ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಆಗಸ್ಟ್ 1 ರಿಂದ ಪ್ರಥಮ ವರ್ಷದ ಯುಜಿ ಪ್ರವೇಶವನ್ನು ಪ್ರಾರಂಭಿಸಲಿವೆ ಎಂದು ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಗುರುವಾರ ತಿಳಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, 10, 11 ಮತ್ತು 12 ನೇ ತರಗತಿಯ ಫಲಿತಾಂಶಗಳ ಒಟ್ಟು ಮೊತ್ತವನ್ನು ಉನ್ನತ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಬಳಸಲಾಗುವುದು ಎಂದು ಹೇಳಿದ್ದಾರೆ.
ಅಣ್ಣಾ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯಲು ‘ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ’ (ಡಿಒಟಿಇ) ದಿಂದ ಅನುಕೂಲವಾಗಲಿದೆ. ಒಟ್ಟು ಅಂಕಗಳನ್ನು ಬಳಸಿಕೊಂಡು ‘ಸಿಂಗಲ್-ವಿಂಡೋ’ ವ್ಯವಸ್ಥೆಯ ಮೂಲಕ ಪ್ರವೇಶಾತಿ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಪ್ರವೇಶಾತಿಯು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ನಡೆಯುತ್ತದೆಯೇ ಎಂದು ಅವರು ಸ್ಪಷ್ಟಪಡಿಸಿಲ್ಲ.
ಇದನ್ನೂ ಓದಿ: ಎಲ್‌ಎಸ್‌ಇಯಿಂದ ಅಂಬೇಡ್ಕರ್ ಅವರ ಅಪರೂಪದ ದಾಖಲೆಗಳ ಆನ್ಲೈನ್ ವಸ್ತು ಪ್ರದರ್ಶನ
ಆಗಸ್ಟ್ 1 ರಿಂದ ಕಾಲೇಜುಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲಾಗಿದೆ ಎಂದು ಪೊನ್ಮುಡಿ ಹೇಳಿದ್ದಾರೆ. ಜುಲೈ 31 ನಂತರ ಕಾಲೇಜುಗಳಿಗೆ ತಮ್ಮ ಕ್ಯಾಂಪಸ್‌ನಲ್ಲಿ ಪ್ರವೇಶ ಪ್ರಕ್ರಿಯೆಯನ್ನು ನಿರ್ವಹಿಸಲು ಮತ್ತು ಆನ್‌ಲೈನ್ ತರಗತಿಗಳನ್ನು ನಡೆಸಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಳೊಂದಿಗೆ ಗುರುವಾರ ನಡೆದ ಆನ್‌ಲೈನ್ ಸಭೆಯ ನಂತರ ಮಾತನಾಡಿದ ಪೊನ್ಮುಡಿ, “ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ವ್ಯತ್ಯಾಸಗಳ ಬಗ್ಗೆ ಚರ್ಚಿಸಲಾಗಿದೆ. ಎಲ್ಲಾ ವಿಶ್ವವಿದ್ಯಾನಿಲಯಗಳು ನೇಮಕಾತಿಯಲ್ಲಿ ಒಂದೇ ರೀತಿಯ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ನಾನು ಅವರನ್ನು ಕೇಳಿದ್ದೇನೆ” ಎಂದು ಅವರು ಹೇಳಿದ್ದಾರೆ.
ಕಳೆದ ಒಂದು ದಶಕದಲ್ಲಿ ಮಾಡಿದ ಪ್ರಮುಖ ನೇಮಕಾತಿಗಳ ಬಗ್ಗೆ ಸರ್ಕಾರ ಆಳವಾದ ಅವಲೋಕನವನ್ನು ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ಮದ್ರಾಸ್ ವಿಶ್ವವಿದ್ಯಾಲಯವು ಎಂಫಿಲ್ ಕೋರ್ಸ್‌ಗಳನ್ನು ರದ್ದುಗೊಳಿಸಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಪೊನ್ಮುಡಿ, ಎಲ್ಲಾ ವಿಶ್ವವಿದ್ಯಾಲಯಗಳು ಈ ಕೋರ್ಸ್‌ಗಳನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ. “ಎಲ್ಲಾ ವಿಶ್ವವಿದ್ಯಾಲಯಗಳಿಗೆ ಎಂಫಿಲ್ ಕೋರ್ಸ್‌ಗಳನ್ನು ಮುಂದುವರಿಸಲು ಸೂಚನೆ ನೀಡಲಾಗಿದೆ. ಈ ಕೋರ್ಸ್ ಸ್ಥಗಿತಗೊಳಿಸುವ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿವೆ” ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಮತದಾನ ನಂತರದ ಹಿಂಸಾಚಾರ: ಚುನಾವಣಾ ಆಯೋಗ, ಬಂಗಾಳ ಮತ್ತು ಒಕ್ಕೂಟ ಸರ್ಕಾರಕ್ಕೆ ಸುಪ್ರೀಂನಿಂದ ನೋಟಿಸ್


