ಒಂದು ತಿಂಗಳ ಹಿಂದೆ ಕಾಣೆಯಾಗಿದ್ದ ಒಂದೇ ಕುಟುಂಬದ ಐವರು ಶವವಾಗಿ 8 ಅಡಿ ಗುಂಡಿಯಲ್ಲಿ ಪತ್ತೆಯಾಗಿರುವ ಅಮಾನುಷ ಘಟನೆ ಮಧ್ಯಪ್ರದೇಶದ ದಿವಾಸ್ ಜಿಲ್ಲೆಯಲ್ಲಿ ನಡೆದಿದೆ. ದೇಹಗಳು ಜೀರ್ಣವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಎಲ್ಲಾ ದೇಹಗಳನ್ನು ನಗ್ನವಾದ ಸ್ಥಿತಿಯಲ್ಲಿ ಕಂಡುಬಂದಿವೆ. ಪೊಲೀಸರು ಹಿಟಾಚಿಯನ್ನು ಬಳಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
45 ವರ್ಷ ವಯಸ್ಸಿನ ಮಮತಾ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳಾದ ರೂಪಾಲಿ(21), ದಿವ್ಯಾ(14) ಮತ್ತು ಅವರ ಇಬ್ಬರು ಸೋದರ ಸಂಬಂಧಿಕರು ದಿವಾಸ್‌ನ ತಮ್ಮ ನಿವಾಸದಿಂದ ಮೇ 13 ರಂದು ಕಾಣೆಯಾಗಿದ್ದರು. ಮೃತ ಕುಟುಂಬದವರು ವಾಸವಿದ್ದ ಮನೆಯ ಮಾಲೀಕ ಮತ್ತು ಆತನ 12 ಜನ ಸಹಾಯಕರು ಈ ಭೀಕರ ಘಟನೆಯ ಹಿಂದೆ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಗುಂಡಿಯನ್ನು ತೋಡಿದಾಗ ದೇಹಗಳು ನಗ್ನಾವಸ್ಥೆಯಲ್ಲಿ ಪತ್ತೆಯಾಗಿದ್ದವು. ಆರೋಪಿಗಳು ಕೊಲೆ ಮಾಡಿ ಬಟ್ಟೆಗಳನ್ನು ಸುಟ್ಟು ಉಪ್ಪು ಮತ್ತು ಯೂರಿಯಾವನ್ನು ಬಳಸಿ ಮೃತದೇಹಗಳನ್ನು ಕೊಳೆಯುವಂತೆ ಮಾಡಿದ್ದರೆಂದು ಪ್ರಕರಣದ ಕುರಿತು ಪೊಲೀಸ್ ಇಲಾಖೆ ಹೇಳಿಕೆ ನೀಡಿದೆ.
ಮುಖ್ಯ ಅರೋಪಿ ಸುರೇಂದ್ರ ಚೌಹಾಣ್ ಸೇರಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಂದ್ರ ಚೌಹಾಣ್ ಕೊಲೆಯ ಯೋಜನೆಯನ್ನು ರೂಪಿಸಿ ಕೊಲೆಗೈದಿದ್ದಾನೆ. ಉಳಿದ 5 ಜನ ಆರೋಪಿಗಳು ಗುಂಡಿಯನ್ನು ತೆಗಯುವ ಮೂಲಕ ಕೊಲೆಗೆ ಸಹಕರಿಸಿದ್ದಾರೆ ಎಂದು ದಿವಾಸ್ ಪೊಲೀಸ್ ಠಾಣಾಧಿಕಾರಿ ಶಿವ ದಯಾಳ್ ಸಿಂಗ್ ಮಾಹಿತಿ ನೀಡಿದ್ದಾರೆ. ಉಳಿದ ಏಳು ಜನ ಆರೋಪಿಗಳಿಗಾಗಿ ದಿವಾಸ್ ಪೊಲೀಸರು ಶೋಧಕಾರ್ಯವನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: ಯುಪಿ: ಅತ್ಯಾಚಾರ ಆರೋಪಿಗಳ ಕಪಾಳಕ್ಕೆ ಹೊಡೆದು ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಒತ್ತಾಯ!
ಮೃತ ಕುಟುಂಬದ ಸಂಬಂಧಿಕರು ಮೇ 13ರಂದು ಕಾಣೆಯಾಗಿರುವ ಕಂಪ್ಲೇಂಟ್ ದಾಖಲಿಸಿದ್ದರು. ಆರೋಪಿಯು ಪೊಲೀಸರ ತನಿಖೆಯ ಹಾದಿಯನ್ನು ತಪ್ಪಿಸಲು ಹಲವು ಪ್ರಯತ್ನಗಳನ್ನು ಮಾಡಿದ್ದ. ಕೊಲೆ ಆರೋಪಿ ಸುರೇಂದ್ರ ಚೌಹಾಣ್ ಕುಟುಂಬಸ್ಥರ ಫೇಸ್‌ಬುಕ್ ಐಡಿಯನ್ನು ಬಳಸಿ ಮೃತ ರೂಪಾಲಿ ತನ್ನ ಇಚ್ಛೆಯಂತೆಯೇ ಮದುವೆಯಾಗಿದ್ದಾಳೆ. ಹಾಗೂ ಆಕೆಯ ತಾಯಿ ಮತ್ತು ಸಹೋದರಿಯರು ಅವಳೊಂದಿಗೆ ಸುರಕ್ಷಿತವಾಗಿದ್ದಾರೆ ಎಂಬ ಸಂದೇಶಗಳನ್ನು ಹರಿಬಿಟ್ಟು ಪೊಲೀಸರ ಕಣ್ಣು ತಪ್ಪಿಸಲು ಯತ್ನಿಸಿದ್ದಾನೆ. ಪೊಲೀಸರು ಸಂದೇಶ ಕಳುಹಿಸಲಾದ ಮೊಬೈಲ್ ಫೋನ್ ಅನ್ನು ಟ್ರೇಸ್ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಘಟನೆಯ ಹಿನ್ನಲೆ
ಕೊಲೆಯ ಮುಖ್ಯ ಆರೋಪಿ ಸುರೇಂದ್ರ ಚೌಹಾಣ್ ಮೃತ ಕುಟುಂಬಕ್ಕೆ ಪರಿಚಿತ ವ್ಯಕ್ತಿಯಾಗಿದ್ದು ಅವರ ಮನೆಗೆ ಬಂದು ಹೋಗುವ ಪರಿಪಾಠವನ್ನು ಬೆಳೆಸಿಕೊಂಡಿದ್ದ. ಮೃತ ರೂಪಾಲಿ ಮತ್ತು ಆರೋಪಿ ಸುರೇಂದ್ರನ ನಡುವೆ ಪ್ರೇಮ ಸಂಬಂಧವೂ ನಡೆದಿತ್ತು. ಇದ್ದಕ್ಕಿದ್ದಂತೆ ಸುರೇಂದ್ರ ಇನ್ನೊಂದು ಮಹಿಳೆಯೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದು ರೂಪಾಲಿಯಯನ್ನು ಸಿಟ್ಟಿಗೇಳಿಸಿತ್ತು. ಸುರೇಂದ್ರ ಮತ್ತು ತನ್ನ ಪೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ರೂಪಾಲಿ ಸುರೇಂದ್ರ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿಗೂ ಈ ಚಿತ್ರವನ್ನು ಕಳುಹಿಸಿದ್ದಳು. ರೂಪಾಲಿ ಮತ್ತು ಆಕೆಯ ಕುಟುಂಬ ತನ್ನ ನಿಶ್ಚಿತಾರ್ಥನ್ನು ಎಲ್ಲಿ ಮುರಿದುಹಾಕುತ್ತದೆಯೋ ಎಂಬ ಭಯದಲ್ಲಿ ಆರೋಪಿಯು ಕುಟುಂಬಸ್ಥರೆಲ್ಲರನ್ನು ಕೊಲೆ ಮಾಡಿ 8 ಅಡಿ ಗುಂಡಿಯಲ್ಲಿ ಹೂತಿದ್ದಾನೆ ಎಂದು ದಿವಾಸ್ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾವ ರೀತಿಯಲ್ಲಿ ಕೊಲೆಯನ್ನು ಮಾಡಲಾಗಿದೆ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಯೋತ್ಪಾದನೆ ಆರೋಪ ಹೊತ್ತು 12 ವರ್ಷ ಜೈಲಲ್ಲಿ ಕಳೆದ ನಿರಪರಾಧಿ!


