Homeಅಂಕಣಗಳುನಾಗಸುಧೆ ಜಗಲಿಯಿಂದಅಪಸ್ವರ ಇಲ್ಲದ ಆಲಾಪದ ಪದಗಳು - ಪ್ರಕಾಶ ಕಡಮೆ

ಅಪಸ್ವರ ಇಲ್ಲದ ಆಲಾಪದ ಪದಗಳು – ಪ್ರಕಾಶ ಕಡಮೆ

ನಂದಿನಿಯವರ ಕವಿತೆಯಲ್ಲಿ ಹೆಣ್ಣಿನ ಮನೋಭಾವನೆಗಳೇ ಕಾವ್ಯವಾಗಿ ಹೊರ ಹೊಮ್ಮಿದೆ. ಹೇಳ ಬೇಕಾದುದೆಲ್ಲವನ್ನೂ ಧೈರ್ಯದಿಂದ ಕವಿತೆಯ ಸಾಲುಗಳ ಮೂಲಕ ಹೇಳಿರುವರು.

- Advertisement -
- Advertisement -

ನಂದಿನಿ ಹೆದ್ದುರ್ಗ ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ಮತ್ತು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡು ಕಳೆದ ನಾಲ್ಕೈದು ವರ್ಷಗಳಿಂದ ಕಾವ್ಯ ಲೋಕಕೆ ಬಂದ ಇವರದು ಇದು ಎರಡನೇ ಕವನ ಸಂಕಲನ. ಇಂದಿನ ಪ್ರಮುಖ ಎಲ್ಲಾ ಪತ್ರಿಕೆಗಳಲ್ಲಿಯೂ ಇವರ ಕವಿತೆ, ಬರಹಗಳು ಪ್ರಕಟವಾಗುತ್ತಿದೆ. ಹೆಣ್ಣಿನ ಪ್ರೀತಿ ಪ್ರೇಮಗಳೇ ಇವರ ಕಾವ್ಯದ ಕೇಂದ್ರಬಿಂದು. ಬಿಡೆ ಬಿಟ್ಟು ಹೆಣ್ಣಿನ ಅಂತರಂಗದ ಭಾವನೆಗಳನ್ನು ಯಾವುದೇ ಮುಲಾಜಿಲ್ಲದೇ ಹೊರ ಹಾಕಿರುವುದೇ ಇವರ ಕವಿತೆಗಳ ಅಂತರಂಗದ ಭಾವಗಳು.

ಐವತ್ತು ಕವಿತೆಗಳಿರುವ ಈ “ಒಳಸೆಲೆ”ಯನ್ನು ಬೆಂಗಳೂರಿನ ಅಂಕಿತ ಪ್ರಕಾಶನದವರು ಪ್ರಕಟಿಸಿದ್ದು, ನಂದಿನಿಯವರು ಈ ಸಂಕಲನವನ್ನು ತಮ್ಮ ಕಾವ್ಯ ಗುರು ಬಿ.ಆರ್.ಲಕ್ಷ್ಮಣರಾವ್ ರಿಗೆ ಅರ್ಪಿಸಿರುವರು.

ಯಾರಿಂದಲೋ ಪಡೆದ
ಗಾಢಬಣ್ಣದ
ದೊಗಳೆ ಷರಾಯಿ
ಮುಚ್ಚಬೇಕಾದಲ್ಲೇ ತೆರೆದಿದೆ

ಕಡುಬಡತನದಲೂ
ಅದೆಂಥ ಬೆಡಗಿನ ನಗು!
ಕೋಟ್ಯಾಧಿಪತಿಗೂ ದಕ್ಕದ
ಅಪರೂಪದ ಸೊಬಗು

ಎಂದು “ಬಡತನದ ಬೆಡಗು” ಕವಿತೆಯಲ್ಲಿ ಕವಿ ಬಡತನಕ್ಕೆ ಬೆರಗಾಗಿರುವರು. ಈ ಸಂಕಲನದಲ್ಲಿ ಇದೊಂದು ಅಪರೂಪದ ಕವಿತೆ. ಯಾಕೆಂದರೆ ಸಂಕಲನದುದ್ದಕೂ ಇಂತಹ ಕವಿತೆಗಳು ವಿರಳವೇ. ಅದೇನಿದ್ದರೂ ಪ್ರೀತಿ, ಪ್ರೇಮ, ಬದುಕಿನ ಲವಲವಿಕೆಯ ಕವಿತೆಗಳೇ. ಬಡ ಜನರ ಅಂತರಂಗದಲಿ ಒಂದಾಗಿ ಕವಿ ನಂದಿನಿ ಇಂತಹ ಕವಿತೆಗಳನ್ನೂ ಬರೆಯಬಲ್ಲರು ಎಂಬುದನ್ನು ತೋರಿಸಿರುವರು. ಈ ಬಡತನದ ಖುಷಿಯೇ ಹೀಗೆ. ಹಾಸಿಗೆ ಇದ್ದಷ್ಟೇ ಕಾಲುಚಾಚು ಎಂಬಂತೆ ತಮ್ಮದೇ ರೇಖೆಯ ಒಳಗೆ ಆತ್ಮ ತೃಪ್ತಿಯ ಬದುಕನ್ನು ಸವಿದು ಸವೆಸುವರು. ಅವರ ನಗು ಖುಷಿಗಳು ಯಾವ ಕೋಟ್ಯಾಧಿಪತಿಗಳಿಗೂ ಸಿಗಲಸಾಧ್ಯ. ಕೋಟಿಗಟ್ಟಲೆ ಕೋಟಲೆಗಳಿರುವಾಗ ಅವರು ಹೇಗೆ ನಕ್ಕಾರು? ಬಟ್ಟೆ ಧರಿಸುವದೇ ಕೆಲ ಅಂಗಾಗಗಳ ಮುಚ್ಚಲೆಂದು, ಆದರೆ ಯಾರಿಂದಲೋ ಪಡೆದದು ಅದು ತಮಗೆ ಬೇಡವೆಂದು ಬಿಟ್ಟಿದ್ದರಿಂದ ಈ ನಮ್ಮ ಜನಕೆ ಅದುವೇ ಅನಿವಾರ್ಯ. ಗುಂಡಿ ಬಿಚ್ಚಿದೆ, ಮುಚ್ಚಬೇಕಾದಲ್ಲೆಲ್ಲಾ ಹರಿದಿದೆ. ಇದು ಭಾರತದ ಜೀವಂತ ಚಿತ್ರಣ. ಆದರೆ ಇಂತಹ ಜನರೇ ಖುಷಿಯಿಂದಿದ್ದು ರಾತ್ರಿ ಸುಖದ ನಿದ್ದೆ ಪಡೆಯುತ್ತಿರುವರು. ಯಾರದೇ ಮುಲಾಜಿಲ್ಲದೇ ಮುಖ ತುಂಬ, ಮನ ತುಂಬ ನಗುವರು.

“ಅನುಸಂಧಾನ” ಕವಿತೆಯಲ್ಲಿ

ಎಲ್ಲಕ್ಕೂ ಮೊದಲು
ಆಗಲಿ ಹೃದಯಗಳ ಸಂಗಮ.
ಭಾವ ಸ್ವಭಾವ ಒಪ್ಪಿ ಒಪ್ಪಿಸಿ
ನಾವಾಗುವ ಸರಿಸಮ.
ನಂತರ ಸಹಜ ಸಲೀಸು
ಉತ್ಕಟ ಉತ್ಕರ್ಷದ
ನಮ್ಮ ಸಂಪೂರ್ಣ ಸಮಾಗಮ

ಎಂದು ಗಂಡು ಹೆಣ್ಣಿನ ಸಮಾನತೆಗಾಗಿ ಇಲ್ಲಿ ಸಹಜತೆಯನ್ನು ಮೆರೆದಿರುವರು. ಹೆಣ್ಣು ಈ ಜಗದ ಕಣ್ಣು. ಬದುಕಿನ ಸರ್ವತೋಮುಖ ಅಭಿವೃದ್ಧಿಗೆ ಹೆಣ್ಣಿನ ಪಾಲು ಅತೀ ಅವಶ್ಯಕ. ಆದರೆ ಬರೀ ಭೋಗದ ವಸ್ತುವಾಗಿ ಕಾಣದೇ ಅಲ್ಲೂ ಒಂದು ಮನಸ್ಸು ಇದೆ ಎಂದು ಮನುಷ್ಯತ್ವದಿಂದ ಕಾಣುವುದು ನಮ್ಮೆಲ್ಲರ ಮೊದಲ ಕರ್ತವ್ಯವಾಗಿದೆ; ನಂತರ ನಮ್ಮ ಹಕ್ಕನ್ನು ನಾವು ಅನುಭವಿಸಬಹುದು. ನಿನ್ನ ಪೌರುಷಕ್ಕೆ ತಕ್ಕಂತೆ ಎಲ್ಲವನ್ನೂ ಅನುಭವಿಸು. ಈ ಬದುಕು, ಈ ಜೀವ, ಈ ದೇಹ ನಿನಗಾಗಿಯೇ. ಅಲ್ಲಿ ನೀ ಅಪ್ಪಳಿಸು, ಆವರಿಸು, ನಿನ್ನದೆಲ್ಲವನೂ ಹರಿಸು ಹೂಂಕಾರದಿಂದ ಠೇಂಕರಿಸು. ತೆರೆದಿದೆ ನನ್ನೆದೆ, ಎಲ್ಲವೂ ನಿನಗಾಗಿಯೇ, ಆದರೆ ನಮ್ಮ ಮನಸು ಮನಸುಗಳು ಒಂದಾಗಲಿ ಬರೀ ದೇಹ ಸುಖ ಬೇಡ. ಮಾನವೀಯತೆಯಿಂದ, ಮನುಷ್ಯರಾಗಿ ಬದುಕುವಾ. ನಾವಿಬ್ಬರೂ ಒಂದಾಗಿ ಜಗವನೇ ಗೆಲ್ಲುವಾ, ನಮ್ಮಲಿ ಸದಾ ಸಮಾನತೆ ಇರಲಿ, ನೀನು ಭಗವಂತನಾದರೆ ನಾನು ಭಗವತಿ ಎಂದು ಸಮ ಭಾವಕ್ಕಾಗಿ ಶಾಂತ ಚಿತ್ತದಲಿ ಕವಿ ಭಿನ್ನವಿಸಿಕೊಂಡಿರುವರು.

ಲೇಖಕಿ ನಂದಿನಿ ಹೆದ್ದುರ್ಗರವರ ಜೊತೆ ಪ್ರಕಾಶ ಕಡಮೆ ಮತ್ತು ಸುನಂದ ಕಡಮೆಯವರು..

ನಾಡಿನ ಸುಪ್ರಸಿದ್ಧ ಲೇಖಕಿ ಎಂ.ಎಸ್, ಆಶಾದೇವಿ ‘ಸ್ವಪ್ರತಿಮೆಯ ಗೀತಿಕೆಗಳು’ ಎಂಬ ಮುನ್ನುಡಿ ಬರೆಯುತ್ತಾ, ‘ಕವಿಯ ಮೂಲ ಲಕ್ಷಣಗಳು ಈ ಸಂಕಲನದಲ್ಲಿ ಸ್ಪಷ್ಟವಾಗಿದೆ. ಕಾವ್ಯಕ್ಕೆ ಬೇಕಾದ ಭಾಷೆ ಮತ್ತು ಅನುಭವಗಳ ಮೇಲಿನ ಅನುರಕ್ತವೂ ಇಲ್ಲಿ ನಮ್ಮ ಅನುಭವಕ್ಕೆ ಬರುವಷ್ಟು ಸಾಂದ್ರವಾಗಿದೆ. ಬದುಕು ಸಮೃದ್ಧವಾಗಿದ್ದರೂ ಹೆಣ್ಣಿನ ವ್ಯಕ್ತಿತ್ವವನ್ನು ಮೊಟಕುಗೊಳಿಸುವ ಸಂಗತಿಗಳು ಯಾವುವು ಎನ್ನುವದನ್ನು ಇಲ್ಲಿನ ಕವಿತೆಗಳು ಹುಡುಕುತ್ತದೆ. ಇದಕ್ಕೆ ಕವಿ ಮತ್ತೆ ಆಶ್ರಯಿಸುವದು ಹೆಣ್ಣಿನ ಅಂತಃಶಕ್ತಿಯನ್ನು. ಅದೇ ಅವಳ ಮೂಲದ್ರವ್ಯ ಎನ್ನುವದನ್ನು ಈ ಕವಿ ಒಂದು ಆಧಾರ ಸ್ತಂಭದಂತೆ ಹಿಡಿದುಕೊಳ್ಳುತ್ತಾರೆ. ತಾನು ನಡೆಯಬೇಕಾದ ದಾರಿ ಬಲು ದೂರವಿದೆ ಎನ್ನುವದರ ಅರಿವಿರುವ ಈ ಕವಿ ಈ ಕಾರಣಕ್ಕಾಗಿಯೇ ನಮ್ಮಲ್ಲಿ ಇನ್ನೂ ಹೆಚ್ಚಿನ ಭರವಸೆಯನ್ನು ಹುಟ್ಟಿಸುತ್ತಾರೆ. ಕಾವ್ಯದ ಮೊದಲ ಪಾಠವನ್ನು ಅಚ್ಚುಕಟ್ಟಾಗಿ ಕಲಿತಿರುವ ನಂದಿನಿಯವರ ಕಾವ್ಯ ಪ್ರಯಾಣ ಬಲುದೂರ ಸಾಗಲಿ, ಕಾವ್ಯದ ಹಣತೆಯನ್ನು ಇವರು ನಿರಂತರವಾಗಿ ಹಿಡಿದಿರಲಿ’ ಎಂದಿರುವರು.

“ಬಹುರೂಪಿ” ಕವಿತೆಯಲಿ

ಗಂಡೇ, ಪ್ರೀತಿಯಲಿ ಹೆಣ್ಣು
ಅಸುರ ವಂಶಸ್ಥೆ;
ಉಂಡ ಮೇಲೂ ಅವಳದ್ದು
ಅರೆಹೊಟ್ಟೆ;
ಅದನ್ನು ತುಂಬಿಸುವುದರೆಡೆಗಷ್ಟೇ
ಇರಲೀ ನಿನ್ನ ನಿಷ್ಠೆ

ಎನ್ನುತ್ತಾ, ಹೆಣ್ಣಿನ ಉತ್ಕಟ ಪ್ರೀತಿ, ಪ್ರೇಮ-ಕಾಮ, ಪ್ರಣಯಗಳನ್ನು, ಹೆಣ್ಣಿನ ಹಂತ ಹಂತದ ಬೆಳವಣಿಗೆಯ ಕುರಿತು ನಡೆದು ಬಂದ ದಾರಿ, ಮುಂದೆ ನಡೆಯ ಬೇಕಾದ ದಾರಿಯನ್ನು ಮಾರ್ಮಿಕವಾಗಿ ಉಲ್ಲೇಖಿಸಿರುವರು. ಹುಟ್ಟಿದ ಕೂಡಲೇ ಅಂಬೆಗಾಲಿನ ಗೆಜ್ಜೆಯ ನಾದ, ಪುಟ್ಟ ಪುಟ್ಟ ಹೆಜ್ಜೆಯಿಡುವಾಗ ನದಿಯೇ ತುಳುಕಿನಹರಿಯುವಂತೆ, ಷೋಡಸಿಯಾದಾಗ ಕನ್ನಡಿಯೊಳಗಿನ ಬಿಂಬ, ಮುಂದಿನ ದಿನದಲಿ ಪ್ರೀತಿ, ಪ್ರಣಯ, ಎದೆಯ ಮೇಲೆ ಚಂದ್ರನ ಬಿಂಬ, ಮುಂದೆ ಇನಿಯನೊಂದಿಗೆ ಹೊಸ ಬದುಕು, ಮತ್ತೆ ವೃದ್ಧಾಪ್ಯ.. ಎಲ್ಲೆಲ್ಲೂ ತುಂಬು ಬದುಕು. ಹೆಣ್ಣೆಂದರೆ ಬಹುರೂಪಿ. ಪ್ರೀತಿ ಕೊಟ್ಟರೆ ಅದಕೆ ಮಾಪನವೇ ಇಲ್ಲ… ತನ್ನದೆಲ್ಲವನೂ ನಂಬಿದವಗೆ ಮನಸಾ ಧಾರೆ ಎರೆವಳು. ಅವಳ ಎಲ್ಲವನೂ ಸ್ವೀಕರಿಸಿ ಅವಳದೆಲ್ಲವನೂ ಪೂರೈಸು ಎನ್ನುತ್ತಾ, ಉಂಡ ಮೇಲೂ ಅವಳದು ಅರೆ ಹೊಟ್ಟೆ ಎಂಬ ಎಚ್ಚರಿಕೆಯ ಕಿವಿ ಮಾತನ್ನೂ ಸೂಕ್ಷ್ಮವಾಗಿಯೇ ತಿವಿದಿರುವರು.

ಹುಳು ಸುತ್ತಿಸುತ್ತಿ ಬೀಳುವಂತೆ ದೀಪದೊಳಗೆ
ಜೇನು ಇಳಿಯಿತು ಮರಣ ಕೂಪದೊಳಗೆ

ಎನ್ನುತ್ತಾ, “ಒಂದು ಜೇನಿನ ಕಥೆ”ಯಲ್ಲಿ ಗಂಡು ಹೆಣ್ಣಿನ ಬದುಕನ್ನು ಹೂವು ಜೇನಿಗೆ ಹೋಲಿಸಿ ಅನುಭವ ಲೋಕದ ಸಾರವನ್ನು ಬಿಂಬಿಸಿರುವರು. ಸಂಸಾರ ಸಾಗರದಲ್ಲಿ ಬಿದ್ದಮೇಲೆ ಮುಗಿಯಿತು, ಗೆಲುವೋ.. ಸೋಲೋ.. ಈಜಿ ಅನುಭವಿಸಲೇ ಬೇಕು. ಹುಳು ದೀಪದಲಿ ಬಿದ್ದರೆ ಏಳಲು ಏನೇನು ಸಾಹಸ ಪಡುವದೋ ಮನುಷ್ಯನೂ ಹಾಗೆ. ಈ ಬದುಕೂ ಒಂದು ಮರಣ ಕೂಪವೇ. ಬಂದದ್ದನ್ನು ಎದುರಿಸಿ ಧೈರ್ಯದಿಂದ ಇದ್ದರೆ ಬದುಕೇ ಜೇನಂತೆ ಎಂದಿರುವರು.

ಕನ್ನಡ ಕಾವ್ಯ ಪರಂಪರೆಗೆ ಮೈಲುಗಲ್ಲಾದ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು, ‘ನೀಲಿ ಹೂವಿನ ಸ್ವಗತ’ ಎಂಬ ಹಿನ್ನುಡಿ ಬರೆಯುತ್ತಾ ‘ನಂದಿನ ಅವರ ಕವಿತೆಗಳು ಬೇಲಿಯ ಮೇಲೆ ಮಾನವಾಗಿ, ಡೋಲಾಯನಮಾನವಾಗಿ ಕುಳಿತ ಅಚ್ಚ ಶುಭ್ರ ನೀಲಿ ಹೂವಿನ ನಿಟ್ಟುಸಿರಿನ ಸ್ವಗತದಂತಿದೆ. ಹೆಣ್ಣೆಂದರೆ ಹೀಗೇ ಬರೆಯಬೇಕೆಂಬ ಅಲಿಖಿತ ಸಂವಿಧಾನಕ್ಕೆ ಕಟ್ಟಿಕೊಳ್ಳದೇ ತನಗೆ ಅತ್ಯಾಪ್ತ ನೆಲೆಯಲ್ಲಿ ಅನ್ನಿಸಿದ್ದನ್ನು ಹಿಂಜರಿಕೆ ಇಲ್ಲದೇ ಹೊರ ಹಾಕುವ ನೀಳ್ದನಿಯ ಆರ್ತಾಲಾಪಗಳು ಇವು. ಸಹಜ ಕವಯತ್ರಿ ನಂದಿನಿ. ಹಾಗಾಗಿ ಈ ಆಲಾಪಗಳಲ್ಲಿ ಎಲ್ಲೂ ಅಪಸ್ವರ ಕಾಣದು. ಈ ಸ್ವಕೀಯ ಕವಿತೆಗಳನ್ನು ನೋಡುವಾಗ ನಂದಿನಿಯವರ ಭಾಷಾ ಸೂಕ್ಷ್ಮತೆ, ಲಯ ಪ್ರಜ್ಞೆ, ಸಹಜ ಪ್ರಾಸಾನುಪ್ರಾಸಗಳ ರಿಂಗಣ, ಜಾನಪದ ವರಸೆಗಳನ್ನು ಆಧುನಿಕತೆಗೆ ಬೆಸೆಯುವ ಸಲೀಲವಾದ ವಿಲಾಸ, ಮುಟ್ಟಿದರೆ ಮಾಸಬಹುದೆನ್ನಿಸುವ ಕೋಮಲತೆ, ಇಷ್ಟಾಗಿಯೂ ತನ್ನ ಅಸ್ಮಿತೆಯನ್ನು ಸ್ಥಾಪಿಸುವ ಒಳ ಹಠ ಇವನ್ನು ಸೂಕ್ಷ್ಮ ಕಾವ್ಯ ಸಂವೇದಿ ಗಮನಿಸಿಯೇ ಗಮನಿಸುತ್ತಾನೆ. ಅಪ್ಪಟ ಪ್ರಾಮಾಣಿಕತೆ ಈ ಕವಿತೆಗಳ ಸಾರಸತ್ವವಾಗಿದೆ’ ಎಂದಿರುವರು.

ಒಮ್ಮೊಮ್ಮೆ
ಹಾದಿ ಬದಿಯ ಹಣ್ಣು ತುಂಬಿದ ಮರದಂತೆ ನಾನಿರುತ್ತೇನೆ
ಇನ್ನೇನು ಕಲ್ಲು ಹಾಕಿ
ಹಣ್ಣು ಬೀಳಬೇಕೆನ್ನುವಷ್ಟರಲ್ಲಿ
ಅಳುಕುತ್ತಳುಕುತ್ತ
ಮರ ತನ್ನದೆನ್ನುವ ಸಣ್ಣ ರೈತನಂತೆ
ಬಂದು ನಿಲ್ಲುತ್ತಾನೆ ಬಳಿಯಲ್ಲಿ
ಅಭಿಮಾನ ಉಕ್ಕಿಸಿ ನನ್ನಲಿ

ಎಂದ “ನನ್ನವನು” ಕವಿತೆಯಲ್ಲಿ ಅಸಹಾಯಕ ಹೆಣ್ಣಿನ ಹಾಡು ಪಾಡನ್ನು ತುಂಬಾ ನವಿರು ನವಿರಾಗಿ ಚಿತ್ರಿಸಿರುವರು, ಎದೆಗಾರಿಕೆಯಿಂದ. ಇದೊಂದು ಹೆಣ್ಣಿನ ಭಾವನೆಗಳ ತುಮುಲದ, ಅರ್ಥವಾಗದ ಹೆಣ್ಣಿನ ಮನಸ್ಥಿತಿಯ ಕವಿತೆ. ಗಂಡು ಹೆಣ್ಣಿನ ಅಂತರಂಗದ ಭಾವನೆಗಳೇ ಹಾಗೆ, ಅಂತರಂಗ ಬಹಿರಂಗವಾಗುವದೇ ಇಲ್ಲ ಕೊನೆ ತನಕ. ಗ್ಲಾಸಿನ ಮನೆಯೊಳಗೆ ಬದುಕುತಿರುವ ಮನುಷ್ಯನು ಕಲ್ಲಿಗೆ ಹೆದರಲೇ ಬೇಕು. ಸಂದರ್ಭಕ್ಕನುಸಾರವಾಗಿ ಇಂದಿನ ಜಾಗತಿಕ ವ್ಯವಸ್ಥೆಯಲ್ಲಿ ಸಹಾಯಕ ಹೆಂಡತಿಯ ಗಂಡ ಅಸಹಾಯಕನಾಗುವನು. ಬದುಕೇ ತಲ್ಲಣ, ಆದರೂ ದಾರಿ ಸವಿಸಬೇಕಿದೆ. ಚೆಂದನೆ ನಕ್ಕು, ನಗಿಸಿ ಎಲ್ಲರೊಳಗೊಂದಾಗಿ ಬದುಕಿದರೆ ಇದರ ದುರ್ಲಾಭ ಪಡೆಯಲು ಸಾಲುಗಟ್ಟಿ ನಿಂತವರೆಷ್ಟೋ ಜನ ! ಹೆಣ್ಣಿನ ಮನದಲ್ಲಿ ಒಬ್ಬ ದ್ರೌಪದಿ ನೆಲೆಸಿರುವಂತೆ ಎಲ್ಲಾ ಗಂಡಸರೂ ರಾಮನಾಗುವದು ಅಸಾಧ್ಯ. ನಂದಿನಿಯವರಿಗೆ ಕವಿತೆ ಕೈ ಹಿಡಿದು ಮೇಲಕ್ಕೆತ್ತಿದೆ.

ಒಮ್ಮೆ ಪಾತರಗಿತ್ತಿ, ಒಮ್ಮೆ ಜೇನು, ಇನ್ನೊಮ್ಮೆ
ಕಡುಗಪ್ಪಿನ ಧೀರ ದುಂಬಿ
ಯಾರೇ ಏರಿದರೂ ಮಣಿಯದು,
ಮುಕ್ಕಾಗದು

ಎಂದು “ಡೇರೆ’ ಎಂಬ ಕವನದಲ್ಲೂ ಮತ್ತು “ಸಂತೆ ಸರಕು” ಕವಿತೆಯಲ್ಲಿ,

ಅವನೊಂದಿಗಿದ್ದಾಗ ಇವನು ಗೊತ್ತಿಲ್ಲದಂತೆ
ಇವನೊಡನೆ ಅವನ್ಯಾರೆಂಬಂತೆ
ನಡೆದುಕೊಳ್ಳುವ ಆ ನನ್ನ ಗೆಳತಿ
ಎಷ್ಟು ನಿಷ್ಕಲ್ಮಷವಾಗಿ ನಗುತ್ತಾಳೆ
ಮಗುವಿನಂತೆ…. !

ಎಂದು, ಹೆಣ್ಣಿನ ಅಸಹಾಯಕತೆಯ ಜೊತೆ ಜೊತೆಗೇ ಮುಖವಾಡವನ್ನೂ ಬಯಲು ಮಾಡಿರುವರು. ಆಯ್ಕೆ ಎನ್ನುವದು ಕೊನೆಗೂ ದಕ್ಕದೇ ಹೋದಾಗ ಏನಾದರೂ ಸರಿ ಎಂತ ಹಲವಾರು ಕಾರಣಗಳಿಂದ ಒಪ್ಪಿಕೊಳ್ಳಬೇಕಾಗುವದು, ಆತ್ಮ ಸಾಕ್ಷಿಯ ವಿರುದ್ಧವಾಗಿ ಯಾರನ್ನಾದರೂ ಅನಿವಾರ್ಯವಾಗಿ, ಪಾಲಿಗೆ ಬಂದಿದ್ದೇ ಪಂಚಾಮೃತ ಎಂಬಂತೆ. ಅದರಂತೆ ಬದುಕಿನ ಏರಿಳಿತಗಳ ನಡುವೆ ಕಾಲದ ಕತ್ತರಿಯಲ್ಲಿ ಸಿಕ್ಕು ಎಲ್ಲವನ್ನೂ ಅನುಭವಿಸಿ ಏನೂ ಗೊತ್ತಿಲ್ಲದಂತೆ, ‘ಎಷ್ಟು ನಿಷ್ಕಲ್ಮಶವಾಗಿ ನಗುತ್ತಾಳೆ ಮಗುವಿನಂತೆ..!’ ಎಂಬ ಜನರ ಬಾಯಿಗೂ ಬೀಗವಿಲ್ಲದೇ.

ನಂದಿನಿಯವರ ಕವಿತೆಯಲ್ಲಿ ಹೆಣ್ಣಿನ ಮನೋಭಾವನೆಗಳೇ ಕಾವ್ಯವಾಗಿ ಹೊರ ಹೊಮ್ಮಿದೆ. ಹೇಳ ಬೇಕಾದುದೆಲ್ಲವನ್ನೂ ಧೈರ್ಯದಿಂದ ಕವಿತೆಯ ಸಾಲುಗಳ ಮೂಲಕ ಹೇಳಿರುವರು. ಭಾಷೆಯ ಹಿಡಿತವಿದೆ. ಕವಿತೆ ಕಟ್ಟುವ ಛಲವಿದೆ ಮತ್ತು ಅದು ದಕ್ಕಿದೆ. ಇವರ ಮುಂದಿನ ಸಂಕಲನದಲ್ಲಿ ಕಾಫಿ ತೋಟದ ಸೌಂದರ್ಯದ ಜೊತೆ ಜೊತೆಗೇ ಅಲ್ಲಿಯ ದೀನ, ದಲಿತ, ದುರ್ಬಲರ, ಕೂಲಿ ಕಾರ್ಮಿಕರ ಬದುಕಿನ ಬವಣೆಯೂ, ಅವರ ರಕ್ತ ಮಾಂಸದ, ಬೆವರಿನ ವಾಸನೆಯೂ ಕಾವ್ಯವಾಗಿ ಹರಿಯಲಿ ಎಂದು ಆಶಿಸಿ “ಒಳಸೆಲೆ”ಗೆ ಅಭಿನಂದಿಸುವೆನು.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಪರಕಾಯ ಪ್ರವೇಶದ ತಲ್ಲಣದ ಸಾಲುಗಳು – ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...