ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು, ಕರ್ನಾಟಕದಲ್ಲೂ ಅಸ್ಸಾಂ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಹೊಸ ಜನಸಂಖ್ಯಾ ನೀತಿಯನ್ನು ತರಲು ಇದು ಸರಿಯಾದ ಸಮಯ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಗುರುವಾರ ಹೇಳಿದ್ದಾರೆ. ಆದರೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯಾ ಸ್ಪೋಟ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕಾನೂನಗಳನ್ನು ತರಲು ಹೊರಟಿದೆ. ಅದರಲ್ಲೂ ಉತ್ತರ ಪ್ರದೇಶ ಈಗಾಗಲೆ ಕರಡು ಮಸೂದೆಯನ್ನು ಪ್ರಕಟಿಸಿದೆ. ಈ ಕರಡು ಮಸೂದೆಯಲ್ಲಿ, ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ಮತ್ತು ಪಾಲಿಸಿದವರಿಗೆ ಕೊಡುಗೆಯನ್ನೂ ಘೋಷಿಸಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ ಜನಸಂಖ್ಯಾ ಮಸೂದೆ: ‘ಒನ್-ಚೈಲ್ಡ್’ ನೀತಿಯನ್ನು ತೆಗೆದು ಹಾಕುವಂತೆ ವಿಹೆಚ್‌ಪಿ ಒತ್ತಾಯ
ಉತ್ತರ ಪ್ರದೇಶ ತನ್ನ ಕರಡು ಮಸೂದೆಯಲ್ಲಿ, ಕಾನೂನನ್ನು ಪಾಲಿಸಿದವರಿಗೆ ನೀರು ಮತ್ತು ವಿದ್ಯುತ್ ಬಿಲ್‌ಗಳು, ಮನೆ ತೆರಿಗೆ, ಗೃಹ ಸಾಲಗಳ ಮೇಲೆ ರಿಯಾಯಿತಿ ನೀಡುವುದಾಗಿ ಹೇಳಿದೆ. ಕಾನೂನು ಉಲ್ಲಂಘಿಸಿದವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಥವಾ ಬಡ್ತಿ ಪಡೆಯುವ ಮತ್ತು ಯಾವುದೇ ರೀತಿಯ ಸರ್ಕಾರಿ ಸಬ್ಸಿಡಿ ಪಡೆಯುವುದನ್ನು ನಿರ್ಬಂಧಿಸುತ್ತದೆ.
ಗುರುವಾರ ಟ್ವೀಟ್ ಮಾಡಿದ್ದ ಸಿಟಿ ರವಿ, “ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕರ್ನಾಟಕವು ಅಸ್ಸಾಂ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಹೊಸ ಜನಸಂಖ್ಯಾ ನೀತಿಯನ್ನು ತರಲು ಇದು ಸರಿಯಾದ ಸಮಯ. ಸೀಮಿತ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿರುವುದರಿಂದ, ಜನಸಂಖ್ಯೆಯ ಸ್ಫೋಟ ಸಂಭವಿಸಿದಲ್ಲಿ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಪೂರೈಸುವುದು ಕಷ್ಟವಾಗುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
It is high time Karnataka brings in a new population policy on the lines of Assam and Uttar Pradesh to control its growing population.
With the limited natural resources available, it will be difficult to meet the needs of every citizen if there is a population explosion.
— C T Ravi ?? ಸಿ ಟಿ ರವಿ (@CTRavi_BJP) July 13, 2021
ಇದನ್ನೂ ಓದಿ: ಉತ್ತರ ಪ್ರದೇಶ: ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಪ್ರಕಟ
ಜನಸಂಖ್ಯಾ ನಿತಂತ್ರಣ ಕಾನೂನಿನ ಚರ್ಚೆಗಳ ಬಗ್ಗೆ ಪತ್ರಕರ್ತ ಅಲ್ಮೈಡಾ ಗ್ಲಾಡ್‌ಸನ್ ಅವರು, “ಜನಸಂಖ್ಯೆ ನಿಯಂತ್ರಣೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗೋವಾ ಮುಂತಾದೆಡೆ ಜನಸಂಖ್ಯೆ ನಿಯಂತ್ರಣಕ್ಕೆ ಬಂದಿದ್ದು ಶಿಕ್ಷೆಯಿಂದಲ್ಲ ಬದಲಾಗಿ ಶಿಕ್ಷಣದಿಂದ. ಈ ರಾಜ್ಯಗಳಲ್ಲಿ ಒಟ್ಟು ಫಲವಂತೆಕೆಯ ದರ (TFR) ದೇಶದ ರಿಪ್ಲೇಸ್‍ಮೆಂಟ್ ಲೆವೆಲ್ 2.1 ಕ್ಕಿಂತಾ ಕಡಿಮೆಯಿದೆ” ಎಂದು ಹೇಳಿದ್ದಾರೆ.
“ಕರ್ನಾಟಕ, ಅವಿಭಜಿತ ಆಂಧ್ರಪ್ರದೇಶದಲ್ಲಿ TFR 1.7 ಇದ್ದರೆ ಕೇರಳದಲ್ಲಿ 1.8 ಹಾಗೂ ಗೋವಾದಲ್ಲಿ 1.3 ಇದೆ. ಅದೇ ಈ TFR ಉತ್ತರ ಪ್ರದೇಶ, ಬಿಹಾರ, ಛತ್ತೀಸ್‍ಗಢ, ರಾಜಸ್ಥಾನ, ಮಧ್ಯಪ್ರದೇಶ, ಝಾರ್ಖಂಡ್‍ಗಳಲ್ಲಿ 2.1 ಕ್ಕಿಂತ ಜಾಸ್ತಿಯಿದೆ. ಭಾರತದ ಒಟ್ಟು ಜನಸಂಖ್ಯೆಯ 40% ಜನಸಂಖ್ಯೆ ಇರುವುದೇ ಈ ಆರು ರಾಜ್ಯಗಳಲ್ಲಿ.
ಹಾಗಾಗಿ ಯಾಕಾಗಿ ಈ ರಾಜ್ಯಗಳು ಜನಸಂಖ್ಯೆ ನಿಯಂತ್ರಣೆಯಲ್ಲಿ ದಕ್ಷಿಣದ ರಾಜ್ಯಗಳನ್ನು ಮಾದರಿಯಾಗಿ ಸ್ವೀಕರಿಸಬಾರದು?” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಜನಸಂಖ್ಯಾ ನೀತಿಯಲ್ಲಿ ಮತ್ತೆ ಬದಲಾವಣೆ ತಂದ ಚೀನಾ ಕಮ್ಯುನಿಸ್ಟ್ ಪಕ್ಷ!
“ದಕ್ಷಿಣದ ರಾಜ್ಯಗಳಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚಿರುವುದು, ಜನಸಂಖ್ಯೆ ನಿಯಂತ್ರಣದಲ್ಲಿ ಬಲುದೊಡ್ಡ ಪಾತ್ರ ವಹಿಸಿದೆ. ಯಾವುದೇ ಕಠಿಣ ಕಾನೂನುಗಳಿಲ್ಲದೇ, ಶಿಕ್ಷೆಯಿಲ್ಲದೇ ಕೇವಲ ಉತ್ತಮ ಶಿಕ್ಷಣದಿಂದ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬಂದಿರುವಾಗ, ಅದು ಉತ್ತರ ಭಾರತದಲ್ಲಿ ಯಾಕಾಗಬಾರದು? ಶಿಕ್ಷಣದಿಂದಾಗುವ ಕೆಲಸವನ್ನು ಶಿಕ್ಷೆಯಿಂದ ಯಾಕೆ ಮಾಡಬೇಕು?” ಎಂದು ಅವರು ಹೇಳಿದ್ದಾರೆ.
“ಉತ್ತರ ಪ್ರದೇಶದಲ್ಲೇ 1993 ರಲ್ಲಿ 4.82 ಇದ್ದ TFR 2016 ರಲ್ಲಿ 2.7 ಕ್ಕೆ ಬಂದಿಳಿದಿದೆ. ಅಲ್ಲಿನ ಸರಕಾರದ ವರದಿಗಳ ಪ್ರಕಾರ 2025 ರ ಹೊತ್ತಿಗೆ ಇದು ಇನ್ನೂ ಇಳಿದು 2.1 ಕ್ಕೆ ಬರಲಿದೆ. ಅಂದರೆ ಜನಸಂಖ್ಯೆ ಸ್ಪೋಟವಾಗುತ್ತಿಲ್ಲ ಬದಲಾಗಿ ಅದು ಇಳಿಯುತ್ತಿದೆ. ಅದನ್ನು ಇನ್ನೂ ಸರಿಯಾದ ಹಾಗೂ ವ್ಯವಸ್ಥಿತ ರೀತಿಯಲ್ಲಿ ಜಾರಿಗೆ ತರಲು ಯುವ ಸಮುದಾಯವನ್ನು ಶಿಕ್ಷಿತರನ್ನಾಗಿಸಿಬೇಕು. ಅವರಲ್ಲಿ ಜಾಗೃತಿ ಹೆಚ್ಚಾಗಬೇಕೇ ಹೊರತು ಭೀತಿಯಲ್ಲ” ಎಂದು ಅಲ್ಮೈಡಾ ಗ್ಲಾಡ್‌ಸನ್ ಅವರು ಹೇಳಿದ್ದಾರೆ.
ಚಿಂತಕ ಶ್ರೀನಿವಾಸ್ ಕಾರ್ಕಾಳ ಅವರು, “ಕರ್ನಾಟಕದಲ್ಲಿ ಒಟ್ಟು ಫಲವಂತಿಕೆ ದರ (TFR) 1.67 ಇದ್ದು ರಿಪ್ಲೇಸ್ಮೆಂಟ್ ದರವಾದ 2.1 ಕ್ಕಿಂತ ಕಡಿಮೆ ಇದೆ (ತಂದೆತಾಯಿಗೆ ಎರಡು ಮಕ್ಕಳಿದ್ದಾಗ ಅದು ರಿಪ್ಲೇಸ್ಮೆಂಟ್ ಆಗಿರುತ್ತದೆ). ಮಾಜಿ ಮಂತ್ರಿಗಳು ಚಿಂತಿತರಾಗಬೇಕಿರುವುದು ಇಲ್ಲಿ ಜನಸಂಖ್ಯಾ ದರ ಕಡಿಮೆಯಾಗುತ್ತಿರುವ ಬಗ್ಗೆ ಹೊರತು ಜನಸಂಖ್ಯಾ ಸ್ಫೋಟದ ಬಗ್ಗೆ ಅಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜನಸಂಖ್ಯಾವಾರು ಮೀಸಲಾತಿ ಈ ಕ್ಷಣದ ತುರ್ತು: ಸದಾನಂದ ಗಂಗನಬೀಡು


