ಹೊನ್ನಾವರದಲ್ಲಿ ಖಾಸಗಿ ಬಂದರು ನಿರ್ಮಾಣಕ್ಕಾಗಿ ಅಸಹಾಯಕ ಮೀನುಗಾರರ ಒಕ್ಕಲೆಬ್ಬಿಸಲು ಕಳೆದ ನಡೆಸಿದ ದಾಳಿ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ಕೊಡಲು ಮೀನುಗಾರರ ಸಂಘಟನೆಗಳು ಮುಂದಾಗಿವೆ. ಮಾಜಿ ಶಾಸಕ, ರಾಷ್ಟ್ರೀಯ ಮೀನುಗಾರ ಪರಿಷತ್ ಅಧ್ಯಕ್ಷ ಯು.ಆರ್ ಸಭಾಪತಿ ನೇತೃತ್ವದಲ್ಲಿ ರಾಷ್ಟ್ರಪತಿ ಮತ್ತು ಮಾನವ ಹಕ್ಕು ಆಯೋಗದ ಗಮನ ಸೆಳೆಯಲು ನಿರ್ಧರಿಸಲಾಗಿದೆ.
“ಮೀನುಗಾರರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಅವರ ನೆಲೆ ಮೇಲೆ ಸುಮಾರು 500ರಷ್ಟು ಪೊಲೀಸರು ಹಾಗೂ ಬಂದರು ಕಂಪನಿಯ ಬಾಡಿಗೆ ಗೂಂಡಾಗಳು ಎರಗಿದ್ದಾರೆ. ಸರ್ಕಾರವೇ ಬಡ ಬೇಸ್ತರ ಒಕ್ಕಲೆಬ್ಬಿಸುವ ಅಮಾನವೀಯ ಕೃತ್ಯ ಮಾಡಿದೆ. ಕೋವಿಡ್‌ನಂಥ ಗಂಭೀರ ಆರೋಗ್ಯ ತುರ್ತು ಪರಿಸ್ಥಿತಿ ಮತ್ತು ವಾರಾಂತ್ಯಾದ ಬಿಗಿ ಲಾಕ್‌ಡೌನ್ ಇರುವ ಸಂದರ್ಭದಲ್ಲಿ ದೌರ್ಜನ್ಯ ನಡೆಸಲಾಗಿದೆ. ಆ ಹೊತ್ತಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಇದ್ಯಾವುದೂ ಲೆಕ್ಕಿಸದೆ ನಸುಕು ಹರಿಯುತ್ತಿರುವಾಗಲೇ ಹಠಾತ್ ಜಿಲ್ಲಾ ಮತ್ತು ತಾಲ್ಲೂಕಾಡಳಿತ ಖಾಸಗಿ ಪುಂಡರೊಂದಿಗೆ ದಾಳಿ ಮಾಡಿದೆ” ಎಂದು ಮೀನುಗಾರರ ಸಂಘಟನೆಗಳು ಆರೋಪಿಸಿವೆ.
“ಮೀನುಗಾರ ಮಹಿಳೆಯನ್ನು ಎಳೆದಾಡಿ ಹಲ್ಲೆ ಮಾಡಲಾಗಿದೆ. ಹಲವು ಮೀನುಗಾರರ ವಸತಿ ಕಟ್ಟಡ ಧ್ವಂಸಗೊಳಿಸಲಾಗಿದೆ. ಕಸುಬಿಗೆ ಬಳಸುವ ಲಕ್ಷಾಂತರ ರೂ ಬೆಲೆಯ ಬಲೆ, ಮೀನುಗಾರಿಕೆಯ ವಿವಿಧ ಪರಿಕರ ನಾಶ ಮಾಡಿ ಬೆಸ್ತರ ಕುಟುಂಬಗಳನ್ನು ಬೀದಿ ಪಾಲು ಮಾಡಲಾಗಿದೆ. ಪೊಲೀಸ್ ಬಲಪ್ರಯೋಗದ ಮೂಲಕ ಸ್ಥಳೀಯ ಜನರಲ್ಲಿ ಆತಂಕ ಸೃಷ್ಟಿಸಲಾಗಿದೆ. ಈ ಬರ್ಬರ ಕಾರ್ಯಚರಣೆಯಲ್ಲಿ ಖುದ್ದು ಸರ್ಕಾರದ ಆಡಳಿತವೇ ಮುಂಚೂಣಿಯಲ್ಲಿರುವುದರಿಂದ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ನಡೆದಿದೆ” ಎಂದು ದೂರಲಾಗಿದೆ.
“ಜನರ ಹಿತಕಾಯಬೇಕಾದ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲೇ ನಡೆದಿರುವ ಈ ಘಟನೆ ನಮ್ಮ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂಬುದನ್ನು ಸೂಚಿಸುವಂತಿದೆ. ಮುಂದೆಯೂ ಸಹ ಖಾಸಗಿ ಬಂದರು ನಿರ್ಮಾಣ ಯೋಜನೆಯ ನೆಪದಲ್ಲಿ ಸರ್ಕಾರದ ಸ್ಥಳೀಯಾಡಳಿತ ಬಂಡವಾಳಗಾರರು ಮತ್ತು ಪ್ರಭಾವಿಗಳೊಂದಿಗೆ ಸೇರಿಕೊಂಡು ಕಾಸರಕೋಡಲ್ಲಿ ಮಾನವ ಹಕ್ಕುಗಳನ್ನು ದಮನ ಮಾಡುವ ಎಲ್ಲ ಸಾಧ್ಯತೆಯೂ ಇದೆ. ಈ ಬೆದರಿಕೆಯಲ್ಲಿ ಮೀನುಗಾರರು ತತ್ತರಿಸುತ್ತಿದ್ದಾರೆ. ಹೀಗಾಗಿ ರಾಷ್ಟ್ರಪತಿಗಳು ಮತ್ತು ಮಾನವಹಕ್ಕು ಆಯೋಗ ಮಧ್ಯ ಪ್ರವೇಶ ಮಾಡಿ ಬಡ ಬೆಸ್ತರನ್ನು ಕಾಪಾಡಬೇಕಾಗಿದೆ” ಎಂದು ಮೀನುಗಾರರ ಸಂಘಟನೆಗಳು ಅಳಲು ತೋಡಿಕೊಂಡಿವೆ.
“ಬಂಡವಾಳ ತೊಡಗಿಸುವವರ ಆಕರ್ಷಿಸುವ ಮತ್ತು ಅಭಿವೃದ್ಧಿಯ ಹೆಸರಲ್ಲಿ ಸರ್ಕಾರ ಕರಾವಳಿಯ ಜನರ ಬದುಕನ್ನು ನಾಶ ಮಾಡಲು ಹೊರಟಂತಿದೆ. ಪರಿಸರ ಮತ್ತು ಜನರ ಆರೋಗ್ಯ ಹಾಳುಗೆಡುವಂಥ ಖಾಸಗಿಯವರ ಬೃಹತ್ ಯೋಜನೆಗಳಿಗಾಗಿ ಮೀನುಗಾರರ ಬದುಕವ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಕರಾವಳಿ ಪ್ರದೇಶದ ಬಹುತೇಕ ಕಡಲ ತೀರಗಳು ಈಗಾಗಲೇ ಸರ್ಕಾರದ ಅನೇಕ ಯೋಜನೆಗಳಿಗಾಗಿ ಪದಭಾರೆಯಾಗಿ ಜನರ ಬದುಕು ಮೂರಾಬಟ್ಟೆಯಾಗಿದೆ. ಇಷ್ಟಾದರೂ ಸರ್ಕಾರಕ್ಕೆ ತೃಪ್ತಿಯಾದಂತಿಲ್ಲ. ಕಾರವಾರ ಮತ್ತು ಮಂಗಳೂರಲ್ಲಿ ಎರಡು ಬೃಹತ್ ಬಂದರುಗಳಿವೆ; ಜಿಲ್ಲೆಯ ಬೇಲೇಕೇರಿಯಿಂದ ಕಬ್ಬಿಣದ ಅದಿರು ರಫ್ತು ಮಾಡಲಾಗುತ್ತಿದೆ. ಹೀಗಿರುವಾಗ ಮತ್ತೊಂದು ಖಾಸಗಿ ಬಂದರು ನಿರ್ಮಾಣದ ಹಠವೇಕೇ? ಉದ್ದೇಶಿತ ಬೃಹತ್ ಬಂದರು ಯೋಜನೆಯಿಂದ ಪರಿಸರ, ಜೀವ ವೈವಿಧ್ಯ, ಜನರ ಆರೋಗ್ಯ, ಪರಿಸರ ಸಾಂಪ್ರದಾಯಿಕ ಮೀನುಗಾರಿಕೆ ಮತ್ತು ವೃತ್ತಿ ಭದ್ರತೆ ಮೇಲಾಗುವ ಪರಿಣಾಮಗಳ ಕುರಿತು ಪ್ರಶ್ನಾವಳಿ ಬಂದರು ಇಲಾಖೆ ಹಾಗೂ ಸರ್ಕಾರಕ್ಕೆ ಕಳಿಸಿದರೂ ಕನಿಷ್ಠ ಸ್ಪಂದನೆಯೂ ಇಲ್ಲದಾಗಿದೆ ಬದಲಿಗೆ ಬದುಕು ಕಳಕೊಳ್ಳುವ ಬಡ ಬೆಸ್ತರ ಮೇಲೆಯೇ ಗೂಬೆ ಕೂರಿಸುವ ಷಡ್ಯಂತ್ರ ನಡೆದಿದೆ” ಎಂದು ಮೀನುಗಾರರ ಸಂಘಟನೆಯ ಪ್ರಮುಖರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಹೊನ್ನಾವರ: ಖಾಸಗಿ ಬಂದರು ಯೋಜನೆಗಾಗಿ ಬಡ ಬೆಸ್ತರ ಬಲಿಗೆ ಹುನ್ನಾರ!


