ಮಹಾರಾಷ್ಟ್ರದಲ್ಲಿ ಉಂಟಾಗಿರುವ ಭಾರೀ ಪ್ರವಾಹಕ್ಕೆ ಹಲವಾರು ಭೂ ಕುಸಿತಗಳು ಸಂಭವಿಸಿದ್ದು, 100ಕ್ಕೂ ಹೆಚ್ಚು ಸಾವುಗಳು ಉಂಟಾಗಿವೆ. ಸುಮಾರು 80,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ರಾಜ್ಯದ ಕೊಂಕಣ ಪ್ರದೇಶದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ನಿನ್ನೆ ರಾಯ್‌ಗಡ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ಘಟನೆಯಲ್ಲಿ 36 ಮಂದಿ ಸಾವನ್ನಪ್ಪಿದ್ದರು. ಅಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸುವ ರಕ್ಷಣಾ ಕಾರ್ಯ ಮುಂದುವರೆದಿದೆ.
ರಾಯ್‌ಗಡ್ ಜಿಲ್ಲೆಯಲ್ಲಿ 33 ಜನರ ಮೃತದೇಹಗಳು ಪತ್ತೆಯಾಗಿವೆ. 52ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. 32 ಮನೆಗಳು ಧ್ವಂಸಗೊಂಡಿವೆ. ಇಂದು ಬೆಳಿಗ್ಗೆಯಿಂದಲೇ ರಕ್ಷಣಾ ಕಾರ್ಯಾಚರಣೆ ಮತ್ತೆ ಆರಂಭಿಸಲಾಗಿದೆ ಎಂದು ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ ತಿಳಿಸಿದ್ದಾರೆ.
ಪಶ್ಚಿಮ ಮಹಾರಾಷ್ಟ್ರದ ಸತಾರ ಜಿಲ್ಲೆ ಪ್ರವಾಹಕ್ಕೆ ತುತ್ತಾಗಿದ್ದು ಜಿಲ್ಲೆಯಲ್ಲಿ 27ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಗೊಂಡಿಯಾ ಮತ್ತು ಚಂದ್ರಪುರ್ ಜಿಲ್ಲೆಗಳಲ್ಲಿಯೇ ಪ್ರವಾಹ ಸಂಭವಿಸಿದ್ದು ಹಲವು ಜನ ಬಲಿಯಾಗಿದ್ದಾರೆ ಎನ್ನಲಾಗಿದೆ.
80 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕೆಲಸ ನಡೆಯುತ್ತಿದೆ. ಕೊಲ್ಲಾಪುರದ 40 ಸಾವಿರ ಜನರನ್ನು ಪುಣೆ ವಿಭಾಗಕ್ಕೆ ಸ್ಥಳಾತಂರಿಸಲಾಗಿದೆ. ಕೊಲ್ಲಾಪುರದ 54 ಗ್ರಾಮಗಳು ಸಂಪೂರ್ಣ ಮುಳಗಡೆಯಾಗಿದ್ದು, 821 ಗ್ರಾಮಗಳು ಸಂಕಷ್ಟದಲ್ಲಿವೆ.
ಪ್ರವಾಹ ದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರವನ್ನು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಗಾಯಗೊಳಗಾದವರಿಗೆ ಸರ್ಕಾರದ ವತಿಯಿಂದ ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಭೂಕುಸಿತದಲ್ಲಿ 36 ಜನರು ಸಾವು



Mumbai k East ward Wadala