ಹಲ್ಲುಕಚ್ಚಿ ಐದು ವರುಷಗಳನ್ನು ಬಹುದೊಡ್ಡ ಕನಸಿನ ಹಿಂದೆಯೇ ಸಾಗಿಸಿದ್ದರು. ಮನೆಯ ಕಡೆಗೂ ಗಮನ ಕೊಡಲಿಲ್ಲ. ಅಷ್ಟೇ ಅಲ್ಲ, 2017ರಲ್ಲಿ ನಡೆದ ಸಹೋದರಿಯ ಮದುವೆಗೂ ಹೋಗದೇ ಕನಸಿನ ಬೆನ್ನು ಹತ್ತಿ ಶ್ರಮದ ತರಬೇತಿಯಲ್ಲಿ ತೊಡಗಿದ್ದವರು ಗಟ್ಟಿಗಿತ್ತಿ ನಮ್ಮ ಹೆಮ್ಮೆಯ ಮೀರಾಬಾಯಿ ಚಾನು. ಈಗ ಟೋಕಿಯೋ ಒಲಂಪಿಕ್ಸ್‌ನಲ್ಲಿ ವೆಯ್ಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಹೆಮ್ಮೆಯಾಗಿ ದೇಶದ ಹೆಸರನ್ನು ಕಂಗೊಳಿಸಿದ್ದಾರೆ. ಇದರ ಹಿಂದೆ ಇರೋದು ನಿದ್ದೆಯಿಲ್ಲದ ದಿನಗಳು, ಶ್ರಮ, ಬೆವರು, ತ್ಯಾಗ ಮತ್ತು ಅವಮಾನವನ್ನು ಸಮ್ಮಾನವನ್ನಾಗಿಸುವ ಛಲ.
ಅಮ್ಮನ ಪ್ರಾರ್ಥನೆ ಮತ್ತು ಹಾರೈಕೆ ಮಗಳ ಜೊತೆಗಿತ್ತು. ಹಾಗಂತ ಮನೆಗೆ ಹೋಗಿ ಆಶೀರ್ವಾದ ಪಡೆದದ್ದಲ್ಲ. ಮಗಳ ಹಠ, ಛಲ ಮುಂದೊಂದು ದಿನ ದೇಶದ ಬಲವಾಗುತ್ತೆ ಅಂತ ಅಮ್ಮನಿಗೂ ಗೊತ್ತಿತ್ತು. ಮೀರಾಬಾಯಿ ಚಾನು ಮನೆಗೆ ಹೋಗದೆ ಎರಡು ವರ್ಷವಾಗಿತ್ತು.
ಎರಡು ದಶಕಗಳ ನಂತರ ಭಾರ ಎತ್ತಿದ ಚಾನು!
2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಭಾರತದ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಇದಾದನಂತರ ಭಾರತೀಯ ವೆಯ್ಟ್ ಲಿಫ್ಟರ್ಸ್ ಮೇಲೆ ನಿರೀಕ್ಷೆ ಹೆಚ್ಚಾಯ್ತು. ಆದರೆ ಆ ನಂತರ ದೇಶಕ್ಕೆ 21 ವರ್ಷಗಳ ನಂತರ ಮೀರಾಬಾಯಿ ಪದಕದ ಆಸೆ ಸಾಕಾರಗೊಳಿಸಿದ್ದಾರೆ.
ಕಳೆದ ಒಲಿಂಪಿಕ್ಸ್‌ನಲ್ಲಿ ತೊಟ್ಟ ಪಣಕ್ಕೆ ಇಂದು ಸಿಕ್ಕಿದೆ ಸಮ್ಮಾನ!
2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಸ್ಪರ್ಧೆಯಲ್ಲಿ ಗಾಯಗೊಂಡು ಭಾರ ಎತ್ತಲಾಗದೇ ಸೋಲನ್ನು ಅನುಭವಿಸಿದ್ದರು. ಅದೇ ನೋವು ಅವರನ್ನು ಬಿಟ್ಟೂ ಬಿಡದೆ ಕಾಡುತ್ತಿತ್ತು. ಅಲ್ಲಿಂದ ಮುಂದೆ ಪದಕವೆಂಬ ಮಾಯಾಜಿಂಕೆಯ ಬೆನ್ನತ್ತಿ ಬೆವರು ಹರಿಸುತ್ತಾ ಸಾಗಿದರು. ಬರೋಬ್ಬರಿ ಐದು ವರ್ಷಗಳ ನಂತರ ಇಂದು ಟೋಕಿಯೋದಲ್ಲಿ ಮೀರಾಬಾಯಿ ಚಾನು ಭಾರತದ ಬೆಳ್ಳಿ ಗೆದ್ದ ಬಂಗಾರವಾಗಿದ್ದಾರೆ.
ಆರ್ಚರಿ ಸೇರಬೇಕೆಂದು ಹೋದಾಕೆ ವೆಯ್ಟ್ ಲಿಫ್ಟರ್ ಆದಳು! ಹಳ್ಳಿಯಿಂದ 20ಕಿಲೋಮೀಟರ್ ಅಭ್ಯಾಸಕ್ಕಾಗಿ ಪಯಣ!
ಮಣಿಪುರದ ಮಾಂಗ್ಕೊಕ್ ಕಾಕ್ಚಿಂಗ್ ಎಂಬ ಹಳ್ಳಿಯವರಾದ ಮೀರಾಗೆ ಒಂದು ಗುರಿಯಿತ್ತು. ಅದರಲ್ಲೂ ತಾನೊಬ್ಬಳು ಗುರಿಗಾರ್ತಿಯಾಗಬೇಕೆಂಬ ಮಹದಾಸೆ ಆಕೆಗಿತ್ತು. ಮನೆಯಲ್ಲಿ ಆರ್ಥಿಕ ಸಂಕಷ್ಟ ಇತ್ತಾದ್ರೂ, ಅಪ್ಪ ಅಮ್ಮನ ಪ್ರೋತ್ಸಾಹ ಮಗಳಿಗಿತ್ತು. ಇದೇ ಹುಮ್ಮಸ್ಸಿನಲ್ಲಿ ಹನ್ನರಡನೇ ವಯಸ್ಸಿನಲ್ಲಿ ಮೀರಾಬಾಯಿ ಆರ್ಚರಿಗೆ ಸೇರಬೇಕೆಂದು ಇಂಪಾಲದ ಕುಮನ್ ಲಂಪಕ್ ಸ್ಟೇಡಿಯಂಗೆ ತೆರಳಿದ್ದರು. ಆರ್ಚರಿಗೆ ತನ್ನ ಹೆಸರು ನೋಂದಾಯಿಸಬೇಕೆಂದು ತೆರಳಿದ್ದ ಮೀರಾಗೆ ಅಂದು ಆರ್ಚರಿ ಅಸೋಸಿಯೇಷನ್ ಕಚೇರಿ ತೆರೆಯದೇ ಇರುವುದು ನಿರಾಸೆ ಮೂಡಿಸಿತ್ತು. ಆರ್ಚರಿಗೆ ಹೆಸರು ನೋಂದಾಯಿಸಿಕೊಳ್ಳುವ ಬಗೆ ಹೇಗೆಂದು ವಿಚಾರಿಸಲು ಮೀರಾಬಾಯಿ ಪಕ್ಕದಲ್ಲೇ ಇದ್ದ ವೆಯ್ಟ್ ಲಿಫ್ಟಿಂಗ್ ಕಚೇರಿಯ ಕೋಣೆಗೆ ತೆರಳಿದ್ರು.
ಆದರೆ, ಈ ನಡೆಯೇ ಮೀರಾ ಅವರ ಬದುಕನ್ನು ಬದಲಿಸಿತು. ವೆಯ್ಟ್ ಲಿಫ್ಟಿಂಗ್‌ನತ್ತ ಮೀರಾ ಬಾಯಿ ಚಿತ್ತ ಹರಿಯಿತು. ತನ್ನೂರಿನ ಬೆಟ್ಟಗುಡ್ಡ, ಇಳಿಜಾರಿನಲ್ಲಿ ಕಟ್ಟಿಗೆಹೊತ್ತು ಸಾಗುತ್ತಿದ್ದ ಈ ಹಳ್ಳಿ ಹುಡುಗಿಗೆ ಭಾರ ಎತ್ತುವುದು ಸುಲಭವಾಯ್ತು. ನಂತರ ಆರ್ಚರಿಯತ್ತ ಇದ್ದ ಒಲವು ಅಚ್ಚರಿಯೆಂಬಂತೆ ಜರ್ಕ್, ಸ್ನಾಚ್‌ನತ್ತ ಶಿಫ್ಟ್ ಆಯ್ತು. ಇಲ್ಲಿಂದ ಮುಂದೆ ಮೀರಾಬಾಯಿ ಬದುಕು ಬದಲಾಯಿತು.
ಖುಷಿ, ನೋವು, ಕಣ್ಣೀರು, ಅವಮಾನಗಳ ಜೊತೆಜೊತೆಗೆ ಒಬ್ಬ ಗಟ್ಟಿಗಿತ್ತಿ ಕ್ರೀಡಾಪಟುವಾಗಿ ಸಾಗಿದ್ರು. ಕೊರೊನಾದ ನಡುವೆಯೂ ಭಾರತದ ಪದಕದ ನಿರೀಕ್ಷೆಯನ್ನು ಮೀರಾ ಸಾಕಾರಗೊಳಿಸಿದ್ದಾರೆ. ಇವರ ಮುನ್ನುಡಿಯಿಂದ ಮತ್ತಷ್ಟು ಪದಕಗಳು ಭಾರತೀಯರ ಕೊರಳು ಅಲಂಕರಿಸಲಿ. ಭಾರತದ ಬೆಳ್ಳಿ ಬಂಗಾರಕ್ಕೆ ನನ್ನದೊಂದು ಸಲಾಂ!
- ಸುನಿಲ್ ಸಿರಸಂಗಿ
ಇದನ್ನೂ ಓದಿ: ತಪ್ಪಿದ ಆರ್ಚರ್ ತರಬೇತಿ: ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಮೀರಾಬಾಯಿ ಚಾನು ಯಾರು?


