Homeಮುಖಪುಟಪಂಪ ಭಾರತದ ಖಾಂಡವವನ ದಹನವೂ ಜಾಗತಿಕ ಆದಿವಾಸಿ ಜನರ ಹತ್ಯಾಕಾಂಡವೂ

ಪಂಪ ಭಾರತದ ಖಾಂಡವವನ ದಹನವೂ ಜಾಗತಿಕ ಆದಿವಾಸಿ ಜನರ ಹತ್ಯಾಕಾಂಡವೂ

- Advertisement -
- Advertisement -

ದಾರ್ಶನಿಕ ಪ್ರತಿಭೆಯ ಪಂಪ ಇದ್ದದ್ದು ರಾಜ ಪ್ರಭುತ್ವಗಳ ಕಾಲಘಟ್ಟದಲ್ಲಿ. ಅವನ ಆಶ್ರಯದಾತ ಅರಿಕೇಸರಿ ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನ [ಸು. ಕ್ರಿ.ಶ.940] ಒಬ್ಬ ಸಾಮಂತ ರಾಜ. ಪಂಪನ ಎರಡು ಕಾವ್ಯಗಳು ಆದಿಪುರಾಣ ಮತ್ತು ವಿಕ್ರಮಾರ್ಜುನವಿಜಯ ಅಥವಾ ಪಂಪಭಾರತ. ಪಂಪಭಾರತ ಚಾರಿತ್ರಿಕ ಧ್ವನಿಕಾವ್ಯ. ಎಂದರೆ ಕಾವ್ಯದ ನಾಯಕ ಅರ್ಜುನನೊಂದಿಗೆ ಚಾರಿತ್ರಿಕ ವ್ಯಕ್ತಿ ಅರಿಕೇಸರಿಯನ್ನು ಸಮೀಕರಿಸಲಾಗಿದೆ. ಇದರಿಂದ ಸಮಕಾಲೀನ ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ ವಿಚಾರಗಳು ಇದರಲ್ಲಿ ದಟ್ಟವಾಗಿ ಮೇಳೈಸಿವೆ. ಪಂಪ ಕವಿ ಈಗ್ಗೆ ಸಾವಿರ ವರ್ಷಗಳ ಹಿಂದೆ ಕಾವ್ಯ ಮುಖೇನ ಧ್ವನಿಸಿರುವ ಲೋಕಸತ್ಯಗಳು ಇವತ್ತಿಗೂ ಹೊಚ್ಚ ಹೊಸತಾಗಿವೆ. ಪಂಪಭಾರತದ ಖಾಂಡವವನ ದಹನ ಪ್ರಸಂಗ ಅಂಥ ನಿತ್ಯಸತ್ಯವನ್ನು ಪ್ರತಿನಿಧಿಸುವ ಒಂದು ಮಹಾನ್ ರೂಪಕ. ಕವಿ ಮೆರೆದಿರುವ ಪರಿಸರ ಪ್ರಜ್ಞೆಗೆ ಇದೊಂದು ಜ್ವಲಂತ ನಿದರ್ಶನ ಕೂಡ.

ಪರಿಸರವನ್ನು ನಾವು ಹೀಗೆ ಹಾಳುಗೆಡವುತ್ತಾ ಹೋದರೆ ಭವಿಷ್ಯದಲ್ಲಿ ಎಂಥ ಘನಘೋರ ದುರಂತಕ್ಕೆ ಇಳಿಯುತ್ತೇವೆ ಎಂಬುದನ್ನು ಪಂಪ ಖಾಂಡವವನ ದಹನ ಹಾಗೂ ವೈಶಂಪಾಯನ ಸರೋವರದ ವರ್ಣನೆಯಲ್ಲಿ ಧ್ವನಿಸುತ್ತಾನೆ. ನಾವೀಗ ಜಾಗತಿಕ ಆದಿವಾಸಿ ಜನರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಖಾಂಡವವನ ದಹನದ ಸನ್ನಿವೇಶವನ್ನು ಕುರಿತು ಪರಿಶೀಲಿಸಬಹುದು. ಈ ಪ್ರಸಂಗ ಪಂಚಮಾಶ್ವಾಸದ 79ನೇ ಪದ್ಯದಿಂದ 100ನೇ ಪದ್ಯದವರೆಗೂ ಚಿತ್ರಿತವಾಗಿದೆ. ಮಾನವನ ಆಕ್ರಮಣಶೀಲ ವಸಾಹತುಶಾಹೀ ಬುದ್ಧಿಗೆ ಮಹಾಭಾರತದ ಈ ಪ್ರಸಂಗ ಪ್ರಥಮ ದಾಖಲೆಯಷ್ಟೇ ಅಲ್ಲ ಅವನು ಕಾಡ್ಗಿಚ್ಚಿಗೆ ಇಟ್ಟ ಪ್ರಥಮ ಕಿಡಿ ಎಂಬುದನ್ನೂ ಇದು ಸಾದರಪಡಿಸುತ್ತದೆ. ನೂರು ಯೋಜನ ಉದ್ದವೂ ನೂರು ಯೋಜನ ಅಗಲವೂ ಇದ್ದ ಖಾಂಡವ ವನವು ಪಾಂಡವರ ಇಂದ್ರಪ್ರಸ್ಥದ ಸಮೀಪವೇ ಇದ್ದ ಇಂದ್ರನ ಒಂದು ಖಾಸಗಿ ಉಪವನ. ವಿವಿಧ ಬಗೆಯ ಸಸ್ಯಾದಿಗಳಿಂದಲೂ ಮೃಗ ಪಕ್ಷಿಗಳಿಂದಲೂ ಕಿನ್ನರ, ಕಿಂಪುರುಷ, ನಾಗ ಪನ್ನಗ ಮುಂತಾದ ವನಚರರಿಂದಲೂ ಜೀವ ಸಂಕುಲಕ್ಕೆ ಜೀವನಾಧಾರವಾಗಿದ್ದ ಅರಣ್ಯ ಇದಾಗಿತ್ತು. ಒಮ್ಮೆ ಇಂದ್ರನೊಡನೆ ಬಂದ ಶಚೀದೇವಿಯು ಅಶೋಕದ ಪಲ್ಲವವನ್ನು ಕೊಯ್ದು ಪ್ರೀತಿಯಿಂದ ತುರುಬಿನಲ್ಲಿಟ್ಟುಕೊಂಡದ್ದಕ್ಕೆ ಇಂದ್ರನು ಆಕೆಯನ್ನು ಗದರಿಸಿಕೊಂಡನಂತೆ. ಮೂಲ ಕಥೆಯ ಚೌಕಟ್ಟಿನಲ್ಲಿಯೇ ಬೆಳಗಿರುವ ಪಂಪನ ಪರಿಸರ ಪ್ರಜ್ಞೆಗೆ ಇಂದ್ರ ಶಚಿಯನ್ನು ಗದರಿಸಿದ್ದು ಒಂದು ಸಣ್ಣ ನಿದರ್ಶನ ಮಾತ್ರ.

’ಯುಗಾಂತ’ದಲ್ಲಿ ಇರಾವತಿ ಕರ್ವೆಯವರು ಗುರುತಿಸಿರುವ ಖಾಂಡವವನ ದಹನ ಪ್ರಸಂಗವು ಎರಡು ಭಿನ್ನ ಸಂಸ್ಕೃತಿಗಳ ಸಮಾಜೋ-ಆರ್ಥಿಕ ಸಂಘರ್ಷವನ್ನು ತೋರಿಸಿಕೊಡುತ್ತದೆ. ಪ್ರಭು ಸಂಸ್ಕೃತಿಯ ಮೌಲ್ಯಗಳ ಪ್ರತಿನಿಧಿಗಳಾದ ಪಾಂಡವರು ಖಾಂಡವವನವನ್ನು ಸುಟ್ಟು ಅಲ್ಲಿ ವಾಸವಾಗಿದ್ದ ಕಿನ್ನರ ಪನ್ನಗ ಮುಂತಾದ ಗಣ ಸಂಸ್ಕೃತಿಯ ಬುಡಕಟ್ಟು ಜನಾಂಗವನ್ನು ಸರ್ವನಾಶಗೊಳಿಸುತ್ತಾರೆ. ಇಂದ್ರಪ್ರಸ್ಥದ ಬಂಜರು ನೆಲವನ್ನು ಕೌರವರಿಂದ ದಾಯ ಭಾಗವಾಗಿ ಪಡೆದ ಪಾಂಡವರು ಕೃಷಿ ಯೋಗ್ಯವಾದ, ಫಲವತ್ತಾದ ಖಾಂಡವ ಭೂಮಿಯನ್ನು ಕಂಡು ಅದನ್ನು ಒತ್ತುವರಿಮಾಡಿ ವಶಪಡಿಸಿಕೊಂಡರು. ಭಯಂಕರವಾಗಿ ಬೆಳೆದಿದ್ದ ಅರಣ್ಯ ಸಸ್ಯ ರಾಶಿಯನ್ನು ಕಾಡ್ಗಿಚ್ಚಿನ ಮೂಲಕ ಸುಟ್ಟುಹಾಕಿದರು. ಅಲ್ಲಿಂದ ಒಂದು ಪ್ರಾಣಿ ಪಕ್ಷಿ ಏಕೆ, ವನಚರ ಮನುಷ್ಯರೂ ಕೂಡ ತಪ್ಪಿಸಿಕೊಂಡು ಹೋಗದಂತೆ ಕಾವಲು ಕಾದು ಏಕಕಾಲಕ್ಕೆ ಸುತ್ತಲಿಂದ ಬೆಂಕಿಹಚ್ಚಿ ನಿರ್ದಯರಾಗಿ ಸುಟ್ಟುಬಿಟ್ಟರು. ಬುಡಕಟ್ಟು ಜನಾಂಗಗಳು ಇತಿಹಾಸದುದ್ದಕ್ಕೂ ಪಡುವ ಬವಣೆಯ ಪ್ರತೀಕವಾಗಿಯೂ, ನಾಗರಿಕ ಜಗತ್ತು ಯಾವತ್ತೂ ತಲೆತಗ್ಗಿಸಬೇಕಾದ ವಿಚಾರಕ್ಕೆ ಸುಟ್ಟ ಸ್ಮಾರಕವಾಗಿಯೂ, ಖಾಂಡವವನ ದಹನ ಚಿತ್ರಿತವಾಗಿದೆ.

ಇಲ್ಲಿರುವ ಮತ್ತೊಂದು ಮಾರ್ಮಿಕ ಸಂಗತಿಯೆಂದರೆ, ತನ್ನ ವನವನ್ನು ಕೃಷ್ಣಾರ್ಜುನರು ಸೇರಿ ಸುಟ್ಟು ಹಾಕುತ್ತಿದ್ದಾರೆಂಬ ಸುದ್ದಿಯನ್ನು ಕೇಳಿ ಇಂದ್ರನು ಅಲ್ಲಿಗೆ ಸೈನ್ಯ ಸಮೇತಧಾವಿಸಿ ಬಂದನು. ಆದರೆ, ’ಅರ್ಜುನ ಬೇರೆ ಯಾರೂ ಅಲ್ಲ ತನ್ನ ಮಗನೇ’ ಎಂಬ ಸಂಗತಿ ಬ್ರಹ್ಮನಿಂದ ತಿಳಿದ ಮೇಲೆ ಕೃತಾರ್ಥಭಾವದಿಂದ ತನ್ನ ರತ್ನ ಕಿರೀಟವನ್ನೇ ಅವನ ತಲೆಗಿಟ್ಟು ಆಶೀರ್ವದಿಸಿ ಸನ್ಮಾನಿಸುವನು. ಈ ಹಿಂದೆ ಪಟ್ಟದರಾಣಿ ಒಂದು ಚಿಗುರು ಕೊಯ್ದಿದ್ದಕ್ಕೆ ಆಕೆಯನ್ನು ದಂಡಿಸಿಬಿಟ್ಟಿದ್ದ ಇಂದ್ರ ಎಂಬುದನ್ನು ಸ್ಮರಿಸಿಕೊಳ್ಳಿ. ಇದು ನಿಜವಾಗಿಯೂ ’ನೆಪೊಟಿಸಮ್’ ಕುಲಪಕ್ಷಪಾತವಲ್ಲವೇ? ತಪ್ಪು ಮಾಡಿದ ಭ್ರ್ರಷ್ಟ ಮಗನಿಗೆ ಶಿಕ್ಷೆ ವಿಧಿಸುವುದಿರಲಿ ಈನಾಡಿ ಉಡುಗೊರೆಯೇ? ಪ್ರಸ್ತುತ ವಿಚಾರಕ್ಕೆ ಬಂದರೆ ಗೈರುಹಾಜರಿ ಭೂ ಒಡೆತನದಿಂದ ಎಸ್ಟೇಟ್, ಬಂಗಲೆ, ರೆಸಾರ್ಟ್ ಇತ್ಯಾದಿಗಳನ್ನು ಹೊಂದಿರುವುದು ಆಧುನಿಕ ಶ್ರೀಮಂತಶಾಹೀ ಪ್ರತಿಷ್ಠೆಯ ಲಕ್ಷಣ. ಇವೆಲ್ಲ ಭೋಗದ ಆಡೊಂಬಲ. ಸತ್ಪುತ್ರನೊಬ್ಬ ಕೀರ್ತಿ ಲಾಭಕ್ಕಾಗಿ ಇಂಥ ಒಂದು ಎಸ್ಟೇಟನ್ನು ಸುಟ್ಟು ಹಾಕಿದರೇನಂತೆ! ಇಂಥವು ಎಷ್ಟೋ ಎಸ್ಟೇಟುಗಳು ಅಪ್ಪನಿಗುಂಟಷ್ಟೆ? ಮಕ್ಕಳ ಈ ಬಗೆಯ ಪೋಕರಿ ಕೆಲಸಗಳಿಗೆ ಕುಮ್ಮಕ್ಕು ಕೊಡುವ ಶ್ರೀಮಂತ ರಾಜಕಾರಣಿಗಳು ಈಗಲೂ ನಮ್ಮ ಮಧ್ಯೆ ಇರುವರಲ್ಲವೆ? ಆದರೆ ಅಮೆಜಾನ್ ನದಿ ಪ್ರದೇಶದಲ್ಲಿ, ನೈಲ್ ನದಿ ತೀರದಲ್ಲಿ, ಆಫ್ರಿಕನ್ ಅರಣ್ಯಗಳಲ್ಲಿ, ಪಶ್ಚಿಮಘಟ್ಟ ಮಲೆನಾಡಿನಲ್ಲಿ ನಾಗರಿಕ ಜನರ ಒತ್ತಂಬದಿಂದ ಬವಣೆ ಪಡುತ್ತಿರುವ ಆದಿವಾಸಿ ಬುಡಕಟ್ಟು ಜನರನ್ನು ಕೇಳುವರಾರು? ಖಾಂಡವವನ ಪ್ರಸಂಗವು ಮನುಷ್ಯನ ಹೃದಯವಂತಿಕೆಯು ಯಾವತ್ತೂ ಸುಟ್ಟು ಕರಕಲಾಗಬಾರದು ಎಂಬುದಕ್ಕೆ ಮಹಾನ್ ಪ್ರತಿಮೆಯಾಗಿ ಕಡೆಯಲ್ಪಟ್ಟಿದೆ.

ಸಾಹಿತ್ಯ ಸಮಾಜದ ಪ್ರತಿಬಿಂಬವೂ ಹೌದು, ಗತಿ ಬಿಂಬವೂ ಹೌದು. ಖಾಂಡವವನ ದಹನದಲ್ಲಿ ಕಂಡುಬರುವ ನಾಗ ಬುಡಕಟ್ಟಿನ ಚಿತ್ರವು ಇಂದಿನ ಜಾಗತಿಕ ಬುಡಕಟ್ಟು ಜನರ ದುರಂತಕ್ಕೆ ಒಡ್ಡಿದ ಒಂದು ಅಗ್ನಿರೂಪಕವಾಗಿದೆ. ಖಾಂಡವ ವನಾಂತರದಲ್ಲಿ ನಾಗ, ಕಿನ್ನರ, ಕಿಂಪುರುಷ ಮುಂತಾದ ಬುಡಕಟ್ಟುಗಳು ವಾಸವಾಗಿದ್ದವು. ಆ ಕಾಡಿನ ಒತ್ತುವರಿಗಾಗಿ ಅರ್ಜುನನು ಬಾಣಾಗ್ನಿ ತಾಗಿಸಿದಾಗ ಕಾಡ್ಗಿಚ್ಚು ಅವರ ನೆಲೆಗಳನ್ನು ಸುಟ್ಟುಹಾಕಿದವು. ಆಗ ನಾಗರ ಸುಟ್ಟ ದೇಹದ ಮಾಂಸಖಂಡಗಳು ಅವರು ವಾಸವಿದ್ದ ನಾಗರ ಖಂಡಗಳಲ್ಲಿ (ಭೂಪ್ರದೇಶದಲ್ಲಿ) ಹರಡಿಕೊಂಡು ಬಿದ್ದುವಂತೆ. ಅಮಾಯಕ ಆದಿವಾಸಿಗಳು ಈಗ ಭಯೋತ್ಪಾದಕರು, ಉಗ್ರರು, ನಕ್ಸಲರಾಗಿ ಪರಿವರ್ತಿತರಾಗಲು ಕಾರಣರಾರು? ಕಾಡಿನ ಕೊಳ್ಳೆಗೆ ಹೊರಟ ನಾಗರಿಕರು ತಾನೆ? ಈ ಮಾತನ್ನು ಧ್ವನಿಸುವ ಒಂದು ಪ್ರಸಂಗ ಹೀಗಿದೆ: ಅಶ್ವಸೇನನೆಂಬ ನಾಗನು ತನ್ನ ತಾಯಿಯನ್ನು ಕರೆದುಕೊಂಡು ಆ ಜಾಗದಿಂದ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸುವನು.

ಆದರೆ ಅರ್ಜುನನ ಬಾಣ ಅವನನ್ನು ಎರಡು ತುಂಡಾಗಿ ಕತ್ತರಿಸಿಬಿಡುತ್ತದೆ. ತನ್ನ ತಾಯಿ ಸಮೇತ ಅಶ್ವಸೇನನು ಕಾಡ್ಗಿಚ್ಚಿನಲ್ಲಿ ಬಿದ್ದು ಸುಟ್ಟುಹೋಗುತ್ತಾನೆ. ಅವನು ಸಾಯುವಾಗ ಅರ್ಜುನನಿಗೆ “ನಿನ್ನ ತಲೆದಂಡ ಮಾಡಿಯೇ ತೀರುತ್ತೇನೆ” ಎಂದು ಶಪಥ ಮಾಡುತ್ತಾನೆ. ಈ ರೂಪಕವನ್ನು ನಾವೀಗ ಒಡೆದು ನೋಡಿದರೆ (DECODE) ವಾಸ್ತವವಾಗಿ ಇವತ್ತಿನ ಆದಿವಾಸಿ ಜನರ ಹತ್ಯಾಕಾಂಡವನ್ನೇ ಪ್ರತಿಕ್ರಿಯಿಸುವಂತೆ ಕಾಣುತ್ತದೆ. ನಾಗರಿಕ ಜನರು ಹೀಗೆ ಆದಿವಾಸಿಗಳ ಮೇಲೆ ದೌರ್ಜನ್ಯ, ಹಲ್ಲೆ, ಆಕ್ರಮಣ ನಡೆಸಿ ಅವರನ್ನು ನೆಲೆ ತಪ್ಪಿಸಿದರೆ ಅವರು ಕಡೆಗೆ ಅಶ್ವಸೇನನಂತೆ ಭಯೋತ್ಪಾದಕರಾಗದೆ ಇರುತ್ತಾರೆಯೆ? ಯಾವಾಗ ಅವರು ಪ್ರತಿರೋಧ ವ್ಯಕ್ತಪಡಿಸುತ್ತಾರೋ ಆಗ ಅವರನ್ನು ಬಂದೂಕಿನಿಂದ ಸುಟ್ಟು “ಅವರು ನಕ್ಸಲರು, ಎನ್‌ಕೌಂಟರ್‌ನಲ್ಲಿ ಸತ್ತಿದ್ದು” ಎಂದು ಪ್ರಕಟಿಸುತ್ತಾರೆ.

ಖಾಂಡವವನ ದಹನವಾದಾಗ ಒಂದು ಹೇನು ಸೀರು ಕೂಡ ಉಳಿಯಲಿಲ್ಲವಂತೆ. ಈಗ ಅಭಿವೃದ್ಧಿಯ ಬುಲ್ಡೋಜರ್ ನುಗ್ಗಿಸಿ ಆದಿವಾಸಿ ತಾಣಗಳನ್ನು ಧ್ವಂಸಮಾಡುತ್ತಿದ್ದೇವೆ. ಅರಣ್ಯನಾಶದೊಂದಿಗೆ ಅಲ್ಲಿರುವ ಪ್ರಾಣಿ ಪಕ್ಷಿ ಮುಂತಾಗಿ ಜೀವಸಂಕುಲವೂ ಸೇರಿದಂತೆ ಆದಿವಾಸಿ ಬುಡಕಟ್ಟುಗಳೆಲ್ಲವೂ ನಿರ್ವಸಿತರಾಗುತ್ತಿದ್ದಾರೆ; ಇಲ್ಲವೇ ಪ್ರತಿರೋಧ ವ್ಯಕ್ತಪಡಿಸಿ ಪೊಲೀಸರ ಗುಂಡಿಗೆ ಬಲಿಯಾಗುತ್ತಿದ್ದಾರೆ. ಈ ಅನ್ಯಾಯ ಒಂದು ದೇಶಕ್ಕೆ, ಒಂದು ಕಾಲಕ್ಕೆ ಮುಗಿಯುವುದಿಲ್ಲ. ರಾಜಪ್ರಭುತ್ವಗಳು ಹೋಗಿ, ಊಳಿಗಮಾನ್ಯ ಸಾಮಂತರು ಆಳಿ, ಈಗ ಪ್ರಜಾಪ್ರಭುತ್ವವೇ ಬಂದಿದ್ದರೂ ಸಹ ಅಲ್ಲೇ ಕಾಡಿನಲ್ಲಿದ್ದವರ ಗತಿ ಸ್ಥಿತಿಯಲ್ಲಿ ಯಾವ ಪ್ರಗತಿಯೂ ಇಲ್ಲ. ಸರ್ವೋದಯ, ಸ್ವಾತಂತ್ರ್ಯ, ಸಮಾನತೆ, ಸೋದರತ್ವ, ಸಹಬಾಳ್ವೆ ಎಂಬ ಮಾತುಗಳೆಲ್ಲ ರಾಜ್ಯಾಂಗದ ಕೇವಲ ಪರಿಭಾಷೆಗಳಷ್ಟೆ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಅದೇ ಹಾಡು-ಅದೇ ಪಾಡು.

ಇನ್ನು ಜಾಗತಿಕ ಇತಿಹಾಸವನ್ನು ನೋಡಿದರೂ ಇದೇ ಕಥೆ. ಉದಾಹರಣೆಗೆ, ಉತ್ತರ ಅಮೆರಿಕ
ಮತ್ತು ಲ್ಯಾಟಿನ್ ಅಮೆರಿಕಾಗಳಲ್ಲಿದ್ದ ಆದಿಮ ರೆಡ್‌ಇಂಡಿಯನ್ಸ್ ಬುಡಕಟ್ಟುಗಳನ್ನು; ಆಸ್ಟ್ರೇಲಿಯಾದ ಅಬರಿಜಿನೀಸ್ ಬುಡಕಟ್ಟುಗಳನ್ನು; ಆಫ್ರಿಕಾದ ನೀಗ್ರೋ ಮೂಲಮಾನವರನ್ನು ನಡೆಸಿಕೊಂಡಿರುವ ರೀತಿ ಗಮನಿಸಿದರೆ ಆಕ್ರಮಣಕಾರರು ಇವರ ಮೇಲೆ ಮಾಡಿದ ಹಲ್ಲೆ, ದೌರ್ಜನ್ಯ, ಕೊಲೆ ಮುಂತಾಗಿ ಎಲ್ಲಕ್ಕೂ ಕನ್ನಡಿ ಹಿಡಿಯುತ್ತವೆ, ರಾಮಾಯಣ ಮಹಾಭಾರತ ಕಾವ್ಯದ ಕೆಲಪ್ರಸಂಗಗಳು.

ಪ್ರಸ್ತುತ ಪ್ರಜಾಪ್ರಭುತ್ವಗಳು ಬಂದಾಗ್ಯೂ ಆದಿವಾಸಿಗಳ ಹತ್ಯಾಕಾಂಡಗಳು ತಪ್ಪಿದ್ದಲ್ಲ. ಖನಿಜಗಳು, ಗ್ರಾನೈಟ್, ಮರಮುಟ್ಟುಗಳು ಹಾಗೂ ಭಾರೀ ನೀರಾವರಿ ಅಣೆಕಟ್ಟೆಗಳು, ಜಲವಿದ್ಯುತ್ ಸ್ಥಾವರಗಳು ಮುಂತಾದವುಗಳಿಗಾಗಿ ದಟ್ಟಾರಣ್ಯಗಳನ್ನು ಕತ್ತರಿಸಿ, ಬೆಟ್ಟಗುಡ್ಡಗಳನ್ನು ಕೊರೆದು ರಾಜಮಾರ್ಗಗಳನ್ನು ವಿಸ್ತರಿಸಿ ನಿರ್ಮಿಸಲಾಗುತ್ತಿದೆ. ಜತೆಗೆ ಕಾಡಿನಲ್ಲಿ ಜನವಸತಿ ಸಲ್ಲದು ಎಂಬ ಕಾನೂನುಗಳನ್ನು (2006) ತಂದು ಆದಿವಾಸಿ ಗಿರಿಜನರನ್ನು ಒಕ್ಕಲೆಬ್ಬಿಸುತ್ತಿರುವ, ಪ್ರತಿರೋಧಿಸಿದರೆ ದೇಶದ್ರೋಹಿಗಳು, ನಕ್ಸಲರು, ಉಗ್ರರು, ಭಯೋತ್ಪಾದಕರು ಎಂದು ಹಣೆಪಟ್ಟಿ ಹಚ್ಚಿ ಬಂಧಿಸುವ, ಬಂಧನದಲ್ಲಿಯೇ ವಿಚಾರಣಾಧೀನ ಕೈದಿಗಳನ್ನಾಗಿ ಸವೆಸಿ ನವೆಸಿ ಸಾಯಿಸುವ ಕ್ರೌರ್ಯ, ಹತ್ಯಾಕಾಂಡ ಎಲ್ಲ ದೇಶಗಳಲ್ಲೂ, ಎಲ್ಲ ಕಾಲದಲ್ಲೂ ಸಾಮಾನ್ಯವಾಗುತ್ತಿದೆ.

ಫಾದರ್ ಸ್ಟ್ಯಾನ್ ಸ್ಯಾಮಿ ಎಂಬುವರು ಜಾರ್ಖಂಡದ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರರು. 84 ವರ್ಷದ ಈ ವೃದ್ಧರು ವಯೋಮಾನ ಸಹಜ ಪಾರ್ಕಿನ್ಸನ್ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದರು. ಆದರೂ
ಜಾಮೀನು ಸಿಗದೆ ಇದೇ ಜುಲೈ 5ರಂದು ಮುಂಬೈನ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಅಸುನೀಗಿದ್ದಾರೆ. ಹಾಗಾದರೆ ಸ್ಟ್ಯಾನ್ ಸ್ಯಾಮಿಯವರು ಮಾಡಿದ ಅಂಥ ಗುರುತರ ಕ್ರಿಮಿನಲ್ ಅಪರಾಧವೇನು? ಇಂಥ ಪ್ರಾಣಾಂತಿಕ ಶಿಕ್ಷೆಗೆ ಅವರು ಅರ್ಹರೇನು? ಇವರ ಸಾವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮೊದಲುಗೊಂಡು ಸಾಮಾಜಿಕ ನ್ಯಾಯ ಬದ್ಧತೆಯುಳ್ಳ ಪ್ರಗತಿಪರ ಮನಸ್ಸುಗಳೆಲ್ಲ ಒಕ್ಕೊರಲಿನಿಂದ ಪ್ರಶ್ನಿಸಿ ಖಂಡಿಸಿವೆ. ಅವರ ಬಂಧನದ ಹಿಂದೆ ಸುಳ್ಳು ಸಾಕ್ಷ್ಯ, ಕಟ್ಟುಕತೆ ಇದೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ವರದಿ ಸೂಚಿಸುತ್ತದೆ.

ತಮಿಳುನಾಡಿನ ತಿರುಚ್ಚಿ ಮೂಲದ ಸ್ಟ್ಯಾನ್ ಸ್ಯಾಮಿ ಮಾಡಿದ ಆ ಮಹಾಪರಾಧವೆಂದರೆ ಜಾರ್ಖಂಡ್ ಆದಿವಾಸಿಗಳ ಹಕ್ಕುಗಳಿಗಾಗಿ ತಮ್ಮ ಬದುಕನ್ನು ಮುಡುಪಾಗಿರಿಸಿದ್ದರು. ಅವರು ಕ್ರೈಸ್ತರ ಧರ್ಮಗುರುವಾಗಿದ್ದ ಮಾನವತಾವಾದಿ. ಆದರೆ ಅವರೆಂದೂ ಧರ್ಮ ಪ್ರಚಾರ ಮತ್ತು ಮತಪ್ರಚಾರಕ್ಕೆ ತೊಡಗಿದವರಲ್ಲ. ಆದಿವಾಸಿಗಳನ್ನು ಅರಣ್ಯಗಳಿಂದ ಒಕ್ಕಲೆಬ್ಬಿಸಿ ಅಲ್ಲಿನ ಭೂಗರ್ಭದಲ್ಲಿ ಹುದುಗಿರುವ ವಿವಿಧ ಖನಿಜಗಳನ್ನು ಗುತ್ತಿಗೆದಾರ ಕಾರ್ಪೊರೆಟ್ ಕಂಪನಿಗಳ ವಶಕ್ಕೆ ಒಪ್ಪಿಸುವ ಸರ್ಕಾರಗಳ ಕಾರ್ಯಸೂಚಿಯನ್ನು ವಿರೋಧಿಸಿ ಆದಿವಾಸಿಗಳ ಪರ ನಿಂತದ್ದು; ಆದರೆ ದನಿಯಿಲ್ಲದವರಿಗೆ ದನಿಯಾಗಿ ನಿಂತು ಹೋರಾಡುವವರನ್ನು ಹಿಡಿದು ಬಲಿಹಾಕುವುದು ಸರ್ಕಾರಗಳ ಯಾವೊತ್ತಿನ ಕಾರ್ಯಸೂಚಿ. ಆ ಬಲಿಗೆ ಒಂದು ಪ್ರಬಲವಾದ ಕಾರಣ ಬೇಕಿತ್ತು. ಅದಕ್ಕೆ ಭೀಮಾ ಕೋರೇಗಾಂವ್ ಸಮ್ಮೇಳನಕ್ಕೆ ಸಮೀಕರಿಸಿ ಇವರೂ ಸೇರಿ ಪ್ರಧಾನಮಂತ್ರಿಯ ಕೊಲೆಗೆ ಪಿತೂರಿ ನಡೆಸಿದರು ಎಂಬ ಆಪಾದನೆ ಹೊರಿಸಿ ವಕೀಲೆ ಸುಧಾ ಭಾರದ್ವಾಜ್ ಸೇರಿದಂತೆ ಬಂಧಿಸಿದ 16 ಜನರಲ್ಲಿ ಇವರೂ ಒಬ್ಬರು. ಅಲ್ಲಿಂದ ಮುಂದೆ ನಡೆದ ದುರಂತ ಕಥನ ಇನ್ನೂ ಬಿಸಿಯಾಗಿಯೇ ಇದೆ.

ಇದಕ್ಕೆ ಪೂರಕವಾಗಿ ನಡೆದ ಇನ್ನೂ ಕೆಲವರ ದಾರುಣ ವೃತ್ತಾಂತವನ್ನೂ ಇಲ್ಲಿ ಉಲ್ಲೇಖಿಸಬಹುದೆನಿಸುತ್ತದೆ.

ಗ್ರಹಾಂ ಸ್ಟೈನ್ಸ್ ಆಸ್ಟ್ರೇಲಿಯಾದವರು. ಒರಿಸ್ಸಾದ ಬುಡಕಟ್ಟು ಜನರ ಸೇವೆಗಾಗಿ ಕಂಕಣಬದ್ಧರಾಗಿ ದುಡಿದವರು. ದುರಾದೃಷ್ಟವಶಾತ್ ಒರಿಸ್ಸಾ ಗುಡ್ಡಗಾಡಿನಲ್ಲಿ ಬುಡಕಟ್ಟು ಆದಿವಾಸಿಗಳು ಇರುವ ವಸತಿ ಪ್ರದೇಶಗಳು ಬಾಕ್ಸೈಟ್ ಮುಂತಾದ ಖನಿಜಗಳಿಂದ ಸಮೃದ್ಧವಾಗಿವೆ. ಮೇಲುನೋಟಕ್ಕೆ ಬಂಜರು ಭೂಮಿಯಂತೆ ಕಂಡುಬಂದರೂ ಒಳಗೆ ಬಗೆದರೆ ಅವು ಖನಿಜಗಳ ಗಣಿಗಳಾಗಿವೆ. ಯಥಾಪ್ರಕಾರ ಕಾರ್ಪೊರೆಟ್ ಕಂಪನಿಗಳ ಕಣ್ಣು ಅವುಗಳ ಮೇಲೆ ಬಿತ್ತು. ಸರ್ಕಾರ ರಾಜಾದಾಯಕ್ಕಾಗಿ ಗುತ್ತಿಗೆ ನೀಡಿ ಆದಿವಾಸಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಲು ಆದೇಶ ನೀಡಿತು. ಆದರೆ ಗ್ರಹಾಂ ಹಾಗು ಇನ್ನಿತರ ಸಾಮಾಜಿಕ ಬದ್ಧತೆಯುಳ್ಳ ಕಾರ್ಯಕರ್ತರು ಆದಿವಾಸಿಗಳನ್ನು ಪ್ರೇರೇಪಿಸಿ ಸಂಘಟಿಸಿ ಗುತ್ತಿಗೆದಾರರ ಟ್ರಕ್ಕು, ಜೆಸಿಬಿ, ಬುಲ್ಡೋಜರ್‌ಗಳ ಎದುರು ಪ್ರತಿಭಟಿಸುವಂತೆ ಏರ್ಪಡಿಸಿದರು. ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಯಿತು. ಆಗ ಗ್ರಹಾಂ ಅಂಥವರನ್ನು ಮೊದಲು ನಿವಾರಿಸುವ ನಿಲುವು ತಳೆದ ಸರ್ಕಾರ ಮತ್ತು ಹಿಂದೂ ಮೂಲಭೂತವಾದಿಗಳು ಷರೀಕಾಗಿ ಗ್ರಹಾಂ ಕ್ರೈಸ್ತ ಮತಪ್ರಚಾರಕ ಹಾಗೂ ಮತಾಂತರ ಕೈಗೊಂಡಿದ್ದಾರೆ ಎಂದು ಗುಲ್ಲೆಬ್ಬಿಸಿದರು. ಅಷ್ಟೇ ಅಲ್ಲ ಕೊನೆಗೆ ಒಂದುದಿನ ಆ ಪಾದ್ರಿ ಮತ್ತು ಅವರ ಇಬ್ಬರು ಮಕ್ಕಳು ಹೋಗುತ್ತಿದ್ದ ಜೀಪನ್ನು ತಡೆದು ಅದಕ್ಕೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಟ್ಟುಬಿಟ್ಟರು. ಆದರೂ ಆ ಕ್ರಿಮಿನಲ್‌ಗಳು ಯಾರು ಎಂಬುದು ಇಂದಿಗೂ ಪತ್ತೆಯೇ ಆಗಲಿಲ್ಲ. ಆ ಪಾದ್ರಿಯ ಪತ್ನಿ, ಅವರ ಇಬ್ಬರ ಮಕ್ಕಳ ತಾಯಿ ಈ ವಿಷಯ ತಿಳಿದು “ಏಸು ಪ್ರಭು ಆ ಕೊಲೆಗಡುಕರನ್ನು ಕ್ಷಮಿಸಲಿ” ಎಂದು ಪ್ರಾರ್ಥಿಸಿದರಂತೆ ಎಂದು ಕೆಲವರ್ಷಗಳ ಹಿಂದೆ ವರದಿ ಆಗಿತ್ತು.

ಇನ್ನೊಬ್ಬರು ಹಿಮಾಂಶು ಕುಮಾರ್: ಇವರು ಅಪ್ಪಟ ಗಾಂಧೀವಾದಿ. ಇವರು ಈಗ್ಗೆ 28 ವರ್ಷಗಳ ಹಿಂದೆ ಛತ್ತೀಸ್‌ಗಡದ ಆದಿವಾಸಿಗಳ ಅತ್ಯಂತ ಹಿಂದುಳಿದ ಪ್ರದೇಶ ದಾಂತೆವಾಡಕ್ಕೆ ಹೋಗಿ ’ವನವಾಸಿ ಚೇತನ ಆಶ್ರಮ’ ಸಂಸ್ಥೆಯನ್ನು ಸ್ಥಾಪಿಸಿ ಕಾರ್ಯಪ್ರವೃತ್ತರಾದರು. ಕಾಲಕ್ರಮೇಣ ಅವರ ಆಶ್ರಮ ವನವಾಸಿ ಜನರ ಆಶಾಕಿರಣವಾಗಿ ಬೆಳೆಯಿತು. ಜನರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಆರೋಗ್ಯ, ಶಿಕ್ಷಣ, ವಸತಿ ಸೌಕರ್ಯ ಮುಂತಾದ ಮೂಲಸೌಕರ್ಯಗಳ ಬಗ್ಗೆ ಎಚ್ಚರ ಹಾಗೂ ಅವರ ನಾಗರಿಕ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡಿತು. ಮೊದಮೊದಲು ಛತ್ತೀಸ್‌ಗಡದ ಸರ್ಕಾರ ಇದನ್ನು ಬೆಂಬಲಿಸಿತು. ಆದರೆ ಕ್ರಮೇಣ ಆದ ಬೆಳವಣಿಗೆಯೇ ಬೇರೆ. 2009ರಲ್ಲಿ ಸರ್ಕಾರ ಆಶ್ರಮದ ಮೇಲೆ ನಡೆಸಿದ ಕಾರ್ಯಾಚರಣೆ ಆಘಾತಕಾರಿಯಾಗಿತ್ತು. ಸುಮಾರು ಒಂದು ಸಾವಿರ ಮಂದಿ ಪೊಲೀಸರು ಆಶ್ರಮದ ಮೇಲೆ ದಾಳಿಯಿಟ್ಟು ಇಡೀ ಆಶ್ರಮವನ್ನೇ ಧ್ವಂಸಮಾಡಿದರು. ಗಾಂಧಿ ಭಾವಚಿತ್ರಕ್ಕೆ ಧೂಳು ಮೆತ್ತಿತು. ಬುಡಕಟ್ಟು ಜನರ ಸರ್ವೋದಯಕ್ಕಾಗಿ ಕೆಲಸ ಮಾಡುತ್ತಿದ್ದ ಹಿಮಾಂಶು ಕುಮಾರ್ ಅವರಿಗೆ ಗಾಂಧಿನಾಡಿನಲ್ಲಿ ಸಂದ ಮನ್ನಣೆ ಇದು.

ಆದರೆ ಹಿಮಾಂಶು ಕುಮಾರ್ ವಿರುದ್ಧ ಸರ್ಕಾರ ತಿರುಗಿ ಬಿದ್ದುದಕ್ಕೆ ಕಾರಣ ಬೇರೆಯೇ ಇದೆ. ಅವರ ಆಶ್ರಮದ ಆಜೂಬಾಜಿನ ಪ್ರದೇಶದಲ್ಲಿ ಸುಮಾರು 140 ಆದಿವಾಸಿ ಕುಟುಂಬಗಳಿದ್ದವು. ಆ ಪ್ರದೇಶದಲ್ಲಿ ಕಬ್ಬಿಣದ ಅದಿರು ಅನ್ವೇಷಣೆ ನಡೆಸಲು ಟಾಟಾ ಮತ್ತು ಎಸ್ಸಾರ್ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಿತು. ಆದಿವಾಸಿಗಳು ಅದಿರು ಗಣಿಗಾರಿಕೆ ನಡೆಯದಂತೆ ಪ್ರತಿಭಟಿಸಿದರು. ಅಭಿವೃದ್ಧಿ ನೆಪವೊಡ್ಡಿದ ಸರ್ಕಾರ ಪೊಲೀಸರನ್ನು ಛೂಬಿಟ್ಟು ಆದಿವಾಸಿಗಳನ್ನು ಬೆದರಿಸಿ ಕಳುಹಿಸುತ್ತಿದ್ದರು. ಆದರೆ ಹಿಮಾಂಶು ಕುಮಾರ್ ಅವರ ಬೆನ್ನಿಗೆ ನಿಂತು ಪ್ರತಿರೋಧ ಒಡ್ಡುತ್ತಿದ್ದರು. ಇದನ್ನು ತಿಳಿದ ಸರ್ಕಾರ ಅವರ ಆಶ್ರಮವನ್ನೇ ಧ್ವಂಸಮಾಡಿ ಈ ಗಾಂಧೀವಾದಿಯ ನೆಲೆ ತಪ್ಪಿಸಿತು. ಈ ಸಂಘರ್ಷದಲ್ಲಿ ಕೆಲವು ಆದಿವಾಸಿಗಳು ಸತ್ತರು; ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಕೂಡ ನಡೆದವು. ಆದರೆ ಬೇಲಿಯೇ ಎದ್ದು ಹೊಲ ಮೇದರೆ ದೂರುವುದು ಯಾರಿಗೆ?

’ನ್ಯಾಯಪಥ’ ಪತ್ರಿಕೆಯ 21 ಜುಲೈ 2021ರ ಸಂಚಿಕೆಯಲ್ಲಿ ಕನ್ಸಲ್ಟಿಂಗ್ ಎಡಿಟರ್ ಡಿ. ಉಮಾಪತಿಯವರ ’ಬಹುಜನ ಭಾರತ’ ಲೇಖನ ಮಧ್ಯಭಾರತದ ಬಕ್ಸ್ ವಾಹಾ ಆದಿವಾಸಿ ಅಡವಿಗಳಲ್ಲಿನ ವಜ್ರಗಳ ಗಣಿಗಾರಿಕೆಗಾಗಿ ಲಕ್ಷಾಂತರ ಮರಗಳಿಗೆ ಕೊಡಲಿ ಬೀಳುತ್ತಿದೆ ಎಂದು ಚರ್ಚಿಸಿದೆ. ಈ ಪ್ರದೇಶದಲ್ಲಿ 17 ಆದಿವಾಸಿ ಹಳ್ಳಿಗಳಿದ್ದು ಸುಮಾರು ಏಳು ಸಾವಿರ ಮಂದಿ ಆದಿವಾಸಿಗಳು ಅಡವಿ ಉತ್ಪನ್ನಗಳಿಂದ ಜೀವಿಸುತ್ತಿದ್ದಾರೆ. ಆದರೆ ವಜ್ರಗಳಿರುವ ಈ ಪ್ರದೇಶವನ್ನು ಆದಿತ್ಯ ಬಿರ್ಲಾ ಉದ್ಯಮ ಸಮೂಹದ ಎಸ್ಸೆಲ್ ಮೈನಿಂಗ್ ಇಂಡಸ್ಟ್ರೀಸ್ ಕಂಪನಿ ಹರಾಜಿನಲ್ಲಿ ಕೂಗಿ ಗುತ್ತಿಗೆ ಪಡೆದಿದ್ದು ಗಣಿಗಾರಿಕೆಗೆ ಈಗಾಗಲೇ ಮರಮೇಧ ಆರಂಭಗೊಂಡಿದೆ.

ಈ ನಿಟ್ಟಿನಲ್ಲಿ ಮೇಲಿನ ಕೆಲವು ಉದಾಹರಣೆಗಳು ಮಾತ್ರ. ಕುವೆಂಪು ಹೇಳಿದಂತೆ ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿಯುತ್ತಲೇ ಇದ್ದಾರೆ. ಪಂಪನ ಖಾಂಡವವನ ದಹನದಂತ ಪ್ರಸಂಗಗಳು ಇಂಥ ನಿತ್ಯ ಸತ್ಯಗಳನ್ನು ಪ್ರತಿಮಿಸುವುದರಿಂದಲೇ ಅದು ಸಾವಿರ ವರ್ಷ ಕಳೆದರೂ ’ನಿಚ್ಚಂ ಪೊಸತು’ ಆಗಿ ಉಳಿದಿದೆ.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಬಹುಜನ ಭಾರತ; ಆದಿವಾಸಿ ಅಡವಿಗಳಲ್ಲಿ ಮೈತಳೆಯುತ್ತಿರುವ ಒಂದು ’ಮರಮೇಧ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...