ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿಯವರ ಆತ್ಮಕತೆ ಪುಸ್ತಕವಾಗಿ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ವಿಮರ್ಶಕರಾದ ಸುಬಾಷ್ ರಾಜಮಾನೆ ಅವರು ’ನಾನು ಗೌರಿ ಡಾಟ್‌ಕಾಂ’ ಮತ್ತು ’ನ್ಯಾಯಪಥ’ ಪತ್ರಿಕೆಗಾಗಿ ಅಕ್ಕಯ್ ಪದ್ಮಶಾಲಿಯವರ ಜೊತೆಯಲ್ಲಿ ನಡೆಸಿದ ಸಂದರ್ಶನ ಇಲ್ಲಿದೆ. ಪುಸ್ತಕ ಬಿಡುಗಡೆಗೂ ಮುಂಚಿನ ದಿನ, ಕಾರ್ಯಕ್ರಮ ಆಯೋಜನೆಗಾಗಿ ನಡೆದಿದ್ದ ಓಡಾಟಗಳ ನಡುವೆ ತಮ್ಮ ಬ್ಯುಸಿ ದಿನದಂದು ಅಕ್ಕಯ್ ಅವರ ಬದುಕು, ಹೋರಾಟ, ಕಾನೂನು ಸೇರಿದಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಟ್ರಾನ್ಸ್‌ಜೆಂಡರ್ ಸಮುದಾಯ ಅನುಭವಿಸುತ್ತಿರುವ ನೋವು, ಹಿಂಸೆ, ದೌರ್ಜನ್ಯ ಹಾಗೂ ಸಮಾನತೆಯ ಹಕ್ಕುಗಳ ಬಗ್ಗೆ ಅಕ್ಕಯ್ ಇಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಸುಭಾಷ್ ರಾಜಮಾನೆ: ಟ್ರಾನ್ಸ್‌ಜೆಂಡರ್‌ಗಳ ಬೆರಳೆಣಿಕೆಯ ಆತ್ಮಕತೆಗಳು ಕನ್ನಡದಲ್ಲಿ ಬಂದಿವೆ. ನಿಮಗೆ ಆತ್ಮಕತೆಯನ್ನು ಯಾಕೆ ಬರೆಯಬೇಕೆನಿಸಿತು?
ಅಕ್ಕಯ್ ಪದ್ಮಶಾಲಿ: ಸುಪ್ರೀಮ್ ಕೋರ್ಟ್ ತೀರ್ಪು ಬಂದು ಆರೇಳು ವರ್ಷಗಳಾಗಿವೆ. ಇಂದಿನ ಸಾಮಾಜಿಕ ಸ್ಥಿತಿಗತಿ, ಸಮುದಾಯಗಳ ಪರಿಸ್ಥಿತಿ, ಆರ್ಥಿಕ ಸ್ಥಿತಿಗತಿ- ಇವೆಲ್ಲವನ್ನು ಗಮನಿಸಿದರೆ ನಮ್ಮ ಸಮುದಾಯಗಳ ಬದುಕಿನಲ್ಲಿ ಏನೂ ಬದಲಾವಣೆಯಾಗಿಲ್ಲ. ಲೈಂಗಿಕ ಅಲ್ಪಸಂಖ್ಯಾತರ ಮೇಲಿನ ಶೋಷಣೆ, ದೌರ್ಜನ್ಯಗಳ ಕುರಿತು ಕೆಲವು ಪುಸ್ತಕಗಳು ಬಂದಿವೆ. ಆದರೆ ಇದರಿಂದ ಏನು ಫಲಶ್ರುತಿಯಾಗಿದೆ? ಲೈಂಗಿಕ ಅಲ್ಪಸಂಖ್ಯಾತರ ಜೀವನ ಕುರಿತು ಸರ್ಕಾರದ ಪಾತ್ರ ಏನು? ಜವಾಬ್ದಾರಿ ಏನು? ಸಮಾಜದ ನೈತಿಕತೆ ಏನು ಎಂದು ಯೋಚಿಸ್ತಿದ್ದಾಗ ನನ್ನ ಜೀವನದ ಕಥನ ಒಂದು ಮೈಲಿಗಲ್ಲಾಗಬಹುದು ಎಂದು ಯೋಚಿಸಿ ಪುಸ್ತಕ ಬರೆಯಲು ಆರಂಭಿಸಿದೆ.
ಅನೇಕರ ಆತ್ಮಚರಿತ್ರೆಗಳನ್ನು ಓದುತ್ತಿದ್ದಾಗ ನಮ್ಮ ಕುರಿತು ಅಯ್ಯೋ ಪಾಪ ಎನ್ನುವ ಭಾವನೆ ಹುಟ್ಟುತ್ತಿತ್ತು. ಕರುಣೆಯನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನ ಕಾಣಿಸ್ತಿತ್ತು. ಸಮಾಜದ ವ್ಯವಸ್ಥೆಯೊಂದಿಗೆ ಹೋರಾಡಲು ಯಾವ ಪುಸ್ತಕಗಳು ಸಮಾಧಾನವನ್ನು ನೀಡಲಿಲ್ಲ. ಇದುವರೆಗೆ ಬಂದಿರುವ ಲೈಂಗಿಕ ಅಲ್ಪಸಂಖ್ಯಾತರ ಯಾವ ಆತ್ಮಕತೆಗಳು ನನಗೆ ಹೆಚ್ಚು ಪ್ರೇರಣೆಯನ್ನು ನೀಡಿಲ್ಲ.
ಪ್ರ: ಪ್ರೊ. ಡಾಮಿನಿಕ್ ಅವರು ನಿಮ್ಮ ಆತ್ಮಕತೆಯನ್ನು ನಿರೂಪಣೆ ಮಾಡಿದ್ದಾರೆ. ನಿಮ್ಮ ಬದುಕಿನ ಎಲ್ಲಾ ವಿಚಾರಗಳು ಈ ನಿರೂಪಣೆಯಲ್ಲಿ ಬಂದಿದೆಯೇ?
ಅಕ್ಕಯ್: ಪ್ರೊ. ಡಾಮಿನಿಕ್ ಅವರೊಂದಿಗೆ ಕೆಲಸ ಮಾಡಲಿಕ್ಕೆ ಅವಕಾಶ ಸಿಕ್ಕಿರುವುದು ಅಪರೂಪದ ಕ್ಷಣಗಳಲ್ಲಿ ಒಂದು. ಅವರೊಂದಿಗೆ ಕೆಲಸ ಮಾಡುವಾಗಿನ ಸಂದರ್ಭದಲ್ಲಿ ಚರ್ಚೆ, ಕೂಗಾಟ ಕಿರುಚಾಟ, ನಗು, ಅಳು ಎಲ್ಲವನ್ನು ನಾನು ಅನುಭವಿಸಿದ್ದೇನೆ. ಎಲ್ಲವೂ ಪುಸ್ತಕದಲ್ಲಿ ದಾಖಲಾಗಿವೆ. ಪುಸ್ತಕ ಬರೆಯುವ ಕೆಲಸ ನಿನ್ನೆ ಮೊನ್ನೆಯ ವಿಚಾರವಲ್ಲ. ಇದು ನಾಲ್ಕೈದು ವರ್ಷದ ಹಿಂದೆ ಆರಂಭವಾದ ಪ್ರಯತ್ನ. 2020ರಲ್ಲಿ ಪುಸ್ತಕದ ಬರವಣಿಗೆ ಆರಂಭವಾಯಿತು. ಪ್ರೊ.ಡಾಮಿನಿಕ್ ಅವರು ಈ ಪುಸ್ತಕವನ್ನು ಬರೆಯುವ ಸಂದರ್ಭದಲ್ಲಿ ಅಕ್ಷರಶಃ ಅಕ್ಕಯ್ ಪದ್ಮಶಾಲಿಯೇ ಆಗಿದ್ದರು. ನಾನು ಆಗಾಗ ಡೊಮಿನಿಕ್ ಅವರಿಗೆ ಹೇಳುತ್ತಿದ್ದೆ, ನೀವು ಎಡನೇ ಅಕ್ಕಯ್ ಪದ್ಮಶಾಲಿ ಎಂದು.
ಪ್ರ: ನಿಮ್ಮ ಹೆಸರು ’ಅಕ್ಕಯ್ ಪದ್ಮಶಾಲಿ’ ಯಾಕೆ?
ಅಕ್ಕಯ್: ಅಷ್ಟೈಶ್ವರ್ಯ ಗುಣ ಸಂಪನ್ನೆ ದೊಡ್ಮನೆ ಅಕ್ಕಯಮ್ಮ ಎಂಬುದು ನನ್ನ ಮೂಲ ಹೆಸರಾಗಿರಬೇಕಿತ್ತು. ನಾನು ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಸಂದರ್ಭದಲ್ಲಿ ನಮ್ಮ ಸಮುದಾಯದವರೆಲ್ಲ ಒಟ್ಟಿಗೆ ಕೂತು ಯಾವ ಹೆಸರಿಟ್ಟುಕೊಳ್ಳುವುದು ಎಂದು ಚರ್ಚಿಸುತ್ತಿದ್ದೆವು. ಚರ್ಚೆಯಲ್ಲಿ ಶಾಂಭವಿ, ವೈಷ್ಣವಿ, ಜಾಹ್ನವಿ ಎಲ್ಲವೂ ಬಂದು ಹೋದವು. ಹಳೆಯ ಕಾಲದ ಹೆಸರು ನನಗೆ ಇಷ್ಟ ಎಂದು ನನ್ನ ಹೆಸರನ್ನು ಅಕ್ಕಯ್ಯಮ್ಮ ಎಂದು ಮಾಡಿಕೊಂಡೆ. ಆದ್ರೆ ನಮ್ಮ ಸಮುದಾಯದವರಿಗೆ ನಾನು ಅಕ್ಕಯ್ಯಮ್ಮ ಎಂದು ಉಚ್ಚರಿಸಲು ಕಷ್ಟವಾಗುತ್ತಿತ್ತು. ಈಗಲೂ ನಮ್ಮ ಟ್ರಾನ್ಸ್‌ಜೆಂಡರ್ ಸಮುದಾಯದಲ್ಲಿ ಬಹುತೇಕರು ನನ್ನನ್ನು ಅಕ್ಕಯ್ಯಮ್ಮ ಎಂದೇ ಕರೆಯುತ್ತಾರೆ. ಆ ನಂತರ ಅಕ್ಕಯ್ಯಮ್ಮ ಎಂಬುದನ್ನು ಚಿಕ್ಕದಾಗಿ ಅಕ್ಕಯ್ ಎಂದು ಮಾಡಿಕೊಂಡೆ. ಪದ್ಮಶಾಲಿ ಪದ ಉಚ್ಚರಣೆಗೆ ಚೆನ್ನಾಗಿದೆ ಎಂದು ಅಕ್ಕಯ್ ಜೊತೆ ಅದನ್ನು ಸೇರಿಸಿಕೊಂಡೆ. ನೇಕಾರ ಸಮುದಾಯದವರಾದ ನನ್ನ ತಂದೆಯ ಕಡೆಯವರು ನಾನು ಅಧಿಕೃತವಾಗಿ ಅಕ್ಕಯ್ ಪದ್ಮಶಾಲಿ ಎಂದು ನನ್ನ ಹೆಸರನ್ನು ಘೋಷಿಸಿಕೊಂಡಾಗ ಅದನ್ನು ವಿರೋಧಿಸಿದರು. ಪದ್ಮಶಾಲಿ ಜಾತಿಗೆ ನಾನು ಅವಮಾನ ಎಂದು ಅವರು ಭಾವಿಸಿದ್ದರು. ನಾನು ಈ ವಿರೋಧಕ್ಕೆ ಪ್ರತಿರೋಧದ ಧ್ವನಿ ಎತ್ತಲೇಬೇಕಾಯಿತು. ಅದಾದಮೇಲೆ ನನ್ನ ಎಲ್ಲಾ ಅಧಿಕೃತ ದಾಖಲೆಯಲ್ಲೂ ಅಕ್ಕಯ್ ಪದ್ಮಶಾಲಿ ಎಂದು ನನ್ನ ಹೆಸರನ್ನು ದಾಖಲಿಸಿದ್ದೇನೆ. ನನ್ನ ತಂದೆ ತಾಯಿಯವರು ನನ್ನ ಹೆಸರನ್ನು ವಿರೋಧಿಸಲಿಲ್ಲವಾದರೂ ನನ್ನ ಜಾತಿಯ ಇತರರು ನನ್ನ ವಿರುದ್ಧವಿದ್ದರು. ಇದೇ ಕಾರಣಕ್ಕೆ ನನ್ನ ತಂದೆ ತಾಯಿಗೂ ಅವರು ಕಿರುಕುಳ ನೀಡುತ್ತಿದ್ದರು.
ಈಗ ಅಮೆರಿಕ, ಜಪಾನ್, ನೇಪಾಳ ಸೇರಿದಂತೆ ವಿದೇಶಗಳಿಗೆ ಹೋದಾಗ ಮಿಸ್ ಪದ್ಮಶಾಲಿ ಎಂದು ಕರೆಯುತ್ತಾರೆ. ಸಮುದಾಯದಲ್ಲಿ ಕೆಲವರು ಪದ್ಮ ಎಂದೂ ಕೆಲವರು ಅಕ್ಕಯ್ ಎಂದೂ ಕರೆಯುತ್ತಾರೆ.
ಪ್ರ: ನಿಮ್ಮ ಪುಸ್ತಕದ ಶೀರ್ಷಿಕೆ ಅಕ್ಕಯ್ ಎಂದಿದೆ. ಈ ಕುರಿತು ಏನು ಹೇಳ್ತೀರಿ?
ಅಕ್ಕಯ್: ನನ್ನ ಪುಸ್ತಕದ ಶೀರ್ಷಿಕೆ ’ಕರುಣೆಗೊಂದು ಸವಾಲು’ ಎಂದು ಇರಬೇಕಿತ್ತು. ಕೆಲವು ಕಾರಣಗಳಿಂದ ಅಕ್ಕಯ್ ಎಂದಾಗಿದೆ. ಪುಸ್ತಕ ನನ್ನ ಸ್ವಕೇಂದ್ರಿತ ಆಗುವುದನ್ನು ನಾನು ಬಯಸುವುದಿಲ್ಲ. ಅದು ಚಳವಳಿ ಮತ್ತು ಸಮುದಾಯ ಕೇಂದ್ರವಾಗಬೇಕು. ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನೂ ಇದೇ ನಿಟ್ಟಿನಲ್ಲಿ ರೂಪಿಸಲಾಗಿದೆ.
ಪ್ರ: ನೀವು ಮೊದಲು ಜಗದೀಶ ಆಗಿದ್ರಿ. ನಿಮ್ಮ ಮನಸ್ಸಿನಲ್ಲಿ ಯಾವಾಗ ಹೆಣ್ಣಾಗಬೇಕು ಎಂಬ ಬಯಕೆ ಹುಟ್ಟಿತು? ಯಾವಾಗ ಹೆಣ್ಣಿನ ಮನಸ್ಸಿನ ತುಮುಲಗಳು ಆರಂಭವಾದವು?
ಅಕ್ಕಯ್: ನನ್ನ ಅಮ್ಮನಿಗೆ ಗಂಡು ಮಗು ಬೇಕು ಎಂದು ಬಹಳ ಆಸೆ ಇತ್ತು. ಕೋಲಾರದ ಚಿಂತಾಮಣಿ ಬಳಿ ತಪ್ತೀಶ್ವರನ ಬೆಟ್ಟ ಇದೆ. ಅಲ್ಲಿ ನನ್ನ ಅಜ್ಜಿ ನನ್ನ ತಾಯಿಗೆ ಗಂಡು ಮಗು ಹುಟ್ಟಲಿ ಎಂದು ಹರಕೆ ಹೊತ್ತಿದ್ದರು. ಆ ಕಾರಣಕ್ಕೆ ನನಗೆ ಜಗದೀಶ ಎಂದು ಈಶ್ವರನ ಹೆಸರಿಟ್ಟರು. ಜಗದೀಶ ಹೆಸರಿಟ್ಟಿದ್ದರಿಂದ ನೀನು ಅರ್ಧನಾರೀಶ್ವರನಾದೆ ಎಂದು ಅನೇಕರು ಟೀಕೆ ಮಾಡಿದ್ದಾರೆ.
ಐದನೇ ವರ್ಷದಿಂದ ಎಂಟನೇ ವರ್ಷದ ಹೊತ್ತಿಗೆ ನನ್ನಲ್ಲಿ ಹೆಣ್ಣಿನ ಭಾವನೆಗಳು ಆರಂಭವಾದವು. ಗಂಡು ಮಗುವಿನ ಸಂಭ್ರಮದಲ್ಲಿದ್ದ ತಂದೆ ತಾಯಿಗೆ ನಾನು ಅದರ ವಿರುದ್ಧ ಹೋಗಿದ್ದು ಅವರಿಗೆ ದೊಡ್ಡ ಆಘಾತವಾಗಿತ್ತು. ಇಷ್ಟು ವರ್ಷಗಳ ಹೋರಾಟದ ಫಲವಾಗಿ ಈಗೊಂದು 5 ವರ್ಷಗಳ ಹಿಂದೆ ನನ್ನ ತಾಯಿ ನನ್ನನ್ನು ಮಗಳೆಂದೇ ಒಪ್ಪಿಕೊಂಡಿದ್ದಾರೆ.
ಪ್ರ: ಗಂಡಿನಿಂದ ಹೆಣ್ಣಾಗುವ ಪ್ರಕ್ರಿಯೆಯಲ್ಲಿ ನೀವು ಹೆಚ್ಚು ತೊಂದರೆ ಅನುಭವಿಸಿದ್ದು ಯಾವಾಗ?
ಅಕ್ಕಯ್: ಶಾಲೆ, ಸ್ನೇಹಿತರು, ಮನೆ ಎಲ್ಲಾ ಕಡೆಯಲ್ಲೂ ವಿಭಜನೆಯಾಗುತ್ತಾ ಹೋಗುತ್ತೆ. ನಂತರದಲ್ಲಿ ಒಪ್ಪಿಕೊಳ್ಳದ ವಾತಾವರಣ ನಿರ್ಮಾಣವಾಗುತ್ತಾ ಹೋಯಿತು. ನಾವಿವತ್ತು ಬದುಕಿದೀವಿ ಅಂದ್ರೆ ಸರಿ ಇದ್ದೀವಿ ಎನ್ನುವ ನಂಬಿಕೆಯ ಕಾರಣಕ್ಕೆ ಬದುಕಿದ್ದೀವಿ.
ಪ್ರ: ನಿಮ್ಮ ಸಮುದಾಯದಿಂದ ಸಾಕಷ್ಟು ಜನರು ಭಿಕ್ಷಾಟನೆಯಲ್ಲಿದ್ದಾರೆ ಮತ್ತು ಲೈಂಗಿಕ ಕಾರ್ಯಕರ್ತೆಯರಾಗಿದ್ದಾರೆ. ಅವರ ಜೀವನವನ್ನು ಹೇಗೆ ಪರಿವರ್ತಿಸಬಹುದು ಎಂದು ನಿಮಗೆ ಅನ್ನಿಸುತ್ತದೆ?
ಅಕ್ಕಯ್: ಅವರ ಜೀವನವನ್ನು ಪರಿವರ್ತನೆ ಮಾಡಬೇಕು ಎಂಬ ವಾದವನ್ನು ನಾನು ಒಪ್ಪಲಿಕ್ಕೆ ತಯಾರಿಲ್ಲ. ಲೈಂಗಿಕ ವೃತ್ತಿಯನ್ನು ನಾವು ಒಪ್ಪಿಕೊಳ್ಳಬೇಕು. ಭಿಕ್ಷಾಟನೆಯನ್ನು ಹಲವರು ಹಲವಾರು ರೀತಿಯಲ್ಲಿ ನಡೆಸುತ್ತಾರೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಭಿಕ್ಷಾಟನೆ ನಡೆಯುತ್ತಲೇ ಇದೆ. ರಾಮ ಮಂದಿರದ ಹೆಸರಿನಲ್ಲಿ ನಡೆಯುತ್ತಿರುವುದು ಏನು? ನಾವು ನಮ್ಮ ಸಮುದಾಯದ ಅಸ್ತಿತ್ವದ ಹೆಸರಿನಲ್ಲಿ ಭಿಕ್ಷಾಟನೆ ನಡೆಸುತ್ತಿದ್ದೇವೆ. ಮದುವೆ, ಗೃಹಪ್ರವೇಶ ಇತರ ಕಾರ್ಯಕ್ರಮದಲ್ಲಿ ನಮಗೆ ಹಣ ನೀಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಸಮಾಜದಲ್ಲಿದೆ. ಬೆಂಗಳೂರಿನಂತಹ ನಗರದ ಸಿಗ್ನಲ್ಲುಗಳಲ್ಲಿ ನಮ್ಮವರು ಭಿಕ್ಷೆ ಕೇಳುತ್ತಾರೆ. ಇದಕ್ಕೆ ನನ್ನ ಸಹಮತ ಇಲ್ಲ. ಅಂಗಡಿಗಳಲ್ಲಿ ಭಿಕ್ಷೆ ಕೇಳುವ ಸಂಪ್ರದಾಯ ಇದೆ. ಈಗ ನಗರದಲ್ಲಿ ಮಾಲ್‌ಗಳು ಹೆಚ್ಚಾಗಿ ನಮ್ಮವರಿಗೆ ಅಲ್ಲಿ ಪ್ರವೇಶವಿಲ್ಲ. 12ನೇ ಶತಮಾನದಿಂದಲೂ ಇತಿಹಾಸವಿದೆ. ಪುರಾತನ ಸಂಸ್ಕೃತಿ ನಮ್ಮದು. ರಾಮಾಯಣ ಮಹಾಭಾರತ ಏನು ಹೇಳುತ್ತದೆ ಎನ್ನುವುದಕ್ಕಿಂತ ನಾವು ತತ್‌ಕ್ಷಣದ ಸಂದರ್ಭಗಳಿಗೆ ಹೇಗೆ ಸ್ಪಂದಿಸುತ್ತೇವೆ ಎಂಬುದು ಬಹಳ ಮುಖ್ಯ. ಯಾರಾದರೂ ನಮಗೆ ಹೊಡೆದರೆ, ನಮ್ಮ ಮೇಲೆ ಶೋಷಣೆ ಮಾಡಿದ್ರೆ ಅದಕ್ಕೆ ನಮ್ಮ ಪ್ರತಿರೋಧವಿರುತ್ತದೆ.

ಪ್ರ: ನಿಮ್ಮ ಸಮುದಾಯದವರನ್ನು ಮಂಗಳಮುಖಿಯರೆಂದು ಹಾಗೂ ತೃತೀಯ ಲಿಂಗಿಗಳೆಂದು ಕರೆಯುವುದು ಎಷ್ಟರಮಟ್ಟಿಗೆ ಸರಿ?
ಅಕ್ಕಯ್: ತೃತೀಯ ಲಿಂಗಿ ಅಥವಾ ಮಂಗಳಮುಖಿ ಈ ಎರಡೂ ಪದಗಳಿಗೆ ನಾವು ಹತ್ತಿರದಲ್ಲಿಲ್ಲ. ತೃತೀಯ ಲಿಂಗಿ ಅಂದರೆ ಪ್ರಥಮ, ದ್ವಿತೀಯ ಅಂತ ಬರುತ್ತದೆ. ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಅಂತ ಏನೂ ಇಲ್ಲ. ಇರುವುದು ಮನುಷ್ಯರು ಮತ್ತು ವೈವಿಧ್ಯತೆ. ಆ ವೈವಿಧ್ಯತೆಯನ್ನು ಒಪ್ಪಿಕೊಳ್ಳಬೇಕು. ಲಿಂಗ ಪರಿವರ್ತನೆಗೊಂಡ ಸಮುದಾಯ ಅಂತ ಕರೆಯಬೇಕು. ಮಂಗಳಮುಖಿ ಎಂಬ ಪದ ಸ್ತ್ರೀವಾದಕ್ಕೆ ವಿರುದ್ಧವಾದದ್ದು. ಸಮಾಜದಲ್ಲಿ ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ ಆಚರಣೆಗಳು. ಈ ಸಂದರ್ಭದಲ್ಲಿ ನಟ ಚೇತನ್ ಬ್ರಾಹ್ಮಣ್ಯದ ಕುರಿತಾದ ಚರ್ಚೆಯನ್ನು ಆರಂಭಿಸಿದ್ದಾರೆ.
ಪ್ರ: ನಿಮ್ಮ ಆತ್ಮಕತೆಯ ಇಂಗ್ಲಿಷ್ ಅನುವಾದದ ಬಿಡುಗಡೆ ಯಾವಾಗ? ಅದರ ಕುರಿತಾಗಿ ಸ್ವಲ್ಪ ಹೇಳಬಹುದಾ?
ಅಕ್ಕಯ್: ಬರುವ ನವೆಂಬರ್ ತಿಂಗಳಿನಲ್ಲಿ ನಡೆಯುವ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಯನ್ನು ಮಾಡುವ ಆಲೋಚನೆ ಇದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಅಮೆರಿಕದಲ್ಲಿ ಕೂಡ ನನ್ನ ಆತ್ಮಕತೆಯ ಇಂಗ್ಲಿಷ್ ಆವೃತ್ತಿ ಬಿಡುಗಡೆಯಾಗುತ್ತಿದೆ. ಪ್ರೊ. ಗೌರಿ ಈ ಪುಸ್ತಕದ ನಿರೂಪಣೆಯನ್ನು ಮಾಡಿದ್ದಾರೆ. ಗೌರಿ ಅವರು ಲಿಂಗತ್ವದ ಕುರಿತು ಬ್ರಾಂಡೀಸ್ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಾರೆ. ಈ ಪುಸ್ತಕ ಮೊದಲು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಇಂಗ್ಲಿಷ್‌ನಲ್ಲಿ ’ಎ ಚಾಲೆಂಜ್ ಟು ಸಿಂಪತಿ’ ಎಂದು ಶೀರ್ಷಿಕೆ ಕೊಡಲಾಗಿದೆ. ದೆಹಲಿಯ ಜುಬಾನ್ ಪಬ್ಲಿಕೇಷನ್ ಈ ಆತ್ಮಚರಿತ್ರೆಯನ್ನು ಹೊರತರುತ್ತಿದೆ.
ಪ್ರ: ನೀವು ಈ ಮೊದಲು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿರುವ ಬಗ್ಗೆ ಹೇಳಿರಿ.
ಅಕ್ಕಯ್: 2016ರ ಡಿಸೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಲೈಂಗಿಕ ಅಲ್ಪಸಂಖ್ಯಾತರ ವಿರುದ್ಧ ಕಾನೂನು ತರಲು ಹೊರಟಾಗ ನಾವು ಸೋನಿಯಾಗಾಂಧಿ ಅವರನ್ನು ಭೇಟಿಯಾಗಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದೆವು. ಶಶಿ ತರೂರ್ ಅವರ ಮೂಲಕ ಸಂಸತ್‌ನಲ್ಲಿ ಕಾಯ್ದೆಗೆ ವಿರೋಧವನ್ನು ತರುವ ಪ್ರಯತ್ನ ಮಾಡಿದೆವು. 2018ರಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ರಾಹುಲ್ ಗಾಂಧಿಯವರು ನಮ್ಮ ಸಮುದಾಯದ ಪರವಾಗಿ ನಿಂತಿದ್ದರು. ಇಂದಿರಾಗಾಂಧಿಯವರ ಕಾಲದಿಂದಲೂ ಕಾಂಗ್ರೆಸ್ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಳನ್ನು ಗುರುತಿಸಿ ಬೆಂಬಲಿಸಿದೆ. ಅಕ್ಕಯ್ ಜೀವನ ಕೇವಲ ಅಕ್ಕಯ್ ಜೀವನ ಅಲ್ಲ. ಇದು ಸಮುದಾಯದ ಹೋರಾಟ. ಈ ಹೋರಾಟಕ್ಕೆ ರಾಜಕೀಯ ಆಯಾಮ ಬೇಕೇ ಬೇಕು. ಈ ಕಾರಣದಿಂದ ಸೋನಿಯಾ ಗಾಂಧಿಯವರ ಕೈಯಿಂದ ಪುಸ್ತಕವನ್ನು ಬಿಡುಗಡೆ ಮಾಡಿಸ್ತಿದ್ದೇವೆ.
ಪ್ರ: ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲಿಂಗ ಪರಿವರ್ತನೆಗೊಂಡ ನಿಮ್ಮ ಸಮುದಾಯದವರ ಬಗ್ಗೆ ಈ ನಮ್ಮ ಸಮಾಜವು ಹೇಗೆ ಬದಲಾವಣೆ ಆಗಬೇಕೆಂದು ತಾವು ಬಯಸುತ್ತೀರಿ?
ಅಕ್ಕಯ್: ನಮ್ಮ ಸಮುದಾಯದಲ್ಲಿ ಪರಿವರ್ತನೆ ಆಗಬೇಕು ಅನ್ನುವದಕ್ಕಿಂತ ಬದಲಾವಣೆಯನ್ನು ವಿಶಾಲವಾದ ಅರ್ಥದಲ್ಲಿ ನೋಡಬೇಕು. ಕರಿಯರು-ಬಿಳಿಯರು, ಶ್ರೀಮಂತರು-ಬಡವರು, ಮೇಲ್ಜಾತಿ-ಕೆಳಜಾತಿ ಎಂಬುದನ್ನು ನಮ್ಮ ಸಮಾಜದಿಂದ ಹೋಗಲಾಡಿಸಬೇಕು. ಇದೆಲ್ಲವನ್ನು ಒಳಗೊಂಡು ನಾನು ಹೋರಾಟವನ್ನು ನಡೆಸುತ್ತಿದ್ದೇನೆ. ಟ್ರಾನ್ಸ್‌ಜೆಂಡರ್ ಸಮುದಾಯದವರನ್ನು ನೋಡಿದ ತಕ್ಷಣ ಶೋಷಣೆಗೆ ತಿರಸ್ಕಾರಕ್ಕೆ ಒಳಗಾಗುತ್ತದೆ. ಧ್ವನಿಯಿಂದ, ಮಾತಿಂದ, ಶೈಲಿಯಿಂದ ನಮ್ಮನ್ನು ಉಳಿದವರಿಗಿಂತ ಬೇರೆಯಾಗಿ ನೋಡುವ ವಾತಾವರಣ ಸಮಾಜದಲ್ಲಿದೆ. ಮೊದಲು ಇದು ತೊಲಗಬೇಕು. ನಮ್ಮ ಸಮುದಾಯದ
ಕುರಿತಂತೆ ಸಮಾಜದ ದೃಷ್ಟಿ ಬದಲಾಗಬೇಕು. ನಾವು ಕೂಡ ಮನುಷ್ಯರು ಎಂಬ ಗೌರವ ಸಿಗಬೇಕು.

ಪ್ರ: ಟ್ರಾನ್ಸ್‌ಜೆಂಡರ್ ಸಮುದಾಯದ ಒಳಗಿನಿಂದ ಯಾವ ರೀತಿಯ ಬದಲಾವಣೆ ಅಗತ್ಯವಿದೆ?
ಅಕ್ಕಯ್: ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಸುಧಾರಣೆಯಾಗಬೇಕು. ಜೊತೆಗೆ ಟ್ರಾನ್ಸ್‌ಜೆಂಡರ್ ಸಮುದಾಯದ ಕುರಿತಾಗಿರುವ ದೇಶದ ಕಾನೂನುಗಳಲ್ಲಿ ಬದಲಾವಣೆಯಾಗಬೇಕು. ಉದಾಹರಣೆಗೆ ಹೊಸದಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಟ್ರಾನ್ಸ್‌ಜೆಂಡರ್ ಕಮ್ಯುನಿಟಿಯ ಉಲ್ಲೇಖ ಎಲ್ಲಿದೆ?
ಮೂಲಭೂತವಾಗಿ ಶಿಕ್ಷಣ ಅಂದರೆ ಏನು? ಬರೀ ಪಾಠ ಮಾಡುವುದು ಶಿಕ್ಷಣ ಅಲ್ಲ. ದಮನಿತ ಸಮುದಾಯದ ವ್ಯಕ್ತಿಗಳನ್ನು ಕರೆಸಿ ಮಾತಾಡಿಸುವಂತದ್ದು ಶಿಕ್ಷಣ. ಬುಡಕಟ್ಟು ಸಮುದಾಯ, ದಲಿತ ಸಮಾಜ
ಸೇರಿದಂತೆ ಎಷ್ಟೋ ಸಮುದಾಯಗಳನ್ನು ಇದರಿಂದ ಹೊರಗಿಡಲಾಗಿದೆ. ಇಂದು ಬೇರೆ ಬೇರೆ ಸಮುದಾಯದವರನ್ನು ಮನೆಗೆ ಸೇರಿಸದಂತಹ ಕೆಟ್ಟ ವ್ಯವಸ್ಥೆ ನಮ್ಮ ಸಮಾಜದಲ್ಲಿದೆ. ಅಂದ್ರೆ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಶಿಕ್ಷಣದಿಂದ ಮೊದಲು ಇದನ್ನು ಹೋಗಲಾಡಿಸಬೇಕು.
ಭಾರತ ವೈವಿಧ್ಯಮಯವಾದ ದೇಶ. ಇಲ್ಲಿ ಸಾಕಷ್ಟು ವೈವಿಧ್ಯತೆ ಮತ್ತು ಭಿನ್ನತೆಗಳಿವೆ. ಈ ಭಿನ್ನತೆಗಳು ಮತ್ತು ಅಭಿಪ್ರಾಯ ಭೇದವನ್ನು ಗೌರವಿಸುವ ಕಾರ್ಯವಾಗಬೇಕು.
ಗೌರಿ ಲಂಕೇಶ್ ಅವರನ್ನು ಇವರು ಹೇಗೆ ಹತ್ಯೆ ಮಾಡಿದರು? ಗೌರಿ ಲಂಕೇಶ್ ಪತ್ರಿಕೋದ್ಯಮದಲ್ಲಿ ಮೊಟ್ಟ ಮೊದಲು ನಮ್ಮನ್ನು ಬೆಂಬಲಿಸಿದ ವ್ಯಕ್ತಿ. ಅಂತಹ ಗೌರಿಯನ್ನು ಹತ್ಯೆ ಮಾಡಿದ್ರು. ಕಲ್ಬುರ್ಗಿ, ಪನ್ಸಾರೆ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬದಲಾವಣೆ ಸಾಧ್ಯವೇ ಇರದಂತಹ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಜವಾಬ್ದಾರರು ಯಾರು? ಇಂದಿನ ಈ ವಾತಾವರಣ ನಮ್ಮ ಸಮುದಾಯಕ್ಕೆ ನೇರ ಪೆಟ್ಟು ನೀಡುತ್ತಿದೆ. ಈ ತಾರತಮ್ಯ ಪರಿಸ್ಥಿತಿ ಬದಲಾಗಬೇಕು. ವೈವಿಧ್ಯತೆಯನ್ನು ಗೌರವಿಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಪದ್ಧತಿ ಇರಬೇಕು. ಅಧಿಕಾರಶಾಹಿ ರಾಜಕಾರಣ ಕೊನೆಯಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಕೊಲೆ, ಸುಲಿಗೆ, ಮರ್ಯಾದಾ ಹತ್ಯೆಯಂತಹ ಘಟನೆಗಳು ನಡೆಯುತ್ತಿವೆ. ಟ್ರಾನ್ಸ್‌ಜೆಂಡರ್ ಸಮುದಾಯ ಕೂಡ ಮರ್ಯಾದಾ ಹತ್ಯೆಗೆ ಒಳಗಾಗ್ತಿದೆ. ಹೆಣ್ಣು ಮಗು ಆಯ್ತು ಅಂದ್ರೆ ಸಾಯಿಸುವ ಪ್ರವೃತ್ತಿ ಸಮಾಜದಲ್ಲಿದೆ.
ಪ್ರ: ಸರ್ಕಾರದ ಯೋಜನೆಗಳು, ನೀತಿ ನಿರೂಪಣೆಯಲ್ಲಿ ನಿಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಲು ಯಾಕೆ ಸಾಧ್ಯವಾಗುತ್ತಿಲ್ಲ?
ಅಕ್ಕಯ್: ಸರಕಾರಗಳು ಟ್ರಾನ್ಸ್‌ಜೆಂಡರ್ ಸಮುದಾಯದ ಕುರಿತು ಆಳವಾದ ಚಿಂತನೆಯನ್ನು ಮಾಡಿಲ್ಲ. ಇಂದಿರಾಗಾಂಧಿ ಒಂದಷ್ಟು ನಮ್ಮ ಸಮುದಾಯದ ಪರವಾಗಿ ಕೆಲಸ ಮಾಡಿದರು. ಅವರ ನಂತರ ಟ್ರಾನ್ಸ್‌ಜೆಂಡರ್ ಸಮುದಾಯದ ಪರವಾಗಿ ಯಾರೂ ಅಷ್ಟು ಕೆಲಸ ಮಾಡಿಲ್ಲ. ಐಪಿಸಿ ಸೆಕ್ಷನ್ ೩೭೭ ಅನ್ನು ದೆಹಲಿ ಹೈಕೋರ್ಟ್ ರದ್ದು ಮಾಡಿದ ಮೇಲೆ, ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ ಆದೇಶವನ್ನು ರದ್ದು ಮಾಡಿದಾಗ, ಭಾರತದ ಸಂಸತ್ತು ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ವಿರುದ್ಧವಾಗಿರುವ ಕಾನೂನನ್ನು ರದ್ದುಪಡಿಸಲು ಒಪ್ಪದಿದ್ದಾಗ ಯಾವ ರಾಜಕೀಯ ಪಕ್ಷಗಳೂ ನಮ್ಮನ್ನು ಬೆಂಬಲಿಸಲು ಮುಂದೆ ಬರಲಿಲ್ಲ.
ನಮ್ಮಲ್ಲಿನ ರಾಜಕಾರಣಿಗಳಿಗೆ ಟ್ರಾನ್ಸ್‌ಜೆಂಡರ್ ಸಮುದಾಯದ ಕುರಿತು ಆಳವಾದ ತಿಳಿವಳಿಕೆ ಇಲ್ಲ. ಇದು ಒಂದು ಪಾಶ್ಚಿಮಾತ್ಯ ಪದ್ಧತಿ ಎಂದುಕೊಂಡಿದ್ದಾರೆ. ಈ ಎಲ್ಲ ಕಾರಣದಿಂದ ನಾನು ರಾಜಕೀಯ ಪ್ರವೇಶ ಮಾಡಬೇಕಾಯಿತು. ನಾನಿಲ್ಲಿ ಕೇವಲ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಮಾತನಾಡುತ್ತಿಲ್ಲ. ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಎಲ್ಲ ಸಮುದಾಯದ ಬಗ್ಗೆ ಮಾತನಾಡಲು ಬಯಸುತ್ತೇನೆ. ಸಾಮಾಜಿಕ ನ್ಯಾಯಕ್ಕಾಗಿ ಎಲ್ಲ ಸಮುದಾಯಗಳ ಜೊತೆ ಒಂದಾಗಿ ನಾವೂ ಕೂಡ ಶ್ರಮಿಸಿಬೇಕು. ಆ ನಿಟ್ಟಿನಲ್ಲಿ ನಾವು ಯೋಚಿಸಬೇಕು.
ಪ್ರ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು, ಲೆಸ್ಬಿಯನ್‌ಗಳು, ಗೇಗಳು, ಟ್ರಾನ್ಸ್‌ಜೆಂಡರ್ ಹೀಗೆ ಎಲ್ಲಾ ಸಮುದಾಯಗಳಿಗೂ ಸಮಾನತೆ ಸಿಕ್ಕಿದೆಯೇ?
ಅಕ್ಕಯ್: ಅಂಬೇಡ್ಕರ್ ಅವರು ಬರೆದಿರುವ ನಮ್ಮ ಸಂವಿಧಾನದಲ್ಲಿ ಸಮಾನತೆಯ ತತ್ವಗಳ ಅನುಷ್ಠಾನಕ್ಕೆ ರಾಜಕೀಯ ಹೋರಾಟ ಬಹಳ ಮುಖ್ಯ. ಸಂವಿಧಾನವನ್ನು ಅನುಷ್ಠಾನ ಮಾಡುವುದು ಮೂರು ಅಂಗಗಳು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ. ಇವುಗಳ ಜೊತೆಗೆ ಸಮೂಹ ಮಾಧ್ಯಮಗಳು ನಾಲ್ಕನೇ ಅಂಗಗಳಾಗಿ ಸೇರಿಕೊಳ್ಳುತ್ತೇವೆ. ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಜಾರಿಗೋಳಿಸುವಲ್ಲಿ ಸಮಾಜ ಕೂಡ ಅತಿ ಮುಖ್ಯ ಪಾತ್ರ ವಹಿಸುತ್ತದೆ. 2018ರ ತೀರ್ಪಿನಲ್ಲಿ ಸಂವಿಧಾನದ ನೈತಿಕತೆಗಿಂತ ದೊಡ್ಡದಾದ
ನೈತಿಕತೆ ದೇಶದಲ್ಲಿ ಮತ್ತೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ನಮ್ಮಲ್ಲಿ ರಾಜಕೀಯ ಇಚ್ಛಾಶಕ್ತಿ ಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸಬೇಕು.
ಪ್ರ: ನೀವು ಬೇರೆ ಬೇರೆ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದೀರಿ. ಹೋರಾಟಗಳಲ್ಲಿ ಇದ್ದೀರಿ. ನಿಮ್ಮದೇ ಆದ ’ಒಂದೆಡೆ’ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದೀರಿ. ಹೋರಾಟದ ದೃಷ್ಟಿಯಿಂದ ನಿಮ್ಮ ಸಂಘಟನೆ ಯಾವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ?
ಅಕ್ಕಯ್: ಇಷ್ಟು ವರ್ಷ ಸಮುದಾಯದೊಳಗೆ ಹೋರಾಡಿದ್ದೇವೆ. ಈಗ ಸಮಾಜದ ಇತರ ಚಳವಳಿಗಳ ಜೊತೆ ಭಾಗಿಯಾಗಬೇಕು ಮತ್ತು ಮುಖಾಮುಖಿಯಾಗಬೇಕು. ನಮ್ಮ ಸಮುದಾಯ ಮತ್ತು ನಾಗರಿಕ ಸಮಾಜದ ನಡುವಿನ ಸೇತುವೆಯಾಗಿ ನಮ್ಮ ’ಒಂದೆಡೆ’ ಸಂಘಟನೆ ಕೆಲಸ ಮಾಡುತ್ತಿದೆ. ನಾನು ಆ ನಿಟ್ಟಿನಲ್ಲಿಯೇ ಮುಂದುವರೆಯುತ್ತೇನೆ.
ಪ್ರ: ಅಕ್ಕಯ್ ಪದ್ಮಶಾಲಿ ಬೇರೆ ಬೇರೆ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪರವಾದ ಚಳವಳಿಯಲ್ಲಿ ಭಾಗವಹಿಸಿದ ದೊಡ್ಡ ಹೋರಾಟಗಾರ್ತಿ ಎಂಬ ಚಿತ್ರಣ ಕಣ್ಮುಂದೆ ಬರುತ್ತದೆ. ನಿಮ್ಮ ಪ್ರಕಾರ ವಾಟ್ ಈಸ್ ದ ಟ್ರು ಐಡೆಂಟಿಟಿ ಆಫ್ ಅಕ್ಕಯ್ ಪದ್ಮಶಾಲಿ?
ಅಕ್ಕಯ್: ಅಕ್ಕಯ್ ಕೇವಲ ಒಂದು ವ್ಯಕ್ತಿತ್ವ ಅಲ್ಲ. ಚಳವಳಿಯ ಭಾಗ. ಅಕ್ಕಯ್ ಎಲ್ಲರಂತೆಯೇ ಒಬ್ಬ ಮನುಷ್ಯಳು. ಆದರೆ ಅವಳ ಸುತ್ತ ಸಾಕಷ್ಟು ವಿಚಾರಗಳಿವೆ. ಚಿಂತನೆಗಳಿವೆ. ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಹೇಗೆ ಕರಿಯರ ಪರವಾಗಿ ಹೋರಾಡಿದ್ರೋ, ಅಮೆರಿಕದಲ್ಲಿ ಅಬ್ರಹಾಂ ಲಿಂಕನ್ ಯಾವ ರೀತಿಯಲ್ಲಿ ಶೋಷಿತರ ಪರವಾಗಿ ನಿಂತರೋ ಅವೆಲ್ಲ ಇತಿಹಾಸ ನಮ್ಮ ಬೆನ್ನಿಗಿವೆ. ಅಂಬೇಡ್ಕರ್, ಪೆರಿಯಾರ್, ಬಸವಣ್ಣ ಹೀಗೆ ಸಮಾಜದ ಒಳಿತಿಗಾಗಿ, ಸಮಾನತೆಗಾಗಿ ದುಡಿದ ಸಾಕಷ್ಟು ಜನರ ಪ್ರೇರಣೆ ನಮ್ಮ ಜೊತೆಗಿದೆ. ಅಕ್ಕಯ್ ಇಂತಹ ಒಂದು ಹೋರಾಟದ ಚಳುವಳಿಯ ಭಾಗ. ಸಮಾಜ ಮತ್ತು ಸಮುದಾಯದೊಳಗೆ ಅಕ್ಕಯ್ ಕೂಡ ಒಬ್ಬಳು ಅಷ್ಟೇ! ಆದರೆ ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ.
ಪ್ರ: ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ, ಶೋಷಿತರ ಪರವಾಗಿ, ಟ್ರಾನ್ಸ್‌ಜೆಂಡರ್ ಸಮುದಾಯದ ಪರವಾಗಿ ಹೋರಾಡುತ್ತಿರುವ, ಈ ಚಳವಳಿಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ನಿಮಗೆ ’ನ್ಯಾಯಪಥ’ ಪತ್ರಿಕೆಯ ಪರವಾಗಿ ಧನ್ಯವಾದಗಳು ಮೇಡಂ.
ಅಕ್ಕಯ್: ಗೌರಿ ಲಂಕೇಶ್ ಅವರ ಹತ್ಯೆಯ ನಂತರದಲಿಯೂ ’ನ್ಯಾಯಪಥ’ ಪತ್ರಿಕೆಯು ಅವರ ಸಮಾತೆಯ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿರುವುದು ಸಂತೋಷದ ವಿಚಾರ. ಇದು ಶೋಷಿತರ ಪರವಾದ ಮುಖ್ಯ ಅಸ್ತ್ರವಾಗಿದೆ. ನಮಸ್ಕಾರಗಳು.
(ಅಕ್ಕಯ್ ಪದ್ಮಶಾಲಿಯವರ ಆತ್ಮಕತೆ ’ಅಕ್ಕಯ್’ ಭಾರತೀಯ ವಿದ್ಯಾಭವನದಲ್ಲಿ ದಿನಾಂಕ 28-06-2021ರಂದು ಸೋಮವಾರ ಬಿಡುಗಡೆಯಾಗಿದೆ. ಅವರ ಆತ್ಮಕತೆ ಇನ್ನಷ್ಟು ಜನರಿಗೆ ಹೋರಾಟಕ್ಕೆ ಪ್ರೇರಣೆಯನ್ನು ನೀಡಲಿದೆ. ಸಮಾಜದಲ್ಲಿನ ಶೋಷಣೆಯ ವಿರುದ್ಧದ ಅಕ್ಕಯ್ ಅವರ ಹೋರಾಟ ಹೀಗೆ ಮುಂದುವರೆಯಲಿ. ಅಕ್ಕಯ್ ಅವರು ಟ್ರಾನ್ಸ್‌ಜೆಂಡರ್ ಸಮುದಾಯದ ಜೊತೆ ನಿಲ್ಲಲಿ ಎಂಬುದು ನಮ್ಮೆಲ್ಲರ ಆಶಯ. ಅಕ್ಕಯ್ ಪದ್ಮಶಾಲಿಯವರೂ ’ನ್ಯಾಯಪಥ’ ಪತ್ರಿಕೆಯ ಓದುಗರಾಗಿದ್ದು ಪತ್ರಿಕೆಯ ಶೋಷಿತರ ಪರವಾದ ಧ್ವನಿ ಇನ್ನಷ್ಟು ಪ್ರಬಲವಾಗಿ ಮೊಳಗಲಿ ಎಂದು ಹಾರೈಸಿ ತಮ್ಮ ಮುಂದಿನ ಕೆಲಸಗಳಿಗೆ
ಅಣಿಯಾದರು.)
ಸಂದರ್ಶಕರು: ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು


