ಈಗ ಕೊಡಗಿನಲ್ಲಿ ಎಡೆಬಿಡದೇ ಮಳೆ ಸುರಿಯಲು ಶುರುವಾಗಿದೆ. ವಿರಾಜಪೇಟೆ ತಾಲೂಕಿನ ಬಾಳೆಗೋಡುವಿನ ಸರ್ಕಾರಿ ಭೂಮಿಯಲ್ಲಿ ಟಾರ್ಪಾಲ್‍ ಟೆಂಟ್‍ ಹಾಕಿಕೊಂಡು ಬದುಕುತ್ತಿರುವ 25ಕ್ಕೂ ಹೆಚ್ಚು ಆದಿವಾಸಿಗಳ ಕುಟುಂಬಗಳ 150ಕ್ಕೂ ಹೆಚ್ಚು ಸದಸ್ಯರಿಗೆ ಈಗ ಬದುಕೇ ದುರ್ಬರವಾಗಿದೆ.

ಕಳೆದ ವರ್ಷದಿಂದ ಲಾಕ್‍ಡೌನ್‍ ಅವರ ದುಡಿಮೆ ಕಿತ್ತುಕೊಂಡಿದೆ. ಈಗ ಹಸಿವಿನ ಜೊತೆಗೆ, ಮುಗಿಲಿಂದಲೂ, ನೆಲದಿಂದಲೂ ನೀರು ಅವರ ಟೆಂಟ್‍ಗಳನ್ನು ಪ್ರವೇಶಿಸಲು ಆರಂಭಿಸಿದ ಮೇಲೆ ತಮ್ಮ ಮಕ್ಕಳನ್ನು ತಬ್ಬಿಕೊಂಡು ಚಿಂತಾಕ್ರಾಂತರಾಗಿದ್ದಾರೆ.

ಇದ್ದಬದ್ದ ದಿನಸಿಯಲ್ಲಿ ಅಡುಗೆ ಮಾಡಿಕೊಳ್ಳಲೂ ಒದ್ದೆ ನೆಲ ಬಿಡುತ್ತಿಲ್ಲ. ಇವರಿಗೆ ಕನಿಷ್ಠ ಆಹಾರ, ವಸತಿ ಸೌಲಭ್ಯ ಒದಗಿಸಬೇಕಿದ್ದ ಜಿಲ್ಲಾಡಳಿತ, ತಾಲೂಕು ಆಡಳಿತಗಳು ಸರ್ಕಾರಗಳಷ್ಟೇ ಜಡ್ಡುಗಟ್ಟಿ ಹೋಗಿ ಮಾನವೀಯತೆ ಮತ್ತು ಅದಕ್ಕೂ ಮುಖ್ಯವಾಗಿ ತಮ್ಮ ಕರ್ತವ್ಯ ಮರೆತಿವೆ. ಸಂವಿಧಾನ ಒದಗಿಸಿದ ಬದುಕಿನ ಹಕ್ಕನ್ನೇ ಕಿತ್ತುಕೊಳ್ಳುತ್ತಿವೆ.

‘ಮಳೆಯ ನಡುವೆಯೇ ಮೂರು ಪುಟ್ಟ ಮಕ್ಕಳನ್ನು ತಬ್ಬಿಕೊಂಡ ತಾಯಿಯೊಬ್ಬರು, ‘ಸ್ವಲ್ಪ ದಿನದ ಹಿಂದೆ ಬಂದ ಪೊಲೀಸರು, ಆಹಾರದ ವ್ಯವಸ್ಥೆ ಮಾಡಲು ಪಂಚಾಯತಿಗಳಿಗೆ ಹೇಳುವುದಾಗಿ ತಿಳಿಸಿ ಮಾಯವಾದರು. ರೇಷನ್ನೂ ಇಲ್ಲ, ಮಲಗಲು ಜಾಗವೂ ಇಲ್ಲ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರ ಪಕ್ಕದಲ್ಲಿ ನಿಂತಿದ್ದ ಯುವತಿ, ‘ಇಲ್ಲಿ ನಮ್ಮ ಟೆಂಟ್‍ಗಳ ಪಕ್ಕದ ಜಾಗವನ್ನು ತ್ಯಾಜ್ಯ ಗುಡ್ಡೆ ಹಾಕಲು ಬಳಸಿಕೊಳ್ಳುತ್ತಿದ್ದಾರೆ. ಅಂದರೆ, ಹೇಗಾದರೂ ಇಲ್ಲಿಂದ ನಮ್ಮನ್ನು ಒಕ್ಕಲೆಬ್ಬಿಸುವ ಯತ್ನ ನಡೆದಿದೆ’ ಎಂದರು.

ಭೂ-ವಸತಿ ರಹಿತರ ಸಮಸ್ಯೆ

‘ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳಲ್ಲಿ ಆದಿವಾಸಿಗಳ ಸುಮಾರು 200 ಹಾಡಿಗಳಿವೆ.. ಭೂಮಿ-ವಸತಿ ಇಲ್ಲದ ಈ ಕುಟುಂಬಗಳು ಹೇಗೋ ಗುಡಿಸಲು ಹಾಕಿಕೊಂಡು ಬದುಕಲು ಹೊರಟರೆ, ಭೂಕುಳಗಳ ಬೆಂಬಲ ಹೊಂದಿರುವ ರಾಜಕಾರಣಿಗಳು, ಅಧಿಕಾರಿಗಳು ಅದಕ್ಕೂ ಬಿಡುತ್ತಿಲ್ಲ’ ಎನ್ನುತ್ತಾರೆ ಭೂಮಿ ಮತ್ತು ವಸತಿ ರಹಿತರ ಹೋರಾಟ ವೇದಿಕೆಯ ರಾಜ್ಯ ಸಮಿತಿ ಸದಸ್ಯ ಮತ್ತು ಕೊಡಗು ಜಿಲ್ಲಾ ಕಾರ್ಯದರ್ಶಿ ಹೇಮಂತ್.

“ಬಾಳೆಗೋಡುವಿಮಲ್ಲಿ ಈಗಿರುವ ಕುಟುಂಬಗಳ ಹಿಂದಿನ ತಲೆಮಾರುಗಳನ್ನು ನಾಗರಹೊಳೆ ಕಾಡಿನಿಂದ ಒಕ್ಕಲೆಬ್ಬಿಸಿ ಅವರನ್ನು ಅತಂತ್ರ ಮಾಡಲಾಗಿತು. ಕಾಡಿನಲ್ಲಿನ ಖಾಲಿ ಜಾಗದಲ್ಲಿ ಅಲ್ಪಸ್ವಲ್ಪ ಉಳುಮೆ ಮಾಡಿಕೊಂಡು ಬದುಕುತ್ತಿದ್ದ ಈ ಕುಟುಂಬಗಳನ್ನು ಅತಂತ್ರ ಮಾಡಲಾಗಿತು. ಇವರೆಲ್ಲ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತ ಅತಂತ್ರವಾಗಿ ಬದುಕುತ್ತ ಬಂದರು’ ಎನ್ನುತ್ತಾರೆ ಹೇಮಂತ್‍.

‘ವನ್ಯಜೀವಿ ಕಾಯ್ದೆಗಳ ಹೆಸರಲ್ಲಿ ಪ್ರಭುತ್ವಗಳು ಈ ಕ್ರೌರ್ಯ ಮೆರೆಯುತ್ತ ಬಂದಿವೆ. ಕಾಡಿನ ಮೂಲನಿವಾಸಿಗಳನ್ನು ಅವರ ನೆಲದಿಂದ ಒಕ್ಕಲೆಬ್ಬಿಸುತ್ತ ಬಂದಿವೆ’ ಎನ್ನುವ ಅವರು, ‘ಬಾಳೆಗೋಡುವಿನಲ್ಲಿ ಈಗಿರುವ 25 ಕುಟುಂಬಗಳು ಹೋರಾಟ ನಡೆಸಿದ ನಂತರ ಅವರ ವಸತಿಗೆ 3 ಎಕರೆ ನಿಗದಿ ಮಾಡಿದ್ದ ಆಡಳಿತವು ನಂತರ ಪಟ್ಟಭದ್ರರ ಹಿತಾಸಕ್ತಿಗಾಗಿ ಅದನ್ನೂ ವಾಪಸ್ ಕಿತ್ತುಕೊಂಡಿತು. ವಿರಾಜಪೇಟೆಯಲ್ಲಿನ ಹಲವಾರು ಹಾಡಿಗಳಲ್ಲಿ ಇದೇ ಪರಿಸ್ಥಿತಿಯಿದೆ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸದ್ಯಕ್ಕೆ ಶಾಶ್ವತ ಪರಿಹಾರದ ಮಾತನ್ನು ಆಮೇಲೆ ನೋಡೋಣ, ಕೂಡಲೇ ಈ ಕುಟುಂಬಗಳಿಗೆ ಕನಿಷ್ಠ ಆಹಾರ ವಸ್ತು ಮತ್ತು ತಾತ್ಕಾಲಿಕ ಸೂರಿನ ವ್ಯವಸ್ಥೆಯನ್ನು ಒದಗಿಸುವುದು ಜಿಲ್ಲಾಡಳಿತ ಮತ್ತು ಸರ್ಕಾರದ ಕನಿಷ್ಠ ಕರ್ತವ್ಯ. ಅಷ್ಟೂ ಆಗದಿದ್ದರೆ ಸರ್ಕಾರ ಸತ್ತಂತೆಯೇ ಲೆಕ್ಕ. ಈ ಸಂಕಷ್ಟ ಕಾಲದಲ್ಲಿ ತಮ್ಮ ಕೈಲಾದಷ್ಟು ನೆರವು ನೀಡುತ್ತಿರುವ ಸಂಘಟನೆಗಳು ಈ ಕುಟುಂಬಗಳನ್ನು ತಲುಪುವಂತಾಗಲಿ ಎಂದು ಆಶಿಸೋಣ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಐದು ವರ್ಷದಲ್ಲಿ ಎಲ್ಲಾ ಬಡವರ ಭೂಮಿ ಕಿತ್ತುಕೊಳ್ಳುತ್ತಾರೆ: ಸಸಿಕಾಂತ್ ಸೆಂಥಿಲ್ ಆತಂಕ

LEAVE A REPLY

Please enter your comment!
Please enter your name here