Homeಮುಖಪುಟಹಲವು ಗುಮಾನಿಗಳಿಗೆ ಕಾರಣವಾದ ಸಹಕಾರ ಮಂತ್ರಾಲಯ: ಎ ನಾರಾಯಣ

ಹಲವು ಗುಮಾನಿಗಳಿಗೆ ಕಾರಣವಾದ ಸಹಕಾರ ಮಂತ್ರಾಲಯ: ಎ ನಾರಾಯಣ

- Advertisement -
- Advertisement -

ಒಕ್ಕೂಟ ಸರಕಾರ ಇದ್ದಕ್ಕಿದ್ದಂತೆಯೇ ಕೇಂದ್ರ ಕೃಷಿ ಮಂತ್ರಾಲಯದ ಭಾಗವಾಗಿದ್ದ ಸಹಕಾರ ಇಲಾಖೆಯನ್ನು ಪ್ರತ್ಯೇಕಿಸಿ ಹೊಸ ಸಹಕಾರ ಮಂತ್ರಾಲಯವನ್ನು ಸ್ಥಾಪಿಸಿದೆ. ಭಾರತೀಯ ಸಾರ್ವಜನಿಕ ಆಡಳಿತದ ಪರಿಭಾಷೆಯಲ್ಲಿ ರಾಜ್ಯ ಸರಕಾರದ ವಿವಿಧ ವಿಭಾಗಗಳನ್ನು ಇಲಾಖೆಗಳು (departments) ಅಂತಲೂ, ಒಕ್ಕೂಟ ಸರಕಾರದ ವಿವಿಧ ಅಂಗಗಳನ್ನು ಮಂತ್ರಾಲಯಗಳು (ministry) ಅಂತಲೂ ಕರೆಯುವುದು ರೂಢಿ. ಒಕ್ಕೂಟ ಸರಕಾರದ ಮಂತ್ರಾಲಯಗಳ ಅಧೀನದಲ್ಲಿ ಇರುವ ಪ್ರತ್ಯೇಕ ಘಟಕಗಳಿಗೂ ಇಲಾಖೆ ಎನ್ನುತ್ತಾರೆ. ಆದುದರಿಂದ ರಾಜ್ಯ ಸರಕಾರದ ಯಾವುದೇ ಇಲಾಖೆಗೆ ಮಂತ್ರಾಲಯ ಎನ್ನುವ ಕ್ರಮ ಇಲ್ಲ. ಇಲ್ಲಿ ಮಂತ್ರಿಗಳಿರುತ್ತಾರೆ ಆದರೆ ಮಂತ್ರಾಲಯ ಇರುವುದಿಲ್ಲ. ಕೇಂದ್ರ ಸರಕಾರದ ಮಂತ್ರಾಲಯಗಳ ಅಡಿಯಲ್ಲಿ ಕೆಲವು ಇಲಾಖೆಗಳಿರುತ್ತವೆ. ಅಂತಹ ಕೆಲವು ಇಲಾಖೆಗಳನ್ನು ಕೆಲವೊಮ್ಮೆ ಪ್ರತ್ಯೇಕ ಮಂತ್ರಾಲಯವನ್ನಾಗಿ ಪರಿವರ್ತಿಸಲಾಗುತ್ತದೆ. ಈಗ ದೇಶದಲ್ಲಿ ಸಹಕಾರದ ವಿಚಾರಕ್ಕೆ ಸಂಬಂಧಿಸಿದಂತೆ ಆದದ್ದು ಇಷ್ಟು.

ಒಕ್ಕೂಟ ಸರಕಾರದಲ್ಲಿ ಒಂದು ಮಂತ್ರಾಲಯದ ಅಧೀನದಲ್ಲಿ ಈಗಾಗಲೇ ಇರುವ ಇಲಾಖೆಯೊಂದು ಹೊಸ ಮಂತ್ರಾಲಯದ ಸ್ವರೂಪ ಪಡೆದುಕೊಂಡರೆ ಅದರ ಪರಿಣಾಮಗಳು ಏನೇನು ಎನ್ನುವುದು ಸ್ಪಷ್ಟವಿಲ್ಲ. ಹೊಸ ಮಂತ್ರಾಲಯ ಎಂದಮೇಲೆ ಅಲ್ಲೊಬ್ಬ ಪ್ರತ್ಯೇಕ ಮಂತ್ರಿ ಇರುವುದಾಗಿ ನಾವು ಊಹಿಸಿಕೊಳ್ಳಬಹುದು. ಆದರೆ
ಒಂದು ಮಂತ್ರಾಲಯದ ಅಧೀನದಲ್ಲಿ ಒಂದು ಇಲಾಖೆ ಇದ್ದರೆ ಅಂತಹ ಇಲಾಖೆಗೂ ಪ್ರತ್ಯೇಕ ಮಂತ್ರಿಗಳಿರುವುದು ಇದೆ. ಸಾಮಾನ್ಯವಾಗಿ ಆ ಮಂತ್ರಾಲಯದಲ್ಲಿರುವ ಸಹಾಯಕ ಅಥವಾ ರಾಜ್ಯ ದರ್ಜೆಯ ಮಂತ್ರಿಗಳು ಇಲಾಖೆಗಳನ್ನು ನೋಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಕೃಷಿ ಮಂತ್ರಾಲಯದಲ್ಲಿ ಇದ್ದ ಸಹಕಾರ ಇಲಾಖೆ ಪ್ರತ್ಯೇಕ ಮಂತ್ರಾಲಯ ಆಗಿದೆ ಎನ್ನುವುದರಲ್ಲಿ ಆಡಳಿತಾತ್ಮಕವಾಗಿ ದೊಡ್ಡ ವಿಶೇಷವೇನೂ ಕಾಣಿಸುತ್ತಿಲ್ಲ. ಹೀಗೆಲ್ಲಾ ಇಲಾಖೆಗಳು ಒಗ್ಗೂಡುವುದು, ಅಥವಾ ಪ್ರತ್ಯೇಕ ಮಂತ್ರಾಲಯಗಳಾಗುವುದು ಇತ್ಯಾದಿ ಎಲ್ಲಾ ಮಾಮೂಲಾಗಿ ಸರಕಾರದ ಮಟ್ಟದಲ್ಲಿ ನಡೆಯುತ್ತಲೇ ಇರುವ ಪ್ರಕ್ರಿಯೆಗಳು.

ಆದರೂ ಈಗ ಒಕ್ಕೂಟ ಸರಕಾರ ಹೊಸ ಸಹಕಾರ ಮಂತ್ರಾಲಯವನ್ನು (Ministry of Cooperation) ರಚಿಸಿದ್ದಕ್ಕೆ ಹಲವರು ಹುಬ್ಬೇರಿಸಿದ್ದರೆ ಅದಕ್ಕೆ ಕಾರಣ ಈ ಕಾಲದ ಒಟ್ಟೂ ರಾಜಕೀಯ ಪರಿಸರ ಮತ್ತು ಪರಿಸ್ಥಿತಿ. ಮೊದಲನೆಯದ್ದಾಗಿ ಇಲ್ಲಿರುವುದು, ಮತ್ತೆ ಒಕ್ಕೂಟ ಸರಕಾರ ರಾಜ್ಯಗಳ ಮೇಲೆ ಸವಾರಿ ಮಾಡಹೊರಟಿದೆಯೇ ಎನ್ನುವ ಪ್ರಶ್ನೆ. ಯಾಕೆಂದರೆ, ಸಹಕಾರ ಸಂವಿಧಾನ ಪ್ರಕಾರ ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ವಿಷಯ. ಒಕ್ಕೂಟದಲ್ಲಿ ಈಗ ಆಳುವ ಪಕ್ಷವಾದ ಬಿಜೆಪಿಯು ಒಕ್ಕೂಟ ತತ್ವಗಳನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ದುರ್ಬಲಗೊಳಿಸುತ್ತಾ ಎಲ್ಲವನ್ನೂ ಕೇಂದ್ರೀಕರಿಸಿ ಆಡಳಿತ ನಡೆಸುವ ಪರಂಪರೆಯನ್ನು ಅನುಸರಿಸುತ್ತಾ ಬಂದಿದೆ. ಇದರ ಮುಂದುವರಿಕೆಯಾಗಿ ಹೊಸ ಸಹಕಾರ ಮಂತ್ರಾಲಯದ ಸೃಷ್ಟಿಯನ್ನೂ ನೋಡಬೇಕು ಅಂತ ಹಲವರು ವಾದಿಸುತ್ತಿರುವುದರಲ್ಲಿ ವಿಶೇಷವೇನೂ ಇಲ್ಲ.

ಈ ಆತಂಕವನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಸೇರಿದಂತೆ ದಕ್ಷಿಣ ಭಾರತದ ರಾಜಕೀಯ ಮುಖಂಡರು ಕೂಡಾ ವ್ಯಕ್ತಪಡಿಸಿದ್ದಾರೆ. ಆದರೆ, ಇಲಾಖೆಯೊಂದು ಮಂತ್ರಾಲಯವಾಗಿ ಮಾರ್ಪಡುವುದರಲ್ಲಿ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮಾಡಿದ ಹಸ್ತಕ್ಷೇಪ ಏನು ಎನ್ನುವುದು ಸ್ಪಷ್ಟವಾಗುವುದಿಲ್ಲ. ಸಂವಿಧಾನದ ರಾಜ್ಯ ಪಟ್ಟಿಯಲ್ಲಿರುವ ಇತರ ಕೆಲವು ವಿಷಯಗಳಿಗೂ ಈಗಾಗಲೇ ಪ್ರತ್ಯೇಕ ಮಂತ್ರಾಲಯಗಳು ಒಕ್ಕೂಟ ಸರಕಾರದಲ್ಲಿ ಇವೆ. ಉದಾಹರಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಪಟ್ಟಿಯಲ್ಲಿರುವ ವಿಷಯಗಳಾದರೂ ಒಕ್ಕೂಟ ಸರಕಾರದಲ್ಲಿ ಅವುಗಳಿಗೆ ಸಂಬಂಧಿಸಿದ ಪ್ರತ್ಯೇಕ ಮಂತ್ರಾಲಯವೂ ಇದೆ, ಮಂತ್ರಿಯೂ ಇದ್ದಾರೆ.

ವಿರೋಧ ಪಕ್ಷದ ನಾಯಕರು ಒಕ್ಕೂಟ ಸರಕಾರದ ಹೊಸ ಸೃಷ್ಟಿಯನ್ನು ಟೀಕಿಸಿದ್ದಾರೆಯೇ ಹೊರತು ಯಾವ ರೀತಿಯಲ್ಲಿ ಹೊಸ ಮಂತ್ರಾಲಯದಿಂದಾಗಿ ರಾಜ್ಯಗಳ ಅಧಿಕಾರ ಮೊಟಕಾಗುತ್ತದೆ ಅಂತ ಸ್ಪಷ್ಟವಾಗಿ ಹೇಳಿಲ್ಲ. ಇಲ್ಲೇನೋ ರಾಜಕೀಯ ಇದೆ ಎನ್ನುವ ಗುಮಾನಿ ಎಲ್ಲರಿಗೂ ಇದೆಯೇ ಹೊರತು, ಕಾನೂನಾತ್ಮಕವಾಗಿ ಅಥವಾ ಸಾಂವಿಧಾನಾತ್ಮಕವಾಗಿ ಈ ನಡೆ ಯಾವ ರೀತಿಯಲ್ಲಿ ಒಕ್ಕೂಟ ತತ್ವಗಳನ್ನು ಬಾಧಿಸುತ್ತದೆ ಅಂತ ಯಾರಿಗೂ ಸ್ಪಷ್ಟವಿದ್ದ ಹಾಗೆ ಇಲ್ಲ. ಒಕ್ಕೂಟದ ಗೃಹ ಸಚಿವ ಅಮಿತ್ ಶಾ ಈ ಹೊಸ ಮಂತ್ರಾಲಯದ ಮಂತ್ರಿ ಆಗಿರುವುದು ಈ ಗುಮಾನಿಯನ್ನು ಇನ್ನೂ ಹೆಚ್ಚಿಸಿದೆ. ಒಂದು ರೀತಿಯಲ್ಲಿ ನೋಡಿದರೆ ಅಮಿತ್ ಶಾಗೆ ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವವಿದೆ ಮತ್ತು ಆ ಕಾರಣಕ್ಕಾಗಿಯೇ ಅವರಿಗೆ ಸಹಕಾರ ಕ್ಷೇತ್ರದ ಹೊಣೆಯನ್ನು ರಾಷ್ಟ್ರ ಮಟ್ಟದಲ್ಲಿ ನೀಡಿದ್ದು ಸರಿ ಅಂತ ವಾದಿಸಬಹುದು.

PC : Prajavani

ಆದರೆ ಭಾರತದಲ್ಲಿ ಸಹಕಾರ ಎನ್ನುವುದು ಕೇವಲ ಸಮಷ್ಟಿ ಹಿತದ ಆರ್ಥಿಕ ಏಳಿಗೆಯನ್ನು ಸಾಧಿಸುವ ಮಾರ್ಗ ಮಾತ್ರವಲ್ಲ. ಅದು ರಾಜಕೀಯ ಅಧಿಕಾರದ ರಹದಾರಿಯೂ ಕೂಡಾ. ಆದುದರಿಂದ ಹೊಸ ಮಂತ್ರಾಲಯದ ಮೂಲಕ ರಾಜ್ಯಗಳ ಅಧೀನದಲ್ಲಿರುವ ಸಹಕಾರಿ ಸಂಸ್ಥೆಗಳ ಮೇಲೆ ಸವಾರಿ ಮಾಡುವ ಹಾದಿಯೊಂದನ್ನು ಒಕ್ಕೂಟ ಸರಕಾರ ಹೇಗಾದರೂ ಕಾನೂನಿನ ರಂಗೋಲಿಯೊಳಗೆ ತೂರಿ ಕಂಡುಕೊಂಡೀತು ಎನ್ನುವ ಆತಂಕದ ಜತೆಗೆ, ದೇಶದಲ್ಲಿ ಬಿಜೆಪಿಯ ಎರಡನೆಯ ಹಂತದ ದಿಗ್ವಿಜಯಕ್ಕೆ ಸಹಕಾರಿ ಕ್ಷೇತ್ರವನ್ನು ಬಳಸಿಕೊಳ್ಳುವ ರಾಜಕೀಯ ತಂತ್ರವೊಂದು ಇದರಲ್ಲಿರಬಹುದೋ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಆದರೆ, ಸದ್ಯಕ್ಕೆ ಎಲ್ಲವೂ ಗುಮಾನಿ ಅಷ್ಟೇ. ಈ ಸರಕಾರದ ಮೀನ ಹೆಜ್ಜೆಯ ಕತೆ ಗೊತ್ತಿದ್ದವರಿಗೆ ಇಂತಹದ್ದೊಂದು ಗುಮಾನಿ ಹುಟ್ಟದೇ ಇರಲು ಸಾಧ್ಯವೇ ಇಲ್ಲ.

ಈ ಗುಮಾನಿಯನ್ನು ಪುಷ್ಟೀಕರಿಸಲೋ ಎಂಬಂತೆ ಕಾಕತಾಳೀಯವಾದ ಇನ್ನೊಂದು ಬೆಳವಣಿಗೆಯೂ ನಡೆದು ಹೋಗಿದೆ. ಹೋದವಾರ ಸುಪ್ರೀಂ ಕೋರ್ಟ್‌ನ ಮುಂದೆ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ದೊಡ್ಡ ಸಾಂವಿಧಾನಿಕ ಪ್ರಕರಣವೊಂದು ವಿಚಾರಣೆಗೆ ಬಂದಿದೆ. ಈ ಪ್ರಕರಣದ ಕತೆ ಕುತೂಹಲಕಾರಿಯಾಗಿದೆ. ಈಗಿನ ಬಿಜೆಪಿ ಸರಕಾರ ಗಟ್ಟಿಯಾಗಿ ಅಪ್ಪಿಕೊಂಡಿರುವ ಯಾವುದೇ ಕಾನೂನಿನ ಜಾಡು ಹಿಡಿದು ಹೊರಟರೆ ಅದು ನಮ್ಮನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕಾಲಕ್ಕೆ ಒಯ್ಯುತ್ತದೆ. ಈ ಪ್ರಕರಣದ ಕತೆಯೂ ಅದೇ ಆಗಿದೆ. ಯುಪಿಎ ಸರಕಾರ 2012ರಲ್ಲಿ ಮೌನವಾಗಿ ಭಾರೀ ಮಹತ್ವದ ಸಾಂವಿಧಾನಿಕ ತಿದ್ದುಪಡಿಯೊಂದನ್ನು ಜಾರಿಗೆ ತಂದಿತು. ಅದುವೇ 97ನೆಯ ಸಾಂವಿಧಾನಿಕ ತಿದ್ದುಪಡಿ. ಈ ತಿದ್ದುಪಡಿಯಿಂದಾಗಿ ಸಹಕಾರಿ ಸಂಸ್ಥೆಗಳು, ಪಂಚಾಯತ್‌ಗಳಂತೆ, ನಗರ ಪಾಲಿಕೆಗಳಂತೆ ಸಾಂವಿಧಾನಿಕ ಸ್ಥಾನಮಾನವನ್ನು ಪಡೆದವು. ಪಂಚಾಯತ್‌ಗಳನ್ನು ಮತ್ತು ನಗರಪಾಲಿಕೆಗಳನ್ನು ಸಂವಿಧಾನೀಕರಿಸಿದ ಸಂವಿಧಾನದ ಭಾಗ ಒಂಬತ್ತರಲ್ಲೇ ’ಬಿ’ ಉಪಭಾಗವಾಗಿ ಒಂದು ಇಡೀ ಅಧ್ಯಾಯವನ್ನೇ ಸಂವಿಧಾನಕ್ಕೆ ಸೇರಿಸಲಾಯಿತು.

ಅಷ್ಟೇ ಅಲ್ಲ. ಇದೇ ತಿದ್ದುಪಡಿಯು ಇನ್ನೂ ಮುಂದುವರಿದು ಸಹಕಾರ ಸಂಘಗಳನ್ನು ರಚಿಸುವ ಹಕ್ಕನ್ನು ಒಂದು ಮೂಲಭೂತ ಹಕ್ಕು ಎಂದು ಸಂವಿಧಾನದಲ್ಲಿ ಸೇರಿಸಿತು. ಯಾವುದೇ ರೀತಿಯ ದೊಡ್ಡ ಚರ್ಚೆ ಇಲ್ಲದೆ, ಮಾಧ್ಯಮಗಳಲ್ಲಿ ದೊಡ್ಡಮಟ್ಟದ ವರದಿಗಳೂ ಬಾರದ ರೀತಿಯಲ್ಲಿ ಸಂವಿಧಾನದಲ್ಲಿ ಅಷ್ಟೊಂದು ದೊಡ್ಡ ಬದಲಾವಣೆಯೊಂದು ಆಗ ಸೇರಿಹೋದದ್ದು ಹೇಗೆ ಎನ್ನುವುದೇ ಒಂದು ಒಗಟು. ಹೀಗೆ ಮಾಡಬೇಕೆಂದು ಅಂದಿನ ಸರಕಾರಕ್ಕೆ ಉನ್ನತ ಮಟ್ಟದ ಸಮಿತಿಯೊಂದು ಶಿಫಾರಸ್ಸು ನೀಡಿತ್ತು ಮಾತ್ರವಲ್ಲ ಇಡೀ ಸಹಕಾರಿ ರಂಗವನ್ನು ಹೆಚ್ಚು ಸಬಲಗೊಳಿಸುವ ಉದ್ದೇಶವೂ ಈ ತಿದ್ದುಪಡಿಗೆ ಇತ್ತು ಎನ್ನುವುದರಲ್ಲಿ ಸಂದೇಹವಿರಲಿಲ್ಲ. ಆ ಕಾರಣಕ್ಕಾಗಿಯೇ ಹೆಚ್ಚು ಚರ್ಚೆ ಇಲ್ಲದೆ ಎಲ್ಲವೂ ನಡೆದು ಹೋಗಿರಬೇಕು. ಆದರೆ ಯುಪಿಎ ಸರಕಾರ ಇದರಲ್ಲಿ ಒಂದು ತಪ್ಪು ಮಾಡಿತ್ತು.

ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಈ ತಿದ್ದುಪಡಿಯನ್ನು ಜಾರಿಗೆ ತರಲು ಅರ್ಧದಷ್ಟು ರಾಜ್ಯಗಳ ವಿಧಾನಸಭೆಗಳ ಒಪ್ಪಿಗೆ ಬೇಕಿತ್ತು. ಇದು ವಿಧಿ 368ರ ಪ್ರಕಾರ ಸಾಂವಿಧಾನಿಕ ಅಗತ್ಯ. ಅದ್ಯಾಕೋ ರಾಜ್ಯ ವಿಧಾನಸಭೆಗಳ ಅಂಗೀಕಾರವನ್ನು ಪಡೆಯದೆಯೇ ಯುಪಿಎ ಸರಕಾರ ಹೊಸ ತಿದ್ದುಪಡಿಯನ್ನು ಜಾರಿಗೊಳಿಸಿಬಿಟ್ಟಿತು. ಇದು ಒಕ್ಕೂಟ ತತ್ವದ ದೊಡ್ಡ ಉಲ್ಲಂಘನೆ. ಆಗ ಒಕ್ಕೂಟ ಸಂಘರ್ಷ ಒಂದು ವಿಷಯವಾಗಿಲ್ಲದೆ ಹೋದ ಕಾರಣ ಅದನ್ನು ಯಾರೂ ಗಮನಿಸಿರಲಿಲ್ಲ. ಆದರೆ ಈ ತಿದ್ದುಪಡಿಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಗುಜರಾತಿನಲ್ಲಿ ಯಾರೋ ಹೈಕೋರ್ಟ್ ಕದ ತಟ್ಟಿದರು. ಉಲ್ಲಂಘನೆ ಸ್ಪಷ್ಟವಾಗಿದ್ದ ಕಾರಣ ಗುಜರಾತ್ ಹೈಕೋರ್ಟ್ 97ನೆಯ ಸಾಂವಿಧಾನಿಕ ತಿದ್ದುಪಡಿಗೆ ಭಾಗಶ ತಡೆಯಾಜ್ಞೆ ನೀಡಿತು.

ಅಂದರೆ, ಸಹಕಾರ ಸಂಘಗಳನ್ನು ಸ್ಥಾಪಿಸುವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಜನರಿಗೆ ನೀಡಿದಷ್ಟು ಭಾಗವನ್ನು ಹೈಕೋರ್ಟ್ ತಡೆ ಹಿಡಿಯಲಿಲ್ಲ. ಉಳಿದಂತೆ ಸಂವಿಧಾನಕ್ಕೆ ಹೊಸದಾಗಿ ಸೇರಿಸಲಾದ ಭಾಗ 9Bಯನ್ನು ಅಸಿಂಧು ಎಂದಿತು. ಆ ಹೊತ್ತಿಗೆ ಕರ್ನಾಟಕವೂ ಸೇರಿದಂತೆ ಹಲವಾರು ರಾಜ್ಯಗಳು ತಮ್ಮ ಸಹಕಾರಿ ಕಾಯ್ದೆಗಳನ್ನು ಹೊಸ ತಿದ್ದುಪಡಿಯ ರೀತಿಯಲ್ಲಿ ಪರಿಷ್ಕರಿಸಿಕೊಂಡೂ ಆಗಿತ್ತು. ಹೈಕೋರ್ಟ್ ತೀರ್ಪಿನ ನಂತರ ಈ ಪರಿಷ್ಕರಣೆಗಳ ಸಾಂವಿಧಾನಿಕ ಮಾನ್ಯತೆಯ ಪ್ರಶ್ನೆ ಹುಟ್ಟಬೇಕಾಗಿತ್ತು. ಆದರೆ ಅದೂ ಆದಂತಿಲ್ಲ. ಆದರೆ ಗುಜರಾತ್ ಹೈಕೋರ್ಟ್‌ನ ಈ ತೀರ್ಪನ್ನು ಒಕ್ಕೂಟ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತು. ಕೇಂದ್ರ ಸರಕಾರ ಹೊಸ ಸಹಕಾರ ಮಂತ್ರಾಲಯ ಸ್ಥಾಪನೆಯ ಘೋಷಣೆ ಮಾಡುವ ಅದೇ ಹೊತ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆಯೂ ನಡೆಯಿತು. ಈ ವಿಚಾರಣೆ ನಡೆಯುತಿದ್ದ ವೇಳೆ ನ್ಯಾಯಪೀಠ ನೀಡಿದ ಮೌಖಿಕ ಹೇಳಿಕೆಯೊಂದು ವಿಚಿತ್ರವಾಗಿತ್ತು: ’ಒಂದು ವೇಳೆ ಈ ಸಾಂವಿಧಾನಿಕ ತಿದ್ದುಪಡಿಯ ಸಿಂಧುತ್ವ ಯಾವುದಾದರೂ ರೀತಿಯಲ್ಲಿ ಸ್ಥಾಪಿತವಾದದ್ದೇ ಆದರೆ ಆಗ ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಕೈ ಹಾಕಲು ಒಕ್ಕೂಟ ಸರಕಾರಕ್ಕೆ ಹಲವು ರೀತಿಯ ಅವಕಾಶಗಳು ತೆರೆದುಕೊಳ್ಳುತ್ತವೆ ಮತ್ತು ’ಸಹಕಾರ’ ಕೇವಲ ರಾಜ್ಯಗಳ ವ್ಯಾಪ್ತಿಗೆ ಸಂಬಂಧಿಸಿದ ವಿಷಯ ಎನ್ನುವ ಸ್ಥಿತಿ ಉಳಿಯುವುದಿಲ್ಲ’ ಎನ್ನುವ ಅರ್ಥದ ಮಾತುಗಳನ್ನು ನ್ಯಾಯಪೀಠದಲ್ಲಿದ್ದ ನಾಯಾಧೀಶರುಗಳು ಆಡಿದ್ದಾರೆ.

ಪ್ರಶ್ನಿತ ತಿದ್ದುಪಡಿಯು ರಾಜ್ಯ ಸರಕಾರಗಳ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲ ಎಂಬ ಅಟಾರ್ನಿ ಜನರಲ್ ಅವರ ವಾದಕ್ಕೆ ಪ್ರತಿಕ್ರಿಯೆ ನೀಡುತ್ತಾ ನ್ಯಾಯಾಧೀಶರ ಬಾಯಿಯಿಂದ ಬಂದ ಮಾತುಗಳಿವು. ಪ್ರಕರಣದ ತೀರ್ಪು ಇನ್ನೂ ಬರಬೇಕಷ್ಟೆ. ಆದರೆ, ಇಷ್ಟರ ತನಕ ಯಾರೂ ತಲೆಕೆಡಿಸಿಕೊಳ್ಳದೆ ಇದ್ದ ಒಂದು ಸಾಂವಿಧಾನಿಕ ಪ್ರಶ್ನೆಯ ಪ್ರಕರಣ ಈಗ ಹೊಸ ಸಹಕಾರ ಮಂತ್ರಾಲಯದ ಸ್ಥಾಪನೆಯ ಕಾರಣಕ್ಕೆ
ಇದ್ದಕ್ಕಿದ್ದಂತೆಯೇ ಮಹತ್ವ ಪಡೆದುಕೊಂಡಿದೆ ಮತ್ತು ಗಮನ ಸೆಳೆಯಲಾರಂಭಿಸಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಒತ್ತಟ್ಟಿಗಿತ್ತು ನೋಡಿದರೆ ಸಹಕಾರಿ ಒಕ್ಕೂಟ ನಡೆಸುತ್ತೇವೆ ಎಂದು ಭರವಸೆ ನೀಡಿದ ಕೇಂದ್ರ ಸರಕಾರ ಈಗ ಸಹಕಾರಿ ಕ್ಷೇತ್ರವನ್ನು ಮುಂದಿಟ್ಟುಕೊಂಡು ಏನೋ ವರಸೆ ಮಾಡಲು ಹೊರಟಂತಿದೆ. ರಾಜ್ಯಗಳು ಎಚ್ಚರದಿಂದ ಇರಬೇಕಾದ ಸಮಯ ಇದು.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು


ಇದನ್ನೂ ಓದಿ: ಬೆಂಗಳೂರಿನಲ್ಲಿ ಉತ್ತರ ಪ್ರದೇಶದ ಜಾಹೀರಾತು: ಪೋಟೋ ಹಂಚಿಕೊಂಡ ವಕೀಲರಿಗೆ ಯುಪಿ ಪೊಲೀಸರ ಬೆದರಿಕೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...