Homeಮುಖಪುಟಇರಾನ್‌ಗೆ ಹೊಸ ಅಧ್ಯಕ್ಷ; ಬದಲಾಗುವವೇ ಅಂತಾರಾಷ್ಟ್ರೀಯ ಸಂಬಂಧಗಳು?

ಇರಾನ್‌ಗೆ ಹೊಸ ಅಧ್ಯಕ್ಷ; ಬದಲಾಗುವವೇ ಅಂತಾರಾಷ್ಟ್ರೀಯ ಸಂಬಂಧಗಳು?

- Advertisement -
- Advertisement -

ಜೂನ್ 18ನೆ ತಾರೀಕು ನಡೆದ ಇರಾನಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಇರಾನಿನ ಜನತೆ ಇಬ್ರಾಹಿಂ ರೈಸಿ ಎಂಬ ನ್ಯಾಯವಾದಿ ಧರ್ಮಗುರುವನ್ನು ಆಯ್ಕೆ ಮಾಡಿದೆ. 1979ರ ಕ್ರಾಂತಿಯ ನಂತರದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಇದೇ ಮೊದಲ ಬಾರಿ ಇಷ್ಟು (48.8 ರಷ್ಟು) ಪ್ರಮಾಣದ ಕಡಿಮೆ ಮತದಾನವಾಗಿರುವುದು. ಕ್ರಾಂತಿಯ ಸ್ವಲ್ಪ ಸಮಯದ ನಂತರ ರೈಸಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅಟಾರ್ನಿ ಜನರಲ್, ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಅನೇಕ ನ್ಯಾಯಾಂಗ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರೈಸಿಯ ಅವಧಿ ಆಗಸ್ಟ್ 3ರಿಂದ ಪ್ರಾರಂಭವಾಗಲಿದೆ. ಇರಾನಿನ ಸರ್ವೋಚ್ಚ ನಾಯಕ ಖಮೇನಿ ಹತ್ತಿರದ ಬಳಗದಲ್ಲಿ ಗುರುತಿಸಿಕೊಂಡಿರುವ ರೈಸಿ, ಅಂತರರಾಷ್ಟ್ರೀಯ ನಿರ್ಬಂಧಗಳ ಅಡಿಯಲ್ಲಿದ್ದಾರೆ. ನವೆಂಬರ್ 2019ರಲ್ಲಿ, ವಾಷಿಂಗ್ಟನ್, ರೈಸಿ ಸೇರಿದಂತೆ ಖಮೇನಿಯ ಕೆಲವು ಸಲಹೆಗಾರರ ವಿರುದ್ಧ ಹೊಸ ನಿರ್ಬಂಧಗಳನ್ನು ವಿಧಿಸಿತ್ತು. ಇದಲ್ಲದೆ, ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಿತ ವ್ಯಕ್ತಿಗಳ ಯುರೋಪಿಯನ್ ಯೂನಿಯನ್ ಪಟ್ಟಿಯಲ್ಲಿಯೂ ಸಹ ಇವರ ಹೆಸರಿದೆ. ಆದ್ದರಿಂದ, ರೈಸಿಯ ಆಡಳಿತದಲ್ಲಿ ಮುಂದಿನ ರಾಜತಾಂತ್ರಿಕ ಮಾತುಕತೆಗಳು ಇನ್ನಷ್ಟು ಕಠಿಣ ಪರಿಸ್ಥಿತಿ ಮತ್ತು ಬಿಕ್ಕಟ್ಟುಗಳನ್ನು ಸೃಸ್ಟಿಸಬಹುದು.

ಇರಾನ್‌ನ ವಿದೇಶಾಂಗ ನೀತಿಯು ಯಾವಾಗಲು ಸರ್ವೋಚ್ಚ ನಾಯಕ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನಿಂದ (ಐಆರ್‌ಜಿಸಿ) ಹೆಚ್ಚು ಪ್ರಭಾವಿತವಾಗಿರುತ್ತದೆ. ರೈಸಿ ಅಧಿಕಾರ ಸ್ವೀಕರಿಸಿದ ನಂತರವೂ ಇವರ ಪ್ರಭಾವ ಸರ್ಕಾರದ ಮೇಲೆ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ. ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಏಕಪಕ್ಷೀಯವಾಗಿ ತನ್ನ ಹಿಂದಿನ ಸರ್ಕಾರದ ಸಮಾಲೋಚನೆ ಮತ್ತು ಮಾತುಕತೆಗಳ ಮೂಲಕ ಅಸ್ತಿತ್ವಕ್ಕೆ ಬಂದಿದ್ದ ಜೆಸಿಪಿಒಎ ಒಪ್ಪಂದದಿಂದ ಹಿಂದೆ ಸರಿದಿದ್ದರು ಮತ್ತು ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿ ಇರಾನಿನ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಿದ್ದರು. ಈಗ ಟ್ರಂಪ್ ನಂತರ ಅಧಿಕಾರಕ್ಕೆ ಏರಿರುವ ಜೋ ಬಿಡೆನ್ ಇನ್ನೂ ನಿರ್ಬಂಧಗಳನ್ನು ಸಡಿಲಿಸಿಲ್ಲ. ಸದ್ಯಕ್ಕೆ ಹಾಲಿ ಅಧ್ಯಕ್ಷ ರೌಹಾನಿಯ ವಿದೇಶಾಂಗ ತಂಡ ಜೆಸಿಪಿಒಎ ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

1979ನೆ ಇಸವಿಯಿಂದ ಈವರೆಗೂ ಸತತವಾಗಿ ಅತ್ಯಂತ ಕಠಿಣ ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿರುವ ಇರಾನ್, ಅಮೆರಿಕಾದ ವಿನಾಶಕಾರಿ ಮತ್ತು ಮಧ್ಯ ಪ್ರಾಚ್ಯ ಏಷ್ಯಾ ರಾಜಕೀಯಕ್ಕೆ ಸೆಡ್ಡು ಹೊಡೆದು ನಿಂತಿರುವುದೇ ಅಲ್ಲದೆ, ಪರಿಣಾಮಕಾರಿ ಪ್ರತಿರೋಧವನ್ನೂ ಒಡ್ಡುತ್ತಿದೆ. ಪಾಶ್ಚಾತ್ಯ ರಾಷ್ಟ್ರಗಳು ಮುಖ್ಯವಾಗಿ ಅಮೆರಿಕಾ ಯಾವ ರೀತಿಯ ಕ್ರೂರ ಜೀವವಿರೋಧಿ ನಿರ್ಬಂಧಗಳನ್ನು ಇರಾನಿನ ಮೇಲೆ
ಹೇರಿದೆಯೆಂದರೆ ಸಾಮಾನ್ಯ ಇರಾನಿಯನ್ನರಿಗೆ ಜೀವ ಉಳಿಸುವ ಔಷಧಗಳು ಲಭ್ಯವಾಗುತ್ತಿಲ್ಲ. ತನ್ನ ಕಚ್ಚಾ ತೈಲವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರುವಂತಿಲ್ಲ. ಹೊಸ ಆವಿಷ್ಕಾರಕ್ಕೆ ಬೇಕಾಗಿರುವ ತಾಂತ್ರಿಕ ಮತ್ತು ಕಚ್ಚಾ ಸಾಮಗ್ರಿ ರಫ್ತಿನ ನಿರ್ಬಂಧ ಮತ್ತು ಅಗತ್ಯ ವಸ್ತುಗಳ ವಹಿವಾಟುಗಳ ಮೇಲಿನ ನಿರ್ಬಂಧಗಳನ್ನು ಮುಖ್ಯವಾಗಿ ಪಶ್ಚಿಮ ದೇಶಗಳಿಂದ ಇರಾನ್ ಎದುರಿಸುತ್ತಿದೆ. 1979ರ ಇರಾನಿಯನ್ ರೆವಲ್ಯೂಷನ್ ನಂತರ ಅಸ್ತಿತ್ವಕ್ಕೆ ಬಂದ ಇರಾನ್, ವಿವಿಧ ಏಕಪಕ್ಷೀಯ ಅಂತಾರಾಷ್ಟ್ರೀಯ ನಿರ್ಬಂಧಗಳ ಹೂರತಾಗಿಯೂ, ಬಹಳಷ್ಟು ಕ್ಷೇತ್ರಗಳಲ್ಲಿ, ಸೀಮಿತ ಸಂಪನ್ಮೂಲಗಳೊಂದಿಗೆ ಪ್ರಗತಿಯನ್ನು ಸಾಧಿಸಿದೆ ಮತ್ತು ಅಷ್ಟೇ ಕಡುಕಷ್ಟಗಳನ್ನು ಎದುರಿಸುತ್ತಿದೆ.

ಅಧ್ಯಕ್ಷೀಯ ಚುನಾವಣೆ ಗೆಲುವಿನ ನಂತರ ರೈಸಿ ತಮ್ಮ ಮೊದಲ ಭಾಷಣದಲ್ಲಿ ಹೇಳಿರುವಂತೆ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಭೇಟಿ ಮಾಡಲು ನಿರಾಕರಿಸಿದ್ದಾರೆ. ಆದರೆ, ಎರಡೂ ದೇಶಗಳ ನಡುವೆ ಒಪ್ಪಂದ ಅಸ್ತಿತ್ವಕ್ಕೆ ಬರಲು ಅವರು ಒಲವು ತೋರಿಸಿದ್ದಾರೆ. ಒಪ್ಪಂದದ ಮರುಮಾತುಕತೆಗಳಿಗೆ ಹೂಡಿರುವ ಷರತ್ತುಗಳನ್ನು ಮತ್ತು ಹೊಸ ಬೇಡಿಕೆಗಳನ್ನು (ತಮ್ಮ ದೇಶದ ಹೊಸ ಸಣ್ಣ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಂಶೋಧನೆ ಮತ್ತು ಉತ್ಪಾದನೆಗಳನ್ನು ನಿಲ್ಲಿಸುವುದು) ತಿರಸ್ಕರಿಸಿದ್ದಾರೆ. ನೆರೆಹೊರೆಯ ಸುನ್ನಿ ಕೊಲ್ಲಿ ರಾಜ್ಯಗಳೊಂದಿಗೆ ಸಂಬಂಧವನ್ನು ಸುಧಾರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ತನ್ನ ಸುತ್ತಮುತ್ತಲಿನ ಸುನ್ನಿ ರಾಷ್ಟ್ರಗಳು ಇತ್ತೀಚಿಗೆ ಇಸ್ರೇಲ್‌ನೊಂದಿಗೆ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಸಮಯದಲ್ಲಿ, ಇರಾನ್ ಜೊತೆಗೆ ಆ ರಾಷ್ಟ್ರಗಳ ಸಂಬಂಧಗಳ ಸುಧಾರಣೆ ಹೇಗಾಗುತ್ತದೆ ಎಂಬುದನ್ನು ಕಾದು ನೋಡಬೇಕು. ತನ್ನ ಸುತ್ತಲಿನ ರಾಷ್ಟ್ರಗಳಲ್ಲಿ ಅಮೆರಿಕ ತನ್ನ ಪಡೆಗಳನ್ನು ಯೋಜಿಸಿದ್ದರೂ ಅದಕ್ಕೆ ಹೆದರದೆ ಯೆಮೆನ್‌ನಲ್ಲಿ ಹೌತಿಗಳೊಂದಿಗೆ, ಲೆಬನಾನ್‌ನಲ್ಲಿ ಹೆಜ್ಭೋಲ್ಲದೊಂದಿಗೆ ಯುದ್ಧ ಬಿಕ್ಕಟ್ಟನ್ನು ಎದುರಿಸಿದ ಇರಾನ್ ಸಿರಿಯಾದಲ್ಲಿ ತನ್ನದೇ ಆದ ಪಡೆಗಳನ್ನು ಸೃಷ್ಟಿಸಿದೆ.

ನಿರ್ಬಂಧಗಳ ಹೊರತಾಗಿಯೂ ತನ್ನ ’ಮಧ್ಯಮ ಹಾಗೂ ಸಣ್ಣ ದೂರದ ನಿಖರವಾದ ಕ್ಷಿಪಣಿ’ ತಯಾರಿಕೆಯಲ್ಲಿ ಪಳಗಿರುವ ಇರಾನ್ ಅದನ್ನು ಉಪಯೋಗಿಸುವುದರಲ್ಲಿ ಹೌತಿಗಳ ’ಅರಂಕೋ’ ಮೇಲಿನ ನಿಖರ ದಾಳಿಯೇ ಸಾಕ್ಷಿ. ಇರಾನಿನ ಈ ಶಸ್ತ್ರಾಸ್ತ್ರ ಸಂಶೋಧನೆ ಮತ್ತೆ ವಿಸ್ತಾರವಾಗುತ್ತಿರುವಂತೆ, ಅದರ ಬಲ ಸೌದಿ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ನಡುಕ ಹುಟ್ಟಿಸುತ್ತಿದೆ. ಆದ್ದರಿಂದಲೇ 2020 ಜನವರಿ ಮೊದಲ ವಾರದಲ್ಲಿ ಸ್ಥಳೀಯವಾಗಿ ಸಿಂಹಸ್ವಪ್ನವಾಗಿದ್ದ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಮುಖ್ಯಸ್ಥ ಸೊಲೈಮಾನಿಯನ್ನು ಹತ್ಯೆ ಮಾಡಲಾಯಿತು ಎನ್ನಲಾಗುತ್ತಿದೆ. ನಂತರ ಇರಾನಿನ ಅಣು ಸಂಶೋಧನೆಯಲ್ಲಿ ಹೆಸರಾದ ಮೊಹಸೀನ್ ಫಖ್ರಿಝದೇಹ್‌ನನ್ನು ಹತ್ಯೆ ಮಾಡಲಾಯಿತು. ಹೀಗೆ ಇರಾನಿನ ಪ್ರಮುಖ ವಿಜ್ಞಾನಿಗಳನ್ನು ಇಸ್ರೇಲ್ ಮತ್ತು ಅಮೆರಿಕಾದ ಬೇಹುಗಾರಿಕಾ ಪಡೆಗಳು ಅಂತಾರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿ ಹತ್ಯೆ ಮಾಡುತ್ತಲೇ ಇರುತ್ತವೆ. ಇರಾನ್ ಸುತ್ತಲಿನ ದೇಶಗಳಲ್ಲಿ ಅಮೆರಿಕದ ಪಡೆಗಳು ನಿಯೋಜಿತಗೊಂಡಿವೆ. ಪೂರ್ವಕ್ಕೆ ಅಘಾನಿಸ್ತಾನದಲ್ಲಿ ಎನ್.ಎ.ಟಿ.ಓ ಪಡೆಗಳನ್ನು ಅಮೆರಿಕ ಹೊಂದಿದೆ ಮತ್ತು ಪಶ್ಚಿಮಕ್ಕೆ ಇರಾಕ್‌ನಲ್ಲಿ ತನ್ನ ಸ್ಥಳೀಯ ಆಗೂ ಪಾಶ್ಚಾತ್ಯ ಮಿತ್ರಪಡೆಗಳನ್ನು ಅಮೆರಿಕ ನಿಯೋಜಿಸಿದೆ.

ಭಾರತ ಅಮೆರಿಕದ ಜೊತೆಗೆ ಹೆಚ್ಚು ಸಖ್ಯ ಬೆಳೆಸಿಕೊಳ್ಳುವ ಕಾರಣಕ್ಕಾಗಿ ಇರಾನ್‌ಅನ್ನು ದೂರ ಮಾಡಿಕೊಂಡು ಸೌದಿ ಬಣದೊಂದಿಗೆ ಗುರುತಿಸಿಕೊಳ್ಳುತ್ತಿದೆ. ಒಂದು ಕಡೆ ಭಾರತದ ತನ್ನ ದ್ವಂದ್ವ ವರ್ತನೆಯಿಂದ ಸ್ಥಳೀಯ ಸ್ನೇಹಿತ ರಾಷ್ಟ್ರಗಳನ್ನು ದೂರ ಮಾಡಿಕೊಳ್ಳುತ್ತಿದ್ದರೆ, ನೆರೆಯ ಚೀನಾ ಇರಾನ್ ಮತ್ತು ರಶಿಯಾದೊಂದಿಗೆ ಜೊತೆಗೂಡಿ ಅಮೆರಿಕ ಮತ್ತು ಪಾಶ್ಚಾತ್ಯ ಕೂಟಕ್ಕೆ ಎದುರಾಗಿ ನಿಂತಿದೆ. ಚೀನಾ ಕಳೆದ ವರ್ಷ ಇರಾನಿನೊಂದಿಗೆ 400 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ತನ್ನ ಮಹತ್ವಾಕಾಂಕ್ಷೆಯ ಎರಡನೆ ಸಿಲ್ಕ್ ರಸ್ತೆಗೆ ಇರಾನ್ ಬಹುದೊಡ್ಡ ಶಕ್ತಿ ಮತ್ತು ಪಾಲುದಾರನನ್ನಾಗಿಸಲು ಚೀನಾ ಹೊರಟಿದೆ. ಆದರೆ ಭಾರತ ಒಂದರನಂತರ ಒಂದು ಪಾಶ್ಚಾತ್ಯ ಪೂರಕ ಒಪ್ಪಂದಗಳಿಗೆ ಸಹಿ ಹಾಕಿ ಭಾರತವನ್ನು ಮತ್ತು ಅಮೆರಿಕದ ಮಿಲಿಟರಿ ಸಾಮ್ರಾಜ್ಯಶಾಹಿಗೆ ಒಪ್ಪಿಸಲು ತುದಿಗಾಲಿನಲ್ಲಿ ನಿಂತಿದೆಯೇನೋ ಎಂಬಂತಾಗಿದೆ.

ತನ್ನ ಐತಿಹಾಸಿಕ ಬಾಂಧವ್ಯವನ್ನು ಮರೆತು ಅಮೆರಿಕದ ಒತ್ತಡದಿಂದ 12% ಆಮದು ಮಾಡಿಕೊಳ್ಳುವ ತನ್ನ ಅವಶ್ಯದ ಕಚ್ಚಾ ತೈಲದ ಆಮದನ್ನು ಇರಾನ್‌ನಿಂದ ನಿಲ್ಲಿಸಿದೆ. ಹಾಗೆಯೆ ಭಾರತದ ಮಹತ್ವಾಕಾಂಕ್ಷೆಯ ಚಾಬಹಾರ್ ಬಂದರು ಯೋಜನೆ ಮತ್ತು ಕಚ್ಚಾ ತೈಲದ ’ಫರ್ಜಾದ್ ಬಿ’ ಬಾವಿಯಿಂದಲೂ ಭಾರತ ಹೊರಹಾಕಲ್ಪಡಬಹುದು. ರೈಸಿ ಮತ್ತು ಇರಾನಿನ ಪ್ರಮುಖ ನಾಯಕರು ಭಾರತದಲ್ಲಿ ಮುಸಲ್ಮಾನರ ವಿರುದ್ಧ ನಡೆಯುತ್ತಿರುವ ಸಾಂಸ್ಕೃತಿಕ ಹಲ್ಲೆಗಳನ್ನು ಕಟುವಾಗಿ ನಿಂದಿಸಿದ್ದಾರೆ. ಇರಾನಿನ ಹೊಸ ಅಧ್ಯಕ್ಷ ಇಬ್ರಾಹಿಂ ರೈಸಿ ಭಾರತ ಪರವಾಗಿರುತ್ತಾರೋ ಅಥವಾ ನಮ್ಮ ವಿರುದ್ಧವಾಗಿರುತ್ತಾರೋ ಎಂಬ ಪ್ರಶ್ನೆಗಳ ಬದಲು ಕ್ಷೀಣಿಸುತ್ತಿರುವ ಭಾರತದ ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ಭಾರತ ಎಚ್ಚೆತ್ತುಕೊಂಡರೆ, ನೆರೆಹೊರೆಯ ದೇಶಗಳೊಂದಿಗೆ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಸುಲಭವಾಗಿರುತ್ತದೆ ಮತ್ತು ಪರಿಣಾಮಕಾರಿಯಾಗಿರುತ್ತದೆ.


ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ಶ್ರದ್ಧಾಂಜಲಿ; ವಿಚಾರಣಾಧೀನ ಕೈದಿಯಾಗಿ ಭಾರತರತ್ನವೊಂದರ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೈದರಾಬಾದ್: ಮತದಾರರ ಪಟ್ಟಿಯಿಂದ 5.41 ಲಕ್ಷ ಮತದಾರರನ್ನು ಕೈ ಬಿಟ್ಟ ಚುನಾವಣಾ ಆಯೋಗ; ವರದಿ

0
ಮತದಾರರ ಪಟ್ಟಿಯ ಶುದ್ಧತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ತೆಲಂಗಾಣದ ಹೈದರಾಬಾದ್ ಜಿಲ್ಲೆಯ 5.41 ಲಕ್ಷ ಮಂದಿಯ ಹೆಸರನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ ಎಂದು ದಿ ಹಿಂದೂ ವರದಿ ಮಾಡಿದೆ. 2023ರ ಜನವರಿಯಿಂದೀಚೆಗೆ...