ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಸಾವನ್ನು ಖಂಡಿಸಿ ದೇಶಾದ್ಯಂತ ಖಂಡನೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ 10 ಜನ ಹೋರಾಟಗಾರು ಇಂದು ತಾಲೋಜ ಜೈಲಿನೊಳಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಫಾದರ್ ಸ್ಟ್ಯಾನ್ ಸ್ವಾಮಿಯವರದು ಸಾಂಸ್ಥಿಕ ಹತ್ಯೆ ಎಂದಿರುವ ಎಲ್ಗರ್ ಪ್ರಕರಣದಲ್ಲಿ ಬಂಧಿತ ಹೋರಾಟಗಾರರು ಎನ್‌ಐಎ ಅಧಿಕಾರಿಗಳ ಕಿರುಕುಳದಿಂದಲೇ ಸ್ವಾಮಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಎಲ್ಗರ್ ಪರಿಷತ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಮತ್ತು ತಾಲೋಜ ಸೆಂಟ್ರಲ್ ಜೈಲಿನ ಸೂಪರ್‌ಇಂಡೆಂಟ್ ವಿರುದ್ಧ ಕ್ರಮಕ್ಕೆ ಸತ್ಯಾಗ್ರಹ ನಿರತ ಹೋರಾಟಗಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯ ಸಂಕೇತವಾಗಿ, ಈ ಪ್ರಕರಣದ ಸಹ-ಆರೋಪಿಗಳಾದ ರೋನಾ ವಿಲ್ಸನ್, ಸುರೇಂದ್ರ ಗ್ಯಾಡ್ಲಿಂಗ್, ಸುಧೀರ್ ಧವಾಲೆ, ಮಹೇಶ್ ರೌತ್, ಅರುಣ್ ಫೆರೀರಾ, ವೆರ್ನಾನ್ ಗೊನ್ಸಾಲ್ವೆಸ್, ಗೌತಮ್ ನವಲಖಾ, ಆನಂದ್ ತೆಲ್ಟುಂಬ್ಡೆ, ರಮೇಶ್ ಗೈಚೋರ್ ಮತ್ತು ಸಾಗರ್ ಗೋರ್ಖೆ ಅವರು ಇಂದು ಉಪವಾಸವನ್ನು ಕೈಗೊಂಡಿದ್ದು ಫಾದರ್ ಸ್ಟ್ಯಾನ್ ಸ್ವಾಮಿ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ನಿನ್ನೆ ಹೇಳಿಕೆ ಬಿಡುಗಡೆ ಮಾಡಿ ಫಾದರ್ ಸ್ಟ್ಯಾನ್ ಸ್ವಾಮಿ ವಿಷಯದಲ್ಲಿ ಯಾವ ಕಾನೂನು ಉಲ್ಲಂಘನೆಯಾಗಿಲ್ಲ. ಕಾನೂನಿಗನುಗುಣವಾಗಿಯೇ ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದು ತನ್ನ ಪಾತ್ರವನ್ನು ನಿರಾಕರಿಸಿತ್ತು.
ಇದನ್ನೂ ಓದಿ: ಫಾದರ್ ಸ್ಟ್ಯಾನ್ ಸ್ವಾಮಿ ಸಾವು-ರಾಷ್ಟ್ರಪತಿಗಳಿಗೆ ವಿರೋಧಪಕ್ಷಗಳ ನಾಯಕರ ಪತ್ರ-ತನ್ನ ಪಾತ್ರ ನಿರಾಕರಿಸಿದ ಸರ್ಕಾರ



ಜೈಲುಕಂಬಿಯ ಸ್ವಗತ
********************
ನಾನು ಸೆರೆಮನೆ ಸೇರಿದ ಮೇಲೆ
ಖೂಳ ಕೊಲೆಪಾತಕಿಗಳು
ಖಾದಿ ಖಾಕಿಗಳೂ
ನನ್ನ ಮುಟ್ಟಿ ತಟ್ಟಿದಂದಿನಿಂದ
ಕೊರಗುತ್ತಿದ್ದೇನೆ.
ಬೇಸರವಿಲ್ಲ
ಮಂದಿರ ಮಸೀದಿ ಚರ್ಚು
ಸೇರದ್ದಕ್ಕೆ,
ಅಪರಾಧಿಗಳ ಕರತಗುಲಿ
ಗಾಯಕ್ಕೆ ಉಪ್ಪು ಸವರಿದಂತೆ
ನೋಯುತ್ತಿದ್ದೇನೆ.
ಶಾಲೆಗೆ ಸೇರಿದ್ದರೆ
ಎಳೆಯರ ಸ್ಪರ್ಷ
ಗೆಳೆಯರ ಹರ್ಷ ಕಂಡು
ಸುಖಿಸಬಹುದಿತ್ತು!
ಎಷ್ಟೋ ಸಮಾಧಾನ
ರೈತರು ಶಿಕ್ಷಕರು ಕವಿಗಳು
ಸಮಾಜಕಾರ್ಯಕರ್ತರು
ಒಳಿತಿಗಾಗಿ ಹೋರಾಡಲು
ಸೆರೆಮನೆ ಪಾಲಾದಾಗ
ಅವರು ಪಿಸುಗುಟ್ಟುವುದ
ಕೇಳಿ ಮರುಗಿದ್ದೇನೆ
ವಿದ್ಯುದಾಲಿಂಗನಕೆ ಸಿಕ್ಕು
ಸತ್ತಂತೆ ಕಾಗೆ
ಅವರೂ ಹಾಗೆ
ತಪ್ಪಿಲ್ಲದಿದ್ದರೂ
ನರಳಿ ನರಳಿ ಮನೆಗೆ ಮರಳದೆ
ಸತ್ತುದ ಕಂಡು ಅತ್ತಿದ್ದೇನೆ.
ಸಭ್ಯ ಸ್ಟ್ಯಾನ್ ಸ್ವಾಮಿ
ಮುಟ್ಟಿದಾಗ ನನ್ನ ಬದುಕು
ಸಾರ್ಥಕ ಎನಿಸಿತು,
ಕೈ ನಡುಗಿ ಬಾಯಿ ಒಣಗಿ
ಅವರು ನೀರು ಕುಡಿಯಲು
ನಾನೇ ಸ್ಟ್ರಾ ಆಗಬೇಕಿತ್ತು!
ಅವರೆಂದರು
‘ ಜಾಮೀನು ಸಿಗದಿರೆ
ನನ್ನ ನಡೆ ಸಾವಿನ ಕಡೆ’
ನಿಂತಿತು ಹೃದಯದ ಬಡಿತ
ಅಪರಾಧಿ ಪ್ರಜಾಪ್ರಭುತ್ವ
ಸಾಕ್ಷಿ ಇದೆ ನನ್ನ ಕಡೆ.
ಜಯರಾಮ.ಸಿ.ವಿ.ನಾಗಮಂಗಲ
# 904, ತೀರ್ಥಂಕರ ಮಾರ್ಗ, ಸಿದ್ಧಾರ್ಥನಗರ,
ಮೈಸೂರು.
ಚಲನವಾಣಿ: 7975774651.