ಸದ್ಯಕ್ಕೆ ಬಿದರಹಳ್ಳಿ ಜನರ ಮನೆಗಳ ಪರಿಸ್ಥಿತಿ

ಇದೇ ಜುಲೈ 26ಕ್ಕೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ 2 ವರ್ಷ ತುಂಬಿತ್ತು. ಈ ಸಂಭ್ರಮಕ್ಕಾಗಿ ಬಿಜೆಪಿಯು ಎರಡು ವರ್ಷದ ಸಾಧನೆಯ ಪುಸ್ತಕ ಹೊರತಂದಿತ್ತು. ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಮುಖಪುಟದ ಜಾಹೀರಾತು ನೀಡಿತ್ತು. ಅಲ್ಲದೇ ಎಲ್ಲಾ ವೆಬ್‌ಸೈಟ್‌ಗಳನ್ನು ತಲುಪುವುದಕ್ಕಾಗಿ ಕೋಟ್ಯಾಂತರ ರೂ ಖರ್ಚು ಮಾಡಿ ಗೂಗಲ್ ಜಾಹೀರಾತನ್ನು ಸಹ ನೀಡಿತ್ತು. ಆದರೆ ಈ ಜಾಹೀರಾತು ನೋಡಿದ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬಿದರಹಳ್ಳಿ ಗ್ರಾಮದ ನೆರೆ ಸಂತ್ರಸ್ತರು ಕೆಂಡಾಮಂಡಲವಾಗಿದ್ದಾರೆ. ನೆರೆ ಬಂದು ಮನೆ ಕೊಚ್ಚಿ ಎರಡು ವರ್ಷವಾದರೂ ಯಾವುದೇ ಮನೆ ಪಡೆಯದ ಅವರು ಬೀದಿಯಲ್ಲಿದ್ದರೆ ಸರ್ಕಾರ ಮಾತ್ರ ಅವರಿಗೆ ಮನೆ ಕಟ್ಟಿಸಿಕೊಟ್ಟಿರುವುದಾಗಿ ದೊಡ್ಡ ದೊಡ್ಡ ಜಾಹೀರಾತು ಹಾಕಿಕೊಂಡಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

2019ರ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾ ಮಳೆಯಿಂದಾಗಿ ಕಬಿನಿ ನದಿ ಪ್ರವಾಹದಿಂದಾಗಿ ಕಬಿನಿ ಜಲಾಶಯದ ಪಕ್ಕದಲ್ಲೇ ಇರುವ ಸರಗೂರು ತಾಲ್ಲೂಕಿನ ಬಿದರಹಳ್ಳಿ ಸರ್ಕಲ್ ಗ್ರಾಮದ ಮನೆಗಳು ಜಲಾವೃತವಾಗಿದ್ದವು. ಬಹುತೇಕ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳು ಕುಸಿದು ಹಾನಿಗೊಳಗಾಗಿದ್ದು, ವಾಸಿಸಲು ಯೋಗ್ಯವಾಗಿಲ್ಲ. ಅಲ್ಲಿನ ಸಂತ್ರಸ್ತರಿಗೆ ಸ್ವಲ್ಪ ದಿನಗಳ ಮಟ್ಟಿಗೆ ಕಾಳಜಿ ಕೇಂದ್ರದಲ್ಲಿ ವಾಸದ ವ್ಯವಸ್ಥೆ ಮಾಡಲಾಗಿದ್ದರೂ ನಂತರ ಅಲ್ಲಿಂದಲೂ ಯಾವುದೇ ಪರಿಹಾರ ನೀಡದೇ ಖಾಲಿ ಮಾಡಿಸಲಾಯಿತು.

ಅಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಸತಿ ಸಚಿವರಾದ ವಿ.ಸೋಮಣ್ಣರವರು ಭೇಟಿ ನೀಡಿ, ತಗ್ಗಿನಲ್ಲಿರುವ ನಮ್ಮ ಊರನ್ನು ಸ್ಥಳಾಂತರಿಸಿ, ಮೂರು ತಿಂಗಳ ಒಳಗಾಗಿ 42 ಹೊಸ ಮನೆಗಳ ನಿರ್ಮಾಣ ಮಾಡಿಕೊಡುವುದಾಗಿ ಹೇಳಿ, ಪರ್ಯಾಯ ಜಾಗವನ್ನೂ ಗುರುತಿಸಿ ಗುದ್ದಲಿ ಪೂಜೆ ಮಾಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ನಮ್ಮ ಬದುಕು ಅತಂತ್ರವಾಗಿದೆ. ಇದುವರೆಗೆ ನಮಗೆ ಯಾವುದೇ ಪರಿಹಾರವಾಗಲಿ, ಪುನರ್ವಸತಿಯಾಗಲಿ ದೊರಕಿಲ್ಲ. ಕಾಡುಪ್ರಾಣಿಗಳ, ಹಾವುಗಳ ಭಯದಿಂದ ಸಂಬಂಧಿಕರ ಮನೆಗಳಲ್ಲಿ ದಿನದೂಡುವಂತಾಗಿದೆ. ಘನತೆಯಿಂದ ಬದುಕುವ ಹಕ್ಕನ್ನೇ ಕಳೆದುಕೊಂಡಿದ್ದೇವೆ. ಮಳೆಯಿಂದ ರಕ್ಷಿಸಿಕೊಳ್ಳಲು ಟರ್ಪಾಲು, ಷೀಟಿನಂತಹ ತಾತ್ಕಾಲಿಕ ವ್ಯವಸ್ಥೆಯನ್ನೂ ನಾವೇ ಮಾಡಿಕೊಂಡಿದ್ದೇವೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಪತ್ರಿಕೆಗಳಲ್ಲಿ ಸರ್ಕಾರ ನೀಡಿರುವ ಜಾಹೀರಾತು

ಕಳೆದ ಎರಡು ವರ್ಷದ ಅವಧಿಯಲ್ಲಿ ನಾವು ಸಲ್ಲಿಸಿದ ಮನವಿಗಳಿಗೆ ಲೆಕ್ಕವಿಲ್ಲ. ಸರಗೂರಿನ ತಹಶೀಲ್ದಾರರಿಗೆ, ಅಂದಿನ ಜಿಲ್ಲಾಧಿಕಾರಿಗಳಿಗೆ, ಸ್ಥಳೀಯ ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಕಳೆದ ವರ್ಷ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದೇವೆ. ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದಿದ್ದ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ಸಮಸ್ಯೆ ಹೇಳಿಕೊಂಡಿದ್ದೇವೆ. ಅಂದಿನ ನೀರಾವರಿ ಸಚಿವರಿಗೂ ಅಹವಾಲು ಸಲ್ಲಿಸಿದ್ದೇವೆ. ಆದರೆ ಇದುವರೆಗೆ ನಮಗೆ ಮನೆ ಸಿಕ್ಕಿಲ್ಲ. ನಮ್ಮ ಪುನರ್ವಸತಿಗೆ ಗುರುತಿಸಿರುವ ಕಪಿಲೇಶ್ವರ ಕಾಲೊನಿಯ ಜಾಗ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದು, ಅದು ಕಂದಾಯ ಇಲಾಖೆಗೆ ಹಸ್ತಾಂತರಗೊಳ್ಳದಿರುವುದರಿಂದ ನಾವು ಕಷ್ಟ ಅನುಭವಿಸಬೇಕಾಗಿದೆ ಎಂದು ಸಂತ್ರಸ್ತರು ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

“ಕಬಿನಿ ಅಣೆಕಟ್ಟು ಕಟ್ಟಲು ಆಗಮಿಸಿದ್ದ ನಮ್ಮ ಪೂರ್ವಜರು 50 ವರ್ಷಗಳ ಹಿಂದೆ ಇಲ್ಲೇ ನೆಲೆಸಿದರು. ನೀರಾವರಿ ಯೋಜನೆಗೆ ಬೆವರು ಸುರಿಸಿದ ನಮ್ಮ ಕುಟುಂಬಗಳನ್ನು ನೀರಾವರಿ ಇಲಾಖೆಯೇ ಅಕ್ಷರಶ ನಡುನೀರಿನಲ್ಲಿ ಕೈಬಿಟ್ಟಿದೆ. ಕೂಲಿಕಾರರಾದ ನಾವು ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸರಿಯಾದ ಉದ್ಯೋಗವೂ ಲಭಿಸದೆ ಕಂಗಾಲಾಗಿದ್ದೇವೆ.
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳ ಬಗ್ಗೆ ಇದೇ ಜುಲೈ 26ರಂದು ಪ್ರಕಟವಾಗಿದ್ದ ಜಾಹೀರಾತಿನಲ್ಲಿ ನೆರೆ ಸಂತ್ರಸ್ತರ ಪರಿಹಾರ, ಪುನರ್ವಸತಿ ಪೂರ್ಣಗೊಂಡಿರುವ ಊರುಗಳ ಪಟ್ಟಿಯಲ್ಲಿ ಬಿದರಹಳ್ಳಿಯ ಹೆಸರೂ ಇರುವುದನ್ನು ಕಂಡು ನಮಗೆ ದಿಗ್ಭ್ರಮೆಯಾಗಿದೆ” ಎನ್ನುತ್ತಾರೆ ನೆರೆಯಿಂದಾಗಿ ಮನೆ ಕಳೆದುಕೊಂಡ ಚೆಲುವಿ.

ಬಿದರಹಳ್ಳಿ ಪಕ್ಕದ ಕಪಿಲೇಶ್ವರ ಕಾಲೊನಿಯಲ್ಲಿ ಪುನರ್ವಸತಿಯ 42 ಮನೆಗಳ ಕಾಮಗಾರಿಯನ್ನು ತಕ್ಷಣವೇ ಆರಂಭಿಸಿ ಆರು ತಿಂಗಳೊಳಗೆ ಮನೆ ಕಟ್ಟಿಕೊಡಬೇಕು. ನೊಂದ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಮೈಸೂರಿನ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷದ ವತಿಯಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಸರ್ಕಾರ ಕೂಡಲೇ ಇತ್ತ ಗಮನೆ ಸೆಳೆಯಬೇಕೆಂದು ಆಗ್ರಹಿಸಲಾಗಿದೆ.

ಕೋವಿಡ್ ನಿಯಂತ್ರಣದ ತುರ್ತು ಕೆಲಸಗಳಲ್ಲಿ ಜಿಲ್ಲಾಡಳಿತ ಮುಳುಗಿ ಹೋಗಿದ್ದರಿಂದ ನಾವು ಇಷ್ಟು ಕಾಲ ಸಹನೆಯಿಂದ ಕಾದಿದ್ದೇವೆ. ಇನ್ನಾದರೂ ವಿಳಂಬ ಮಾಡದೆ ತಕ್ಷಣವೇ ನಮಗೆ ಪುನರ್ವಸತಿ ಒದಗಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಇನ್ನು ಒಂದು ತಿಂಗಳ ಒಳಗೆ ಮನೆಗಳನ್ನು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡದೇ ಹೋದಲ್ಲಿ ನೆರೆ ಸಂತ್ರಸ್ತರ ಕುಟುಂಬಗಳ ಸಮೇತ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಸ್.ಯು.ಸಿ.ಐ.(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ರವಿ ಆಗ್ರಹಿಸಿದ್ದಾರೆ.

ಇಂದಿನ ಪ್ರತಿಭಟನೆಯಲ್ಲಿ ಸಂತ್ರಸ್ತರಾದ ಚೆಲುವಿ, ಪದ್ಮ, ಸತ್ಯಮೂರ್ತಿ ಮತ್ತು ಎಸ್‌ಯುಸಿಐನ ಮುಖಂಡರಾದ ಚಂದ್ರಶೇಖರ್ ಮೇಟಿ, ಸುನೀಲ್ ಟಿ ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಇದನ್ನೂ ಓದಿ: ಭ್ರಷ್ಟಾಚಾರವೇ ರಾಜ್ಯ ಬಿಜೆಪಿಯ ಎರಡು ವರ್ಷದ ದೊಡ್ಡ ಸಾಧನೆ: ಸಿದ್ದರಾಮಯ್ಯ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here