ಕುಂಭ ಮೇಳದ ಸಂದರ್ಭದಲ್ಲಿ ಘಟಿಸಿದ ಅಚಾತುರ್ಯವನ್ನು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಉತ್ತರಾಖಂಡ ಸರ್ಕಾರ ಮುಂದಾಗಿದೆ. ಲಕ್ಷಾಂತರ ಜನರು ಸೇರುವ ಕನ್ವರ್‌ ಧಾರ್ಮಿಕ ಯಾತ್ರೆಯನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

’ಗದರ್‌ಪುರ್‌ ನಗರದಲ್ಲಿ ಕೋವಿಡ್‌ ರೂಪಾಂತರಿ ವೈರಸ್‌ ಪತ್ತೆಯಾಗಿದ್ದು ಹರಿದ್ವಾರ ನಗರವನ್ನು ಕೋವಿಡ್‌ ಹಬ್‌ ಆಗಿಸಲು ನಮಗೆ ಇಷ್ಟವಿಲ್ಲ’ ಎಂದು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಮಂಗಳವಾರ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರವು ಈ ಯಾತ್ರೆಗೆ ಅವಕಾಶವನ್ನು ನೀಡಿದ್ದು, ಕಳೆದ ವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಆದೇಶವನ್ನು ಹೊರಡಿಸಿದ್ದಾರೆ. ಎಲ್ಲಾ ರೀತಿಯ ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಯಾತ್ರೆ ಸುರಕ್ಷಿತವಾಗಿ ನಡೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಕೊನೆಗೂ ಕುಂಭಮೇಳಕ್ಕೆ ತೆರೆ ಎಳೆಯಲು ಸಿದ್ಧರಾದ ಜುನಾ ಅಖಾರ ಮುಖ್ಯಸ್ಥ ಅವಧೇಶಾನಂದ ಗಿರಿ

ಉತ್ತರಾಖಂಡ ಸರ್ಕಾರ ನೆರೆಯ ರಾಜ್ಯಗಳೊಂದಿಗೆ ಸಮಾಲೋಚನೆಯನ್ನು ನಡೆಸಿ ಈ ನಿರ್ಧಾರವನ್ನು ಕೈಗೊಂಡಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಕುಂಭ ಯಾತ್ರೆಯಲ್ಲಿ ಘಟಿಸಿದ ದುರಂತ ಮತ್ತೆ ಘಟಿಸದಂತೆ ತಡೆಯಬೇಕು. ಕೋವಿಡ್‌ ಮೂರನೇ ಅಲೆ ಮುನ್ಸೂಚನೆ ನಡುವೆ ಧಾರ್ಮೀಕ ಯಾತ್ರೆಯನ್ನು ನಡೆಸುವುದು ಸುರಕ್ಷಿತವಲ್ಲ ಎಂದು ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಸಿಎಂ ಪುಷ್ಕರ್‌ ಸಿಂಗ್ ಧಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಲಕ್ಷಾಂತರ ಶಿವ ಭಕ್ತರು ಫಾಲ್ಗೊಳ್ಳುವ ಕನ್ವರ್‌ ಯಾತ್ರೆ ಜುಲೈ 25 ರಿಂದ ಆರಂಭವಾಗಲಿದೆ. ಕಳೆದ ವರ್ಷ ಕೂಡ ಕೋವಿಡ್‌ ಕಾರಣದಿಂದ ಕಂವರ್‌ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು.

ಕಳೆದ ಮಾರ್ಚ್ 31 ರಿಂದ ಏಪ್ರಿಲ್‌ 24ರ ಕುಂಭ ಮೇಳದ ಅವಧಿಯಲ್ಲಿ ಉತ್ತರಾಖಂಡದ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ 1800 ಪಟ್ಟು ಹೆಚ್ಚಳವಾಗಿತ್ತು.

ಇದನ್ನೂ ಓದಿ: ಕೋವಿಡ್ 2ನೆ ಅಲೆ ತೀವ್ರವಾಗುತ್ತಿದ್ದಾಗ ಕುಂಭಮೇಳದಲ್ಲಿ ಮುಳುಗೆದ್ದವರು 70 ಲಕ್ಷ ಜನ!

 

LEAVE A REPLY

Please enter your comment!
Please enter your name here