ಜನಸಂಖ್ಯೆ ಎಂಬ ನುಡಿಯಲ್ಲಿ ’ಸಂಖ್ಯೆ’ ಮುಖ್ಯವಾಗಿ ಜೀವಂತ ’ಜನರು’ ಅಮುಖ್ಯವಾದರೆ ಜನಸಂಖ್ಯಾ ನೀತಿಯ ಬಗ್ಗೆ ಅನವಶ್ಯಕ ಗೊಂದಲಗಳು ಉಂಟಾಗುತ್ತವೆ. ರಕ್ತ-ಮಾಂಸದಿಂದ ಕೂಡಿದ, ಜೀವ-ಸ್ಪಂದಿಯಾದ ಭಾವ-ಸಂಪನ್ನ ಮನಸ್ಸುಳ್ಳ ಜನರ ಬದುಕು ಸರ್ಕಾರಗಳ ಆದ್ಯತೆಯಾಗಬೇಕು. ಜನಸಂಖ್ಯಾ ನೀತಿಯು ಜನಸ್ಪಂದಿಯಾಗಿರಬೇಕು. ಅದು ’ಸಂಖ್ಯಾಸ್ಪಂದಿ’ಯಾದರೆ ಅಲ್ಲಿ ಅನೇಕ ನೇತ್ಯಾತ್ಮಕ ಸಮಸ್ಯೆಗಳು ಉಂಟಾಗುತ್ತವೆ. ಅದರಲ್ಲೂ ಮುಖ್ಯವಾಗಿ ಸಂತಾನೋತ್ಪತ್ತಿಯ (ಮಕ್ಕಳನ್ನು ಹೊರುವ, ಹೆರುವ, ಸಾಕುವ ಜವಾಬ್ದಾರಿ) ಪೂರ್ಣ ಭಾರ ಹೊರುವ ಮಹಿಳೆಯರ ಹಿತಾಸಕ್ತಿಗೆ ಇದು ಪೂರಕವಾಗಿರಬೇಕು. ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ರೂಪಿಸುತ್ತಿರುವ ದಮನಕಾರಿ-ದಬ್ಬಾಳಿಕೆ ಪ್ರಣೀತ ಜನಸಂಖ್ಯಾ ನೀತಿಯಲ್ಲಿ ಸಂಖ್ಯೆಯು ಮುಖ್ಯವಾಗಿ ಜೀವಂತ ಜನರ ಹಿತಾಸಕ್ತಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಭಾರತವನ್ನು ಸೇರಿಸಿಕೊಂಡು ಜಾಗತಿಕವಾಗಿ ಜನಸಂಖ್ಯೆಯು ಇಂದು ಸಮಸ್ಯೆಯಾಗಿ ಉಳಿದಿಲ್ಲ ಮತ್ತು ಅದು ಆತಂಕಕಾರಿಯಾಗಿ-ಆಸ್ಪೋಟಕಾರಿಯಾಗಿ ಬೆಳೆಯುತ್ತಿಲ್ಲ.
ಇಂದು ಉತ್ತರ ಪ್ರದೇಶವು ರೂಪಿಸಿರುವ ದಮನಕಾರಿ-ದಬ್ಬಾಳಿಕೆ-ಪ್ರಣೀತ ಜನಸಂಖ್ಯಾ ನೀತಿಯನ್ನು ಕರ್ನಾಟಕವೂ ಅಳವಡಿಸಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮಂತ್ರಿಗಳಾದ ಶ್ರೀ ಕೆ. ಎಸ್. ಈಶ್ವರಪ್ಪ ಮತ್ತು ಶಾಸಕರಾದ ಶ್ರೀ ಸಿ. ಟಿ. ರವಿ ಅವರು ಒತ್ತಾಯಿಸುತ್ತಿದ್ದಾರೆ. ಇವರನ್ನು ’ಸಂಖ್ಯಾವಾದಿ’ ಜನಸಂಖ್ಯಾ ನೀತಿಯ ಪ್ರತಿಪಾದಕರೆಂದು ಕರೆಯಬಹುದು. ಕರ್ನಾಟಕದ ಜನಸಂಖ್ಯೆಯ ಬೆಳವಣಿಗೆಯ ಚಲನಶೀಲತೆ ಬಗ್ಗೆ ತಿಳಿವಳಿಕೆಯಿಲ್ಲದವರು ಹೀಗೆ ಮಾತನಾಡಬಹುದು. ಈ ಹಿನ್ನೆಲೆಯಲ್ಲಿ ಇಂದು ವಾದ-ವಿವಾದಗಳಿಗೆ ಒಳಗಾಗಿರುವ ’ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರತೆ ಮತ್ತು ಯೋಗಕ್ಷೇಮ) ಕಾಯಿದೆ 2021’ರ ಬಗ್ಗೆ ಚರ್ಚೆ ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ. ಕರ್ನಾಟಕವನ್ನು ಸೇರಿಸಿಕೊಂಡು ದಕ್ಷಿಣ ಭಾರತದ ಯಾವ ರಾಜ್ಯಗಳಿಗೂ ಇದು ಸೂಕ್ತವಲ್ಲ. ಇದೊಂದು ದಮನಕಾರಿ-ಸರ್ವಾಧಿಕಾರಿ, ಮಹಿಳಾ ವಿರೋಧಿ, ಭಯಹುಟ್ಟಿಸುವ, ಸಂವಿಧಾನ ವಿರೋಧಿ ಮತ್ತು ಜನತಂತ್ರ ವಿರೋಧಿ ನೀತಿಯಾಗಿದೆ ಎಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.
(1) ಬಲವಂತದ, ದಮನಕಾರಿ ಜನಸಂಖ್ಯಾ ನೀತಿ
ಬಲವಂತದ ಅಥವಾ ಭಯ ಹುಟ್ಟಿಸುವಂತಹ, ದಮನಕಾರಿ ಕಾಯಿದೆಗಳಿಂದ ಸಾಮಾಜಿಕ ಬದಲಾವಣೆಯನ್ನು ತರುವುದು ಸಾಧ್ಯವಿಲ್ಲ. ಬದಲಿಗೆ ಅವು ಮಾನವ ಹಕ್ಕುಗಳಿಗೆ ಮಾರಕವಾಗುತ್ತವೆ. ಈ ರೀತಿಯ ನೀತಿಗಳು ಜನರಿಗೆ ’ಆಯ್ಕೆ’ಯ ಸ್ವಾತಂತ್ರ್ಯವೇ ಇಲ್ಲದಂತೆ ಮಾಡುತ್ತವೆ. ಮಾನವ ಸಂಬಂಧಗಳನ್ನು, ಗಂಡು-ಹೆಣ್ಣಿನ ಸಂಬಂಧವನ್ನು ಕಾಯಿದೆಯಿಂದ ನಿರ್ಧರಿಸುವುದು ಜನತಂತ್ರ ವಿರೋಧಿಯಾಗುತ್ತದೆ. ಎಷ್ಟು ಮಕ್ಕಳನ್ನು ಪಡೆಯಬೇಕು ಮತ್ತು ಯಾವಾಗ ಪಡೆಯಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಮಹಿಳೆಯರದ್ದಾಗಿದೆ. ಇದನ್ನು ಸಂತಾನೋತ್ಪತ್ತಿ ಹಕ್ಕು ಎಂದು ಜನಸಂಖ್ಯಾಶಾಸ್ತ್ರಜ್ಞರು ಕರೆಯುತ್ತಾರೆ. ಈ ಕಾಯಿದೆಯು ಮಹಿಳೆಯರ ಖಾಸಗಿತನಕ್ಕೆ, ಕೌಟುಂಬಿಕ ಗೌಪ್ಯತೆಗೆ ವಿರುದ್ಧವಾದುದಾಗಿದೆ. ಈ ಕಾಯಿದೆಯನ್ನು ಜನವಿರೋಧಿ, ದಮನಕಾರಿ ಎಂದು ಏಕೆ ಕರೆಯಲಾಗಿದೆಯೆಂದರೆ ಇದು ಜನವರ್ಗವನ್ನು ಸರ್ಕಾರಿ ಸೌಲಭ್ಯಗಳಿಗೆ ’ಅರ್ಹರಾದವರು’ ಮತ್ತು ಅವುಗಳಿಗೆ ’ಅನರ್ಹರಾದವರು’ ಎಂದು ಎರಡು ಭಾಗಗಳಾಗಿ ವರ್ಗೀಕರಿಸುತ್ತದೆ.
ಇಂತಹ ವರ್ಗೀಕರಣದಿಂದ ಸಮಾಜದಲ್ಲಿ ’ಅನರ್ಹರು’ ಎಂಬ ಹಣೆಪಟ್ಟಿಗೆ ಒಳಗಾದವರು ಯಾವ ಬಗೆಯ ಸಾಮಾಜಿಕ, ಆರ್ಥಿಕ, ರಾಜಕೀಯ ತಾರತಮ್ಯಗಳನ್ನು ಎದುರಿಸಬೇಕಾಗುತ್ತದೆ ಮತ್ತು ಮಾನಸಿಕ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ. ಇದು ಒಂದು ರೀತಿಯಲ್ಲಿ ಅಸ್ಪೃಶ್ಯತೆಯನ್ನು ಹುಟ್ಟುಹಾಕುವ ಕ್ರಮವಾಗುತ್ತದೆ. ಎರಡನೆಯದಾಗಿ ಇಂತಹ ಕಾಯಿದೆಗಳು ಜಗತ್ತಿನಲ್ಲೆಲ್ಲಿಯೂ ಯಶಸ್ವಿಯಾಗಿರುವುದಕ್ಕೆ ಪುರಾವೆಗಳು-ನಿದರ್ಶನಗಳು, ಆಧಾರಗಳು ನಮಗೆ ದೊರೆಯುವುದಿಲ್ಲ. ಈ ನೀತಿಯನ್ನು ರೂಪಿಸಿದವರಿಗೆ ಇದು ಗೊತ್ತಿಲ್ಲ ಎನ್ನುವಂತಿಲ್ಲ. ಉತ್ತರ ಪ್ರದೇಶದ ಒಟ್ಟು ಫಲವಂತಿಕೆ ದರವು (ಟಿಎಫ್‌ಆರ್) 1998ರಲ್ಲಿ 4.1ರಷ್ಟಿದ್ದುದು 2016ರಲ್ಲಿ 2.7ಕ್ಕೆ ತೀವ್ರಗತಿಯಲ್ಲಿ ಇಳಿದಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಚೀನಾ ಮಾದರಿಯ ಒಂದು ಮಗು ನೀತಿಯನ್ನು ಸರ್ಕಾರ ಅಳವಡಿಸಿಕೊಳ್ಳಬೇಕು ಎಂಬ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಅಫಿಡವಿಟ್ ಸಲ್ಲಿಸುತ್ತಾ ’ಭಾರತವು ಈಗಾಗಲೆ ಸಮತೋಲನದ ಜನಸಂಖ್ಯೆಯನ್ನು ಸಾಧಿಸಿಕೊಳ್ಳುವಂತಹ ಒಟ್ಟು ಫಲವತ್ತತೆ ದರವನ್ನು ತಲುಪುವ ಕಡೆ ಸಾಗುತ್ತಿರುವುದರಿಂದ ಚೀನಾ ಮಾದರಿಯ ಒಂದು ಮಗು ಜನಸಂಖ್ಯಾ ನೀತಿ ಅಗತ್ಯವಿಲ್ಲ’ ಎಂದು ಹೇಳಿರುವುದಲ್ಲದೆ ’ಅಂತಾರಾಷ್ಟ್ರೀಯ ಅನುಭವದ ಹಿನ್ನೆಲೆಯಲ್ಲಿ ಚೀನಾ ಮಾದರಿಯಂತಹ ದಮನಕಾರಿ ಜನಸಂಖ್ಯಾ ನೀತಿಯು ಸಾಮಾಜಿಕವಾಗಿ ವ್ಯತಿರಿಕ್ತ ಪರಿಣಾಮಗಳನ್ನು ಮತ್ತು ಜನಸಂಖ್ಯಾ ರಚನೆಯಲ್ಲಿ ಅನೇಕ ವಿಕೃತಿಗಳನ್ನು ಉಂಟುಮಾಡಬಹುದು’ ಎಂದು ಹೇಳಿದೆ. ಇದೆಲ್ಲ ಉತ್ತರ ಪ್ರದೇಶದ ಸರ್ಕಾರಕ್ಕೆ ಗೊತ್ತಿದೆ. ಆದರೂ ಈ ದಮನಕಾರಿ ಮತ್ತು ಭಯಹುಟ್ಟಿಸುವಂತಹ ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಆ ಸರ್ಕಾರ ಈಗ ಏಕೆ ತರಾತುರಿಯಲ್ಲಿ ಜಾರಿಗೊಳಿಸಲು ಪ್ರಯತ್ನಸುತ್ತಿದೆ? ಉತ್ತರ ಸ್ಪಷ್ಟ. ಇದು ಖುಲ್ಲಂಖುಲ್ಲಾ ಚುನಾವಣಾ ಪ್ರಣೀತ ರಾಜಕೀಯ ಕ್ರಮವಾಗಿದೆ.
(2) ರಾಷ್ಟ್ರೀಯ ಮಾನವ ಹಕ್ಕು ಆಯೋಗದ ವಿರೋಧ
ಉತ್ತೇಜನ-ನಿರುತ್ತೇಜನಗಳನ್ನೊಳಗೊಂಡ ದಮನಕಾರಿ ಜನಸಂಖ್ಯಾ ನೀತಿಯ ಬಗ್ಗೆ 2003ರಲ್ಲಿ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹೀಗೆ ಹೇಳಿತ್ತು: “This NHRC Declaration notes with concern that ‘population policies framed by some State Governments reflect in certain respects a coercive approach through use of incentives and disincentives, which in some cases are violative of human rights. This is not consistent with the spirit of the National Population Policy. The violation of human rights affects, in particular the marginalized and vulnerable sections of society, including women” (ಉಲ್ಲೇಖ: ಮೋಹನ್ ರಾವ್).
__________________________________________________________
ಉತ್ತರ ಪ್ರದೇಶದ ಜನಸಂಖ್ಯಾ ಕಾಯಿದೆಯಲ್ಲಿನ ಉತ್ತೇಜನ-ನಿರುತ್ತೇಜನ ಕ್ರಮಗಳು
ಎರಡು ಮಕ್ಕಳ ಪಾಲಕರಿಗೆ ಉತ್ತೇಜನ ಕ್ರಮಗಳು
• ಸೇವಾ ಅವಧಿಯಲ್ಲಿ ಒಮ್ಮೆ ಎರಡು ಹೆಚ್ಚುವರಿ ಭಡ್ತಿ * ನಿವೇಶನ/ಮನೆ ಖರೀದಿ ಅಥವಾ ಕಟ್ಟಿಸುವುದಕ್ಕೆ ಸಬ್ಸಿಡಿ
• ವಿದ್ಯಚ್ಛಕ್ತಿ, ಕುಡಿಯುವ ನೀರು, ಮನೆ ತೆರಿಗೆ, ನೀರಿನ ತೆರಿಗೆಗಳಲ್ಲಿ ವಿನಾಯಿತಿ * ಒಂದು ಮಗುವಿನ ಪಾಲಕರ
ಮಗುವಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶದಲ್ಲಿ ಪ್ರಾಶಸ್ತ್ಯ * ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ * ಉಚಿತ ಆರೋಗ್ಯ
ಸೇವೆ, ಆರೋಗ್ಯ ವಿಮೆ * ವೇತನ ಸಹಿತ 12 ತಿಂಗಳ ಹೆರಿಗೆ ಸಂದರ್ಭದಲ್ಲಿ ಪಾಲಕತ್ವ ರಜೆ ಮುಂತಾದವು.
ಎರಡು ಮಕ್ಕಳಿಗಿಂತ ಹೆಚ್ಚಿರುವ ಕುಟುಂಬದ ಪಾಲಕರಿಗೆ ನಿರುತ್ತೇಜನ ಕ್ರಮಗಳು
• ಸರ್ಕಾರದ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನರ್ಹತೆ * ಆಹಾರ ಪಡಿತರ ಕಾರ್ಡಿನಲ್ಲಿ ನಾಲ್ಕು ಸದಸ್ಯರಿಗೆ ಮಾತ್ರ ಅವಕಾಶ * ಸರ್ಕಾರಿ ನೌಕರರ ಸೇವಾ ಭಡ್ತಿ ನಿಷೇಧ * ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹತೆ * ಸರ್ಕಾರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಅನರ್ಹತೆ * ಸರ್ಕಾರಿ ಹುದ್ದೆಗಳಿಗೆ ಅನರ್ಹತೆ ಮುಂತಾದವು.
__________________________________________________________
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಎಚ್ಚರಿಕೆಯು ನೇರವಾಗಿ ಉತ್ತರ ಪ್ರದೇಶದ ಜನಸಂಖ್ಯಾ ಕಾಯಿದೆ 2021ಕ್ಕೆ ಅನ್ವಯವಾಗುತ್ತದೆ. ಮಾನವ ಹಕ್ಕುಗಳ ಬಗ್ಗೆ ಅನುಮಾನಾಸ್ಪದವಾದ ಧೋರಣೆಯುಳ್ಳ ಇಂದಿನ ಆಳುವ ವರ್ಗವು ಉತ್ತರ ಪ್ರದೇಶದ ಜನಸಂಖ್ಯಾ ಕಾಯಿದೆಗೆ ಸಮ್ಮತಿ ನೀಡಿರಲು ಸಾಕು. ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್ ಅವರು ತಮ್ಮ ಒಂದು ಉಪನ್ಯಾಸದಲ್ಲಿ ನಮ್ಮ ಸಂವಿಧಾನದ ಬಗ್ಗೆ ಮಾತನಾಡುತ್ತಾ ’ಹಕ್ಕುಗಳನ್ನು ಸಾಮಾಜಿಕ ಬದುಕಿನ ಅಡಿಪಾಯವನ್ನಾಗಿ ಮಾಡುವುದಕ್ಕೆ ಪ್ರತಿಯಾಗಿ ನಮ್ಮ ಪ್ರಾಚೀನ ತತ್ವವೇತ್ತರು ಕರ್ತವ್ಯವನ್ನು ಆಧಾರ ಮಾಡಿಕೊಂಡ ಸಮಾಜದ ಪರವಾಗಿದ್ದರು. ಅಲ್ಲಿ ಕರ್ತವ್ಯ ನಿರ್ವಹಿಸುವುದು ವ್ಯಕ್ತಿಗಳ ಹಕ್ಕಾಗಿರುತ್ತದೆ’ ಎನ್ನುತ್ತಾರೆ (ದುರ್ಗಾದಾಸ್ ಬಸು ಸ್ಮಾರಕ ಉಪನ್ಯಾಸ, 2017). ಅವರು ಬಹಳ ಹಿಂದೆಯೇ ’ಹಕ್ಕುಗಳು ನಮ್ಮ ಪರಂಪರೆಯಲ್ಲ’ ಎಂದು ಘೋಷಿಸಿದ್ದರು.
ಇದೇ ರೀತಿಯಲ್ಲಿ ನಮ್ಮ ವಿತ್ತಮಂತ್ರಿಯವರು ’ಸ್ವಾತಂತ್ರ್ಯಾನಂತರದ ಮೊದಲ 50 ವರ್ಷಗಳಲ್ಲಿ ನಾವು ಹಕ್ಕುಗಳಿಗೆ ಒತ್ತು ನೀಡಿದ್ದೇವೆ. ಈಗ ಸ್ವಾತಂತ್ರ್ಯೋತ್ಸವದ 75ನೆಯ ವರ್ಷಕ್ಕೆ ಕಾಲಿಡುತ್ತಿರುವಾಗ ಕರ್ತವ್ಯಗಳ ಬಗ್ಗೆ ಒತ್ತು ನೀಡಬೇಕು’ ಎನ್ನುತ್ತಾರೆ (ಬಜೆಟ್ ಭಾಷಣ 2020. ಕಂಡಿಕೆ 105). ಪ್ರಧಾನಮಂತ್ರಿಯವರು 2019ರ ’ಸಂವಿಧಾನ ದಿವಸ್’ ಸಮಾರಂಭದಲ್ಲಿ ಮಾತನಾಡುತ್ತಾ ’ಸಮಾಜದ ಅಧಿಕ ಸಂಖ್ಯೆಯ ಜನರು ಸಮಾನತೆ ಮತ್ತು ನ್ಯಾಯದಿಂದ ವಂಚಿತರಾಗಿದ್ದರಿಂದ ಕಳೆದ ಅನೇಕ ವರ್ಷಗಳ ಕಾಲ ಅವರು ಹಕ್ಕುಗಳಿಗೆ ಒತ್ತು ನೀಡಿದ್ದರು. ಇವತ್ತಿನ ಸಮಾಜದಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಗಮನ ನೀಡಬೇಕು. ಕರ್ತವ್ಯಗಳಿಗೆ ಗಮನ ನೀಡದೆ ಹಕ್ಕುಗಳನ್ನು ಸಂರಕ್ಷಿಸಲು ಸಾಧ್ಯವಿಲ್ಲ’ (26.11.2019, ಇಂಡಿಯಾ ಟುಡೆ ವರದಿ). ಇವರೆಲ್ಲರೂ ಏನು ಹೇಳುತ್ತಿದ್ದಾರೆ? ಇದರ ಮೂಲ ಯಾವುದು? ಇವರೆಲ್ಲರೂ ಶ್ರೀಮದ್ ಭಗವದ್ಗೀತೆಯ ಚಾತುರ್ವರ್ಣ ಸೂತ್ರವನ್ನು ಪ್ರತಿಪಾದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಜನಸಂಖ್ಯಾ ನಿಯಂತ್ರಣ ನೀತಿಯು ದಂಪತಿಗಳ ಹಕ್ಕನ್ನು ಕಿತ್ತುಕೊಂಡರೆ ಅದರ ಬಗ್ಗೆ ಆಳುವ ವರ್ಗಕ್ಕೆ ಆಕ್ಷೇಪವೇನು ಇರಲು ಸಾಧ್ಯವಿಲ್ಲ. ಶೂದ್ರರು, ಅತಿಶೂದ್ರರು, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಹಕ್ಕುಗಳ ಬಗ್ಗೆ ಮಾತನಾಡಬಾರದು ಎಂಬುದು ಇಂದಿನ ಆಳುವ ವರ್ಗದ ಧೋರಣೆಯಾಗಿದೆ. ಚಾತುರ್ವರ್ಣದ ಮೂಲ ತತ್ವ ಇದೇ ತಾನೆ!
(3) ಇತಿಹಾಸದಿಂದ ಪಾಠ-ಅಂತಾರಾಷ್ಟ್ರೀಯ ಅನುಭವಗಳು
ಇತಿಹಾಸದಿಂದ ನಾವೇನು ಕಲಿತಿಲ್ಲ ಎಂಬುದಕ್ಕೆ ಉತ್ತರ ಪ್ರದೇಶದ ಸರ್ಕಾರವು ರೂಪಿಸಿರುವ ಎರಡು ಮಕ್ಕಳ ಜನಸಂಖ್ಯಾ ನೀತಿಯು ಸಾಕ್ಷಿಯಾಗಿದೆ. ಚೀನಾದಲ್ಲಿನ ಒಂದು ಮಗು ಗುರಿಯ ಜನಸಂಖ್ಯಾ ನೀತಿಯು ಎಂತಹ ಅಪಾಯಗಳನ್ನು-ಅನಾಹುತಗಳನ್ನು ಅಲ್ಲಿ ತಂದಿಕ್ಕಿತು ಎಂಬುದು ಇಂದು ರಹಸ್ಯವಾಗೇನು ಉಳಿದಿಲ್ಲ. ಇದರಿಂದ ಪಾಠ ಕಲಿತ ಚೀನಾ ಒಂದು ಮಗು ಕುಟುಂಬ ನೀತಿಯನ್ನು ರದ್ದುಪಡಿಸಿದೆ. ಜಗತ್ತಿನಲ್ಲಿ ಇಂದು ಅನೇಕ ಮುಂದುವರಿದ ದೇಶಗಳು ಜನಸಂಖ್ಯೆಯನ್ನು ಹೆಚ್ಚಿಸುವ ನೀತಿಗಳನ್ನು ಅನುಸರಿಸುತ್ತಿವೆ. ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಪ್ರಾನ್ಸ್, ಸ್ಪೇನ್, ಇಸ್ರೇಲ್, ಸೌತ್ ಕೊರಿಯಾ ಮುಂತಾದ ದೇಶಗಳು ಜನಸಂಖ್ಯೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ವಿಶ್ವಸಂಸ್ಥೆಯ ’ವರ್ಲ್ಡ ಪಾಪುಲೇಶನ್ ಪಾಲಿಸೀಸ್ 2018’ ವರದಿಯ ಪ್ರಕಾರ ಜಗತ್ತಿನ ಮುಂದುವರಿದ ದೇಶಗಳ ಪೈಕಿ ಜನಸಂಖ್ಯೆಯನ್ನು ಹೆಚ್ಚಿಸುವ ನೀತಿಯನ್ನು ಅನುಸರಿಸುತ್ತಿರುವ ದೇಶಗಳ ಪ್ರಮಾಣ 1996ರಲ್ಲಿ ಶೇ.23ರಷ್ಟಿದ್ದುದು 2015ರಲ್ಲಿ ಅವುಗಳ ಪ್ರಮಾಣ ಶೇ.45ಕ್ಕೇರಿದೆ. ಆದರೆ ಇದೇ ಅವಧಿಯಲ್ಲಿ ಅಭಿವೃದ್ಧಿಶೀಲ ದೇಶಗಳ ಪೈಕಿ ಜನಸಂಖ್ಯೆಯನ್ನು ಕಡಿಮೆ ಮಾಡುವ ನೀತಿಗಳನ್ನು ಅನುಸರಿಸುತ್ತಿರುವ ದೇಶಗಳ ಪ್ರಮಾಣದಲ್ಲಿ ಯಾವುದೇ ಏರಿಕೆ/ಬದಲಾವಣೆಯಾಗಿಲ್ಲ.
ಚೀನಾ 1970ರ ದಶಕದಲ್ಲಿ ಜಾರಿಗೊಳಿಸಿದ್ದ ದಮನಕಾರಿ ಜನಸಂಖ್ಯಾ ನೀತಿಯಿಂದ ಪಾಠ ಕಲಿತು ಅದನ್ನು ಇಂದು ರದ್ದುಪಡಿಸಿದೆ. ಅಲ್ಲಿ ಇಂದು ಕುಟುಂಬಗಳು ಮೂರು ಮಕ್ಕಳನ್ನು ಹೊಂದಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಚೀನಾದ ಒಂದು ಮಗು ಜನಸಂಖ್ಯಾ ನೀತಿಯ ವೈಫಲ್ಯದಿಂದ ನಾವು ಪಾಠ ಕಲಿಯಬೇಕಾಗಿದೆ.
(4) ಜನಸಂಖ್ಯೆಯು ಆತಂಕಕಾರಿಯಾಗಿ ಏರಿಕೆಯಾಗುತ್ತಿಲ್ಲ!
ಜನಸಂಖ್ಯಾ ಆಸ್ಪೋಟ, ಜನಸಂಖ್ಯಾ ಬಾಂಬು, ಜನಸಂಖ್ಯಾ ನಿಯಂತ್ರಣ ಮುಂತಾದ ನುಡಿಗಳು ಇಂದು ಜನಸಂಖ್ಯಾಶಾಸ್ತ್ರದಲ್ಲಿ ಬಳಕೆಯಲ್ಲಿಲ್ಲ. ನಕಾರಾತ್ಮಕವಾದ ಹಾಗೂ ಮುಂದುವರಿದ ದೇಶಗಳ ಪೂರ್ವಗ್ರಹಪೀಡಿತ ತಜ್ಞರು 1950-60ರ ದಶಕಗಳಲ್ಲಿ ಹಿಂದುಳಿದ ದೇಶಗಳನ್ನು ಒಂದು ರೀತಿಯಲ್ಲಿ ಅಪಮಾನ ಮಾಡುವುದಕ್ಕಾಗಿಯೇ ಟಂಕಿಸಿದ್ದ ಪರಿಭಾಷೆ ಅದು. ಅನೇಕ ಜನಸಂಖ್ಯಾಶಾಸ್ತ್ರಜ್ಞರು-ಡೆಮೊಗ್ರಾಫರ್‍ಸ್‌ಗಳು, ರಾಷ್ಟ್ರೀಯ ಸಂಸ್ಥೆಗಳು ಹೇಳುವಂತೆ ಇಂದು ಭಾರತದಲ್ಲಿ-ಕರ್ನಾಟಕದಲ್ಲಿ ಜನಸಂಖ್ಯೆಯ ಬೆಳವಣಿಗೆಯು ಆತಂಕಕಾರಿಯಾಗಿ-ಆಸ್ಪೋಟಕ ಕಾರಿಯಾಗಿ ಬೆಳೆಯುತ್ತಿಲ್ಲ. ಅದು ನಿಧಾನವಾಗಿ-ಸಾವಕಾಶವಾಗಿ ಸ್ಥಿರತೆಯತ್ತ ಸಾಗುತ್ತಿದೆ. ಭಾರತದಲ್ಲಿ ರಾಜ್ಯವಾರು ಒಟ್ಟು ಫಲೋತ್ಪತ್ತಿ ದರವು ದೇಶದಲ್ಲಿನ ಎಲ್ಲ ರಾಜ್ಯಗಳಲ್ಲಿಯೂ 2000ದಿಂದ 2016ರ ಅವಧಿಯಲ್ಲಿ ಕಡಿಮೆಯಾಗಿರುವುದನ್ನು ನೀತಿ ಆಯೋಗ ವರದಿ ಮಾಡಿದೆ. ಕೋಷ್ಟಕ ನೋಡಿ.
ಇದೇ ಅವಧಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಒಟ್ಟು ಫಲೋತ್ಪತ್ತಿ ದರವು 3.2 ರಿಂದ 2.3 ಕ್ಕಿಳಿದಿದೆ. ಭಾರತದ ಒಟ್ಟು ಸಂತಾನೋತ್ಪತ್ತಿ ಪ್ರಮಾಣ ಇಂದು ಸ್ಥಿರ ಜನಸಂಖ್ಯಾ ಫಲವತ್ತತೆ ದರವಾದ 2.1.ಕ್ಕೆ ಬಹಳ ಸನಿಹದಲ್ಲಿದೆ. ಆದ್ದರಿಂದ ಇಂದು ನಾವು ಜನಸಂಖ್ಯೆಯ ಗುಣದ ಬಗ್ಗೆ ಹೆಚ್ಚು ಗಮನ ನೀಡಬೇಕೇ ವಿನಾ ಗಾತ್ರದ ಬಗ್ಗೆ-ಸಂಖ್ಯೆಯ ಬಗ್ಗೆ ಅಲ್ಲ. ಕೋಷ್ಟಕದಲ್ಲಿ ತೋರಿಸಿರುವಂತೆ ಎಲ್ಲ ರಾಜ್ಯಗಳಲ್ಲೂ ಒಟ್ಟು ಫಲವತ್ತತೆಯ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಆರಂಭದಲ್ಲಿಯೇ (2000) ದಕ್ಷಿಣ ಭಾರತದ ರಾಜ್ಯಗಳಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿರುವುದಕ್ಕಿಂತ ಇದು ಕೆಳಮಟ್ಟದಲ್ಲಿದೆ ಮತ್ತು ಇದು ತೀವ್ರ ಗತಿಯಲ್ಲಿ ಕಡಿಮೆಯಾಗುತ್ತಿದೆ. ದಕ್ಷಿಣ ಭಾರತದಲ್ಲಿ ಇದು ಹೇಗೆ ಸಾಧ್ಯವಾಯಿತು? ಇದನ್ನು ಅವು ದಮನಕಾರಿ-ದಬ್ಬಾಳಿಕೆ ಆಧಾರದ ಜನಸಂಖ್ಯಾನೀತಿಯಿಂದ ಸಾಧಿಸಿಕೊಂಡವೆ? ಈ ರಾಜ್ಯಗಳು ಜನರು ಸ್ವಯಂಪ್ರೇರಿತ ಕ್ರಮಗಳ ಮೂಲಕ ಮತ್ತು ಸಾಮಾಜಿಕ ಸಂಗತಿಗಳಾದ ಸಾಕ್ಷರತೆ (ಮಹಿಳೆಯರ), ಶಿಶುಗಳ ಮತ್ತು ಮಹಿಳಯರ ಆರೋಗ್ಯ, ಆಹಾರ ಭದ್ರತೆ, ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣ, ಸಂತಾನೋತ್ಪತ್ತಿ ಹಕ್ಕು ಮುಂತಾದವುಗಳನ್ನು ಆಧರಿಸಿದ ಜನಸಂಖ್ಯಾ ನೀತಿಯಿಂದ ಸಾಧಿಸಿಕೊಂಡಿವೆ. ಈ ರಾಜ್ಯಗಳು ಅನುಸರಿಸಿದ ಯಶಸ್ವೀ ಸಹಕಾರವಾದಿ ಜನಸಂಖ್ಯಾ ನೀತಿಯನ್ನು ಉತ್ತರ ಭಾರತದ ರಾಜ್ಯಗಳು ಅನುಸರಿಸಬೇಕು. ಆ ಮೂಲಕ ಅವು ಕೂಡ ಈಗಾಗಲೆ ಇಳಿಮುಖವಾಗುತ್ತಿರುವ ಒಟ್ಟು ಫಲವತ್ತತೆ ದರವನ್ನು ತೀವ್ರಗತಿಯಲ್ಲಿ ಕಡಿಮೆ ಮಾಡಬಹುದು.
(5) ಜನಸಂಖ್ಯೆಯ ಗುಣಮುಖ್ಯವೇ ವಿನಾ ಗಾತ್ರವಲ್ಲ
ಜನಸಂಖ್ಯೆಯ ಗುಣ – ಸಾಕ್ಷರತೆ ಪ್ರಮಾಣ, ಶಿಶುಗಳ ಮರಣ ಪ್ರಮಾಣ, ಮಹಿಳೆಯರ ವಿವಾಹದ ವಯಸ್ಸು, ಜೀವನಾಯುಷ್ಯ, ತಾಯಂದಿರ ಮರಣ ಪ್ರಮಾಣ, ಮಹಿಳೆಯರ ಉದ್ಯೋಗ, ಮಹಿಳೆಯರ ಆಸ್ತಿ ಹಕ್ಕುಗಳು, ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳು, ವರಮಾನ ಮುಂತಾದವು ಜನಸಂಖ್ಯೆಯ ಬೆಳವಣಿಗೆಯನ್ನು ನಿರ್ಧರಿಸುವ ಸಂಗತಿಗಳಾಗಿವೆ. ಜನಸಂಖ್ಯೆಯ ಗುಣವನ್ನು ಉತ್ತಮಪಡಿಸುವುದರ ಮೂಲಕ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಬಹುದು. ಜನಸಂಖ್ಯೆಯ ಬೆಳವಣಿಗೆಯ ನಿಯಂತ್ರಣಕ್ಕೆ ಎರಡು ಮಕ್ಕಳ ಕುಟುಂಬ ನೀತಿಗಿಂತ ಹೆಚ್ಚು ಪರಿಣಾಮಕಾರಿಯಾದುದು ಹೆಚ್ಚು ಮಹಿಳಾ-ಪರ, ಸಮಾನತೆ-ಪ್ರಣೀತ ನೀತಿ. ಅಂದರೆ ಅದು ಜನಸಂಖ್ಯೆಯ ಗುಣವನ್ನು ಉತ್ತಮಪಡಿಸುವುದಾಗಿದೆ. ಶ್ರೀಲಂಕಾ ಇಂತಹ ಸ್ವಯಂಪ್ರೇರಿತ ಸಹಕಾರವಾದಿ ಜನಸಂಖ್ಯಾ ನೀತಿಯ ಮೂಲಕವೇ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವುದರಲ್ಲಿ ಯಶಸ್ವಿಯಾಗಿದೆ (ಶ್ರೀಲಂಕಾದ 2018ರ ಒಟ್ಟು ಫಲೋತ್ಪತ್ತಿ ದರ 2.2).
(6) ಕರ್ನಾಟಕದಲ್ಲಿನ ಜನಸಂಖ್ಯಾ ಬೆಳವಣಿಗೆಯ ಚಲನಶೀಲತೆ
ಕರ್ನಾಟಕದಲ್ಲಿ ಜನಸಂಖ್ಯೆಯ ಬೆಳವಣಿಗೆಯು ಆತಂಕಾರಿಯಾಗಿಲ್ಲ ಮತ್ತು ಸಮಸ್ಯೆಯಾಗಿಲ್ಲ. ರಾಜ್ಯದ 29 (ಬೆಂಗಳೂರು ನಗರ ಜಿಲ್ಲೆಯನ್ನು ಬಿಟ್ಟು) ಜಿಲ್ಲೆಗಳ ಪೈಕಿ 14 ಜಿಲ್ಲೆಗಳಲ್ಲಿ ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ (2001-2011) ದರ ಶೇ.1ಕ್ಕಿಂತ ಕಡಿಮೆಯಿದ್ದರೆ 11 ಜಿಲ್ಲೆಗಳಲ್ಲಿ ಇದು ಶೇ.2ಕ್ಕಿಂತ ಕಡಿಮೆಯಿದೆ. ಮೂರು ಜಿಲ್ಲೆಗಳಲ್ಲಿ (ಬಳ್ಳಾರಿ, ವಿಜಯಪುರ ಮತ್ತು ಯಾದಗಿರಿ) ಮಾತ್ರ ಇದು ಶೇ.2ಕ್ಕಿಂತ ಅಧಿಕವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಸಂಖ್ಯೆಯು 2001ರಲ್ಲಿ 11.39 ಲಕ್ಷವಿದ್ದುದು 2011ರಲ್ಲಿ 11.37 ಲಕ್ಷಕ್ಕಿಳಿದಿದೆ (ಪ್ರೈಮರಿ ಸೆನ್ಸ್‌ಸ್ ಅಬ್‌ಸ್ಟ್ರಾಕ್ಟ್, ಕರ್ನಾಟಕ, 2011). ಇವೆಲ್ಲ ಏನನ್ನು ಸೂಚಿಸುತ್ತವೆ? ಜನಸಂಖ್ಯೆಯ ಬೆಳವಣಿಗೆಯಲ್ಲಿ ಇಂತಹ ಸಾಧನೆ ಮಾಡಿಕೊಂಡಿರುವ ರಾಜ್ಯದಲ್ಲಿ ಉತ್ತರ ಪ್ರದೇಶದ ದಮನಕಾರಿ ಜನಸಂಖ್ಯಾ ನೀತಿಯಿಂದ ಪಾಠ ಕಲಿಯುವ ಅಥವಾ ಆ ನೀತಿಯನ್ನು ಅನುಕರಿಸುವ ಅಗತ್ಯವಿದೆಯೇ? ಮಹಿಳಾ ಸಾಕ್ಷರತೆಯಲ್ಲಿ (2011) ಉತ್ತರ ಪ್ರದೇಶವು (ಶೇ.59.26) ಕರ್ನಾಟಕಕ್ಕಿಂತ(ಶೇ. 68.13) ಸುಮಾರು ಹತ್ತು ವರ್ಷ ಹಿಂದಿದೆ.
ದೇಶದ ಪ್ರಮುಖ 20 ರಾಜ್ಯಗಳ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (2012) ಕರ್ನಾಟಕ 8ನೆಯ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶವು 19ನೆಯ ಸ್ಥಾನದಲ್ಲಿದೆ (ಕರ್ನಾಟಕ ಮಾನವ ಅಭಿವೃದ್ಧಿ ವರದಿ, 2015, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಕರ್ನಾಟಕ ಸರ್ಕಾರ, ಪುಟ 33). ಜನಸಂಖ್ಯೆಯ ಗುಣದ ದೃಷ್ಟಿಯಿಂದ ಉತ್ತರ ಪ್ರದೇಶವು ಕರ್ನಾಟಕದ ಎದುರಲ್ಲಿ ಎಷ್ಟು ಹಿಂದುಳಿದಿದೆ ಎಂಬುದು ಇದರಿಂದ ತಿಳಿಯುತ್ತದೆ. ಅಭಿವೃದ್ಧಿ ದೃಷ್ಟಿಯಿಂದ (ನಿವ್ವಳ ತಲಾ ವರಮಾನ: ಚಾಲ್ತಿ ಬೆಲೆಗಳಲ್ಲಿ, 2019-2020. ಕರ್ನಾಟಕ: ರೂ. 231246, ಉತ್ತರ ಪ್ರದೇಶ: ರೂ. 70419), ಲಿಂಗ ಸಮಾನತೆ ನೆಲೆಯಲ್ಲಿ (ಲಿಂಗ ಸಂಬಂಧಿ ಸಾಕ್ಷರತಾ ಅಂತರ: ಕರ್ನಾಟಕ: ಶೇ.14.12, ಉತ್ತರ ಪ್ರದೇಶ: ಶೇ.19.22), ಜನಸಂಖ್ಯೆಯ ಬೆಳವಣಿಗೆಯನ್ನು ತಡೆದಿರುವ ದಿಶೆಯಲ್ಲಿ (ಜನಸಂಖ್ಯಾ ವಾರ್ಷಿಕ ಬೆಳವಣಿಗೆ ಪ್ರಮಾಣ 2001-2011: ಕರ್ನಾಟಕ: ಶೇ.1.57, ಉತ್ತರ ಪ್ರದೇಶ: ಶೇ.2.01) ಯಾವ ರಾಜ್ಯ ಯಾವ ರಾಜ್ಯದಿಂದ ಪಾಠ ಕಲಿಯಬೇಕು? (ಮೂಲ: ಭಾರತ ಸರ್ಕಾರದ ಆರ್ಥಿಕ ಸಮೀಕ್ಷೆ 2020-2021).
(7) ಜನಸಂಖ್ಯೆಯ ಬೆಳವಣಿಗೆಯಲ್ಲಿ ಧಾರ್ಮಿಕತೆಯ ಪಾತ್ರ
ಜನಸಂಖ್ಯೆಯ ಬೆಳವಣಿಗೆಯಲ್ಲಿ ಧಾರ್ಮಿಕತೆಯ ಪಾತ್ರವು ಜನರ ಬಡತನದ ಪ್ರಮಾಣ, ಸಾಕ್ಷರತೆಯ ಪ್ರಮಾಣ, ವರಮಾನದ ಮಟ್ಟ, ಮಹಿಳೆಯರ ಸ್ವಾತಂತ್ರ್ಯ, ಸಾಮಾಜಿಕ ಸ್ಥಾನಮಾನ ಮುಂತಾದವುಗಳನ್ನು ಅವಲಂಬಿಸಿದೆ. ಈ ಸಾಮಾಜಿಕ-ಆರ್ಥಿಕ ಸಂಗತಿಗಳು ಉತ್ತಮವಾಗಿದ್ದರೆ ಅಲ್ಲಿ ಜನಸಂಖ್ಯೆಯ ಬೆಳವಣಿಗೆ ಮೇಲೆ ಧಾರ್ಮಿಕತೆಯ ಪ್ರಭಾವ ಇರುವುದಿಲ್ಲ. ಈ ಸಂಗತಿಗಳಲ್ಲಿ ಜನರ ಸ್ಥಿತಿಗತಿ ಕೆಳಮಟ್ಟದಲ್ಲಿದ್ದರೆ ಧಾರ್ಮಿಕತೆಯ ಪಾತ್ರ ತೀವ್ರವಾಗಿರುತ್ತದೆ. ಧಾರ್ಮಿಕತೆ ಒಂದು ಸ್ವತಂತ್ರ ಸೂಚಿಯಾಗಿ ಜನಸಂಖ್ಯೆಯ ಬೆಳವಣಿಗೆಯನ್ನು ನಿರ್ಧರಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳು-ಆಧಾರಗಳು ದೊರೆಯುವುದಿಲ್ಲ. ಧಾರ್ಮಿಕತೆಯು ಜನಸಂಖ್ಯೆಯ ಬೆಳವಣಿಗೆಯನ್ನು ನಿರ್ಧರಿಸುವ ಪ್ರಮುಖ ಸಂಗತಿ ಎನ್ನುವುದನ್ನು ಒಪ್ಪಲಾಗುವುದಿಲ್ಲ. ಅಕ್ಷರ ಸಂಸ್ಕೃತಿ, ಉದ್ಯೋಗದ ಸ್ಥಿತಿಗತಿ, ಮಹಿಳೆಯರ ಸ್ಥಾನಮಾನ, ಆರೋಗ್ಯ ಸೇವೆಯ ಲಭ್ಯತೆ ಮುಂತಾದವುಗಳಲ್ಲಿ ಹಿಂದುಳಿದಿದ್ದರೆ ಆಗ ಅಲ್ಲಿ ಧಾರ್ಮಿಕತೆಯು ಪಾತ್ರ ಇರುತ್ತದೆ.
ಜಾಗತಿಕಮಟ್ಟದಲ್ಲಿ ಮತ್ತು ಭಾರತದಲ್ಲಿನ ಅನೇಕ ಅಧ್ಯಯನಗಳು ತೋರಿಸುತ್ತಿರುವಂತೆ ಧಾರ್ಮಿಕತೆಗಿಂತ ಮಹಿಳೆಯರ ಸಾಕ್ಷರತೆ, ಶಿಕ್ಷಣ, ಸಂತಾನೋತ್ಪತ್ತಿ ಹಕ್ಕುಗಳು, ಮಹಿಳೆಯರ ಮನೆಯ ಹೊರಗಿನ ಉದ್ಯೋಗ, ವರಮಾನ ಮುಂತಾದವುಗಳ ಪ್ರಭಾವ ಜನಸಂಖ್ಯೆಯ ಬೆಳವಣಿಗೆಯ ಮೇಲಿರುತ್ತದೆ. ನಮ್ಮ ದೇಶದಲ್ಲಿ ಜನಸಂಖ್ಯೆಯ ಬೆಳವಣಿಗೆಯ ಮೇಲೆ ಧಾರ್ಮಿಕತೆಗಿಂತ ಪ್ರಾದೇಶಿಕತೆಯ ಪ್ರಭಾವ ಅಧಿಕವಾಗಿರುವುದು ಕಂಡು ಬಂದಿದೆ. ಉದಾ: ಉತ್ತರ ಪ್ರದೇಶದ ಹಿಂದೂಗಳ ಫಲವತ್ತತೆ ಪ್ರಮಾಣವು ತಮಿಳುನಾಡಿನ ಹಿಂದೂಗಳ ಫಲವತ್ತತೆ ಪ್ರಮಾಣಕ್ಕಿಂತ ಅಧಿಕವಾಗಿದೆ. ಒಂದು ರಾಜ್ಯದೊಳಗೆ ಫಲವತ್ತತೆ ಪ್ರಮಾಣದಲ್ಲಿ ಭಿನ್ನತೆಯನ್ನು ಕಾಣಬಹುದು. ಕರ್ನಾಟಕದಲ್ಲಿ ಬಳ್ಳಾರಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ 2001-2021ರ ಅವಧಿಯಲ್ಲಿ ಶೇ.2ಕ್ಕಿಂತ ಅಧಿಕವಿದ್ದರೆ ಹಾಸನ, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಇದು ಶೇ.1ಕ್ಕಿಂತ ಕಡಿಮೆಯಿದೆ.
ಉತ್ತರ ಪ್ರದೇಶದಲ್ಲಿನ ಜನಸಂಖ್ಯಾ ನಿಯಂತ್ರಣದ ಒಂದು ಉದ್ದೇಶ ವಿವಿಧ ಸಮುದಾಯಗಳ ಜನಸಂಖ್ಯೆಯ ನಡುವೆ ಸಮತೋಲನವನ್ನು ಸಾಧಿಸಿಕೊಳ್ಳುವುದಾಗಿದೆ. ಇದರ ಅರ್ಥವೇನು? ಜನಸಂಖ್ಯೆಯ ಬೆಳವಣಿಗೆಯನ್ನು ನಿರ್ಧರಿಸುವ ಸಂಗತಿಗಳನ್ನು ಬಿಟ್ಟು ಧಾರ್ಮಿಕ ಸಮುದಾಯಗಳ ಬಗ್ಗೆ ಇಲ್ಲಿ ಮಾತನಾಡಲಾಗುತ್ತಿದೆ. ಹಾರ್ವೆ ಲೆಬೈಸ್ಟೀನ್, ಗ್ಯಾರಿ ಬೆಕರ್, ಜೀನ್ ಡ್ರೀಜ್ ಮುಂತಾದವರು ವಾದಿಸುತ್ತಿರುವಂತೆ ಇಂದು ನಾವು ಮಾಲ್ಥೂಸಿಯನ್ ಸಮತೋಲನಕ್ಕೆ ಪ್ರತಿಯಾಗಿ ಅಭಿವೃದ್ಧಿ ಸಮತೋಲನದ ಬಗ್ಗೆ ಗಮನ ನೀಡಬೇಕಾದ ಅಗತ್ಯವಿದೆ. ದಿ ಹಿಂದೂ ಪತ್ರಿಕೆಯ ಜುಲೈ 14, 2021ರ ಸಂಪಾದಕೀಯದಲ್ಲಿ ಚರ್ಚಿಸಿರುವಂತೆ ಭಾರತದ ಅಪಾರ ಸಂಖ್ಯೆಯ ಯುವಕ-ಯುವತಿಯರು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಗೆ ಗಮನ ನೀಡುವುದರ ಮೂಲಕ ಫಲವತ್ತತೆಯ ದರವನ್ನು ಕಡಿಮೆ ಮಾಡಬಹುದೇ ವಿನಾ ಮಾಲ್ಥೂಸಿಯನ್ ಕ್ರಮಗಳಿಂದ ಅಥವಾ ಧಾರ್ಮಿಕ ಸಂಗತಿಗಳನ್ನು ಪ್ರಚೋದಿಸುವುದರ ಮೂಲಕ ಸಾಧ್ಯವಿಲ್ಲ.
ಒಟ್ಟಾರೆ, ಕರ್ನಾಟಕದಲ್ಲಿ, ಭಾರತದಲ್ಲಿ ಇಂದು ಜನಸಂಖ್ಯೆಯು ಆತಂಕಕಾರಿಯಾಗಿ ಏರಿಕೆಯಾಗುತ್ತಿಲ್ಲ. ದಮನಕಾರಿ-ಬಲವಂತದ ಜನಸಂಖ್ಯಾ ನೀತಿಯು ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಿರುವುದರಲ್ಲಿ ಯಶಸ್ವಿಯಾಗಿರುವ ನಿದಶನಗಳು ಇಲ್ಲ. ಪ್ರಖ್ಯಾತ ಜನಸಂಖ್ಯಾಶಾಸ್ತ್ರಜ್ಞೆ ಲೀಲಾ ವಿಸಾರಿಯಾ ವಾದಿಸುವಂತೆ ಜನಸಂಖ್ಯೆಯ ಬೆಳವಣಿಗೆಯನ್ನು ನಿರ್ಧರಿಸುವ ಪ್ರಮುಖ ಸಂಗತಿಯೆಂದರೆ ಲಿಂಗ ಸಮಾನತೆ, ಮಹಿಳೆಯರ ಸಾಕ್ಷರತಾ ಪ್ರಮಾಣ, ಮಹಿಳೆಯರ ದೈಹಿಕ ಭದ್ರತೆ (ಬಾಡಿಲೀ ಇಂಟೆಗ್ರೆಟಿ-ಸೆಕ್ಯುರಿಟಿ), ಮಕ್ಕಳ ಆರೋಗ್ಯ, ಸಂತಾನೋತ್ಪತ್ತಿ ಹಕ್ಕುಗಳ ಪೋಷಣೆ, ಆರೋಗ್ಯ ಸೌಕರ್ಯಗಳು ಮುಂತಾದ ಸಾಮಾಜಿಕ-ಆರ್ಥಿಕ ಸಂಗತಿಗಳು.
ಜನಸಂಖ್ಯೆಯ ಬೆಳವಣಿಗೆಯ ನಿಯಂತ್ರಣವು ಪೊಲೀಸಿಂಗ್ ಸಮಸ್ಯೆಯಲ್ಲ ಅಥವಾ ಲಾ ಅಂಡ್ ಆರ್ಡರ್ ಸಮಸ್ಯೆಯಲ್ಲ. ಇದೊಂದು ಸಾಮಾಜಿಕ-ಆರ್ಥಿಕ ವಿದ್ಯಮಾನ. ’ಜನಸಂಖ್ಯಾ ಸಮಸ್ಯೆ’ ಎನ್ನುವುದೇ ನಕಾರಾತ್ಮಕ ಸಂಗತಿ. ಇದನ್ನು ಸಮಸ್ಯೆಯನ್ನಾಗಿ ನೋಡುವುದಕ್ಕೆ ಪ್ರತಿಯಾಗಿ ಸಾಮಾಜಿಕ-ಆರ್ಥಿಕ, ಮಾನವ-ಪ್ರಣೀತ ಸಂಗತಿಯನ್ನಾಗಿ ನೋಡುವುದು ವಿಹಿತ.

ಡಾ. ಟಿ. ಆರ್. ಚಂದ್ರಶೇಖರ್
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು
ಇದನ್ನೂ ಓದಿ: ಆತ್ಮೀಯ ಧರ್ಮೇಂದ್ರ ಪ್ರಧಾನ್ ಅವರೆ, ಐಐಟಿ, ಐಐಎಂಗಳನ್ನು ಒಂದು ಕ್ಷಣ ಮರೆತುಬಿಡಿ, ನಿಜವಾದ ಬಿಕ್ಕಟ್ಟು…



ಡಾ. ಟಿ ಆರ್ ಚಂದ್ರಶೇಖರ್ ಅವರು, ಉತ್ತರ ಪ್ರದೇಶ ಸರ್ಕಾರದ ದಮನಕಾರಿ ಜನಸಂಖ್ಯಾ ನೀತಿಯ ಬಗ್ಗೆ ಬರೆದ ಲೇಖನ ಸಮಯೋಚಿತವಾಗಿದೆ. ಪ್ರಪಂಚದ ಯಾವ ದೇಶದಲ್ಲೂ ಹಿಡನ್ ಅಜೆಂಡಾ ಇರುವ ಇಂತಹ ಮಾನವ ವಿರೋಧಿ ಕಾನೂನುಗಳು ಮತ್ತು ಅವುಗಳನ್ನು ತಂದ ಸರ್ಕಾರಗಳು ಯಶಸ್ವಿಯಾಗಿಲ್ಲ. ಅಂತಹ ನೀತಿಗಳನ್ನು ತರುವ ಸರ್ಕಾರವನ್ನು ಎಚ್ಚರಿಸುವುದು ಮತ್ತು ವಿರೋಧಿಸುವುದು ನಮ್ಮ ಕರ್ತವ್ಯ.
ಆತಂಕ ಇರುವುದು ಒಟ್ಟು ಜನಸಂಖ್ಯೆಯಲ್ಲಲ್ಲ. ಮುಸ್ಲಿಂ ಜನಸಂಖ್ಯೆಯಲ್ಲಿ. ಹಿಂದೂಗಳಲ್ಲಿ ಜನಸಂಖ್ಯಾ ಬೆಳವಣಿಗೆ 1%-2% ದರದಲ್ಲಿದ್ದರೆ, ಮುಸ್ಲಿಮರಿಗೆ ನಾಲ್ವರು ಪತ್ನಿಯರು, ಪ್ರತಿ ಪತ್ನಿಯಿಂದ 12-15 ಮಕ್ಕಳು. ಈಗ ಎರಡು ಮಕ್ಕಳ ನೀತಿ ಬಂದರೆ ಯಾರಿಗೂ ಸಮಸ್ಯೆ ಇಲ್ಲ. 2.1% ದರ ಇರುವುದನ್ನು 2.0%ಕ್ಕೆ ತಂದ ಹಾಗಾಗುತ್ತದೆ, ಅಷ್ಟೇ.