ಮೈಸೂರಿನ ಎನ್‌ಟಿಎಂ ಶಾಲೆ ದೇಶದ ಮೊದಲ ಹೆಣ್ಣುಮಕ್ಕಳ ಶಾಲೆ ಎಂಬ ಖ್ಯಾತಿಯನ್ನು ಪಡೆದಿದೆ. ಶತಮಾನದ ಇತಿಹಾಸವಿರುವ ಈ ಕನ್ನಡ ಶಾಲೆಯನ್ನು ಕೆಡವಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ಸಾರ್ವಜನಿಕರ ಮತ್ತು ಕನ್ನಡಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಾರ್ವಜನಿಕರ ಹೋರಾಟಕ್ಕೆ ಮಣಿದು ಶಾಲೆ ಕೆಡವಿ ಸ್ಮಾರಕ ನಿರ್ಮಿಸುವ ಯೋಜನೆಯನ್ನು ಕೈಬಿಡುವುದಾಗಿ ಹೇಳಿದ್ದರು. ಈಗ ಮತ್ತೆ ಸರ್ಕಾರ ಸದ್ದಿಲ್ಲದೇ ಶಾಲೆಯಿದ್ದ ಸ್ಥಳದಲ್ಲಿಯೇ ವಿವೇಕ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದೆ.
ಮಹಾರಾಣಿ ಎನ್‌ಟಿಎಮ್ ಹೆಣ್ಣುಮಕ್ಕಳ ಶಾಲೆ ಉಳಿವಿಗಾಗಿ ಮೈಸೂರಿನಲ್ಲಿ ಹೋರಾಟ ತೀವ್ರಗೊಂಡಿದ್ದು ಕನ್ನಡಪರ ಸಂಘಟನೆಗಳು, ರಂಗಭೂಮಿ ಕಲಾವಿದರು, ಅಧ್ಯಾಪಕರು, ಸಾಹಿತಿಗಳು ಇತಿಹಾಸಕರರು ಸೇರಿದಂತೆ ನೂರಾರು ಜನ ಸರ್ಕಾರದ ವಿರುದ್ಧ ಪ್ರತಿನಿತ್ಯ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇಂದು ಎಸ್‌ಯುಸಿಐ, ಸಿಪಿಐ, ಸಿಪಿಐಎಂ, ಸಿಪಿಐಎಂಎಲ್ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು NTM ಶಾಲೆ ಉಳಿವಿಗಾಗಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಸ್ವಾರ್ಥಪರ ಯೋಗಿ – ಭೋಗಿಗಳಿಂದ ಐತಿಹಾಸಿಕ ಎನ್‌ಟಿಎಂ ಶಾಲೆ ಉಳಿಸಬೇಕು

ಸ್ವಾಮಿ ವಿವೇಕಾನಂದರು ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಿದ್ದರು. ಶಾಲೆ ಕೆಡವಿ ಸ್ಮಾರಕ ನಿರ್ಮಾಣ ಮಾಡಿ ಎಂದು ಅವರು ಎಲ್ಲಿಯೂ ಹೇಳಿಲ್ಲ. ಕರ್ನಾಟಕ ಸರ್ಕಾರ ವಿವೇಕಾನಂದರ ಹೆಸರಿನಲ್ಲಿ ಅವಿವೇಕದ ಕೆಲಸ ಮಾಡುತ್ತಿದೆ. ಶಾಲೆಯ ಸಮಾಧಿ ಮೇಲೆ ಸ್ಮಾರಕ ಕಟ್ಟಿದರೆ ವಿವೇಕಾನಂದರ ಆದರ್ಶದ ಕೊಲೆ ಅದು ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನ ಹಲವೆಡೆ ಶಾಲೆ ಉಳಿಸಿ ಎಂಬ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಜನರನ್ನು ಜಾಗೃತಿಗೊಳಿಸುವ ಪ್ರಯತ್ನವೂ ನಡೆಯುತ್ತಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣ ಯಾರ ಉದ್ಧಾರಕ್ಕಾಗಿ? : ಡಾ.ಬಿ.ಪಿ ಮಹೇಶ ಚಂದ್ರ ಗುರು
ಆಮ್ ಆದ್ಮಿ ಪಕ್ಷ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಹಿತರಕ್ಷಣಾ ವೇದಿಕೆ, ಬಹುಜನ ವಿದ್ಯಾರ್ಥಿ ಸಂಘ ಹೀಗೆ ವಾರದಿಂದ ಸತತವಾಗಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿದ್ದೂ ಜನರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಶಾಲೆಯ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂದು ಪಟ್ಟು ಹಿಡಿದಿದ್ದಾರೆ. ವಿವೇಕಾನಂದರು NTM ಶಾಲೆ ಸೇರಿದಂತೆ ಪಕ್ಕದ ಸದ್ವಿದ್ಯಾ ಸಂಸ್ಥೆ ಮತ್ತು ಮೈಸೂರಿನ ಇನ್ನಿತರ ಭಾಗಗಳಿಗೂ ಭೇಟಿ ನೀಡಿದ್ದಾರೆ. ಸರ್ಕಾರ ಮಾತ್ರ ಕನ್ನಡ ಶಾಲೆಯ ಕಟ್ಟಡವನ್ನೇ ಆಯ್ದುಕೊಂಡಿರುವುದು ಜನರ ಸಿಟ್ಟಿಗೆ ಕಾರಣವಾಗಿದೆ.
ಹಿರಿಯ ರಂಗಕರ್ಮಿ ಸಿ ಬಸವಲಿಂಗಯ್ಯನವರು ಮಾತನಾಡಿ, “ಕನ್ನಡ ಶಾಲೆಯನ್ನು ಕೆಡವಿ ವಿವೇಕ ಸ್ಮಾರಕ ನಿರ್ಮಾಣ ಮಾಡುವುದು ಅವಿವೇಕದ ಕೆಲಸ. ವಿವೇಕಾನಂದರ ಆದರ್ಶಕ್ಕೆ ವಿರುದ್ಧವಾದದ್ದು. ಮೈಸೂರಿನ ಬೇರೆ ಎಲ್ಲಿಯಾದರೂ ಸ್ಮಾರಕ ನಿರ್ಮಾಣವಾಗಲಿ. ಶಾಲೆಯ ಸ್ಥಳದಲ್ಲಿ ಬೇಡ” ಎಂದು NTM ಮಹಾರಾಣಿ ಶಾಲೆಯ ಉಳಿವಿಗಾಗಿ ಧ್ವನಿ ಎತ್ತಿದ್ದಾರೆ.
ಪೂರ್ವದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಅವಕಾಶವೇ ಇಲ್ಲದ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ ರಾಣಿಯವರು ಐತಿಹಾಸಿಕ NTM ಮಹಾರಾಣಿ ಶಾಲೆಯನ್ನು ಕಟ್ಟಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಕರ್ನಾಟಕ ಮಾತ್ರವಲ್ಲ ಭಾರತದ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ಘಟನೆ. ಇದುವರೆಗೆ ಸಾವಿರಾರು ಹೆಣ್ಣುಮಕ್ಕಳು ಇಲ್ಲಿ ಕಲಿತು ಹಲವು ಸಾಧನೆ ಮಾಡಿದ್ದಾರೆ. ಮಹಿಳಾ ಶಿಕ್ಷಣ, ಸಬಲೀಕರಣದ ಮಾತನಾಡುವ ಸರ್ಕಾರ ಅದಕ್ಕೆ ಸ್ಪೂರ್ತಿಯಾದ ಐತಿಹಾಸಿಕ ಕಟ್ಟಡವನ್ನು ಕೆಡವಲು ಮುಂದಾಗಿರುವುದು ಅತ್ಯಂತ ದುರದೃಷ್ಟದ ಸಂಗತಿ. ಶಾಲೆ ಕೆಡವಿ ಸ್ಮಾರಕ ನಿರ್ಮಿಸುವ ಯೋಜನೆಯನ್ನು ಕೈಬಿಟ್ಟು ಚಾರಿತ್ರಿಕ ಕಟ್ಟಡದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಬೇಕು. ಅಪಾಯದ ಅಂಚಿನಲ್ಲಿರುವ NTM ಶಾಲೆಯನ್ನು ಉಳಿಸುವಂತೆ ನಾಗರಿಕ ಸಮಾಜ ಕೂಡ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.
ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಎಂ.ಉಮಾದೇವಿ, ಚಂದ್ರಶೇಖರ ಮೇಟಿ, ಹರೀಶ್ ಎಸ್.ಎಚ್, ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜ್, ಜಗನ್ನಾಥ್, ಜಗದೀಶ್ ಸೂರ್ಯ, ಸಿಪಿಐನ ಜಗನ್ನಾಥ್, ಸಿಪಿಐ ಎಂಎಲ್ ನ ಚೌಡಹಳ್ಳಿ ಜವರಯ್ಯ, ನಾ.ದಿವಾಕರ ಪಿಯುಸಿಎಲ್ ನ ಲಕ್ಷ್ಮೀನಾರಾಯಣ, ರತಿರಾವ್, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ ಐಎನ್‌ಟಿಯುಸಿಯ ಅನಿಲ್ ಕುಮಾರ್ ಸೇರಿದಂತೆ ವಿವಿಧ ಕಾರ್ಮಿಕ ಮುಖಂಡರು, ರೈತ ಹೋರಾಟಗಾರು, ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
– ರಾಜೇಶ್ ಹೆಬ್ಬಾರ್
ಇದನ್ನೂ ಓದಿ: ಪಟ್ಟಭದ್ರರ ವಿರುದ್ಧ ದಿಟ್ಟ ಹೋರಾಟಕ್ಕೆ ಉಳಿದ ಮೈಸೂರಿನ ಸರ್ಕಾರಿ ಶಾಲೆ!


