ಇಂದು ಭಾರತದ ಪಾಲಿಗೆ ಹೆಮ್ಮೆಯ ದಿನ. ಟೋಕಿಯೋ ಒಲಂಪಿಕ್ಸ್‌ನಲ್ಲಿ ವೇಟ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸುವ ಮೂಲಕ ಎಲ್ಲರ ಮನೆಮಾತಾಗಿದ್ದಾಳೆ. ಚಿಕ್ಕವಳಿದ್ದಾಗ ಆರ್ಚರ್ (ಬಿಲ್ಲುಗಾರಿಕೆ) ಸ್ಪರ್ಧೆಯ ತರಬೇತಿ ಪಡೆಯಲು ಹೋಗಿ ಕೋಚ್‌ ಸಿಗದೆ ನಂತರ ವೇಟ್ ಲಿಫ್ಟಿಂಗ್ ತರಬೇತಿ ಪಡೆದು ಇಂದು ಇತಿಹಾಸ ನಿರ್ಮಿಸಿದ ಮಣಿಪುರದ ಮೀರಾಬಾಯಿ ಚಾನು ಕುರಿತು ವಿವರ ಇಲ್ಲಿದೆ.

2016ರ ರಿಯೋ ಒಲಂಪಿಕ್ಸ್‌ನಲ್ಲಿಯೇ ಮೀರಾಬಾಯಿ ಇತಿಹಾಸ ಸೃಷ್ಟಿಸಬೇಕಿತ್ತು. ಆದರೆ ಗಾಯಗೊಂಡ ಅವರು ಪದಕ ಗೆಲ್ಲವಲ್ಲಿ ವಿಫಲರಾದರು. ಆದರೆ ಛಲಬಿಡದ ಅವರು ಕೊನೆಗೂ ವೇಟ್‌ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ. 2000ರಲ್ಲಿ ಸಿಡ್ನಿಯಲ್ಲಿ ನಡೆದ ಒಲಪಿಂಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿಯವರು ಕಂಚಿನ ಪದಕ ಗಳಿಸಿದ್ದೇ ಕೊನೆಯಾಗಿತ್ತು.

ಮಣಿಪುರದ ರಾಜಧಾನಿ ಇಂಫಾಲ್‌ನಿಂದ 22 ಕಿ.ಮೀ ದೂರದಲ್ಲಿರುವ ನಾಂಗ್‌ಪೋಕ್ ಕಾಚಿಂಗ್ ಗ್ರಾಮದಲ್ಲಿ ಜನಿಸಿದ ಮೀರಾಬಾಯಿ ಚಿಕ್ಕಂದಿನಲ್ಲಿಯೇ ತಾನು ಕ್ರೀಡಾಪಟುವಾಗಲು ನಿರ್ಧರಿಸಿದ್ದಳು. ತನ್ನ ಮನೆಯ ಹುಡುಗರು ಮತ್ತು ಸಂಬಂಧಿಕರು ಪುಟ್ಬಾಲ್ ಆಡುತ್ತಿದ್ದರಿಂದ ಪ್ರತಿದಿನ ಬಟ್ಟೆಯೆಲ್ಲ ಗಲೀಜು ಮಾಡಿಕೊಂಡು ವಾಪಸ್ ಬರುತ್ತಿದ್ದರು. ಹಾಗಾಗಿ ಈಕೆ ಮಾತ್ರ ಶುಚಿಯಾದ, ನೀಟ್‌ ಆಗಿರುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸಿದ್ದಳು. ಹಾಗಾಗಿ ಆರ್ಚರ್ ಕ್ರೀಡೆಯು ಅದಕ್ಕೆ ತಕ್ಕುದಾದ ಮತ್ತು ಸ್ಟೈಲ್ ಆದ ಕ್ರೀಡೆಯಾಗಿದ್ದು ಅದನ್ನು ಅಭ್ಯಸಿಸಲು ಬಯಸಿದ್ದೆ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

2008ರಲ್ಲಿ ಇಂಫಾಲ್‌ನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕಚೇರಿಗೆ ತೆರಳಿದ ಆಕೆಗೆ ಆರ್ಚರ್ ಕ್ರೀಡೆಗೆ ತರಬೇತು ನೀಡುವವರು ಸಿಗಲೇ ಇಲ್ಲ. ಅದೇ ಸಮಯಕ್ಕೆ ಮಣಿಪುರದ ವೇಟ್ ಲಿಫ್ಟರ್ ಕುಂಜುರಾಣಿ ದೇವಿಯವರ ವಿಡಿಯೋ ನೋಡಿದ ಆಕೆ ಅದರಿಂದ ಸ್ಫೂರ್ತಿಗೊಂಡು ತಾನೂ ವೇಟ್ ಲಿಫ್ಟರ್‌ ಆಗಲು ನಿರ್ಧರಿಸಿದಳು. ನಂತರ ಅಂತರಾಷ್ಟ್ರೀಯ ವೇಟ್ ಲಿಫ್ಟರ್‌ ಮತ್ತು ಕೋಚ್ ಆಗಿದ್ದ ಅನಿತಾ ಚಾನುರನ್ನು ಭೇಟಿ ಮಾಡಿದ ನಂತರ ಆಕೆಯ ವೇಟ್ ಲಿಫ್ಟಿಂಗ್ ಪ್ರಯಾಣ ಆರಂಭವಾಯಿತು.

ಮೀರಾಬಾಯಿ ಆರಂಭದಲ್ಲಿಯೇ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು. ತನ್ನ ಊರಿನಿಂದ 22 ಕಿ.ಮೀ ದೂರದಲ್ಲಿರುವ ತರಬೇತಿ ಕೇಂದ್ರವನ್ನು ಎರಡು ಬಸ್‌ ಬದಲಿಸಿ ಬೆಳಿಗ್ಗೆ 6 ಗಂಟೆಯೊಳಗೆ ತಲುಬೇಕಾಗಿತ್ತು. ಬಹಳ ಶಕ್ತಿಯುತ ಹುಡುಗಿಯಾಗಿದ್ದ ಮೀರಾಬಾಯಿ ಇದೆಲ್ಲವನ್ನು ದಿಟ್ಟವಾಗಿ ಎದುರಿಸಿದಳು. 12ನೇ ವಯಸ್ಸಿನಲ್ಲಿಯೇ ಆಕೆ ತನ್ನ ಸಹೋದರರಿಗಿಂತ ಹೆಚ್ಚಿನ ಭಾರದ ಕಟ್ಟಿಗೆಗಳನ್ನು ಹೊರುತ್ತಿದ್ದಳು.

2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 170ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದ ಅವರು, 2016ರಲ್ಲಿ ನಡೆದ ನ್ಯಾಷನಲ್ ಸ್ಪರ್ಧೆಯಲ್ಲಿ 186 ಕೆಜಿ ಭಾರ ಎತ್ತಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಆದರೆ ಅದೇ ವರ್ಷ ನಡೆದ ರಿಯೋ ಒಲಪಿಂಕ್‌ನಲ್ಲಿ ಗಾಯಗೊಂಡು ನಿರಾಸೆ ಮೂಡಿಸಿದ್ದರು.

2017 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮತ್ತು 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಚಾನು 2016ರ ಒಲಂಪಿಕ್ಸ್ ನೋವನ್ನು ಮರೆತರು. ಅಲ್ಲಿಂದ ಟೋಕಿಯೋ ಒಲಂಪಿಕ್ಸ್‌ಗಾಗಿ ತಯಾರಿ ನಡೆಸಿದ ಅವರು ಕೊನೆಗೂ ಭರವಸೆ ಹುಸಿಗೊಳಿಸದೆ ಪದಕ ತಂದುಕೊಟ್ಟಿದ್ದಾರೆ.

ಭಾರತೀಯ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್ಸ್ಪೆಕ್ಟರ್‌ ಆಗಿ ಕೆಲಸ ಮಾಡುತ್ತಿರುವ ಚಾನು ಏಷ್ಯನ್ ಕ್ರೀಡಾಕೂಟದಲ್ಲಿ ವಿಶ್ವದಾಖಲೆ ಗಳಿಸಿದ್ದಾರೆ. ಇಂದಿನ ಒಲಂಪಿಕ್ ಬೆಳ್ಳಿ ಅವರ ಹಿರಿಮೆಗೆ ಮತ್ತೊಂದು ಗರಿಯಾಗಿದೆ. ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ತಂದುಕೊಟ್ಟ ಮೀರಾಬಾಯಿ ಚಾನುಗೆ ಅಭಿನಂದನೆಗಳು.. ಮತ್ತುಷ್ಟು ಪದಕಗಳು ನಿಮ್ಮಿಂದ ಹೊರಹೊಮ್ಮಲಿ ಎಂದು ಭಾರತ ಎದುರು ನೋಡುತ್ತಿದೆ.


ಇದನ್ನೂ ಓದಿ: ಟೋಕಿಯೋ ಒಲಂಪಿಕ್‌ನಲ್ಲಿ ಭಾರತಕ್ಕೆ ಮೊದಲ ಪದಕ: ಬೆಳ್ಳಿ ಗೆದ್ದ ಮೀರಾಬಾಯಿ ಚಾನು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

LEAVE A REPLY

Please enter your comment!
Please enter your name here