಆಯಿಷಾ, ಭವ್ಯ ಇವರೆಲ್ಲರ ವಿರುದ್ಧ ನಿಂತವರು ಈ ಮನೋಭಾವದ ಮನುವಾದಿಗಳು. ಇವರೆಲ್ಲ ಇರುವುದು ಬಿಜೆಪಿ ಅಥವಾ ಸಂಘದ ಅಂಗಳದಲ್ಲಿ. ಕಲಾವಿದರಿಗೆ ಜಾತಿ, ಭಾಷೆ, ಧರ್ಮ ಇಲ್ಲ. ಪ್ರತಿಭೆಯ ಆಧಾರದಲ್ಲಿ ಆ ನಿರ್ಮಾಪಕ-ನಿರ್ದೇಶಕ ಕರೀನಾ ಕಪೂರ್ ಆಯ್ಕೆ ಮಾಡಿಕೊಂಡಿದ್ದಾರೆ. ಸೈಫ್ ಪತ್ನಿ ಎಂಬ ಕಾರಣಕ್ಕೆ ಆಕೆ ಆ ಪಾತ್ರ ಮಾಡಕೂಡದು ಎಂದು ಹೇಳಲು ಇವರ್ಯಾವ ದೊಣ್ಣೆನಾಯಕರು?’ ಎಂದು ಮಹಿಳಾ ಆಯೋಗದ ಮಾಜಿ ಸದಸ್ಯೆ ಹೊಸಪೇಟೆಯ ಅಂಬಿಕಾ ಜಲಗಾರ್ ಪ್ರಶ್ನೆ ಎತ್ತುತ್ತಾರೆ. ಈ ಬಗ್ಗೆ ಶೋಭಾ ಕರಂದ್ಲಾಜೆ ಮಾತಾಡೋದೇ ಇಲ್ಲ. ಕರೀನಾ, ಆಯಿಷಾ, ಭವ್ಯಾ ಈ ಎಲ್ಲ ಸೀತೆಯರ ಬಗ್ಗೆ ಈ ಶೋಭಾ ತರಹದವರು ಮಾತನಾಡುವುದಿಲ್ಲ ಏಕೆ ಎಂದು ಅಂಬಿಕಾ ಕೇಳುತ್ತಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಕವಿಯಿತ್ರಿ ವಿನಯಾ ವಕ್ಕುಂದ, ‘ಮಂಗ್ಯಾಗಳು ಅದೇನೋ ಟ್ರೆಂಡ್ ಮಾಡ್ತಾವು ಅಂತ ಸುಮ್ಮನೆ ಕೂಡೋ ಕಾಲ ಇದಲ್ಲ. ಈ ಮಂಗ್ಯಾಗಳ ಹಿಂದ ಒಂದ್ ದೊಡ್ಡ ಜಾಲ ಐತಿ. ಈ ಜಾಲದೊಳಗ ಬಂಡವಾಳಶಾಹಿನೂ ಐತಿ. ಕರೀನಾ, ಆಯಿಷಾ, ಭವ್ಯಾ ಇದಕ್ಕೆಲ್ಲ ಬಲಿಪಶುಗಳು. ಸೀತೆಯನ್ನು ವನವಾಸದಲ್ಲೇ ಇಟ್ಟಾರ. ಆಕಿ ಬಂದು ಸತ್ಯ ಹೇಳಿದ ಕೂಡ್ಲೇ ಇವರು ಉರುಕೊಂಡು ಸಾಯ್ತಾರ’ ಎಂದು ಸೀತೆಯರ ಕುರಿತು ಹೇಳುತ್ತಲೇ ಮಂಗ್ಯಾಗಳನ್ನೂ ತರಾಟೆಗೆ ತೆಗೆದುಕೊಂಡರು.
ಉದ್ದೇಶಿತ ಚಿತ್ರದಲ್ಲಿ ಮಹೇಶ್ ಬಾಬು ರಾಮನ ಪಾತ್ರದಲ್ಲಿ ಕಾಣಿಸಲಿದ್ದು, ಹೃತಿಕ್ ರೋಷನ್ ರಾವಣನ ಪಾತ್ರವನ್ನು ನಿರ್ವಹಿಸುವ ಸಾಧ್ಯತೆ ಇದೆ. ದೊಡ್ಡ ಬಜೆಟ್ ಚಿತ್ರವನ್ನು ಮಧು, ಅಲ್ಲು ಅರವಿಂದ್ ಮತ್ತು ನಮಿತ್ ಮಲ್ಹೋತ್ರಾ ಸಹ-ನಿರ್ಮಾಣ ಮಾಡಲಿದ್ದಾರೆ. ಹಿಂದಿ ಅಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಚಿತ್ರ ತಯಾರಾಗುತ್ತಿದೆ.
‘ಈ ದೇಶದೊಳ್ಗ ನೂರಾರು ರಾಮಾಯಣ, ಮಹಾಭಾರತ ಅದಾವ. ಅವೆಲ್ಲ ಜನಪದರು ಕಟ್ಟಿಗೊಂಡು ಬಂದ ಪುರಾಣ.. ಆದ್ರ ಈ ಬಿಜೆಪಿ ಸಂಘ ಪರಿವಾರ ಅದಾವಲ್ಲ, ಇವು ಆ ಪುರಾಣಗಳನ್ನು ಬಳಸಿಕೊಂಡು ಪಾಲಿಟಿಕ್ಸ್ ಮಾಡಾಕ ಹತ್ತ್ಯಾವು. ಅದರ ಭಾಗನೇ ಇದು, ಕರೀನಾ ಸೀತೆ ಪಾತ್ರ ಮಾಡಬಾರ್ದು ಅನ್ನೋದು ಇದರ ಭಾಗ. ಇಂಥವಕ್ಕೆ ಪಾಲಿಟಿಕಲ್ ಆಗಿನೇ ಚಾಲೆಂಜ್ ಮಾಡಬೇಕು’ ಎಂದು ಕಲಬುರ್ಗಿಯ ಎಡಪಂಥೀಯ ಹೋರಾಟಗಾರ್ತಿ ಕೆ. ನೀಲಾ ಹೇಳಿದರು.

‘ನಾವು ಭವ್ಯ ನರಸಿಂಹಮೂರ್ತಿ ಪರ ಪ್ರೆಸ್‍ಮೀಟ್ ಮಾಡಿದ್ದೇವೆ. ಕೇವಲ ಭವ್ಯಾ ಅಷ್ಟೇ ಅಲ್ಲ, ಬಿಜೆಪಿ ವಿರುದ್ಧ ಟೀಕೆ ಮಾಡುವ ಮಹಿಳೆಯರ ಮೇಲೆ ಇಂತಹ ದಾಳಿ ನಡೆಯುತ್ತಿವೆ. ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಒಂದಿಬ್ಬರ ಮೇಲೆ ಪ್ರಕರಣ ದಾಖಲಿಸಿದರೂ ಈ ಅವಾಂತರ ನಿಲ್ಲಿಸಬಹುದು’ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳುತ್ತಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ಇರುವ ಯದುನಂದನ್ ಕಿಲಾರ, ‘ಈ ಏಳೆಂಟು ವರ್ಷಗಳಲ್ಲಿ ಬಲಪಂಥೀಯ ಪ್ರೊಪಗಂಡಾ ವಿಪರೀತಕ್ಕೆ ತಲುಪಿದೆ. ಅದರ ಪರಿಣಾಮವೇ ಕರೀನಾ ಸೀತೆಯ ಪಾತ್ರ ಮಾಡಬಾರದು ಎಂಬ ಕ್ಷುಲ್ಲಕ ಪ್ರಚಾರ ನಡೆದಿದೆ. ಅಷ್ಟಕ್ಕೂ ಈ ರಾಮಾಯಣ ಮತ್ತು ಮಹಾಭಾರತ ಎಂಬ ಇತಿಹಾಸವಲ್ಲದ ಫಿಕ್ಸನ್ (ಪುರಾಣ) ಇಟ್ಟುಕೊಂಡು ಸಿನಿಮಾ ಮಾಡುವುದೇ ಹೋಪ್‍ಲೆಸ್. ಈ ದೇಶದಲ್ಲಿ ಮನೆಮನೆಗೂ ಒಂದು ರಾಮಾಯಣ ಕತೆಗಳಿವೆ’ ಎಂದು ಹೇಳಿದರು.
‘ಅಯ್ಯೋ, ನನ್ನ ಅಲೈ ದೇವರು ನಾಟಕದ ಮೊದಲ ಪ್ರದರ್ಶನಕ್ಕೂ ತುಂಬ ಬೆದರಿಕೆ ಕರೆ ಬಂದಿದ್ದವು. ಆದರೆ, ಅವತ್ತು ಹೋರಾಟ ಮನೋಭಾವದ ಹತ್ತಾರು ಯುವಕ ಯುವತಿಯರು ಹಾಜರು ಇದ್ದ ಕಾರಣಕ್ಕೆ ನಾಟಕ ಸುಸೂತ್ರವಾಗಿ ನಡೆಯಿತು’ ಎಂದು ಹನುಮಂತ ಹಾಲಿಗೇರಿ ಹೇಳಿದರು.
ದೇವರು-ಧರ್ಮ-ಸುಳ್ಳುಗಳ ಆಧಾರದಲ್ಲಿ ಪಾಲಿಟಿಕ್ಸ್ ಮಾಡುವ ಗುಂಪನ್ನು ಬೆಂಬಲಿಸುತ್ತ ಮೂರ್ಖರಾಗುತ್ತಿರುವ ಯುವಜನತೆ ಈ ಸುಳಿಯಿಂದ ಹೊರಬರಲಿ ಎಂದು ಆಶಿಸೋಣ.
- ಪಿ.ಕೆ ಮಲ್ಲನಗೌಡರ್
ಇದನ್ನೂ ಓದಿ: ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ


