ಬಿಹಾರದಲ್ಲಿ ಹೊಸ ರಾಜಕೀಯ ಅಲೆ ಬೀಸುತ್ತಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಮಗ ತೇಜಸ್ವಿ ಯಾದವ್ ರಾಜ್ಯದ ಹೊಸ ಶಕ್ತಿಯಾಗಿ ಬೆಳೆಯುತ್ತಿದ್ದಾರೆ. ಒಕ್ಕೂಟ ಸರ್ಕಾರದ ಮಾಜಿ ಮಂತ್ರಿ ದಿವಂಗತ ರಾಮ ವಿಲಾಸ್ ಪಾಸ್ವಾನ್ ಅವರ ಪಕ್ಷ ಎಲ್‌ಜೆಪಿ ಒಡೆದು ಹೋಗಿದೆ. ಈ ನಡುವೆ ಅವರ ಮಗ ಚಿರಾಗ್ ಪಾಸ್ವಾನ್ ಅವರನ್ನು ತೇಜಸ್ವಿ ಯಾದವ್ ಅವರು ಮೈತ್ರಿಕೂಟಕ್ಕೆ ಸೇರಲು ಇತ್ತಿಚೆಗಷ್ಟೆ ಆಹ್ವಾನಿಸಿದ್ದರು. ಇದಾಗಿ ದಿನಗಳ ಅಂತದರಲ್ಲಿ, “ತೇಜಸ್ವಿ ಯಾದವ್ ನನ್ನ ಕಿರಿಯ ಸಹೋದರ ಇದ್ದಂತೆ, ರಾಜ್ಯದಲ್ಲಿ ಚುನಾವಣೆ ನಡೆಯುವ ಸಂದರ್ಭ ಮೈತ್ರಿಯ ಬಗ್ಗೆ ಪಕ್ಷವು ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಶನಿವಾರ ಮಾಧ್ಯಮದ ಜೊತೆಗೆ ಮಾತನಾಡಿದ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್, “ನನ್ನ ತಂದೆ ರಾಮ ವಿಲಾಸ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಅವರ ತಂದೆ ಲಾಲು ಪ್ರಸಾದ್ ಯಾದವ್ ಯಾವಾಗಲೂ ಆಪ್ತ ಸ್ನೇಹಿತರಾಗಿದ್ದರು. ತೇಜಸ್ವಿ ಮತ್ತು ನಾನು ಬಾಲ್ಯದಿಂದಲೂ ಒಬ್ಬರಿಗೊಬ್ಬರು ತಿಳಿದಿದ್ದು, ನಮ್ಮಿಬ್ಬರ ನಡುವೆ ನಾವು ನಿಕಟ ಸ್ನೇಹವಿದೆ. ಅವರು ನನ್ನ ಕಿರಿಯ ಸಹೋದರ ಇದ್ದಂತೆ. ಬಿಹಾರದಲ್ಲಿ ಚುನಾವಣಾ ಸಮಯ ಬಂದಾಗ ಪಕ್ಷವು ಮೈತ್ರಿಕೂಟದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಆರೆಸ್ಸೆಸ್ ಅಥವಾ ಸಂವಿಧಾನ’ – ಚಿರಾಗ್ ಪಾಸ್ವಾನ್‌ಗೆ ಆಯ್ಕೆ ಮುಂದಿಟ್ಟ ತೇಜಸ್ವಿ ಯಾದವ್!
“ಸಿಎಎ, ಎನ್‌ಆರ್‌ಸಿಯ ವಿಷಯಗಳು ಸೇರಿದಂತೆ ನಾನು ಪ್ರತಿ ಹಂತದಲ್ಲೂ ಬಿಜೆಪಿಯೊಂದಿಗೆ ನಿಂತಿದ್ದೇನೆ. ಆದರೆ, ನಿತೀಶ್ ಕುಮಾರ್ ಇದನ್ನು ಒಪ್ಪಲಿಲ್ಲ. ಮುಂದಿನ ದಿನಗಳಲ್ಲಿ ನನ್ನನ್ನು ಬೆಂಬಲಿಸುತ್ತಾರೆಯೆ ಅಥವಾ ನಿತೀಶ್ ಕುಮಾರ್ ಅವರನ್ನು ಬೆಂಬಲಿಸುತ್ತಾರೆಯೇ ಎಂದು ಬಿಜೆಪಿಯೆ ನಿರ್ಧರಿಸಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
ಚಿರಾಗ್ ಪಾಸ್ವಾನ್ ತನ್ನ ತಂದೆಯ ಜನ್ಮ ದಿನವಾದ ಜುಲೈ 5 ರಿಂದ ಹಾಜಿಪುರದಿಂದ ಬಿಹಾರ ಯಾತ್ರೆ ಪ್ರಾರಂಭಿಸುವ ಮೂಲಕ ಕಳೆದು ಹೋದ ರಾಜಕೀಯ ನೆಲೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹಾಜಿಪುರ ಲೋಕಸಭಾ ಕ್ಷೇತ್ರವನ್ನು ಚಿರಾಗ್ ಪಾಸ್ವಾನ್ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್ ಅವರು ಈಗ ಪ್ರತಿನಿಧಿಸುತ್ತಿದ್ದಾರೆ. ಅವರು ಚಿರಾಗ್ ವಿರುದ್ಧ ಬಂಡಾಯವೆದ್ದು ಪಕ್ಷದೊಳಗೆ ಬೇರೆಯೆ ಬಣವನ್ನು ಕಟ್ಟಿದ್ದಾರೆ. ಇದು ಬಿಹಾರ ರಾಜಕೀಯ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ.
ಎಲ್‌ಜೆಪಿಯ ನಡುವಿನಲ್ಲಿ ಉಂಟಾದ ಒಡಕಿನ ಹಿನ್ನಲೆಯಲ್ಲಿ ಚಿರಾಗ್ ಪಾಸ್ವಾನ್‌ಗೆ ತಮ್ಮ ಮೈತ್ರಿಕೂಟವನ್ನು ಸೇರಲು ತೇಜಸ್ವಿ ಯಾದವ್ ಆಹ್ವಾನಿಸಿದ್ದರು. ಜೊತೆಗೆ ರಾಮ್ ವಿಲಾಸ್ ಪಾಸ್ವಾನ್ ಅವರು ಲೋಕಸಭಾ ಚುನಾವಣೆಯಲ್ಲಿ ಸೋತಾಗ, ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಸಹಾಯ ಮಾಡಿದ್ದರು ಎಂದು ನೆನಪಿಸಿದ್ದರು.
ಇದನ್ನೂ ಓದಿ: ‘ಸರ್ಕಾರಕ್ಕೆ ಯಾವುದೇ ಜವಾಬ್ದಾರಿಯ ಪ್ರಜ್ಞೆ ಇಲ್ಲ’ – ತೇಜಸ್ವಿ ಯಾದವ್ ಆಕ್ರೋಶ
“ಚಿರಾಗ್ ಮುಂದೆ ಎರಡು ಆಯ್ಕೆಗಳಿವೆ ಒಂದು ಆರೆಸ್ಸೆಸ್ ಮುಖಂಡ ಎಂ.ಎಸ್. ಗೋಲ್ವಾಲ್ಕರ್ ಬರೆದ ಬಂಚ್ ಆಫ್ ಥಾಟ್, ಇನ್ನೊಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ. ಇದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅವರು ನಿರ್ಧರಿಸಬೇಕು” ಎಂದು ತೇಜಸ್ವಿ ಯಾದವ್ ಹೇಳಿದ್ದರು.
My father & Lalu ji have always been close friends. RJD leader Tejashwi Yadav & I know each other since childhood, we'd a close friendship, he is my younger brother. When election time will come in Bihar then the party will take a final call on the alliance: Chirag Paswan
— ANI (@ANI) June 26, 2021
ಕಳೆದ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿಶ್ ಕುಮಾರ್ ವಿರುದ್ದ ದಂಗೆ ಎದ್ದಿದ್ದ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಿಂದ ಹೊರ ನಡೆದಿತ್ತು. ನಂತರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಲ್‌ಜೆಪಿ, ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ತೀವ್ರ ಹೊಡೆತ ನೀಡಿತ್ತು.
ಇದನ್ನೂ ಓದಿ: ‘ನಾಝಿ ಆಡಳಿತ ಬೇಟೆಯಾಡುತ್ತಿದೆ’ – ಕೇಂದ್ರದ ವಿರುದ್ದ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ
ಆದರೆ ಇತ್ತೀಚೆಗೆ ಎಲ್‌ಜೆಪಿ ಒಳಗಿನ ಆಂತರಿಕ ದಂಗೆಯಿಂದ ಪಕ್ಷ ಒಡೆದು ವಿಭಜನೆಯಾಗಿದೆ. ಇದಕ್ಕೆ ನಿತೀಶ್ ಕುಮಾರ್ ಕಾರಣವಾಗಿದ್ದು, ಅವರು ವಿಧಾನಸಭಾ ಚುನಾವಣೆಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಚಿರಾಗ್ ಪಾಸ್ವಾನ್ ಅವರ ಆಪ್ತರು ಆರೋಪಿಸಿದ್ದರು.
ಅಲ್ಲದೆ, ಎಲ್‌ಜೆಪಿಯಲ್ಲಾಗಿರುವ ಎಲ್ಲಾ ಬೆಳವಣಿಗೆಗಳಿಗೆ, ಮುಖ್ಯವಾಗಿ ಎಲ್‌ಜೆಪಿ ವಿಭಜನೆಯ ಹಿಂದೆ ಬಿಹಾರ ಸಿಎಂ ನಿತೀಶ್ ಕುಮಾರ್ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ. ಈ ಹಿಂದೆ 2005 ಮತ್ತು 2010 ರಲ್ಲಿ ಎಲ್‌ಜೆಪಿ ಇದೇ ರೀತಿ ವಿಭಜನೆಯಾಗಲು ನಿತೀಶ್ ಕುಮಾರ್ ಅವರ ಜೆಡಿಯು ಅನುಕೂಲ ಮಾಡಿಕೊಟ್ಟಿತ್ತು ಎಂಬುದನ್ನು ಚಿರಾಗ್ ಪಾಸ್ವಾನ್ ಅವರಿಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ನೆನಪಿಸಿದ್ದರು.
ಈ ನಡುವೆ, ಚಿರಾಗ್ ಪಾಸ್ವಾನ್ ಅವರ ತಂದೆ, ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಜನ್ಮದಿನವಾದ ಜುಲೈ 5 ರಂದು ಗೌರವ ಸಲ್ಲಿಸಲು ತೇಜಸ್ವಿ ಯಾದವ್ ಯೋಜಿಸುತ್ತಿದ್ದಾರೆ. ಅದೇ ದಿನ ತೇಜಸ್ವಿ ಯಾದವ್ ಅವರ ಪಕ್ಷವಾದ ಆರ್‌ಜೆಡಿಯ ಸಂಸ್ಥಾಪನಾ ದಿನವೂ ಆಗಿದ್ದು, ಅಂದಿನ ಕಾರ್ಯಕ್ರಮದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಧನರಾದ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ‘ನಾನು ತೇಜಸ್ವಿ ಯಾದವ್ ಮಾತಾಡುತ್ತಿದ್ದೇನೆ’: ಡಿಸಿಯೊಂದಿಗಿನ ಖಡಕ್ ಸಂಭಾಷಣೆ ವೈರಲ್


