ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಔಪಚಾರಿಕ ಅಂತ್ಯ ನೀಡಿರುವುದಾಗಿ ಜುನಾ ಅಖಾರದ ಮುಖ್ಯಸ್ಥ ಸ್ವಾಮಿ ಅವಧೇಶಾನಂದ ಗಿರಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ದೇಶಾದ್ಯಂತ ದೈನಂದಿನ ಕೊರೊನಾ ವೈರಸ್ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ “ಸಾಂಕೇತಿಕವಾಗಿರಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಸಾಧುಗಳಲ್ಲಿ ಮನವಿ ಮಾಡಿದ್ದರು.
ಪ್ರಧಾನಿ ಮೋದಿಯವರು ಮನವಿ ಮಾಡಿದ ಕೆಲವೇ ಗಂಟೆಗಳ ನಂತರ, ಜುನಾ ಅಖಾರಾದ ಸ್ವಾಮಿ ಅವಧೇಶಾನಂದ ಗಿರಿ ಈ ಪ್ರಕಟಣೆ ಹೊರಡಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಕುಂಭಮೇಳ ಸಾಂಕೇತಿಕವಾಗಿಸಬೇಕು, ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ತರುತ್ತದೆ: ಪ್ರಧಾನಿ ಮೋದಿ
भारत की जनता व उसकी जीवन रक्षा हमारी पहली प्राथमिकता है। #कोरोना महामारी के बढ़ते प्रकोप को देखते हुए हमने विधिवत कुम्भ के आवाहित समस्त देवताओं का विसर्जन कर दिया है। #जूनाअखाड़ा की ओर से यह कुम्भ का विधिवत विसर्जन-समापन है।@narendramodi @AmitShah@ANI @z_achryan @TIRATHSRAWAT pic.twitter.com/rOUaqL1egU
— Swami Avdheshanand (@AvdheshanandG) April 17, 2021
“ಭಾರತದ ಜನರು ಮತ್ತು ಅವರ ಉಳಿವು ನಮ್ಮ ಮೊದಲ ಆದ್ಯತೆಯಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ, ನಾವು ಎಲ್ಲಾ ದೇವರುಗಳ ವಿಸರ್ಜನೆಯನ್ನು ಸರಿಯಾಗಿ ನಿರ್ವಹಿಸಿದ್ದೇವೆ. ಇದು ಜುನಾ ಅಖಾರಾದಿಂದ ಕುಂಭಮೇಳದ ಔಪಚಾರಿಕ ಅಂತ್ಯ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕುಂಭಮೇಳದಲ್ಲಿ ಭಾಗವಹಿಸಿದ್ದ ಸಾಧುಗಳಿಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇತರ 80 ಮಂದಿ ಸಾಧುಗಳಿಗೆ ಕೊರೊನಾ ದೃಢಪಟ್ಟಿದೆ. ಲಕ್ಷಾಂತರ ಮಂದಿ ಸೇರುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ್ದ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಕೊರೊನಾ ಸೋಂಕು ಹರಡಿದೆ ಎಂದು ವರದಿಯಾಗಿದೆ.
ಶನಿವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ಪ್ರಧಾನ ನರೇಂದ್ರ ಮೋದಿ, “ಎರಡು ಪುಣ್ಯ ಸ್ನಾನಗಳು ನಡೆದಿವೆ ಮತ್ತು ಕೊರೊನಾ ಬಿಕ್ಕಟ್ಟಿನಿಂದಾಗಿ ಕುಂಭವನ್ನು ಸಾಂಕೇತಿಕವಾಗಿ ಇಡಬೇಕೆಂದು ನಾನು ಪ್ರಾರ್ಥಿಸಿದ್ದೇನೆ. ಇದು ಈ ಬಿಕ್ಕಟ್ಟಿನಿಂದ ಹೋರಾಟಕ್ಕೆ ಬಲವನ್ನು ನೀಡುತ್ತದೆ” ಎಂದಿದ್ದರು.
“ಆಚಾರ್ಯ ಮಹಾಮಂಡಲೇಶ್ವರ ಧಾರ್ಮಿಕ ಸಭಾದ ಪೂಜ್ಯ ಸ್ವಾಮಿ ಅವಧೇಶಾನಂದ ಗಿರಿಜಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದೆ. ಎಲ್ಲಾ ಸಂತರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಎಲ್ಲಾ ಸಂತರು ಆಡಳಿತಕ್ಕೆ ಉತ್ತಮ ರೀತಿಯ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ ನಾನು ಸಂತ ಜಗತ್ತಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಮೋದಿ ತಿಳಿಸಿದ್ದರು.
ಇದನ್ನೂ ಓದಿ: ಕುಂಭಮೇಳದಲ್ಲಿ ಭಾಗವಹಿಸಿದ್ದ ಸಾಧು ಕೊರೊನಾಗೆ ಬಲಿ, 80 ಸಾಧುಗಳಿಗೆ ಸೋಂಕು ದೃಢ