ನ್ಯಾಯಾಂಗದ ಕಸ್ಟಡಿಯಲ್ಲಿ ನಿನ್ನೆ ನಿಧನರಾದ ಫಾದರ್ ಸ್ಟ್ಯಾನ್ ಸ್ವಾಮಿಯ ಅಂತ್ಯಕ್ರಿಯೆಯನ್ನು ಇಂದು, 6ನೇ ಜುಲೈ 2021ರಂದು ಯುಟ್ಯೂಬ್‌ನಲ್ಲಿ ವೀಕ್ಷಿಸುವಂತಾಯಿತು; ಅವರನ್ನು ಪಾದ್ರಿಯ ಕೆಂಪುಬಟ್ಟೆಯಲ್ಲಿ ಸುತ್ತಿ, ಕೈಯಲ್ಲಿ ಒಂದು ಬಟ್ಟಲು ಇರಿಸಲಾಗಿ, ಸುತ್ತಲೂ ಹೂವುಗಳಿಂದ ಅಲಂಕರಿಸಿ, ಒಂದು ಸುಂದರವಾದ ಶವಪೆಟ್ಟಿಗೆಯಲ್ಲಿ ಮುಂಬಯಿಯ ಸೇಂಟ್ ಪೀಟರ್‍ಸ್‌ನ ಅಲ್ಟಾರ್‌ನಲ್ಲಿ ಇರಿಸಲಾಗಿತ್ತು. ಸ್ಟ್ಯಾನ್ ಅವರ ಮುಖದಲ್ಲಿ ಸದಾಕಾಲ ಕಾಣುತ್ತಿದ್ದ ಪ್ರಸನ್ನಭಾವ ಮತ್ತು ಅವರ ಮುಗುಳ್ನಗು ಕಾಣಲಿಲ್ಲ. ಅವರ ಮುಖ ನೋಡಿದರೆ, ತನ್ನ ದಣಿವಿನಿಂದ ಮುಕ್ತಿ ಪಡೆದ ವ್ಯಕ್ತಿಯ ಮುಖದ ಹಾಗೆ ಕಾಣಿಸುತ್ತಿತ್ತು. ಕಳೆದ ಒಂದು ವರ್ಷದಲ್ಲಿ ಅವರು ಒಬ್ಬ ವಿಚಾರಣಾಧೀನ ಕೈದಿಯಾಗಿ ಮುಂಬಯಿಯ ತಲೋಜಾ ಜೈಲಿನಲ್ಲಿ ಅವರು ಅನುಭವಿಸಿದ ಹಿಂಸೆಯ ಕುರುಹು ಅಲ್ಲಿ ಕಾಣಿಸಲಿಲ್ಲ.

ಒಂದು ವೇಳೆ ಅವರು ನಿನ್ನೆ ಜೈಲಿನಲ್ಲಿ ನಿಧನರಾಗದೇ ಇದ್ದರೆ ಎಂದು ಊಹಿಸಿದಲ್ಲಿ ಹಾಗೂ ಇಂದು ನಡೆಯಬೇಕಿದ್ದ ಜಾಮೀನಿನ ವಿಚಾರಣೆಯಲ್ಲಿ ಪಾಲ್ಗೊಂಡು, ಅವರಿಗೆ ಜಾಮೀನು ಸಿಕ್ಕಿದ್ದಲ್ಲಿ, ಅವರು ತಮ್ಮ ವಿಶಿಷ್ಟ ಮುಗುಳ್ನಗೆಯೊಂದಿಗೆ ನಡೆದುಕೊಂಡು ಹೊರಬರುವುದನ್ನು ನೋಡಬಹುದಿತ್ತು. ಅವರ ಕಣ್‍ಗಳಲ್ಲಿಯ ಹೊಳಪು, ಸುತ್ತಲೂ ಇದ್ದವರನ್ನು ಶಾಂತಗೊಳಿಸುವಂತೆ ಮೂಡುವುದನ್ನು ನೋಡಬಹುದಿತ್ತು. ಆಗ ನಾವು ಹುಡುಕಿದರೂ, ’ನರೇಂದ್ರ ಮೋದಿ ಸರಕಾರವನ್ನು ಹಿಂಸಾತ್ಮಕವಾಗಿ ಉರುಳಿಸಲು ಸಂಚು ರೂಪಿಸುವ’ ಎಂಬ ಅತ್ಯಂತ ಹಾಸ್ಯಾಸ್ಪದವಾದ ಆರೋಪದಡಿ ಅವರನ್ನು ಸಿಕ್ಕಿಸಲು ಸಂಚು ಹೂಡಿದವರ ಮೇಲೆ ಸೇಡು ತೀರಿಸಿಕೊಳ್ಳುವ ಯಾವ ಆಲೋಚನೆಯೂ ಅವರ ಕಂಗಳಲ್ಲಿ ಕಂಡುಬರಲು ಸಾಧ್ಯವಿದ್ದಿರಲಿಲ್ಲ.

1980ರಲ್ಲಿ ನಾನೊಬ್ಬ ವಿದ್ಯಾರ್ಥಿಯಾಗಿ, ಭಾರತೀಯ ಸಾಮಾಜಿಕ ಸಂಸ್ಥೆಯಲ್ಲಿ (ಇಂಡಿಯನ್ ಸೋಷಲ್ ಇನ್ಸ್ಟಿಟ್ಯೂಟ್) ಸಾಮಾಜಿಕ ಬದಲಾವಣೆಗಳ ಬಗ್ಗೆ ನಡೆಯುತ್ತಿದ್ದ ಹಲವಾರು ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದೆ. ಆಗ ಸ್ಟ್ಯಾನ್ ಅಲ್ಲಿಯೇ ಇದ್ದರು. ಅವರು ಅಲ್ಲಿಯ ಹಲವಾರು ಗುಂಪುಗಳೊಂದಿಗೆ ಬೆರೆಯುತ್ತ, ಸಾಮಾಜಿಕ ಸುಧಾರಣೆಯೊಂದಿಗೆ ತೊಡಗಿಸಿಕೊಳ್ಳುವ ತಮ್ಮ ಪ್ರಯತ್ನಕ್ಕೆ ಉಳಿದವರಿಗೂ ನಯವಾಗಿ ಉತ್ತೇಜನ ನೀಡುತ್ತಿದ್ದರು. ನಾವು ಕೇಳಿದಾಗ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ನಿಜವಾದ ಸಾಮಾಜಿಕ ಬದಲಾವಣೆ ಎಂದರೇನು ಎಂಬುದರ ಬಗ್ಗೆ ಪರಿಣಾಮ ಕಾರಿಯಾದ ವಿಶ್ಲೇಷಣೆ ನೀಡುತ್ತಿದ್ದರು. ಸ್ಟ್ಯಾನ್ ಅವರ ಭಾಷೆ ಸರಳವಾಗಿತ್ತು, ಅಲ್ಲಿ ಸ್ಪಷ್ಟತೆ ಮತ್ತು ನಿಖರತೆ ಎದ್ದು ಕಾಣುತ್ತಿತ್ತು. ಅವರ ತೀಕ್ಷ್ಣ ಕಣ್ಣುಗಳು ತಾನು ಹೇಳಿದ್ದನ್ನೆಲ್ಲ ಎಲ್ಲರೂ ಗಮನವಿಟ್ಟು ಕೇಳಿಕೊಳ್ಳುತ್ತಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದವು. ಸುಮ್ಮಸುಮ್ಮನೇ ಅವರು ಒಂದು ಪದವನ್ನೂ ಉಚ್ಚರಿಸುತ್ತಿದ್ದಿಲ್ಲ. ಹಾಗೂ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಸಮಯದ ಒಂದು ಕ್ಷಣವನ್ನು ವ್ಯಯಿಸುವ ವ್ಯಕ್ತಿಯಾಗಿದ್ದಿಲ್ಲ ಸ್ಟ್ಯಾನ್.

ಸಾಮಾಜಿಕ ಬದಲಾವಣೆಯ ಒಬ್ಬ ತರಬೇತುದಾರರಾಗಿ ಹಾಗೂ ಸಂಶೋಧಕರಾಗಿ ಸ್ಟ್ಯಾನ್ ಅವರ ನಿಖರತೆಯು ದೇಶದ ಅತ್ಯಂತ ದುರ್ಬಲರಿಗೆ ಮೂಲಭೂತ ಸ್ವಾತಂತ್ರ್ಯವನ್ನು ದೊರಕಿಸಬೇಕು ಎಂಬ ಅವರ ಗಟ್ಟಿಯಾದ ಹಾಗೂ ಸಹಾನುಭೂತಿಯ ದೃಢನಿಶ್ಚಯದೊಂದಿಗೆ ತಳುಕು ಹಾಕಿಕೊಂಡಿತ್ತು. ಆ ಸ್ವಾತಂತ್ರ್ಯವನ್ನು ದೊರಕಿಸುವ ಸಲುವಾಗಿ ಸಂವಿಧಾನಬದ್ಧವಾದ ಮೂಲಭೂತ ಹಕ್ಕುಗಳನ್ನು ಅನುಷ್ಠಾನಗೊಳಿಸುವ ಅಗತ್ಯವನ್ನು ಅವರು ಗಟ್ಟಿಯಾಗಿ ವಾದಿಸಿದರು. ಅವರು ಮಧ್ಯಭಾರತದ, ಅದರಲ್ಲೂ ನಿರ್ದಿಷ್ಟವಾಗಿ ಜಾರ್ಖಂಡಿನ ಬುಡಕಟ್ಟು ಜನರ ಹೋರಾಟಗಳ ಕಡೆಗೆ ಹೊರಟರು. ಬುಡಕಟ್ಟು ಜನರು ತಮ್ಮ ಭೂಮಿ, ತಮ್ಮ ಅರಣ್ಯ, ಅವರ ನದಿಗಳು, ತಮ್ಮ ಮಾನವ ಹಕ್ಕುಗಳು ಮತ್ತು ತಮ್ಮ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಮಾಡುತ್ತಿದ್ದ ಹೋರಾಟಗಳನ್ನು ಸಂಘಟಿಸುವಲ್ಲಿ ನಿರತರಾದರು. ಈ ಸಮುದಾಯಗಳು ಸ್ವಾತಂತ್ರಪೂರ್ವದಿಂದಲೂ ಹಾಗೂ ನಂತರದಲ್ಲಿ ಅನುಭವಿಸುತ್ತಿರುವ ವ್ಯವಸ್ಥಿತವಾದ ಶೋಷಣೆಯ ಬಗ್ಗೆ ಅವರು ಮಾತನಾಡಿದರು ಹಾಗೂ ಈ ಘೋರ ವಿನಾಶವನ್ನು ತಡೆಯಬೇಕಾದರೆ ಸಂವಿಧಾನದ 5ನೇ ಶೆಡ್ಯೂಲ್‌ಅನ್ನು ಅನುಷ್ಠಾನಗೊಳಿಸುವುದೊಂದೇ ದಾರಿ ಎಂದು ಪ್ರತಿಪಾದಿಸಿದರು. ಸ್ಟ್ಯಾನ್ ಅವರಿಗೆ ಭಾರತೀಯ ಸಂವಿದಾನದ 39ನೇ ಅನುಚ್ಛೇದವು ಕೇವಲ ಅಲಂಕಾರಿಕವಾದ ಅನುಚ್ಛೇದವಾಗಿದ್ದಿಲ್ಲ.

PC : Catholic Outlook

ಆದಿವಾಸಿ ಜನರನ್ನು ಶೋಷಣೆ ಮಾಡುವುದು, ಅಲ್ಲಿಯ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವುದೇ ಸಾಮಾನ್ಯ ಎಂಬ ಪರಿಸ್ಥಿತಿಯಲ್ಲಿ ಸ್ಟ್ಯಾನ್ ಮತ್ತು ಅವರ ಸಂಗಡಿಗರು ದಣಿವಿಲ್ಲದೇ ದಶಕಗಳ ಕಾಲ ನ್ಯಾಯಯುತವಾದ ದಾರಿಯಲ್ಲಿ ಈ ಕ್ರೂರ ದಬ್ಬಾಳಿಕೆಯನ್ನು ನಿಲ್ಲಿಸಬಹುದು ಎಂಬ ಆತ್ಮವಿಶ್ವಾಸವನ್ನು ತುಂಬಲು ಕೆಲಸ ಮಾಡಿದರು. ಅವರ ಜೊತೆಗೂಡಬೇಕಿದ್ದ ಸರಕಾರವು, ಆ ಪ್ರದೇಶದ ಖನಿಜ ಸಂಪತ್ತನ್ನು, ಅರಣ್ಯಗಳನ್ನು ಮತ್ತು ನೀರನ್ನು ಲೂಟಿ ಮಾಡುತ್ತಿದ್ದ ಕಾಂಟ್ರ್ಯಾಕ್ಟರ್‌ಗಳು ಮತ್ತು ಕಾರ್ಪೊರೇಟ್‌ಗಳೊಂದಿಗೆ ಕೈಜೋಡಿಸಿತು. ವಿನಾಶ ಮತ್ತು ನೋವಿನ ಈ ಘೋರ ನೆಲದಲ್ಲಿ ಸ್ಟ್ಯಾನ್ ಜೀವಿಸಿದರು, ಶೋಷಣೆಗೊಳಗಾಗುತ್ತಿರುವ ಸಮುದಾಯಗಳೊಂದಿಗೆ ಹಾಗೂ ಅವರ ಹೋರಾಟಗಳಲ್ಲಿ ಒಂದಾಗುತ್ತ ಬದುಕಿದರು.

ಲೂಟಿ ಮತ್ತು ಸುಲಿಗೆಯಿಂದ ಲಾಭ ಪಡಯುತ್ತಿರುವವರಿಗೆ ಇದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಸ್ಟ್ಯಾನ್ ಮತ್ತು ಅವರ ಸಂಗಡಿಗರನ್ನು ಸುಮ್ಮನಾಗಿಸಲು ಅನೇಕ ಪ್ರಯತ್ನಗಳು ನಡೆದವು. ಆದರೆ ಅವರು ಯಾವುದೇ ಪ್ರಭಾವಕ್ಕೆ ಒಳಗಾಗದೇ ತಮ್ಮ ಕೆಲಸವನ್ನು ವ್ಯವಸ್ಥಿತವಾಗಿ ಹಾಗೂ ಧೈರ್ಯದಿಂದ ಮುಂದುವರೆಸಿದರು. ಸ್ಟ್ಯಾನ್ ಅವರು, ಸಾವಿರಾರು ಆದಿವಾಸಿ ಜನರನ್ನು ವಿಚಾರಣೆಯಿಲ್ಲದೇ ಜೈಲಿನಲ್ಲಿ ಇಟ್ಟಿದ್ದು ಸ್ಪಷ್ಟವಾಗಿ ತೋರಿಸುವಂತೆ, ಅಲ್ಲಿನ ಸರಕಾರಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ನಡೆಸುತ್ತಿದ್ದ ಶೋಷಣೆಯನ್ನು ಬಹಿರಂಗಪಡಿಸಲು ಪ್ರಯತ್ನಗಳನ್ನು ಮಾಡಿದರು. ಆ ಆದಿವಾಸಿ ಜನರ ಮೇಲಿನ ಆರೋಪಗಳು ಸಾಬೀತಾಗದೇ ಇದ್ದಾಗ ಅವರನ್ನು ಮರಳಿ ಮನೆಗೆ ಕಳುಹಿಸಲು ತ್ವರಿತವಾದ ವಿಚಾರಣೆಯನ್ನು ನಡೆಸುವಂತೆ ಅವರು ನ್ಯಾಯಾಲಯಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದರು.

ಈ ದುಷ್ಟ ಪ್ರಕ್ರಿಯೆಗೆ ತಾನೂ ಬಲಿಪಶು ಆಗುವೆ ಎಂದು ಸ್ಟ್ಯಾನ್ ಅವರಿಗೆ ಅನಿಸಿತ್ತೆ? ಭೀಮಾ ಕೋರೆಗಾಂವ್ ಎಂಬ ಅರ್ಥವಿಲ್ಲದ ಪ್ರಕರಣದಲ್ಲಿ ಒಬ್ಬ ವಿಚಾರಣಾಧೀನ ಕೈದಿಯಾಗಿ, ಅತ್ಯಂತ ಕರಾಳ ಯುಎಪಿಎ ಕಾನೂನಿನ ಉಲ್ಲಂಘಿಸಿದ ಹಾಗೂ ರಾಷ್ಟ್ರವಿರೋಧಿ ಎಂದು ಆರೋಪಿಸಲಾಗುವುದೆಂದು ತಿಳಿದಿತ್ತೆ? ಗೊತ್ತಿಲ್ಲ ಆದರೆ ಒಂದಂತೂ ನಿಜ. ಅವರನ್ನು ಇತರ ಹೋರಾಟಗಾರರು, ವಕೀಲರು, ಟ್ರೇಡ್ ಯುನಿಯನ್ ನಾಯಕರು ಮತ್ತು ಅಕ್ಯಾಡೆಮಿಕ್ ವ್ಯಕ್ತಿಗಳು ಸೇರಿದಂತೆ 15 ಜನರ ಜೊತೆಗೆ ಪ್ರಕರಣದಲ್ಲಿ ಸಿಕ್ಕಿಸಿ ತಲೋಜಾ ಜೈಲಿನಲ್ಲಿ ದಬ್ಬಿದಾಗ, ಅವರು ತತ್ವಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದ ಗುಣಮಟ್ಟದ ನ್ಯಾಯಕ್ಕಾಗಿ ದೃಢ ನಿಶ್ಚಯದಿಂದ ಹೋರಾಟ ಮಾಡಿದರು.

ಸ್ಟ್ಯಾನ್ ಅವರು ಪಾರ್ಕಿನ್ಸನ್ ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ರಾಷ್ಟ್ರೀಯ ತನಿಖಾ ಎಜೆನ್ಸಿಯು (ಎನ್‌ಐಎ) ಅವೆಲ್ಲ ಸುಳ್ಳು ಎಂದು ವಾದ ಮಾಡಿತು. ಅವರು ಅನುಭವಿಸುತ್ತಿದ್ದ ಕಷ್ಟಗಳನ್ನು ಇತರರಿಗೆ (ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಧೈರ್ಯ ತೋರುವವರು) ಉದಾಹರಣೆಯಂತೆ ಬಿಂಬಿಸುವಂತೆ ಮಾಡುವ ಸಲುವಾಗಿ ಸ್ಟ್ಯಾನ್ ಅವರಿಗೆ ಸುಲಭವಾಗಿ ನೀರು ಕುಡಿಯಲು ಬೇಕಾಗಿದ್ದ ಸಿಪ್ಪರ್‌ಅನ್ನೂ ಸರಿಯಾದ ಸಮಯಕ್ಕೆ ಪೂರೈಸಲಿಲ್ಲ. ಅವರ ಆರೋಗ್ಯ ಹದಗೆಟ್ಟಿದಂತೆ, ನ್ಯಾಯಾಧೀಶರು ಅವರನ್ನು ಜೈಲಿನ ಆಸ್ಪತ್ರೆಗೆ ವರ್ಗಾಯಿಸಲು ಒಪ್ಪಿಕೊಂಡಾಗ, ಸ್ಟ್ಯಾನ್ ಅದನ್ನು ವಿರೋಧಿಸಿದರು, ಅವರು ತಮ್ಮ ಹಕ್ಕಾದ ಜಾಮೀನನ್ನು ನೀಡಬೇಕೆಂದು ವಾದಿಸಿದರು. ಆದರೆ ಅದನ್ನು ನಿರಾಕರಿಸಲಾಯಿತು. ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಾಗ, ಹಾಗೂ ಅವರಿಗೆ ಸ್ವಾಭಾವಿಕವಾಗಿಯೇ ಕೋವಿಡ್ ಸೋಂಕು ತಗುಲಿದಾಗ ಅವರನ್ನು ಆಸ್ಪತ್ರೆಗೆ ವರ್ಗಾಯಿಸಬೇಕೆಂದು ಆದೇಶ ನೀಡಲಾಯಿತು, ಆದರೆ ಅದು ಸಾಧ್ಯವಾಗಲು ಹತ್ತು ದಿನ ಹಿಡಿಯಿತು. ಆಗ ಬಹಳ ತಡವಾಗಿತ್ತು.

ವಶದಲ್ಲಿದ್ದಾಗ ಆದ ಸ್ಟ್ಯಾನ್ ಅವರ ಸಾವು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಆಗಬಹುದಾದ ಸಾಂಸ್ಥಿಕ ಕೊಲೆ ಅಂದರೆ ಹೇಗಿರುತ್ತೆ ಎಂಬುದರ ಸ್ಪಷ್ಟ ಚಿತ್ರಣವಾಗಿದೆ. ಸ್ಟ್ಯಾನ್ ಅವರು ವಿಚಾರಣಾಧೀನ ಕೈದಿಗಳ ಹಕ್ಕುಗಳಿಗಾಗಿ ಹೋರಾಡಿದರು. ಕೊನೆಯಲ್ಲಿ ಅವರೇ ಒಬ್ಬ ವಿಚಾರಣಾಧೀನ ಕೈದಿಯಾಗಿ ಸಾವನ್ನಪ್ಪಿದರು. ಸ್ಟ್ಯಾನ್ ಸ್ವಾಮಿ ಒಬ್ಬ ಸಂತನಾಗಿ ಜೀವಿಸಿದರು, ಶಾಂತಿಯನ್ನು ಹೃದಯದಲ್ಲಿಟ್ಟುಕೊಂಡು ಯಾವುದೇ ದ್ವೇಷವಿಲ್ಲದೇ ಜೀವಿಸಿದರು. ಭಾರತವು ಗುರುತಿಸಲು ವಿಫಲವಾದ ನಿಜವಾದ ಭಾರತರತ್ನ.

  • ಲಿಯೋ ಎಫ್. ಸಾಲ್ಡಾನಾ

ಅನುವಾದ: ರಾಜಶೇಖರ ಅಕ್ಕಿ

ಲಿಯೋ ಎಫ್. ಸಾಲ್ಡಾನಾ

ಲಿಯೋ ಎಫ್. ಸಾಲ್ಡಾನಾ
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲಿಯೋ, ಪರಿಸರ ಬೆಂಬಲ ಗುಂಪುಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ: ‘ಹೋರಾಟಗಾರರನ್ನು ಬಿತ್ತಲಾಗುತ್ತದೆ; ಹೂಳಲಾಗುವುದಿಲ್ಲ’ – ಸ್ಟಾನ್‌ಸ್ವಾಮಿ ನಿಧನಕ್ಕೆ ಒಕ್ಕೂಟ ಸರ್ಕಾರದ ವಿರುದ್ದ ದೇಶದಾದ್ಯಂತ ಆಕ್ರೋಶ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಲಿಯೋ ಎಫ್. ಸಾಲ್ಡಾನಾ
+ posts

LEAVE A REPLY

Please enter your comment!
Please enter your name here