ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ರವರು ತಮ್ಮ JDU ಪಕ್ಷದ ಮುಖಂಡರನ್ನು ನಿರ್ಲಕ್ಷಿಸಿ, ಕೆಳ ಅಂದಾಜು ಮಾಡುತ್ತಿದ್ದಾರೆ. ಇದರ ಫಲವಾಗಿ JDU ಯಾವಾಗ ಬೇಕಾದರೂ ಇಬ್ಭಾಗವಾಗಬಹುದು ಎಂದು ಲೋಕ ಜನಶಕ್ತಿ ಪಕ್ಷದ ಮುಖಂಡ ಚಿರಾಗ್ ಪಾಸ್ವಾನ್ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಆರ್ಶಿವಾದ್ ಯಾತ್ರೆಯ ಭಾಗವಾಗಿ ಸಮಸ್ತಿಪುರ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, “ನನ್ನನ್ನು ಕೇಂದ್ರ ಸಂಪುಟದಿಂದ ಹೊರಗಿಡುವ ಏಕೈಕ ಉದ್ದೇಶದಿಂದ ನಿತೀಶ್‌ ಕುಮಾರ್‌ರವರು ನಮ್ಮ ಪಕ್ಷವನ್ನು ಒಡೆದರು. ನಾನೆಂದೂ ಕೇಂದ್ರ ಮಂತ್ರಿಯಾಗಬೇಕೆಂಬ ಬೇಡಿಕೆ ಇಟ್ಟವನಲ್ಲ. ನಮ್ಮ ಚಿಕ್ಕಪ್ಪನವರನ್ನು (ಪಶುಪತಿ ಪರಾಸ್) ಯಾವ ಕೋಟಾದಲ್ಲಿ ಮಂತ್ರಿ ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ರಾಜೀವ್‌ ರಂಜನ್ (ಲಲನ್ ಸಿಂಗ್‌) ನಂತಹ ಜೆಡಿಯು ನಾಯಕರಿಗೆ ಮೋಸವಾಗಿದೆ. ಇದರ ಫಲವನ್ನು ಸದ್ಯದಲ್ಲಿಯೇ ನಿತೀಶ್ ಕುಮಾರ್ ಅನುಭವಿಸಲಿದ್ದಾರೆ” ಎಂದು ಹೇಳಿದ್ದಾರೆ.

ಪಶುಪತಿ ಪರಾಸ್ ಸೇರಿದಂತೆ ಐದು ಸಂಸದರನ್ನು ನಮ್ಮ ಪಕ್ಷದ ಸಂವಿಧಾನದ ಅನುಸಾರ ಉಚ್ಛಾಟನೆ ಮಾಡಿರುವುದರ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಮಾಹಿತಿ ನೀಡಿದ್ದೇನೆ. ಲಲನ್ ಸಿಂಗ್‌ರವರು ನಮ್ಮ ಪಕ್ಷ ಹೋಳಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕಾಗಿ ಅವರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗುತ್ತದೆ ಎಂದು ನಂಬಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಅವರು ಜೆಡಿಯು ಪಕ್ಷವನ್ನು ಇಬ್ಭಾಗ ಮಾಡಲಿದ್ದಾರೆ ಎಂದು ಚಿರಾಗ್ ಹೇಳಿದ್ದಾರೆ.

ನಮ್ಮ ಪಕ್ಷದಿಂದ ಕೆಲವರು ಹೊರನಡೆದಿದ್ದು ಸರಿಯಾದುದ್ದಲ್ಲ. ಈ ಕುರಿತು ನಾವು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇವೆ. ನಾನೀಗ ಪಕ್ಷ ಸಂಘಟನೆಯತ್ತ ಗಮನ ಹರಿಸಲಿದ್ದು, ಆರ್ಶಿವಾದ್ ಯಾತ್ರೆ ಮುಗಿದ ನಂತರ ಪಾದಯಾತ್ರೆ ಆರಂಭಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ನಾನಿನ್ನು ಎಲ್‌ಜೆಪಿಯ ಅಧ್ಯಕ್ಷನಾಗಿದ್ದೇನೆ. ಹೊರನಡೆದವರ ಕುರಿತು ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿದೆ. ಅವರನ್ನು ಸಂಸತ್ ಸ್ಥಾನದಿಂದ ಉಚ್ಛಾಟಿಸುವಂತೆ ಸ್ವೀಕರ್‌ರವರಿಗೆ ಪತ್ರ ಬರೆಯುತ್ತೇನೆ. ಐದು ಜನರಲ್ಲಿ ಒಬ್ಬರು ಮಾತ್ರ ಮಂತ್ರಿಯಾಗಿದ್ದಾರೆ. ಉಳಿದವರ ಕತೆಯೇನು? ಎಂದು ಚಿರಾಗ್ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಸಂಪುಟ ಪುನರ್‌ರಚನೆ: ಯಾರಿಗೆ ಯಾವ ಖಾತೆ? – ಇಲ್ಲಿದೆ ಡೀಟೈಲ್ಸ್

LEAVE A REPLY

Please enter your comment!
Please enter your name here