ಅಧ್ಯಯನ ಮುಗಿದ ನಂತರ ಕೆಲವು ಷರತ್ತುಗಳ ಅಡಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಕೆಲಸಕ್ಕಾಗಿ ದೇಶದಲ್ಲಿ ಉಳಿಯಲು ಅನುವು ಮಾಡಿಕೊಡುವ ನೀತಿಯನ್ನು ತೊಡೆದು ಹಾಕಲು ಅಮೆರಿಕಾ ಸಂಸದರ ಗುಂಪೊಂದು ಸದನದಲ್ಲಿ ಶಾಸನವೊಂದನ್ನು ಪರಿಚಯಿಸಿದೆ. ಒಂದು ವೇಳೆ ಈ ಕಾನೂನು ಅಂಗೀಕಾರವಾದರೆ ಅಮೆರಿಕಾದಲ್ಲಿ ಅಧ್ಯಯನ ಮಾಡುವ ಸಾವಿರಾರು ಭಾರತೀಯರ ಮೇಲೆ ಪರಿಣಾಮ ಬೀರಲಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಅಮೆರಿಕಾದ ಬಲಪಂಥೀಯ ಪಕ್ಷವಾದ ರಿಪಬ್ಲಿಕನ್ ಪಕ್ಷದ ಸಂಸದರಾದ ಪಾಲ್ ಎ. ಗೋಸರ್, ಮೋ ಬ್ರೂಕ್ಸ್, ಆಂಡಿ ಬಿಗ್ಸ್ ಮತ್ತು ಮ್ಯಾಟ್ ಗೇಟ್ಜ್ ಅವರು ಫೇರ್‌ನೆಸ್ ಫಾರ್ ಹೈ-ಸ್ಕಿಲ್ಡ್ ಅಮೆರಿಕನ್ಸ್ ಕಾಯ್ದೆಯನ್ನು ಪರಿಚಯಿಸಿದ್ದಾರೆ. ಸಂಸದರಾದ ಪಾಲ್ ಎ. ಗೋಸರ್ ಮೊದಲ ಬಾರಿಗೆ 116 ನೇ ಸಂಸತ್ ಅಧಿವೇಶನಲ್ಲಿ ಫೇರ್‌ನೆಸ್ ಫಾರ್ ಹೈ-ಸ್ಕಿಲ್ಡ್ ಅಮೆರಿಕನ್ಸ್ ಕಾಯ್ದೆಯನ್ನು ಪರಿಚಯಿಸಿದ್ದರು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗ ಎಂದು ಅಮೇರಿಕಾ ಸುರಂಗದ ಚಿತ್ರ ಹಂಚಿಕೊಂಡ ಮಾಧ್ಯಮಗಳು!
ಈ ಮಸೂದೆಯು ಆಪ್ಷನಲ್ ಪ್ರಾಕ್ಟೀಸ್ ಟ್ರೈನಿಂಗ್(ಒಪಿಟಿ) ಕುರಿತ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತದೆ. ಒಪಿಟಿ ಎಂದರೆ ಅಮೆರಿಕಾ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ಐಸಿಇ) ನಿಂದ ನಿರ್ವಹಿಸಲ್ಪಡುವ ಅತಿಥಿ ಕಾರ್ಮಿಕರ ಕಾರ್ಯಕ್ರಮವಾಗಿದೆ.
ಅಮೆರಿಕಾದಲ್ಲಿ ಒಪಿಟಿ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 80,000 ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದು ವರದಿಯಾಗಿದೆ. ಮಸೂದೆಯು ಕಾನೂನಾಗಲು ಅಮೆರಿಕಾ ಅಧ್ಯಕ್ಷರ ಸಹಿ ಅಗತ್ಯವಿದೆ. ಅದಕ್ಕೂ ಮೊದಲು ಮಸೂದೆಯು ಸೆನೆಟ್‌ನಲ್ಲಿ ಅಂಗೀಕಾರ ಆಗಬೇಕಾಗುತ್ತದೆ.
ಆದಾಗ್ಯೂ, ಅಮೆರಿಕಾ ಸಂಸತ್‌ನ ಎರಡೂ ಸದನದಲ್ಲಿ ಡೆಮೋಕ್ರಾಟ್ ಬಹುಮತವನ್ನು ಹೊಂದಿದ್ದರಿಂದ ಸೆನೆಟ್ ಮೂಲಕ ಮಸೂದೆಯನ್ನು ಅಂಗೀಕರಿಸುವುದು ಅಷ್ಟು ಸುಲಭವಲ್ಲ.
ಒಪಿಟಿಯಿಂದಾಗಿ ವಿದೇಶಿ ವಿದ್ಯಾರ್ಥಿಗಳಾಗಿ ಪ್ರವೇಶ ಪಡೆದ 1 ಲಕ್ಷಕ್ಕೂ ಹೆಚ್ಚು ವಿದೇಶಿಗರು ಪದವಿಯ ನಂತರ ಅಮೆರಿಕಾದಲ್ಲೇ ಮೂರು ವರ್ಷಗಳವರೆಗೆ ಕೆಲಸ ಮಾಡಲು ಅವಕಾಶ ನೀಡುತ್ತದೆ ಎಂದು ಪಾಲ್ ಎ. ಗೋಸರ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ವರದಿ ಆಧರಿಸಿ, ಅಮೆರಿಕಾದಲ್ಲಿ ಮಾಸ್ಕ್ ನಿಯಮ: ಅಮೆರಿಕಾ ಸಂಸದ ಆಕ್ರೋಶ


