ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಭೂಕುಸಿತದಲ್ಲಿ 36 ಜನರು ಸಾವು
PC: Sanjay Jog

ಮಹಾರಾಷ್ಟ್ರದ ವಿಪರಿತವಾಗಿ ಸುರಿಯುತ್ತಿರುವ ಮಳೆಗೆ ರಾಯ್‌ಗಡ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ಘಟನೆಯಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ಕೊಂಕಣ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಸಾವಿರಾರು ಜನರು ಪ್ರವಾಹ ಮತ್ತು ಭೂಕುಸಿತದಲ್ಲಿ ಸಿಲುಕಿದ್ದಾರೆ.

ಮುಂಬೈನಿಂದ 70 ಕಿ.ಮೀ ದೂರದಲ್ಲಿರುವ ರಾಯ್‌ಗಡ್‌ನ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ.

ಪ್ರವಾಹ ಮತ್ತು ಭೂಕುಸಿತದಲ್ಲಿ ಸಿಕ್ಕಿಬಿದ್ದವರು ತಮ್ಮ ಮನೆಯ ಮೇಲ್ಛಾವಣಿ ಅಥವಾ ಎತ್ತರದ ಪ್ರದೇಶಗಳಿಗೆ ಬರಲು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಹೆಲಿಕಾಪ್ಟರ್‌ಗಳಲ್ಲಿರುವ ರಕ್ಷಣಾ ತಂಡಗಳು ಸಂತ್ರಸ್ತರನ್ನು ಗುರುತಿಸಿ ಸ್ಥಳಾಂತರಿಸಬಹುದು ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ 40 ವರ್ಷಗಳಲ್ಲಿಯೇ ಅತಿ ಹೆಚ್ಚು ಮಳೆಯಾಗುತ್ತಿದೆ.

ಗುರುವಾರ ಸಂಭವಿಸಿದ ಮೂರು ಭೂಕುಸಿತಗಳಲ್ಲಿ 36 ಮಂದಿ ಸಾವನ್ನಪ್ಪಿದ್ದು, ಒಂದು ಸ್ಥಳದಲ್ಲಿ 32 ಮೃತದೇಹಗಳು, ಇನ್ನೊಂದು ಸ್ಥಳದಲ್ಲಿ ನಾಲ್ಕು ಶವಗಳು ಪತ್ತೆಯಾಗಿವೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶುಕ್ರವಾರ ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಕೊಂಕಣ ರೈಲ್ವೆಯಲ್ಲಿ ಸಿಲುಕಿಕೊಂಡ 6,000 ಪ್ರಯಾಣಿಕರು

ಮುಂಬೈನಿಂದ 250 ಕಿ.ಮೀ ದೂರದಲ್ಲಿರುವ ರತ್ನಾಗಿರಿ ಜಿಲ್ಲೆಯ ಕರಾವಳಿ ಪಟ್ಟಣವಾದ ಚಿಪ್ಲುನ್‌ನ ಕೆಲವು ಭಾಗಗಳಲ್ಲಿ, 24 ಗಂಟೆಗಳೂ ನಿರಂತರ ಮಳೆಯಾದ್ದರಿಂದ ನೀರಿನ ಮಟ್ಟವು 12 ಅಡಿಗಳಷ್ಟು ಏರಿತ್ತು. ಇದರಿಂದ ವಶಿಷ್ಠಿ ನದಿ ಉಕ್ಕಿ ಹರಿದು, ರಸ್ತೆಗಳು ಮತ್ತು ಮನೆಗಳು ಮುಳುಗಿವೆ. ನಗರದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ದೂರವಾಣಿ ಸಂಪರ್ಕಗಳು ಸ್ಥಗಿತಗೊಂಡಿವೆ. ಇನ್ನು ಕೋವಿಡ್ ಆಸ್ಪತ್ರೆ ಪ್ರವಾಹದಿಂದ ತುಂಬಿದ್ದು, ಕೊರೊನಾ ಸೋಂಕಿತ ರೋಗಿಗಳನ್ನು ದೋಣಿಗಳಲ್ಲಿ ರಕ್ಷಿಸಿ, ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ನೌಕಾಪಡೆಯ ಎರಡು ರಕ್ಷಣಾ ತಂಡಗಳು, 12 ಸ್ಥಳೀಯ ಪರಿಹಾರ ತಂಡಗಳು, ಕೋಸ್ಟ್‌ಗಾರ್ಡ್‌ನಿಂದ ಎರಡು, ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ತಂಡದಿಂದ (NDRF) ಮೂರು ತಂಡಗಳನ್ನು ಪ್ರವಾಹ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಜೊತೆಗೆ ನೌಕಾಪಡೆಯು ರಬ್ಬರ್ ಬೋಟ್‌ಗಳು, ಲೈಫ್ ಜಾಕೆಟ್‌ಗಳು ಹೊಂದಿರುವ ಏಳು ರಕ್ಷಣಾ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ.

ಮುಂದಿನ ಕೆಲವು ದಿನಗಳವರೆಗೆ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ರಾಜ್ಯದ ಹಲವಾರು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ಗುರುವಾರ ಭಾರಿ ಮಳೆಯಿಂದಾಗಿ ರತ್ನಾಗಿರಿ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದಲ್ಲಿ ಸುಮಾರು 6,000 ಪ್ರಯಾಣಿಕರು ರೈಲುಗಳಲ್ಲಿ ಸಿಲುಕಿಕೊಂಡಿದ್ದರು.

ಇತ್ತಿಚೆಗೆ ಚೆಂಬೂರ್ ಮತ್ತು ವಿಖ್ರೋಲಿ ಪ್ರದೇಶಗಳಲ್ಲಿ ಭೂಕುಸಿತವಾಗಿದ್ದು, ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 23 ಜನರು ಸಾವನ್ನಪ್ಪಿದ್ದರು. ಚೆಂಬೂರ್‌ನ ವಾಶಿ ನಾಕಾ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ಕೆಲವು ಮನೆಗಳ ಗೋಡೆ ಕುಸಿದು ಒಟ್ಟು 17 ಜನರು ಪ್ರಾಣ ಕಳೆದುಕೊಂಡಿದ್ದರು. ದುರಂತದಿಂದಾಗಿ ಮೃತಪಟ್ಟವರಿಗೆ ಒಕ್ಕೂಟ ಸರ್ಕಾರ ತಲಾ 2 ಲಕ್ಷ ಪರಿಹಾರ ಘೋಷಿಸಿತ್ತು.


ಇದನ್ನೂ ಓದಿ: ಮುಂಬೈ ಭಾರಿ ಮಳೆ: ಭೂಕುಸಿತದಿಂದ 23 ಸಾವು

LEAVE A REPLY

Please enter your comment!
Please enter your name here