ತಮ್ಮ ವಿರುದ್ಧ ದನಿ ಎತ್ತಿದ ಕೊರಳುಗಳನ್ನು ಅದುಮಿ ಉಸಿರು ನಿಲ್ಲಿಸುವ ಆಳುವವರ ಅಮಾನುಷ ಮಸಲತ್ತು ಫಲ ನೀಡಿದೆ. ಕಾರಾಗೃಹದಲ್ಲಿ ಅಸಹಾಯಕರಾಗಿ ದಿನದೂಡಿದ ಮಾನವತಾವಾದಿ ಸ್ಟ್ಯಾನ್ ಸ್ವಾಮಿಯನ್ನು ಪ್ರಭುತ್ವ ಕಡೆಗೂ ಬಲಿ ತೆಗೆದುಕೊಂಡಿದೆ.

ತನ್ನ ಕೈಗೆ ಹತ್ತಿಕೊಂಡಿರುವ ಈ ’ಹತ್ಯೆ’ಯ ಪಾಪದ ನೆತ್ತರನ್ನು ಯಾವ ಪವಿತ್ರ ನದಿಯ ನೀರು ಕೂಡ ತೊಳೆಯಲಾರದು. ದೇಶದ ನ್ಯಾಯಾಂಗದ ಸ್ವತಂತ್ರ ಕಾರ್ಯನಿರ್ವಹಣೆಯ ಕಡೆಗೂ ಈ ಸಾವು ಬೆರಳು ಮಾಡಿ ತೋರಿದೆ.

ಸ್ವಾಮಿಯವರಿಗೆ ಜಾಮೀನು ನೀಡಿಕೆಯನ್ನು ವಿರೋಧಿಸುತ್ತಲೇ ಬಂದ ಸರ್ಕಾರ ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಮಟ್ಟ ಹಾಕಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲದು ಎಂಬುದನ್ನು ರುಜುವಾತು ಮಾಡಿ ತೋರಿದೆ.

ಸ್ವಾಮಿ ಸೇರಿದಂತೆ ಎಲ್ಗಾರ್ ಪರಿಷತ್ತಿನ ಭೀಮಾ ಕೋರೆಗಾಂವ್ ಕೇಸಿನಲ್ಲಿ ಸಿಕ್ಕಿಸಿಹಾಕಲಾಗಿರುವ ಎಲ್ಲ ಸಾಮಾಜಿಕ ಹೋರಾಟಗಾರರು ಮತ್ತು ಸಾಹಿತಿಗಳನ್ನು ಸುಳ್ಳು ಸಾಕ್ಷ್ಯ ಸೃಷ್ಟಿಸಿ ಬಂಧಿಸಲಾಗಿದೆ ಎಂದು ಅಮೆರಿಕೆಯ ವಾಷಿಂಗ್ಟನ್ ಪೋಸ್ಟ್ ಇತ್ತೀಚೆಗೆ ವಿಶೇಷ ವರದಿ ಪ್ರಕಟಿಸಿತ್ತು. ಈ ದಿಸೆಯಲ್ಲಿ ಆರ್ಸೆನಾಲ್ ಕನ್ಸಲ್ಟಿಂಗ್ ಎಂಬ ವಿಧಿವಿಜ್ಞಾನಗಳ ಪ್ರಯೋಗಶಾಲೆಯ ವರದಿಯನ್ನು ಅದು ಉಲ್ಲೇಖಿಸಿತ್ತು. ಸುಳ್ಳು ಸಾಕ್ಷ್ಯಾಧಾರಗಳನ್ನು ಆಪಾದಿತರ ಕಂಪ್ಯೂಟರುಗಳಲ್ಲಿ ’ಮಾಲ್ವೇರ್’ ಮೂಲಕ ನೆಡಲಾಗಿತ್ತು ಎಂಬ ಸ್ಫೋಟಕ ವರದಿಯನ್ನು ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿತ್ತು.

ಬ್ರಿಟಿಷರ ಅಡಿಯಲ್ಲಿ ದಲಿತ ಸೇನೆಯು, ಪೇಷ್ವೆಗಳ ಬಲಿಷ್ಠ ಜಾತಿಗಳ ಸೇನೆಯನ್ನು ಸೋಲಿಸಿದ ಐತಿಹಾಸಿಕ ಯುದ್ಧದ ಸಂಸ್ಮರಣೆಗಾಗಿ ಮಹಾರಾಷ್ಟ್ರದ ಭೀಮಾ ಕೋರೆಗಾಂವ್‌ನಲ್ಲಿ ಮೂರು ವರ್ಷಗಳ ಹಿಂದೆ ಸಮಾವೇಶಗೊಂಡಿದ್ದ ಲಕ್ಷಾಂತರ ದಲಿತರನ್ನು ಪ್ರಚೋದಿಸಿದ ಆಪಾದನೆಯನ್ನು ಸ್ವಾಮಿ ಮತ್ತು ಇತರೆ ಹದಿನೈದು ಮಂದಿಯ ಮೇಲೆ ಹೊರಿಸಿ ಬಂಧಿಸಲಾಗಿತ್ತು. ಪ್ರಧಾನಿಯವರ ಹತ್ಯೆಗೆ ಸಂಚು ನಡೆಸಿದರೆಂಬ ಆಪಾದನೆಯನ್ನೂ ಇವರ ಮೇಲೆ ಹೊರಿಸಲಾಗಿತ್ತು.

ಈ ಹದಿನಾರು ಮಂದಿಯ ಪೈಕಿ ಸ್ಟ್ಯಾನ್ ಸ್ವಾಮಿ ಹೆಚ್ಚು ವಯಸ್ಸು ಸಂದವರು. ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ ಎಂಬ ಕರಾಳ ಕಾಯಿದೆಯಡಿ ಇವರೆಲ್ಲರ ದಸ್ತಗಿರಿಯಾಗಿತ್ತು. ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಬಗ್ಗುಬಡಿಯುವ ಅಸ್ತ್ರವಾಗಿ ಮೋದಿ ಸರ್ಕಾರ ಈ ಕಾಯಿದೆಯ ವ್ಯಾಪಕ ದುರ್ಬಳಕೆ ನಡೆಸಿದೆ.

PC : Live Law, (ಸುರೇಂದ್ರ ಗಾಡ್ಲಿಂಗ್)

ಆಪಾದಿತರ ಪೈಕಿ ಒಬ್ಬರಾದ ರೋನಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ ಅಜ್ಞಾತ ಹ್ಯಾಕರ್ ಒಬ್ಬನು ಮೂವತ್ತು ದಸ್ತಾವೇಜುಗಳನ್ನು ’ನೆಟ್ಟಿದ್ದ’ನೆಂದು ವಾಷಿಂಗ್ಟನ್ ಪೋಸ್ಟ್ ಈ ವರ್ಷದ ಶುರುವಿನಲ್ಲಿ ವರದಿ ಮಾಡಿತ್ತು. ಆರ್ಸೆನಾಲ್ ಕನ್ಸಲ್ಟಿಂಗ್ ಎಂಬ ವಿಧಿವಿಜ್ಞಾನ ಸಂಸ್ಥೆಯ ತನಿಖೆಯನ್ನು ಈ ವರದಿ ಆಧರಿಸಿತ್ತು. ಕಳೆದ ತಿಂಗಳು ಇದೇ ವಿಧಿವಿಜ್ಞಾನ ಸಂಸ್ಥೆ ಆಪಾದಿತರಲ್ಲಿ ಒಬ್ಬರಾದ ಸುರೇಂದ್ರ ಗಾಡ್ಲಿಂಗ್ ಎಂಬ ದಲಿತ ಹಕ್ಕುಗಳ ಹೋರಾಟಗಾರರ ಕಂಪ್ಯೂಟರಿನ ಹಾರ್ಡ್ ಡ್ರೈವ್‌ನ್ನು ವಿಶ್ಲೇಷಿಸಿತ್ತು. ಹ್ಯಾಕಿಂಗ್ ಮಾಡಿ ಅವರ ಕಂಪ್ಯೂಟರಿಗೆ ಸುಳ್ಳು ಸಾಕ್ಷ್ಯಗಳನ್ನು ಹುದುಗಿಸಿದ ಕುರಿತು ಈ ಸಲ ಆರ್ಸೆನಾಲ್ ಕನ್ಸಲ್ಟಿಂಗ್ ಸಂಸ್ಥೆಗೆ ಇನ್ನಷ್ಟು ಆಳವಾದ ಪುರಾವೆ ದೊರೆತಿದೆ. ಬಾಸ್ಟನ್ ಮ್ಯಾರಥಾನ್ ಬಾಂಬಿಂಗ್ ಮುಂತಾದ ತೀರಾ ಗಂಭೀರ ಪ್ರಕರಣಗಳ ಸಾಕ್ಷ್ಯಗಳನ್ನು ಈ ಸಂಸ್ಥೆ ವಿಶ್ಲೇಷಿಸಿದೆ.

ಆದರೆ, ಸುರೇಂದ್ರ ಗಾಡ್ಲಿಂಗ್ ಕಂಪ್ಯೂಟರಿನಲ್ಲಿ ಹ್ಯಾಕಿಂಗ್ ಮೂಲಕ ಸುಳ್ಳು ಸಾಕ್ಷ್ಯ ನೆಟ್ಟು, ಆಪಾದಿತರ ವಿರುದ್ಧ ಸಾಕ್ಷ್ಯ ಸೃಷ್ಟಿಸಿರುವ ಪ್ರಕರಣದಂತಹ ಮತ್ತೊಂದು ಗಂಭೀರ ಪ್ರಕರಣವನ್ನು ತಾನು ಕಂಡಿಲ್ಲವೆಂದು ಈ ಸಂಸ್ಥೆ ಹೇಳಿದೆ. 2016ರ ಫೆಬ್ರವರಿಯಿಂದ 2017ರ ನವೆಂಬರ್ ತನಕ 20 ತಿಂಗಳ ಕಾಲ ಗಾಡ್ಲಿಂಗ್ ಅವರ ಕಂಪ್ಯೂಟರನ್ನು ಹ್ಯಾಕಿಂಗ್ ಮೂಲಕ ಸುಳ್ಳು ಸಾಕ್ಷ್ಯ ನೆಡಲು ಗುರಿಯಾಗಿಸಲಾಗಿತ್ತು. ರೋನಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ 30 ದಸ್ತಾವೇಜುಗಳನ್ನು ನೆಟ್ಟಿದ್ದ ಅದೇ ಹ್ಯಾಕರ್, ಗಾಡ್ಲಿಂಗ್ ಅವರ ಕಂಪ್ಯೂಟರಿನಲ್ಲಿ 14 ಸುಳ್ಳು ಸಾಕ್ಷ್ಯದ ದಸ್ತಾವೇಜುಗಳನ್ನು ನೆಟ್ಟಿದ್ದಾನೆ ಎಂದು ಆರ್ಸೆನಾಲ್ ಹೇಳಿದೆ. ಅರ್ಸೆನಾಲ್ ವಿಶ್ಲೇಷಣೆ ಮತ್ತು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ವರದಿಯ ಕುರಿತು ಪ್ರತಿಕ್ರಿಯಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ನಿರಾಕರಿಸಿದೆ. ಈ ವಿಷಯ ನ್ಯಾಯಾಲಯದಲ್ಲಿ ವಿಚಾರಣಾಧೀನ ಎಂಬ ಕಾರಣ ಮುಂದೆಮಾಡಿದೆ.

ಸುರೇಂದ್ರ ಗಾಡ್ಲಿಂಗ್ ಮತ್ತು ರೋನಾ ವಿಲ್ಸನ್ ಅವರಂತೆ ಸ್ಟ್ಯಾನ್ ಸ್ವಾಮಿ ಮತ್ತು ಎಲ್ಗಾರ್ ಪರಿಷತ್- ಭೀಮಾ ಕೋರೆಗಾಂವ್ ಪ್ರಕರಣದ ಇತರೆ 13 ಮಂದಿ ಬಂಧಿತರೂ ಹ್ಯಾಕಿಂಗ್ ಸಂಚಿನ ಬಲಿಪಶುಗಳಾಗಿದ್ದರೆ ಆಶ್ಚರ್ಯವಿಲ್ಲ ಎಂದು ಆರ್ಸೆನಾಲ್- ವಾಷಿಂಗ್ಟನ್ ಪೋಸ್ಟ್ ವರದಿ ಹೇಳುತ್ತದೆ.

ಸುರೇಂದ್ರ ಗಾಡ್ಲಿಂಗ್ ಅವರ ಕಂಪ್ಯೂಟರಿನ ಹಾರ್ಡ್ ಡ್ರೈವ್‌ಅನ್ನು ವಶಪಡಿಸಿಕೊಂಡಿದ್ದ ಪೊಲೀಸರು ಅದರ ಪ್ರತಿಯೊಂದನ್ನು ಗಾಡ್ಲಿಂಗ್ ಪರ ವಕೀಲರಿಗೆ ನೀಡಿದ್ದರು. ಈ ಪ್ರತಿಯನ್ನು ಆರ್ಸೆನಾಲ್ ವಿಶ್ಲೇಷಣೆಗೆ ಕಳಿಸಲಾಗಿತ್ತು. ’ಮಾಲ್ವೇರ್’ಗಳನ್ನು ಕಳಿಸುವ ಹಲವು ಪ್ರಯತ್ನಗಳ ನಂತರ ಗಾಡ್ಲಿಂಗ್ ಅವರ ಕಂಪ್ಯೂಟರ್ ಮೇಲೆ ಹ್ಯಾಕರ್ ನಿಯಂತ್ರಣ ಸಾಧಿಸಿದನು. ಗಾಡ್ಲಿಂಗ್ ಅವರ ಪರಿಚಿತರೇ ಅವರಿಗೆ ಕಳಿಸಿರುವಂತೆ ಮೋಸ ಮಾಡಿ ಅವರ ಕಂಪ್ಯೂಟರಿನಲ್ಲಿ ಸುಳ್ಳು ಪುರಾವೆಗಳ ದಸ್ತಾವೇಜುಗಳನ್ನು ಹುದುಗಿಸಿದ ಎಂದು ಆರ್ಸೆನಾಲ್ ತಿಳಿಸಿದೆ.

ಸ್ಟ್ಯಾನ್ ಸ್ವಾಮಿ ಮತ್ತು ಇತರೆ ಎಲ್ಲ ಆಪಾದಿತರು ತಮ್ಮ ಮೇಲಿನ ಆಪಾದನೆಗಳು ಕಟ್ಟುಕತೆ ಎಂದೇ ಆರಂಭದಿಂದ ಹೇಳುತ್ತ ಬಂದಿದ್ದಾರೆ.

ದೇಶದ ಶೇ.40ರಷ್ಟು ಅಮೂಲ್ಯ ಖನಿಜಗಳ ತವರು ಜಾರ್ಖಂಡ್. ಇಲ್ಲಿನ ಅಷ್ಟಿಷ್ಟು ಅಭಿವೃದ್ಧಿಯೂ ಅಸಂತುಲಿತ. ಇದಕ್ಕೆ ಆದಿವಾಸಿಗಳು ತೆತ್ತಿರುವ ಬೆಲೆ ಅಪಾರ. ರಾಜ್ಯದ ಜನಸಂಖ್ಯೆಯ ಕಾಲು ಭಾಗದಷ್ಟಿರುವ ಆದಿವಾಸಿಗಳ ಸ್ಥಿತಿಗತಿಗಳು ಶೋಚನೀಯ.

ಜಾರ್ಖಂಡ್‌ದ ಆದಿವಾಸಿಗಳ ಹಕ್ಕುಗಳಿಗಾಗಿ ತಮ್ಮ ಬದುಕನ್ನು ಮುಡುಪಾಗಿಸಿ ಹೋರಾಟಗಳಲ್ಲಿ ತೊಡಗಿಕೊಂಡಿದ್ದವರು ಫಾದರ್ ಸ್ಟ್ಯಾನ್ ಸ್ವಾಮಿ. ಕ್ರೈಸ್ತ ಧರ್ಮಗುರುವಾಗಿದ್ದ ಮಾನವತಾವಾದಿ. ಧರ್ಮಪ್ರಚಾರ ಮತ್ತು ಮತಪರಿವರ್ತನೆಯಲ್ಲಿ ತೊಡಗಿದ್ದವರಲ್ಲ. ಆದಿವಾಸಿಗಳನ್ನು ಅರಣ್ಯಗಳಿಂದ ಒಕ್ಕಲೆಬ್ಬಿಸಿ ಅಲ್ಲಿನ ಭೂಗರ್ಭದಲ್ಲಿ ಹುದುಗಿರುವ ಖನಿಜ ಸಂಪತ್ತನ್ನು ಕಾರ್ಪೊರೇಟ್‌ಗಳ ವಶಕ್ಕೆ ಒಪ್ಪಿಸುವುದು ಸರ್ಕಾರಗಳ ಬಹುಕಾಲದ ಕಾರ್ಯಸೂಚಿ. ಆದಿವಾಸಿಗಳ ದನಿಯಾಗಿ ಹೋರಾಡುವವರನ್ನು ಬಲಿ ಹಾಕುವುದು ಈ ಕಾರ್ಯಸೂಚಿಯ ಉಪಕಾರ್ಯಸೂಚಿ. ಸ್ಟ್ಯಾನ್ ಸ್ವಾಮಿ ಮತ್ತು ಸುಧಾ ಭಾರದ್ವಾಜ್ ಅವರ ಬಂಧನವನ್ನು ಈ ಬೆಳಕಿನಲ್ಲಿಯೂ ನೋಡಬೇಕಿದೆ.

ಜಾರ್ಖಂಡ್‌ದ ಆದಿವಾಸಿ ಸೀಮೆ ಸ್ವಾಮಿಯವರ ಕಾರ್ಯಕ್ಷೇತ್ರವಾಗಿತ್ತು. ಗ್ರಾಮಸಭೆಗಳಿಗೆ ಅಧಿಕಾರ ನೀಡುವ 1996ರ ಪಂಚಾಯತುಗಳ (ಷೆಡ್ಯೂಲ್ಡ್ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆಯನ್ನು ಅವರು ವಿಶ್ಲೇಷಿಸಿದರು. ಈ ಕಾಯಿದೆಯ ಜಾರಿಗಾಗಿ ಆಂದೋಲನ ನಡೆಸಿ ಗ್ರಾಮಸಭೆಗಳ ರಚನೆಯಲ್ಲಿ ತೊಡಗಿದರು. ಆದಿವಾಸಿಗಳಿಗೆ ತಮ್ಮ ಹಕ್ಕುಗಳ ಅರಿವು ಮೂಡಿಸಿದರು. ಗಣಿಗಾರಿಕೆ, ಭಾರೀ ಜಲಾಶಯಗಳು, ಕೈಗಾರಿಕೆಗಳು ಹಾಗೂ ಟೌನ್‌ಶಿಪ್‌ಗಳ ನಿರ್ಮಾಣಕ್ಕಾಗಿ ಆದಿವಾಸಿಗಳನ್ನು ಅವರ ನೆಲದಿಂದ ಒಕ್ಕಲೆಬ್ಬಿಸಿ ಸ್ಥಳಾಂತರಗೊಳಿಸಿದ ಕುರಿತ ಅಂಕಿಅಂಶಗಳನ್ನು ಸಂಗ್ರಹಿಸಿದ್ದು ಅವರ ದೊಡ್ಡ ಕೊಡುಗೆಗಳಲ್ಲೊಂದು. ಸ್ವಾಮಿ ಅವರ ಭಿನ್ನಮತ ಕೇವಲ ಸರ್ಕಾರಕ್ಕೆ ಸೀಮಿತವಾಗಿರಲಿಲ್ಲ. ಚರ್ಚ್ ವಿರುದ್ಧವೂ ದನಿ ಎತ್ತಿದ್ದರು. ಚರ್ಚ್ ಕೂಡ ಬಲ್ಲಿದರು ಮತ್ತು ಗಣ್ಯರ ಜೊತೆ ನಿಲ್ಲುತ್ತದೆಂದು ತಕರಾರು ತೆಗೆದಿದ್ದರು. ಕ್ರೈಸ್ತ ಸಂಸ್ಥೆಗಳು ನಡೆಸುವ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆಯ ಮಾಧ್ಯಮ ಇಂಗ್ಲಿಷೇ ಆಗಿರುತ್ತದೆ. ಬಡವರಿಗೆ ಈ ಭಾಷೆ ಎಟುಕಿಲ್ಲ. ಹೀಗಾಗಿ ಈ ಶಾಲೆಗಳನ್ನು ಹಿಂದಿ ಮಾಧ್ಯಮಕ್ಕೆ ಪರಿವರ್ತಿಸಿ ಸಾಮಾನ್ಯ ಜನರಿಗೆ ಪ್ರಯೋಜನಕಾರಿ ಆಗಬೇಕೆಂದು ವಾದಿಸಿದ್ದರು.

ಹತ್ತು ತಿಂಗಳ ಹಿಂದೆ 83ರ ವೃದ್ಧಾಪ್ಯದಲ್ಲಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಯುಎಪಿಎ ಎಂಬ ಕರಾಳ ಕಾಯಿದೆಯಡಿ ಬಂಧಿಸಿತ್ತು. ಅದಾಗಲೇ ಪಾರ್ಕಿನ್ಸನ್ ವ್ಯಾಧಿಯಿಂದ ಕೈಗಳು ನಡುಗುತ್ತಿದ್ದವು. ಚಹಾ ಅವರ ಅಚ್ಚುಮೆಚ್ಚಿನ ಪೇಯ. ಕೈ ನಡುಕದ ಕಾರಣ ಅದನ್ನು ಕೊಳವೆಯಿಂದಲೇ ಹೀರಿ ಸೇವಿಸುತ್ತಿದ್ದ ಅಸಹಾಯಕತೆ ಅವರಿಗಿತ್ತು. ಜೈಲಿಗೆ ಸೇರಿದ ನಂತರವೂ ಅವರಿಗೆ ಹಲವು ವಾರಗಳ ಕಾಲ ಕಾಗದದ ಹೀರುಕೊಳವೆ ನೀಡಲು ನಿರಾಕರಿಸಿ ಕ್ರೌರ್ಯ ಮೆರೆಯಲಾಗಿತ್ತು. ಕ್ಯಾನ್ಸರ್ ದಾಳಿಗೆ ಸಿಲುಕಿ ಮೂರು ಶಸ್ತ್ರಚಿಕಿತ್ಸಗಳ ನಂತರ ಬದುಕಿ ಉಳಿದಿದ್ದರವರು. ಮೆಲುದನಿಯ ಮಾತಿನ ಸ್ವಾಮಿ ಅಹಿಂಸೆ ಮತ್ತು ಶಾಂತಿಯುತ ಪ್ರತಿಭಟನೆಯಲ್ಲಿ ಅಚಲ ನಂಬಿಕೆ ಇಟ್ಟಿದ್ದವರು.

ಮಾನವ ಹಕ್ಕುಗಳ ಹೋರಾಟಗಾರ ಕ್ಸೇವಿಯರ್ ಡಯಾಸ್ ಅವರ ಪ್ರಕಾರ ಸ್ವಾಮಿಯವರು ಮೂಲತಃ ತಮಿಳುನಾಡಿನ ತಿರುಚ್ಚಿಯವರು. ಕೆಲಕಾಲ ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿದ್ದರು. ಜಾರ್ಖಂಡ್‌ದ ರಾಂಚಿಯಲ್ಲಿ ಚರ್ಚಿನಿಂದ ಜಾಗ ಪಡೆದು ಸಾಮಾಜಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರವೊಂದನ್ನು 15 ವರ್ಷಗಳ ಹಿಂದೆ ತೆರೆದು ಅಲ್ಲಿಯೇ ನೆಲೆಸಿದ್ದರು.

ತಮ್ಮ ಬಂಧನಕ್ಕೆ ಮುನ್ನ ಸ್ವಾಮಿ ನೀಡಿದ್ದ ಈ ಹೇಳಿಕೆಯ ನೋಡಿರಿ- ’ಘನತೆ-ಆತ್ಮಗೌರವದ ಬದುಕು ಬೇಕೆಂದು ಆದಿವಾಸಿ ಜನರು ನಡೆಸಿರುವ ಆಂದೋಲನದೊಂದಿಗೆ ನಾನು ಕಳೆದ ಮೂವತ್ತು ವರ್ಷಗಳಿಂದ ಗುರುತಿಸಿಕೊಂಡಿದ್ದೇನೆ. ಬರೆಹಗಾರನಾಗಿ ನಾನು ಅವರು ಎದುರಿಸಿರುವ ನಾನಾ ಸಮಸ್ಯೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ. ಈ ಕ್ರಿಯೆಯಲ್ಲಿ ತೊಡಗಿಕೊಂಡೇ ಸರ್ಕಾರದ ಹಲವು ನೀತಿಗಳು ಕಾಯಿದೆ ಕಾನೂನುಗಳ ಕುರಿತು ಸಂವಿಧಾನದ ಬೆಳಕಿನಲ್ಲಿ ಭಿನ್ನಾಭಿಪ್ರಾಯ ಪ್ರಕಟಿಸಿದ್ದೇನೆ. ಆಳುವ ವರ್ಗ ಮತ್ತು ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳ ಕಾನೂನುಬದ್ಧತೆ, ಸಿಂಧುತ್ವ ಹಾಗೂ ನ್ಯಾಯಪರತೆಯನ್ನು ಪ್ರಶ್ನಿಸಿದ್ದೇನೆ. ಆದಿವಾಸಿಗಳ ಜಮೀನುಗಳಲ್ಲಿ ಖನಿಜಗಳ ಗಣಿಗಾರಿಕೆಯನ್ನು ನಿಯಂತ್ರಿಸಲು ಆದಿವಾಸಿಗಳಿಗೆ ಕೆಲವು ಹಕ್ಕುಗಳನ್ನು ನೀಡಿ ಆ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು. ಈ ಸಂಬಂಧ ಸುಪ್ರೀಮ್ ಕೋರ್ಟು 1977ರಲ್ಲಿ ನೀಡಿರುವ ಸಮತಾ ತೀರ್ಪಿನ ಕುರಿತು ಸರ್ಕಾರಗಳ ಮೌನ ನಿರಾಶಾದಾಯಕ.

 

2006ರ ಅರಣ್ಯ ಹಕ್ಕು ಕಾಯಿದೆಯನ್ನು ಅರೆಮನಸ್ಸಿನಿಂದ ಜಾರಿ ಮಾಡಲಾಗುತ್ತಿರುವುದು ಆದಿವಾಸಿಗಳು ಮತ್ತಿತರೆ ಅರಣ್ಯವಾಸಿಗಳಿಗೆ ಬಗೆಯಲಾಗುತ್ತಿರುವ ಐತಿಹಾಸಿಕ ಅನ್ಯಾಯ. ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಹಂಚಿಕೆ ಮಾಡಲು ಭೂ ಬ್ಯಾಂಕುಗಳನ್ನು ರಚಿಸಿರುವುದು ಆದಿವಾಸಿಗಳ ಸರ್ವನಾಶಕ್ಕೆ ದಾರಿ ಮಾಡಿಕೊಡಲಿದೆಯೆಂದು ದನಿ ಎತ್ತಿದ್ದೆ. ಈ ಕಾರಣಗಳಿಗಾಗಿ ನನ್ನನ್ನು ತನ್ನ ದಾರಿಯಿಂದ ನಿವಾರಿಸಿಕೊಳ್ಳಲು ಗಂಭೀರ ಕೇಸುಗಳನ್ನು ಹಾಕಿ ಬಂಧಿಸಲಾಗುತ್ತಿದೆ, ಬಡ ಆದಿವಾಸಿಗಳಿಗೆ ನ್ಯಾಯದಾನದ ಕ್ರಿಯೆಯನ್ನು ಸ್ಥಗಿತಗೊಳಿಸುವುದು ಸರ್ಕಾರದ ಉದ್ದೇಶ’.

ಆದಿವಾಸಿಗಳ ಸಂರಕ್ಷಣೆ ಮತ್ತು ಅಭ್ಯುದಯಕ್ಕಾಗಿ ಆದಿವಾಸಿಗಳೇ ಇರುವ ಆದಿವಾಸಿ ಸಲಹಾ ಪರಿಷತ್ತನ್ನು ನೇಮಕ ಮಾಡಬೇಕೆಂದು ಸಂವಿಧಾನದ ಐದನೆಯ ಷೆಡ್ಯೂಲಿನಲ್ಲಿ ವಿಧಿಸಲಾಗಿದೆ. ಈ ಕ್ರಮವನ್ನು ಸರ್ಕಾರ ಜಾರಿ ಮಾಡಿಲ್ಲವೆಂದು ಅವರು ಪ್ರತಿಭಟಿಸಿದ್ದರು.

ಅಂದಾಜು ಮೂರು ಸಾವಿರದಷ್ಟು ಆದಿವಾಸಿ ಯುವಜನರು ಮತ್ತು ಮೂಲನಿವಾಸಿಗಳನ್ನು ವಿವೇಚನೆಯಿಲ್ಲದೆ ಬಂಧಿಸಿ ಅವರಿಗೆ ಮಾವೋವಾದಿಗಳೆಂಬ ಹಣೆಪಟ್ಟಿ ಹಚ್ಚಿ ಜೈಲಿಗೆ ತಳ್ಳಿರುವುದನ್ನು ಸ್ವಾಮಿಯವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಈ ವಿಚಾರಣಾಧೀನ ಯುವಕರನ್ನು ಸ್ವಂತ ಮುಚ್ಚಳಿಕೆಯ ಮೇಲೆ ಬಿಡುಗಡೆ ಮಾಡಿ ತ್ವರಿತ ವಿಚಾರಣೆ ನಡೆಸಬೇಕೆಂದೂ ಆಗ್ರಹಿಸಿದ್ದರು.

ಹೆಲ್ಡರ್ ಕಾಮರ

ಬ್ರೆಜಿಲ್ ದೇಶದ ಬಡಜನರ ಕಷ್ಟ ಕಣ್ಣೀರುಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡು ಜನತಂತ್ರದ ಪರವಾಗಿ ಸರ್ವಾಧಿಕಾರಿ ಆಡಳಿತದ ವಿರುದ್ಧ ಎದೆ ಸೆಟೆಸಿದ್ದವರು ಕ್ರೈಸ್ತ ಧರ್ಮಗುರು ಹೆಲ್ಡರ್ ಕಾಮರ. ಸ್ವಾಮಿ ಅವರ ಬದುಕನ್ನು ಕಾಮರ ಅವರ ಆಚಾರ ವಿಚಾರಗಳು ತೀವ್ರವಾಗಿ ಪ್ರಭಾವಿಸಿದ್ದವು.

ಚರ್ಚ್ ಎಂಬುದು ನತದೃಷ್ಟ ಜನಸಮುದಾಯಗಳ ಜೊತೆಗೆ ನಿಲ್ಲಬೇಕು ಎಂದಿದ್ದ ಕಾಮರ, ತಮ್ಮ ಜೀವಿತದುದ್ದಕ್ಕೂ ಮಾನವಹಕ್ಕುಗಳಿಗಾಗಿ ದನಿ ಎತ್ತಿದ್ದರು ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ್ದರು. ಸಾಮಾಜಿಕ ಪರಿವರ್ತನೆ ಅವರ ಧ್ಯೇಯವಾಗಿತ್ತು. ಧರ್ಮಗುರುಗಳಿಗೆ ಲಭಿಸುವ ಆಡಂಬರದ ಬದುಕನ್ನು ತಿರಸ್ಕರಿಸಿದ್ದರು. ಕಾರ್ಮಿಕರ ಕ್ಯಾಂಟೀನುಗಳಲ್ಲಿ ಊಟ ಮಾಡುತ್ತಿದ್ದರು. ಧರ್ಮಗುರುಗಳ ಪಟ್ಟು ಪೀತಾಂಬರಗಳ ನಿಲುವಂಗಿಗಳನ್ನು ಚಿನ್ನದ ಶಿಲುಬೆಗಳು ಅಲಂಕರಿಸಿರುತ್ತವೆ. ಆದರೆ ಸವೆದುಹೋದ ಕಂದು ಬಣ್ಣದ ನೂಲಿನ ನಿಲುವಂಗಿಯನ್ನು ಧರಿಸುತ್ತಿದ್ದ ಕಾಮರ ಚಿನ್ನದ ಶಿಲುಬೆಯ ಬದಲಿಗೆ ಮರದ ಶಿಲುಬೆಯನ್ನು ಅದಕ್ಕೆ ಅಳವಡಿಸಿಕೊಂಡಿದ್ದರು. ಬಡವರ ಬಂಧು, ದನಿ ಸತ್ತವರ ದನಿ ಎಂದೇ ಯುರೋಪಿನಲ್ಲಿ ಅವರನ್ನು ಕರೆಯಲಾಗುತ್ತಿತ್ತು. ತಮ್ಮ ದೇಶದ ಜಮೀನು ಮತ್ತು ಇತರೆ ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂದು ಆಗ್ರಹಿಸಿದ್ದರು.

’ಹಸಿದ ಜನರಿಗೆ ಅನ್ನ ನೀಡುವಾಗ ನನ್ನನ್ನು ಸಂತನೆಂದು ಕರೆಯುತ್ತಾರೆ… ಇಷ್ಟೊಂದು ಮಂದಿ ಯಾಕೆ ಬಡವರಾಗಿದ್ದಾರೆ ಎಂದು ಕೇಳಿದಾಗ ನನಗೆ ಕಮ್ಯುನಿಸ್ಟ್ ಎಂಬ ಹಣೆಪಟ್ಟಿ ಹಚ್ಚುತ್ತಾರೆ’ ಎಂದಿದ್ದರವರು. ನಗರಪ್ರದೇಶಗಳ ಬಡವರ ಹೋರಾಟಗಳಿಗೆ ಹೆಗಲು ನೀಡಿದ್ದ ಕಾರಣ ಕೊಳಗೇರಿಗಳ ಧರ್ಮಗುರು ಎಂಬ ಅಭಿದಾನ ಕಾಮರ ಅವರ ಹೆಸರಿಗೆ ಅಂಟಿಕೊಂಡಿತ್ತು.

ಧರ್ಮಗುರುಗಳಿಗೆ ದೊರೆಯುವ ವಿಶೇಷ ಹಕ್ಕುಗಳು, ಬಿರುದುಬಾವಲಿಗಳು, ವೈಭೋಗಗಳನ್ನು ತೊರೆದು ಬಡತನದ ಬದುಕನ್ನು ಬದುಕುವಂತೆ ಕಾಮರ ನೇತೃತ್ವದ ನಲವತ್ತು ಮಂದಿ ಬಿಶಪ್‌ಗಳ ಸಂಘಟನೆಯು ಉಳಿದ ಧರ್ಮಗುರುಗಳಿಗೆ ಸವಾಲೆಸೆದಿತ್ತು. ಮಾರ್ಕ್ಸ್‌ವಾದಿಯೆಂದು ಗುರುತಿಸಿಕೊಳ್ಳಲು ನಿರಾಕರಿಸಿದ್ದ ಅವರು, ತಮ್ಮನ್ನು ಸಮಾಜವಾದಿ ಎಂದು ಕರೆದುಕೊಂಡಿದ್ದರು.

’ದೇವನ ಮನೆಯಲ್ಲಿ ಬೌದ್ಧರು, ಯಹೂದಿಗಳು, ಮುಸಲ್ಮಾನರು, ಪ್ರಾಟೆಸ್ಟೆಂಟ್‌ಗಳು ನಮಗೆ ಎದುರಾಗಬಹುದು. ಅಷ್ಟೇ ಯಾಕೆ, ಕೆಲ ಮಂದಿ ಕೆಥೋಲಿಕ್ಕರೂ ಕಂಡುಬಂದಾರು. ಏಸುಕ್ರಿಸ್ತನ ಹೆಸರನ್ನೇ ಕೇಳದವರು ಎದುರಾದರೂ ನಾವು ಅವರ ಮುಂದೆ ವಿನಮ್ರರಾಗಿರಬೇಕು, ಯಾಕೆಂದರೆ ಅವರು ನಮಗಿಂತಲೂ ಹೆಚ್ಚು ಕ್ರೈಸ್ತರಾಗಿರುವ ಸಾಧ್ಯತೆ ಇದೆ’ ಎಂದಿದ್ದ ಮಾನವತಾವಾದಿ ಕಾಮರ.

ಕಾಮರ ಅವರ ಆದರ್ಶ ಸ್ಟ್ಯಾನ್ ಸ್ವಾಮಿ ಅವರಿಗೆ ಶಿರೋಧಾರ್ಯ ಆಗಿತ್ತು.


ಇದನ್ನೂ ಓದಿ: ಭೀಮಾ ಕೋರೆಗಾಂವ್‌ ಪ್ರಕರಣ: ಸುರೇಂದ್ರ ಗಾಡ್ಲಿಂಗ್‌ ಕಂಪ್ಯೂಟರ್‌ಗೆ ಸುಳ್ಳು ಸಾಕ್ಷ್ಯಗಳನ್ನು ಸೇರಿಸಲಾಗಿದೆ-ವರದಿ

LEAVE A REPLY

Please enter your comment!
Please enter your name here