ದೇಶದ ಅತ್ಯುನ್ನತ ನಾಗರಿಕ ಗೌರವವಾದ “ಭಾರತ ರತ್ನ” ಪ್ರಶಸ್ತಿಗೆ ಅಪ್ಪಿಕೋ ಚಳವಳಿಯನ್ನು ಹುಟ್ಟುಹಾಕಿದ ಪರಿಸರವಾದಿ ದಿವಂಗತ ಸುಂದರಲಾಲ್ ಬಹುಗುಣ ಅವರನ್ನು ಶಿಫಾರಸು ಮಾಡುವ ನಿರ್ಣಯವನ್ನು ದೆಹಲಿ ಸರ್ಕಾರ ಗುರುವಾರ ಅಂಗೀಕರಿಸಿದೆ.
ಎರಡು ದಿನಗಳ ಮಾನ್ಸೂನ್ ಅಧಿವೇಶನದ ಆರಂಭಿಕ ದಿನದಂದು ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪರಿಸರವನ್ನು ರಕ್ಷಿಸಲು ಬಹುಗುಣ ಅವರು ಭಾರತಕ್ಕೊಂದು ದೃಷ್ಟಿಕೋನವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ
ಬಿ.ಆರ್. ಅಂಬೇಡ್ಕರ್ ಅವರು ಸಮಾಜದ ಬಡ ವರ್ಗದವರ ಉನ್ನತಿಗಾಗಿ ಕೆಲಸ ಮಾಡಿ, ಭಾರತದ ಹೊಸ ಪೀಳಿಗೆಯನ್ನು ರೂಪಿಸಲು ಹೇಗೆ ಹೋರಾಡಿದರೋ, ಹಾಗೆಯೆ ಬಹುಗುಣ ಅವರು ಸಮಾಜದ ಒಳಿತಿಗಾಗಿ ತಮ್ಮ ಜೀವನನ್ನೆ ಮುಡಿಪಿಟ್ಟರು ಎಂದು ಕೇಜ್ರವಾಲ್ ಹೇಳಿದ್ದಾರೆ.
“ಬಹುಗುಣ ಅವರ ಕೊಡುಗೆ ಪರಿಸರಕ್ಕೆ ಮಾತ್ರವೆ ಸೀವಿತವಾಗಿರದೆ, ಅಸ್ಪೃಶ್ಯತೆಯ ವಿರುದ್ಧ ಮತ್ತು ಬಡವರಿಗೆ ನ್ಯಾಯ ಒದಗಿಸುವುದಕ್ಕಾಗಿ ಕೂಡಾ ಹೋರಾಡಿದರು. ಅವರ ಕೆಲಸಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಪ್ರಸ್ತುತ ದೆಹಲಿ ಮಾತ್ರವಲ್ಲ, ಇಡೀ ದೇಶವೆ ಅವರಿಗೆ ಭಾರತ ರತ್ನವನ್ನು ನೀಡಲು ಬಯಸುತ್ತದೆ” ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ನೀಡಿದ ಚಿಪ್ಕೋ ಚಳುವಳಿಯ ನೇತಾರ ಸುಂದರ್‌ಲಾಲ್ ಬಹುಗುಣ
“ಸುಂದರಲಾಲ್ ಬಹುಗುಣ ಅವರಿಗೆ ಭಾರತ ರತ್ನ ನೀಡುವುದು ಭಾರತ ರತ್ನ ಪ್ರಶಸ್ತಿಗೆ ಸ್ವತಃ ಗೌರವವಾಗಿದೆ ಎಂದು ನಾವು ನಂಬುತ್ತೇವೆ” ಎಂದು ಕೇಜ್ರಿವಾಲ್ ಗುರುವಾರ ವಿಧಾನಸಭೆಯಲ್ಲಿನ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ್ದಾರೆ.
ಜುಲೈ 15 ರಂದು, ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ) ಬಹುಗುಣ ಅವರ ಭಾವಚಿತ್ರವನ್ನು ದೆಹಲಿ ವಿಧಾನಸಭೆಯಲ್ಲಿ ಸ್ಥಾಪಿಸಿದೆ. ಜುಲೈ 5 ರಂದು ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಬಹುಗುಣ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡುವಂತೆ ಒತ್ತಾಯಿಸಿದ್ದರು.
ಬಹುಗುಣ ಅವರು ಉತ್ತರಾಖಂಡಕ್ಕೆ ಸೇರಿದವರಾಗಿದ್ದು, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಅವರ ಪಕ್ಷ ಅಲ್ಲಿ ಸ್ಪರ್ಧಿಸಲಿದೆ.
ಇದನ್ನೂ ಓದಿ: ಅಪ್ಪಿಕೋ ಚಳುವಳಿಯ ನೇತಾರ ಸುಂದರ್‌ಲಾಲ್ ಬಹುಗುಣ ನಿಧನ


