‘ಪೆಗಾಸಸ್’ ತಂತ್ರಾಂಶವನ್ನು ಬಳಸಿಕೊಂಡು ಭಾರತದ ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಸಚಿವರ ಫೋನ್‌ಗಳನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ಪ್ಯಾರಿಸ್ ಮೂಲದ ಪಾರ್ಬಿಡನ್ ಸ್ಟೋರಿಸ್ ತನಿಖಾ ವರದಿ ಬಹಿರಂಗ ಪಡಿಸಿದೆ. ಈಗಾಗಲೆ ಹ್ಯಾಕ್ ಮಾಡಲಾಗಿರುವ ಕೆಲವು ಪತ್ರಕರ್ತರ ಹೆಸರನ್ನು ವರದಿಯು ಬಿಡುಗಡೆ ಮಾಡಿದೆ. ಜೊತೆಗೆ ಪೆಗಾಸಸ್ ಹ್ಯಾಕ್ ಮಾಡಿರುವ ನ್ಯಾಯಾಧೀಶರ ಮತ್ತು ಇತರ ಹೆಸರುಗಳು ಶೀಘ್ರವೇ ಬಿಡುಗಡೆಯಾಗಲಿದೆ ಎಂದು ‘ದಿ ವೈರ್’ ಸುದ್ದಿ ಸಂಸ್ಥೆಯ ಸಂಪಾದಕ ಎಂಕೆ ವೇಣು ಸೋಮವಾರ ಹೇಳಿದ್ದಾರೆ.
ವಿಶ್ವದಾದ್ಯಂತ 50,000 ಫೋನ್‌ಗಳನ್ನು ಪೆಗಾಸಸ್ ತಂತ್ರಾಂಶವು ಟ್ಯಾಪ್ ಮಾಡಿದೆ ಎನ್ನಲಾಗಿದ್ದು, ತನಿಖಾ ವರದಿಗೆ ‘ಪೆಗಾಸಸ್ ಪ್ರಾಜೆಕ್ಟ್’ ಎಂದು ಕರೆಯಲಾಗಿದೆ. ತನಿಖಾ ವರದಿಯನ್ನು ಪ್ಯಾರಿಸ್ ಮೂಲದ ಲಾಭರಹಿತ ಮಾಧ್ಯಮ ಸಂಸ್ಥೆ ‘ಫಾರ್ಬಿಡೆನ್ ಸ್ಟೋರಿಸ್’, ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಲೆ ಮಾಂಡೆ, ದಿ ಗಾರ್ಡಿಯನ್, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಒಟ್ಟು 16 ಮೆಕ್ಸಿಕನ್, ಅರಬ್ ಮತ್ತು ಯುರೋಪಿನ ಸುದ್ದಿ ಸಂಸ್ಥೆಗಳು ಜಂಟಿಯಾಗಿ ನಡೆಸಿದೆ. ಈ ಜಂಟಿ ತನಿಖೆಯಲ್ಲಿ ಭಾರತದ ಆನ್‌ಲೈನ್ ಸುದ್ದಿ ಸಂಸ್ಥೆ ದಿ ವೈರ್ ಕೂಡಾ ಸೇರಿದೆ.
ಇದನ್ನೂ ಓದಿ: ಅವರು ಏನನ್ನು ಓದುತ್ತಿದ್ದಾರೆ ಎಂದು ನಮಗೆ ಗೊತ್ತು!: ‘ಪೆಗಾಸಸ್ ಪ್ರಾಜೆಕ್ಟ್’ಗೆ ರಾಹುಲ್ ಗಾಂಧಿ
‘ಪೆಗಾಸಸ್’ ಇಸ್ರೇಲಿ ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಗೂಢಚರ್ಯೆ ತಂತ್ರಾಂಶವಾಗಿದೆ. ಈ ತಂತ್ರಾಂಶವನ್ನು ಪರವಾನಗಿ ಪಡೆದಿರುವ ಅಧಿಕೃತ ಸರಕಾರಿ ಏಜೆನ್ಸಿಗಳಿಗೆ ಅಥವಾ ಗುಪ್ತಚರ ಸಂಸ್ಥೆಗಳಿಗೆ ಮಾತ್ರವೇ ಮಾರುತ್ತೇವೆ ಎಂದು ಎನ್‌ಎಸ್‌ಒ ಹೇಳಿತ್ತು. ಪೆಗಾಸಸ್ ತಂತ್ರಾಂಗಳನ್ನು ಬಳಸಿಕೊಂಡು ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು 2019 ರಲ್ಲಿ ಕೂಡಾ ವರದಿಯಾಗಿತ್ತು.
ತಮ್ಮ ತನಿಖಾ ವರದಿಯ ಬಗ್ಗೆ ಎನ್‌ಡಿಟಿವಿ ಜೊತೆ ಮಾತನಾಡಿದ ದಿವೈರ್ ಸಂಸ್ಥಾಪಕ ಸಂಪಾದಕ ಎಂಕೆ ವೇಣು, “ಪೆಗಾಸಸ್ ಹ್ಯಾಕ್ ಮಾಡಿರುವ ನ್ಯಾಯಾಧೀಶರ ಮತ್ತು ಇತರರ ಹೆಸರನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು. ಇದು 2019 ರಲ್ಲಿ ಬಿಡುಗಡೆಯಾದ ಪಟ್ಟಿಗಿಂತ ಉದ್ದವಾಗಿದೆ. ಈ ಜನರನ್ನು ಕಣ್ಗಾವಲು ಯಾಕೆ ಮಾಡುತ್ತಿದ್ದೇವೆ ಎಂದು ಸರ್ಕಾರ ವಿವರಿಸಬೇಕು” ಎಂದು ಹೇಳಿದ್ದಾರೆ.
ಆದರೆ ಒಕ್ಕೂಟ ಸರ್ಕಾವು, ತನಿಖಾ ವರದಿಯನ್ನು ನಿರಾಕರಿಸಿದ್ದು, ನಿರ್ದಿಷ್ಟ ಜನರ ಮೇಲೆ ಸರ್ಕಾರ ಕಣ್ಗಾವಲು ಇಟ್ಟಿದೆ ಎಂಬುವುದಕ್ಕೆ ಯಾವುದೇ ದೃಡವಾದ ಆಧಾರವಿಲ್ಲ ಎಂದು ಹೇಳಿದೆ.
ತನಿಖಾ ವರದಿಯಲ್ಲಿ, ನರೇಂದ್ರ ಮೋದಿ ಸರ್ಕಾರದ ಇಬ್ಬರು ಸಚಿವರು, ಮೂವರು ವಿರೋಧ ಪಕ್ಷದ ನಾಯಕರು, ಒಬ್ಬ ನ್ಯಾಯಾಂಗದ ವ್ಯಕ್ತಿ, 40 ಪತ್ರಕರ್ತರು, ವಿಜ್ಞಾನಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ ಹಲವು ಉದ್ಯಮಿಗಳ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಇಸ್ರೇಲ್ ಮೂಲದ ಕಂಪೆನಿಯಿಂದ ಭಾರತದ 300 ಗಣ್ಯರ ಫೋನ್‌ಗಳು ಹ್ಯಾಕ್!
2019 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ನರೇಂದ್ರ ಮೋದಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂತ್ರಿಗಳು ಸೇರಿದಂತೆ 2018 ಮತ್ತು 2019 ರ ನಡುವೆ ಹೆಚ್ಚಿನ ಜನರನ್ನು ಗುರಿಯಾಗಿಸಲಾಗಿತ್ತು ಎಂದು ದಿ ವೈರ್ ವರದಿ ಹೇಳಿದೆ.
ಇಷ್ಟೇ ಅಲ್ಲದೆ, ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಾದ 12 ಹೋರಾಟಗಾರರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದ್ದು ಅವರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ತನಿಖಾ ವರದಿಯು ಹೇಳಿದೆ. ವರದಿಯು ‘ಜಾಗತಿಕ ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಉಲ್ಲೇಖಿಸಿದೆ.
ಫೋನ್ ಹ್ಯಾಕ್ ಮಾಡಲಾಗಿರುವ ಭಾರತೀಯ ಪತ್ರಕರ್ತರಲ್ಲಿ ಸುಶಾಂತ್ ಸಿಂಗ್, ಜೆ. ಗೋಪಿಕೃಷ್ಣನ್, ಶಿಶಿರ್ ಗುಪ್ತಾ, ರಿತಿಕಾ ಚೋಪ್ರಾ, ಪ್ರಶಾಂತ್ ಝಾ, ಪ್ರೇಮ್ ಶಂಕರ್ ಝಾ, ಸ್ವಾತಿ ಚತುರ್ವೇದಿ, ರಾಹುಲ್ ಸಿಂಗ್, ಮುಜಮ್ಮಿಲ್ ಜಲೀಲ್, ಇಫ್ತಿಕಾರ್ ಗೀಲಾನಿ, ಸಂದೀಪ್ ಉನ್ನಿತಾನ್, ದಿ ವೈರ್‌ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮತ್ತು ಎಂ.ಕೆ.ವೇಣು ಮುಂತಾದವರು ಸೇರಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮುಗಿಸಲು ನಳಿನ್ ಕುಮಾರ್ ಕಟೀಲ್ ಒಬ್ಬರೇ ಸಾಕು: ಕಾಂಗ್ರೆಸ್


