ನಾಯಿ ಮನುಷ್ಯನ ಆದಿ ಕಾಲದ ಸಂಗಾತಿ. ಜಗತ್ತಿನಲ್ಲಿ ನಾಯಿಗಳನ್ನು ಸಾಕದ ದೇಶಗಳು, ಜನರು ಅತ್ಯಂತ ವಿರಳ. ನಾಗರಿಕ ಸಮಾಜದಲ್ಲಿ ಅವಕ್ಕೊಂದು ವಿಶೇಷ ಸ್ಥಾನಮಾನ ಇದೆ. ಸಾಕು ನಾಯಿಗಳೆಂದರೆ ಎಲ್ಲರಿಗೂ ಇಷ್ಟ. ಮನೆಯ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿಯನ್ನು, ಕಾಳಜಿಯನ್ನು ಅನೇಕರು ತಮ್ಮ ಮುದ್ದಿನ ನಾಯಿಗಳಿಗೆ ತೋರಿಸುತ್ತಾರೆ. ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ಅವುಗಳ ಪೋಷಣೆ, ಆರೈಕೆಗೆ ವೆಚ್ಚ ಮಾಡುತ್ತಾರೆ. ದುಬಾರಿ ಬೆಲೆಯ ನಾಯಿ ಸಾಕುವುದು ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ.
ಕೆಲವೊಮ್ಮೆ ಸಾಕು ನಾಯಿಗಳು ಮನುಷ್ಯನ ಮೇಲೆ ದಾಳಿ ಮಾಡಿದ ಘಟನೆಗಳು ನಡೆದಿವೆ. ಹೆಚ್ಚಾಗಿ ತನ್ನ ಒಡೆಯನ ಸುತ್ತ ಮುತ್ತ ಓಡಾಡುವ ಇವು ಅಪರೂಪಕ್ಕೆ ಮನುಷ್ಯನ ಮೇಲೆ ಎರಗುತ್ತವೆ. ಎರಡು ನಾಯಿಗಳು ಹಿರಿಯ ವಕೀಲರಿಗೆ ಕಚ್ಚಿ ತಮ್ಮ ಮಾಲಿಕನನ್ನು ಪೇಚಿಗೆ ಸಿಲುಕಿಸಿದ ಘಟನೆ ನಡೆದಿದೆ. ನಾಯಿ ಕಚ್ಚಿದ್ದಕ್ಕೆ ವಕೀಲರು ಸುಮ್ಮನೆ ಬಿಡಲಿಲ್ಲ ಮಾಲೀಕರನ್ನು ನ್ಯಾಯಾಲಯಕ್ಕೆ ಎಳೆದಿದ್ದಾರೆ.
Violent #Dogattack in #DHA Phase 7, Street number 14. #Karachi.#Pakistan pic.twitter.com/TxFhq6TiQL
— Asad Zaman ?? (@asadweb) June 27, 2021
ಇದನ್ನೂ ಓದಿ: ಪಂಜಾಬ್: ನಾಯಿಯನ್ನು ಸ್ಕೂಟಿಗೆ ಕಟ್ಟಿ ಎಳೆದೊಯ್ದ ಮಹಿಳೆ – ಪ್ರಕರಣ ದಾಖಲು
ಕಳೆದ ತಿಂಗಳು ನಡೆದ ಘಟನೆ ಇದು. ಕರಾಚಿಯ ಡಿಫೆನ್ಸ್ ಹೌಸಿಂಗ್ ಅಥಾರಿಟಿ ಪ್ರದೇಶದಲ್ಲಿ ಬೆಳಗ್ಗಿನ ತನ್ನ ದೈನಂದಿನ ವಾಕ್ ವೇಳೆ ಹಿರಿಯ ವಕೀಲ ಮಿರ್ಜಾ ಅಖ್ತರ್ ಅಲಿ ಅವರ ಮೇಲೆ ಅದೇ ಪ್ರದೇಶದ ನಿವಾಸಿ ಹುಮಾಯುನ್ ಖಾನ್ ಅವರ ಎರಡು ಶ್ವಾನಗಳು ದಾಳಿ ಮಾಡಿದ್ದವು. ಅಖ್ತರ್ ಅಲಿ ಅವರ ಮೇಲೆ ದಾಳಿ ಮಾಡಿದ್ದ ಶ್ವಾನಗಳು ಬಳಿಕ ಇವರನ್ನು ನೆಲಕ್ಕುರುಳಿಸಿದ್ದವು. ಇದರಿಂದ ಇವರಿಗೆ ತೀವ್ರ ಗಾಯಗಳಾಗಿತ್ತು.
ಈ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಜೊತೆಗೆ, ಇದು ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿಯೂ ಹರಿದಾಡಿತ್ತು. ಅಲ್ಲದೆ, ಇದು ಬಹುತೇಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಶೇಷ ತಳಿಗಳ ಶ್ವಾನಗಳನ್ನು ಯಾವುದೇ ಸೂಕ್ತ ತರಬೇತಿ ಇಲ್ಲದೆ ಜನವಸತಿ ಪ್ರದೇಶಗಳಲ್ಲಿ ಇಟ್ಟುಕೊಳ್ಳುವ ಮಾಲಿಕರ ಅಭ್ಯಾಸವನ್ನು ಹಲವರು ಟೀಕಿಸಿದ್ದರು.
ಶ್ವಾನಗಳ ದಾಳಿಯಿಂದ ಮಿರ್ಜಾ ಅಖ್ತರ್ ಅವರು ಸಾಕಷ್ಟು ಗಾಯಗೊಳಗಾಗಿದ್ದರು. ಜೊತೆಗೆ ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವ ನಿರ್ಧಾರಕ್ಕೂ ಇವರು ಬಂದಿದ್ದರು. ಆದರೆ, ಇದಾದ ಬಳಿಕ ಮನಸ್ಸು ಬದಲಾಯಿಸಿದ ಅಖ್ತರ್ ನ್ಯಾಯಾಲಯದ ಆಚೆಗೆ ಸಂಧಾನದ ಮೂಲಕ ಇದನ್ನು ಪರಿಹರಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದರು. ಜೊತೆಗೆ, ಕೆಲ ಷರತ್ತುಗಳೊಂದಿಗೆ ಶ್ವಾನಗಳ ಮಾಲಿಕ ಹುಮಾಯುನ್‌ರನ್ನು ಕ್ಷಮಿಸುವುದಾಗಿ ಇವರು ಹೇಳಿದ್ದರು.
ಬೇಷರತ್ತಾಗಿ ಕ್ಷಮೆಯಾಚಿಸುವುದು, ಹುಮಾಯುನ್ ಮತ್ತು ಕುಟುಂಬ ಇನ್ನು ಮುಂದೆ ತಮ್ಮ ಮನೆಯಲ್ಲಿ ಯಾವುದೇ ಅಪಾಯಕಾರಿ ಶ್ವಾನಗಳನ್ನು ಇಟ್ಟಕೊಳ್ಳದೇ ಇರುವುದು, ದಾಳಿ ಮಾಡಿದ ಎರಡು ಶ್ವಾನಗಳಿಗೆ ತಕ್ಷಣ ಪಶುವೈದ್ಯರ ಮೂಲಕ ದಯಾಮರಣ ನೀಡುವುದು, ಹುಮಾಯುನ್ ಹೊಂದಿರುವ ಇತರ ಅಪಾಯಕಾರಿ ಶ್ವಾನಗಳನ್ನು ಆಶ್ರಯ ಕೇಂದ್ರಕ್ಕೆ ಬಿಡುವುದು. ಜೊತೆಗೆ, ಇತರ ಯಾವುದೇ ಶ್ವಾನಗಳು ಮನೆಯಲ್ಲಿ ಇದ್ದರೂ ಅವುಗಳನ್ನು ಕ್ಲಿಫ್ಟನ್ ಕಂಟೋನ್ಮೆಂಟ್ ಬೋರ್ಡ್ (ಸಿಬಿಸಿ)ನಲ್ಲಿ ನೋಂದಾಯಿಸಬೇಕು ಎಂಬ ಷರತ್ತಿನೊಂದಿಗೆ ಈ ಪ್ರಕರಣವನ್ನು ಇವರಿಬ್ಬರೇ ಇತ್ಯರ್ಥ ಮಾಡಿಕೊಂಡಿದ್ದಾರೆ.
ವ್ಯಗ್ರವಾದ ನಾಯಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ರೀತಿಯ ಚರ್ಚೆಗಳಿಗೆ ಆಸ್ಪದ ಮಾಡಿಕೊಟ್ಟಿದೆ. ನಿಜಕ್ಕೂ ಮನುಷ್ಯನ ತರಬೇತಿಯಿಂದ ನಾಯಿಗಳು ಸೌಮ್ಯವಾಗಿ ವರ್ತಿಸುತ್ತವೆಯೇ ? ಮೂಲದಲ್ಲಿ ಅವಕ್ಕೆ ಮಾಲಿಕನ ನಿರ್ದೇಶನ ಅರ್ಥ ಮಾಡಿಕೊಂಡು ಪಾಲಿಸುವ ಸಾಮರ್ಥ್ಯ ಇದೆಯೇ ಇಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಭಾರತದಲ್ಲಿ ಶ್ವಾನಗಳು ಮಾಡಿದ ಎಡವಟ್ಟಿಗೆ ಮಾಲಿಕರನ್ನು ಶಿಕ್ಷೆಗೆ ಗುರಿ ಪಡಿಸಿದ ಅನೇಕ ನಿರ್ದಶನಗಳು ಇವೆ. ಕೆಲವೊಮ್ಮೆ ಉಗ್ರ ಸ್ವರೂಪಿ ಶ್ವಾನಗಳನ್ನು ಸಮಾಜದಿಂದ ಬೇರ್ಪಡಿಸಿದ ಮತ್ತು ಸಾಯಿಸಿದ ಉದಾಹರಣೆಗಳು ಇವೆ. ಒಟ್ಟಿನಲ್ಲಿ ಈ ಘಟನೆ ಶ್ವಾನ ಪ್ರಿಯರಿಗೆ ಮತ್ತು ಮಾಲಿಕರಿಗೆ ಒಂದು ಎಚ್ಚರಿಕೆಯಾಗಿದ್ದು ತಮ್ಮ ಸಾಕು ಪ್ರಾಣಿಗಳನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಲು ಮಾರ್ಗದರ್ಶನವಾಗಿದೆ.


