ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ಖಚಿತಗೊಂಡಿದೆ. ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಈ ಹಿಂದಿನ ವಿಶ್ವ ಚಾಂಪಿಯನ್ ಚೀನಾದ ತೈಪೆಯ ಚೆನ್ ನಿಯೆನ್ ಚಿನ್ ಅವರನ್ನು ಸೋಲಿಸಿ ಮಹಿಳಾ ವೆಲ್ಟರ್‌ವೈಟ್ (69 ಕೆಜಿ) ವಿಭಾಗದ ಸೆಮಿಫೈನಲ್‌ಗೆ ಶುಕ್ರವಾರ ತಲುಪಿದ್ದಾರೆ. ಈ ಮೂಲಕ ಅವರು ಭಾತರಕ್ಕೆ ಕಂಚಿನ ಪದಕವನ್ನು ಖಾತ್ರಿ ಪಡಿಸಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದಿರುವ 23 ವರ್ಷದ ಲವ್ಲಿನಾ ಅವರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. ಅಸ್ಸಾಂ ರಾಜ್ಯದವರಾಗಿರುವ ಬಾಕ್ಸರ್ ಲವ್ಲಿನಾ ಅವರಿಗೆ ಚಿನ್ನದ ಪದಕ ಪಡೆಯಲು ಇನ್ನು ಎರಡು ಪಂದ್ಯಗಳು ಬಾಕಿಯಿವೆ. ಸಮೀಫೈನಲ್ ಪ್ರವೇಶಿಸಿರುವ ಅವರು ಒಂದು ಪಂದ್ಯವನ್ನು ಗೆದ್ದರೆ ಚಿನ್ನಕ್ಕಾಗಿ ಸೆಣಸಲಿದ್ದಾರೆ.
ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್: ಪಿವಿ ಸಿಂಧು, ಬಾಕ್ಸರ್ ಸತೀಶ್, ಪುರುಷರ ಹಾಕಿ ತಂಡ ಕ್ವಾಟರ್ ಫೈನಲ್‌ಗೆ
ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಗುತ್ತಿರುವ ಮೂರನೇ ಪದಕ ಇದಾಗಿದೆ. ಭಾರತದ ಹಿಂದಿನ ಬಾಕ್ಸಿಂಗ್ ಪದಕಗಳು ವಿಜೇಂದರ್ ಸಿಂಗ್ (2008) ಮತ್ತು ಎಂಸಿ ಮೇರಿ ಕೋಮ್ (2012) ಮೂಲಕ ಬಂದಿವೆ. ಈ ಇಬ್ಬರೂ ಕಂಚಿನ ಪದಕಗಳನ್ನು ಗೆದ್ದಿದ್ದು, ಲವ್ಲೀನಾ ಅವರಿಗೆ ಅವಬ್ಬರಿಗಿಂತಲೂ ಉತ್ತಮ ಸಾಧನೆ ಮಾಡುವ ಅವಕಾಶವಿದೆ.
ಗುರುವಾರ ನಡೆದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು ನೇರ ಪಂದ್ಯಗಳಲ್ಲಿ ಸೋಲಿಸಿದ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇಂದು ಅವರು ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಕ್ವಾರ್ಟರ್ ಪೈನಲ್‌ನಲ್ಲಿ ಎದುರಿಸಲಿದ್ದಾರೆ.
ಪುರುಷರ ಸೂಪರ್ ಹೆವಿ ವೈಟ್ ಬಾಕ್ಸಿಂಗ್‌ನಲ್ಲಿ ಗುರುವಾರದಂದು ಭಾರತದ ಸತೀಶ್ ಕುಮಾರ್ ಅವರು ಜಮೈಕಾದ ರಿಕಾರ್ಡೊ ಬ್ರೌನ್ ವಿರುದ್ಧ 4: 1 ರ ಸುತ್ತಿನಲ್ಲಿ ಗೆದ್ದು, ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಭಾನುವಾರದಂದು ಉಜ್ಬೇಕಿಸ್ತಾನದ ಬಾಖೋದಿರ್ ಜಲಾಲೋವ್ ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: ಒಂದಿಡೀ ಸಮುದಾಯ ಮತ್ತು ದೇಶ ಸಂಭ್ರಮಿಸುವ ಕ್ರೀಡಾಸ್ಪೂರ್ತಿ ರಾಷ್ಟ್ರೀಯತೆಯ ಒಲಿಂಪಿಕ್ಸ್
ಜೊತೆಗೆ ಗುರುವಾರ ನಡೆದ ಪುರುಷರ ಹಾಕಿ ಪೂಲ್ ಎ ಪಂದ್ಯಾಟದಲ್ಲಿ ಅರ್ಜೆಂಟೀನ ವಿರುದ್ದ ಭಾರತ 3-1 ಅಂಕದಲ್ಲಿ ಗೆಲುವು ಸಾಧಿಸಿದೆ. ಇಂದು ಜಪಾನ್ ವಿರುದ್ದ ಭಾರತ ಸೆಣಸಲಿದೆ.
ಅಲ್ಲದೆ ಗುರುವಾರ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಅವರು 2012 ರ ಚಾಂಪಿಯನ್ ದಕ್ಷಣ ಕೊರಿಯಾದ ಓಹ್ ಜಿನ್ ಹೈಕಿನ್ ಅವರನ್ನು ಸೋಲಿಸಿ ಪ್ರೀ ಕ್ವಾಟರ್ ಫೈನಲ್‌ಗೆ ತಲುಪಿದ್ದಾರೆ. ಅವರ ಮುಂದಿನ ಪಂದ್ಯ ಶನಿವಾರ ಜಪಾನಿನ ತಕಹಾರು ಫುರುಕವ ಅವರ ವಿರುದ್ದ ನಡೆಯಲಿದೆ.
ಟೋಕಿಯೊ ಒಲಿಂಪಿಕ್‌ನಲ್ಲಿ 49 ಕೆಜಿ ವೈಟ್‌ಲಿಫ್ಟಿಂಗ್ ವಿಭಾಗದಲ್ಲಿ ಮಣಿಪುರ ಮೂಲದ ಮಿರಾಬಾಯಿ ಚಾನು ಅವರು ಬೆಳ್ಳಿ ಗೆದ್ದುಕೊಂಡಿದ್ದರು. ಇದರ ನಂತರ ಭಾರತಕ್ಕೆ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಮೂಲಕ ಎರಡನೆ ಪದಕ ಖಚಿತಗೊಂಡಿದೆ.
ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಾತಿನಿಧ್ಯ; ಅಂದು-ಇಂದು


