ವಿಶ್ವದ ಬೃಹತ್ ಕ್ರೀಡಾಕೂಟ ಒಲಂಪಿಕ್ಸ್ ಆರಂಭಕ್ಕೆ ಕೇವಲ ಆರು ದಿನಗಳಿರುವ ಸಂದರ್ಭದಲ್ಲಿ ಕ್ರೀಡಾಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಇದರಿಂದ ಜುಲೈ 23 ರಿಂದ ಆರಂಭವಾಗುವ ಒಲಂಪಿಕ್ಸ್ ಕ್ರೀಡಾಕೂಟದ ಮೇಲೆ ಆತಂಕದ ಛಾಯೆ ಉಂಟುಮಾಡಿದೆ.
2020ರಲ್ಲಿ ನಡೆಯಬೇಕಿದ್ದ ಒಲಂಪಿಕ್ಸ್ ಅನ್ನು ಜಾಗತಿಕ ಸಾಂಕ್ರಾಮಿಕದ ಕಾರಣದಿಂದ ಮುಂದೂಡಲಾಗಿತ್ತು. ಈಗಲೂ ಕಟ್ಟುನಿಟ್ಟಿನ ಕ್ವಾರಂಟೈನ್ ನಿಯಮಗಳನ್ನು ಅನುಸರಿಸುವ ಮೂಲಕ ನಡೆಸಲು ಯೋಜಿಸಲಾಗಿತ್ತು. ಆದರೆ ಕ್ರೀಡಾಗ್ರಾಮದಲ್ಲಿ ಮೊದಲ ಪ್ರಕರಣ ಪತ್ತೆಯಾಗಿರುವುದು ಸಂಘಟಕರಿಗೆ ಒತ್ತಡ ಹೆಚ್ಚಿಸಿದೆ.
ಕ್ರೀಡಾಕೂಟದ ಸಂಘಟನೆಯ ಭಾಗವಾಗಿ ಆಗಮಿಸಿದ್ದ ವ್ಯಕ್ತಿಯೊಬ್ಬರೂ ಕೊರೊನಾ ಪಾಸಿಟಿವ್ ಆಗಿದ್ದಾರೆ ಎಂದು ಟೋಕಿಯೋ ಒಲಂಪಿಕ್ಸ್ 2020ರ ಸಿಇಓ ತೊಶಿರೊ ಮುಟೋ ದೃಢಪಡಿಸಿದ್ದಾರೆ. ಖಾಸಗಿತನದ ಕಾರಣಗಳಿಂದಾಗಿ ಆ ವ್ಯಕ್ತಿ ಯಾವ ದೇಶದವರು ಎಂಬುದನ್ನು ಬಹಿರಂಗಪಡಿಸಿಲ್ಲ.
ಯಾವುದೇ ಕಾರಣಕ್ಕೂ ಕೋವಿಡ್ ಉಲ್ಬಣಿಸದಂತೆ ತಡೆಯಲು ಯತ್ನಿಸುತ್ತಿದ್ದೇವೆ. ಒಂದು ವೇಳೆ ಉಲ್ಬಣಿಸಿದರೂ ಕೂಡ ಅದನ್ನು ಹೇಗೆ ಎದುರಿಸಬೇಕು ಎಂಬ ಯೋಜನೆ ನಮ್ಮಲ್ಲಿದೆ ಎಂದು ಟೋಕಿಯೋ 2020 ಕ್ರೀಡಾಕೂಟದ ಮುಖ್ಯ ಸಂಘಟಕರಾದ ಸೈಕೊ ಹಶಿಮೊಟೊ ಹೇಳಿದ್ದಾರೆ.
ಜಪಾನ್‌ನಲ್ಲಿ ಒಲಂಪಿಕ್ಸ್ ನಡೆಸುತ್ತಿರುವುದಕ್ಕೆ ಅಲ್ಲಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಜಪಾನ್‌ನಲ್ಲಿ ಮತ್ತೊಂದು ಅಲೆಗೆ ಕಾರಣವಾಗಬಹುದು ಎಂಬ ಆತಂಕ ಅವರದ್ದಾಗಿದೆ.
ಕ್ರೀಡಾಕೂಟವು ಜಪಾನಿನ ಜನರಿಗೆ ಯಾವುದೇ ಅಪಾಯವನ್ನು ತರುವುದಿಲ್ಲ ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಭರವಸೆ ನೀಡಿದ ಒಂದು ದಿನದ ನಂತರ ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ.
“ನಾವು ನಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ಜಪಾನಿನ ಜನರು ಈ ವೈರಸ್ ವಿರುದ್ಧ ಹೋರಾಡಲು ಮತ್ತು ಜಪಾನಿನ ಜನರಿಗೆ ಯಾವುದೇ ಅಪಾಯವನ್ನುಂಟುಮಾಡದಂತೆ ಉತ್ತಮ ರೀತಿಯಲ್ಲಿ ಕೊಡುಗೆ ನೀಡಲು ನಾವು ಬದ್ಧತೆಯನ್ನು ಹೊಂದಿದ್ದೇವೆ. ಕ್ರೀಡಾಗ್ರಾಮದ ಬಹುತೇಕರು ಲಸಿಕೆ ಪಡೆದಿದ್ದಾರೆ. ಹಾಗಾಗಿ ಜಗತ್ತಿನ ಎಲ್ಲಾ ಅಥ್ಲಿಟ್‌ಗಳನ್ನು ಪ್ರೀತಿಯಿಂದ ಸ್ವಾಗತಿಸಿ” ಎಂದು ಪ್ರಧಾನಿ ಯೋಶಿಹೈಡ್ ಸುಗಾ ಅವರನ್ನು ಭೇಟಿಯಾದ ನಂತರ ಬಾಚ್ ಸುದ್ದಿಗಾರರಿಗೆ ತಿಳಿಸಿದ್ದರು.
ಇದನ್ನೂ ಓದಿ: ಒಲಂಪಿಕ್ ಅಂಗಳಕ್ಕೆ ಟಿಕೆಟ್ ಕಲೆಕ್ಟರ್ : ಬಡತನದ ಕುಲುಮೆಯಲ್ಲರಳಿದ ಕ್ರೀಡಾರತ್ನ ರೇವತಿ ವೀರಮಣಿ


