ಕಳೆದ ಹಲವು ದಿನಗಳಿಂದ ಹಲವಾರು ರಾಜ್ಯಗಳು ಕೊರೊನಾ ಲಸಿಕೆ ಪೂರೈಕೆಯಲ್ಲಿ ತೀವ್ರ ಕೊರತೆಯಾಗಿದೆ ಎಂದು ತಿಳಿಸಿದ್ದು, ಇದು ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ಹಿನ್ನಡೆ ಉಂಟು ಮಾಡಿದೆ. ಲಸಿಕೆ ಕೊರತೆ ಉಂಟಾದ ಹಿನ್ನೆಲೆಯಲ್ಲಿ, ದೆಹಲಿ, ಮಧ್ಯಪ್ರದೇಶ ಮತ್ತು ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಅನೇಕ ವ್ಯಾಕ್ಸಿನೇಷನ್ ಕೇಂದ್ರಗಳು ಮುಚ್ಚಲ್ಪಡುತ್ತಿವೆ ಎಂದು ವರದಿಯಾಗಿದೆ.
ಜೂನ್ ಕೊನೆಯ ವಾರದಲ್ಲಿ ಪ್ರತಿದಿನ ಸರಾಸರಿ 62.10 ಲಕ್ಷ ಡೋಸ್ ಕೊರೊನಾ ಲಸಿಕೆಗಳನ್ನು ನೀಡಲಾಯಿತು ಎಂದು ಕೋವಿನ್ ಪೋರ್ಟಲ್‌ನಲ್ಲಿನ ಡೇಟಾವನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿದೆ. ಜುಲೈ ಮೊದಲ ಕೆಲವು ದಿನಗಳಲ್ಲಿ ಈ ಸಂಖ್ಯೆ 41.80 ಲಕ್ಷಕ್ಕೆ ಇಳಿದಿದೆ. ಜುಲೈ 5 ಮತ್ತು ಜುಲೈ 11 ರ ನಡುವೆ ದೈನಂದಿನವಾಗಿ ಸರಾಸರಿ 35 ಲಕ್ಷಕ್ಕೆ ಇಳಿದಿದೆ.
ಇದನ್ನೂ ಓದಿ: ಕೊರೊನಾ ಲಸಿಕೆಯಿಂದ ‘ಬಂಜೆತನ’ ಉಂಟಾಗುವುದಿಲ್ಲ: ಒಕ್ಕೂಟ ಸರ್ಕಾರ ಸ್ಪಷ್ಟನೆ
ದೆಹಲಿಯಲ್ಲಿ ಕೋವಿಶೀಲ್ಡ್ ಲಸಿಕೆಯ ದಾಸ್ತಾನು ಮುಗಿದಿದೆ ಎಂದು ಸೋಮವಾರ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿತ್ತು. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಟ್ವಿಟ್ಟರ್‌ನ ತಮ್ಮ ಅಧಿಕೃತ ಹ್ಯಾಂಡಲ್‌ನಲ್ಲಿ ರಾಜ್ಯದಲ್ಲಿ ಲಸಿಕೆ ಕೊರತೆಯ ಬಗ್ಗೆ ಮಾಹಿತಿ ನೀಡಿದ್ದರು.
ದೆಹಲಿಯಲ್ಲಿ ಕೋವಿಶೀಲ್ಡ್ ಲಸಿಕೆ ದಾಸ್ತಾನು ಮುಗಿದಿದೆ ಎಂದು ಎತ್ತಿ ತೋರಿಸಿದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಒಕ್ಕೂಟ ಸರ್ಕಾರವು ಗರಿಷ್ಠ ಒಂದು ದಿನ ಅಥವಾ ಎರಡು ದಿನಗಳವರೆಗೆ ಇರುವ ದಾಸ್ತಾನುಗಳನ್ನು ಮಾತ್ರ ಒದಗಿಸುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಸಿಕೆ ನೀಡುವಲ್ಲಿ ಅಮೆರಿಕ ಹಿಂದಿಕ್ಕಿದ ಭಾರತ: ಪಿಳ್ಳಂಗೋವಿ ಪ್ರಚಾರವೆಂದು ನೆಟ್ಟಿಗರ ಟ್ರೋಲ್
“ದೆಹಲಿಯಲ್ಲಿ ಲಸಿಕೆಗಳು ಮತ್ತೆ ಮುಗಿದಿವೆ. ಒಕ್ಕೂಟ ಸರ್ಕಾರವು ಒಂದು ಅಥವಾ ಎರಡು ದಿನ ಲಸಿಕೆಗಳನ್ನು ನೀಡುತ್ತದೆ, ನಂತರ ನಾವು ಲಸಿಕೆ ಕೇಂದ್ರಗಳನ್ನು ಹಲವಾರು ದಿನಗಳವರೆಗೆ ಮುಚ್ಚಬೇಕು. ಒಕ್ಕೂಟ ಸರ್ಕಾರಕ್ಕೆ ಯಾವ ಅನಿವಾರ್ಯವಿದೆಯೊ? ನಮ್ಮ ದೇಶದ ವ್ಯಾಕ್ಸಿನೇಷನ್ ಕಾರ್ಯಕ್ರಮವು ಇಷ್ಟು ದಿನಗಳ ನಂತರವೂ ಯಾಕೆ ಕುಸಿಯುತ್ತಿದೆ” ಎಂದು ಅವರು ಕೇಳಿದ್ದಾರೆ.
दिल्ली में वैक्सीन फिर ख़त्म हो गई है… केंद्र सरकार एक दो दिन की वैक्सीन देती है, फिर हमें कई दिन वैक्सीन केंद्र बंद रखने पड़ते हैं.
केंद्र सरकार की क्या मजबूरी है…इतने दिन बाद भी हमारे देश का वैक्सीन प्रोग्राम लड़खड़ा कर क्यूँ चल रहा है? pic.twitter.com/rXJEBQJRtt
— Manish Sisodia (@msisodia) July 12, 2021
ಇದನ್ನೂ ಓದಿ: ಮಕ್ಕಳಿಗೂ ಬಂತು ಕೋವಿಡ್ ಲಸಿಕೆ : ಸೆಪ್ಟೆಂಬರ್‌ನಲ್ಲಿ ಝೈಡಸ್ ಕ್ಯಾಡಿಲಾ ವ್ಯಾಕ್ಸಿನ್-ಎನ್.ಕೆ. ಅರೋರಾ
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ, ರಾಜ್ಯಕ್ಕೆ ಪ್ರತಿದಿನ 15 ಲಕ್ಷ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯವಿದೆ. ಆದರೆ ಈಗಿನಂತೆ, ಸ್ಟಾಕ್ ಕೊರತೆಯಿಂದಾಗಿ ಕೇವಲ 2 ರಿಂದ 3 ಲಕ್ಷ ಜನರಿಗಷ್ಟೇ ಚುಚ್ಚುಮದ್ದು ನೀಡಲಾಗುತ್ತಿದೆ. ಒಡಿಶಾದ ಒಟ್ಟು 30 ಜಿಲ್ಲೆಗಳಲ್ಲಿ 24 ರಲ್ಲಿ ಲಸಿಕೆ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಪಿ ಕೆ ಮೊಹಾಪಾತ್ರಾ ಅವರು ಹೇಳಿದ್ದಾರೆ. ಕೋವಿಶೀಲ್ಡ್ ಲಸಿಕೆಯು ಜುಲೈ 15 ರಂದು ಬರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಲಸಿಕೆಗಳು ಮುಗಿದಿದ್ದು ಮತ್ತು ವ್ಯಾಕ್ಸಿನೇಷನ್ ದಿನಗಳಾದ ಸೋಮವಾರ ಮತ್ತು ಬುಧವಾರ ಯಾವುದೇ ಲಸಿಕೆಗಳನ್ನು ನೀಡಲಾಗುವುದಿಲ್ಲ ಎಂದು ಮಧ್ಯಪ್ರದೇಶದ ಅಧಿಕಾರಿ ಸಂತೋಷ್ ಶುಕ್ಲಾ ಆದೇಶ ಹೊರಡಿಸಿದ್ದಾರೆ.
ಆದಾಗ್ಯೂ, ಒಕ್ಕೂಟ ಸರ್ಕಾರವು ಕೊರೊನಾ ಲಸಿಕೆಯ ಕೊರತೆಯನ್ನು ನಿರಾಕರಿಸಿದೆ.
ಇದನ್ನೂ ಓದಿ: ಬ್ರೆಜಿಲ್: ಲಸಿಕೆ ಖರೀದಿ ಹಗರಣ – ಅಧ್ಯಕ್ಷ ಬೊಲ್ಸನಾರೊ ವಿರುದ್ಧ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ


