ಕೇಂದ್ರ ಸರಕಾರ ದೇಶದ ಬಂದರುಗಳನ್ನು ಆಧುನೀಕರಿಸುವುದು, ಬಂದರುಗಳ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಮತ್ತು ಬಂದರುಗಳ ಸಂಪರ್ಕಿಸುವ ಕೈಗಾರಿಕಾ ಪ್ರದೇಶಗಳ ಗುಚ್ಛವನ್ನು ರಚಿಸಲು ಸಾಗರ ಮಾಲಾ ಎಂಬ ಯೋಜನೆ ಕೈಗೆತ್ತಿಕೊಂಡಿದೆ. ಈ ಯೋಜನೆಯಲ್ಲಿ 189 ಬಂದರುಗಳ ಆಧುನೀಕರಣ, 170 ಬಂದರುಗಳ ಸಂಪರ್ಕ ಹೆಚ್ಛಿಸುವುದು ಮತ್ತು ಹೊಸ ಬಂದರುಗಳ ಸ್ಥಾಪನೆಯಂಥ 415 ಪ್ರಾಜೆಕ್ಟ್‌ಗಳು ಸೇರಿವೆ. ಒಟ್ಟು 7.985 ಲಕ್ಷ ಕೋಟಿ ಮೊತ್ತದ ಸದ್ರಿ ಯೋಜನೆಯಿಂದ ಕರ್ನಾಟಕ ಕರಾವಳಿಯ ಬೆಸ್ತರು ನಲೆ ತಪ್ಪುವ ಭೀತಿಯಿಂದ ಕಂಗಾಲಾಗಿ ಹೋಗಿದ್ದಾರೆ!
ಮಂಗಳೂರಿನಿಂದ ಕಾರವಾರದವರೆಗಿನ ಕಡಲ ತಡಿಯ ಮೀನುಗಾರರು ಸಾಗರ ಮಾಲಾ ಯೋಜನೆಗಳು ತಮ್ಮ ತುತ್ತಿಗಾಧಾರವಾದ ದುಡಿಮೆಗೆ ಸಂಚಕಾರ ತರುತ್ತದೆಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. 274 ಕೋಟಿ ರೂ.ವೆಚ್ಚದಲ್ಲಿ ಬೈತಖೋಲ್ ಬಂದರಿನ 250 ಮೀಟರ್ ಜಟ್ಟಿ ಮತ್ತು 880 ಮೀಟರ್ ಅಲೆ ತಡೆ ಗೋಡೆ ಕಾಮಗಾರಿಯನ್ನು 2019ರಲ್ಲಿ ಪ್ರಾರಂಭಿಸಲಾಗಿತ್ತು. ಅದನ್ನು ವಿರೋಧಿಸಿ ಮೀನುಗಾರರು ಬೃಹತ್ ರ್‍ಯಾಲಿ, ಪ್ರತಿಭಟನೆ ನಡೆಸಿದ್ದರು. ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮೀನುಗಾರರ ಸಂಘಟನೆ ಸಲ್ಲಿಸಿತ್ತು. 2020ರಲ್ಲಿ ಹೈಕೋರ್ಟ್ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು. ಈಚೆಗೆ ಹೈಕೋರ್ಟ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೈತಖೋಲ್ ವಾಣಿಜ್ಯ ಬಂದರಿನ ಎರಡನೆ ಹಂತದ ಕಾಮಗಾರಿಗೆ ನೀಡಿರುವ ಅನುಮತಿ ಕಾನೂನುಬಾಹಿರವೆಂದು ಪರಿಗಣಿಸಿದೆ! ಕಾಯಿದೆಗಳನ್ನು ಕಡೆಗಣಿಸಿ ಪರವಾನಿಗೆ ಕೊಡಲಾಗಿದೆ; ಯೋಜನೆಯಿಂದ ಆಗಬಹುದಾದ ವಾಯು ಮತ್ತು ಜಲ ಮಾಲಿನ್ಯದ ವ್ಯಾಪ್ತಿ ಮತ್ತು ಯಾವ ರೀತಿ ಎದುರಾಗಬಹುದೆಂಬುದನ್ನು ಪರಿಸರ ಅಧಿಕಾರಿ ವಿಚಾರಣೆ ನಡೆಸಿಲ್ಲವೆಂದು ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಹೊನ್ನಾವರದ ಕಾಸರಕೋಡು ಟೊಂಕದಲ್ಲಿ ನಿರ್ಮಾಣವಾಗುವ ಖಾಸಗಿ ಬಂದರು ಕಾಮಗಾರಿಗೂ ಮೀನುಗಾರ ಸಂಘಟನೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ. ಆದರೂ ಪೊಲೀಸ್ ಬಲದಲ್ಲಿ ಕಾಮಗಾರಿಗೆ ಪ್ರಯತ್ನ ನಡೆದಾಗ ಮೀನುಗಾರರು ಸಾಮೂಹಿಕವಾಗಿ ಸಮುದ್ರಕ್ಕ ಹಾರಿ ಆತ್ಮಹತ್ಯೆಗೆ ಹೋದಾಗ ಕಾಮಗಾರಿ ನಿಲ್ಲಿಸಲಾಗಿದೆ. ಈಗ ಮಂಗಳೂರು ನಗರ ಕಸ್ಬಾ ಬೆಂಗರೆಯ ಫಲ್ಗುಣಿ ನದಿ ದಂಡೆ ಆಕ್ರಮಿಸಿ ಕೋಸ್ಟಲ್ ಬರ್ತ್ ಯೋಜನೆ ಕಾರ್ಯಗತಗೊಳಿಸುವ ತರಾತುರಿ ನಡೆಯುತ್ತಿದ್ದು, ಇದರಿಂದ ತಮ್ಮ ಕಸಬು ಮತ್ತು ಬದುಕಿಗೆ ತೊಂದರೆಯಾಗುತ್ತದೆಂದು ಸಾಂಪ್ರದಾಯಿಕ ಮೀನುಗಾರರು ಪ್ರತಿಭಟನೆಗಿಳಿದಿದ್ದಾರೆ. ಸಾಗರ ಮಾಲಾ, ಕೋಸ್ಟಲ್ ಬರ್ತ್ ಯೋಜನೆ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ಕೊಡದೆ ಬಲವಂತದಿಂದ ಹೇರಲಾಗುತ್ತಿದೆಯೆಂದು ಫಲ್ಗಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳುತ್ತಾರೆ.

ಮೀನುಗಾರರೆ ಹೆಚ್ಚಿರುವ ಜನದಟ್ಟಣೆಯ ಕಸ್ಬಾ ಬೆಂಗರೆ ಗ್ರಾಮಸ್ಥರು ತಮ್ಮ ಬದುಕನ್ನು ಧ್ವಂಸ ಮಾಡುವ ಸದ್ರಿ ಯೋಜನೆ ಬೇಡವೆಂದು ಒಕ್ಕೊರಲಿಂದ ವಿರೋಧಿಸುತ್ತಿದ್ದಾರೆ. ಗ್ರಾಮಸ್ಥರ ಭಾವನೆ ಕಡೆಗಣಿಸಿ ಪೊಲೀಸ್ ಬಲದಿಂದ ಜಿಲ್ಲಾಡಳಿತ ಬಿರುಸಿನಿಂದ ಕೋಸ್ಟಲ್ ಬರ್ತ್ ಕಾಮಗಾರಿ ನಡೆಸುತ್ತಿದೆ. ಇದೀಗ ಸಾಂಪ್ರದಾಯಿಕ ಮೀನುಗಾರರು ನಾಡದೋಣಿ ಕಟ್ಟಿ ಇಡುವ ಪ್ರದೇಶಕ್ಕೆ ಕಾಮಗಾರಿ ವಿಸ್ತರಣೆಗೊಂಡಿದೆ. ಇಲ್ಲಿ ನೂರಾರು ನಾಡದೋಣಿ ತಂಗುತ್ತವೆ. ಫಲ್ಗುಣಿ ನದಿ ತೀರದ ಬೆಂಗರೆಯಲ್ಲಿ ತಲತಲಾಂತದಿಂದ ಸಾಂಪ್ರದಾಯಿಕ ಮೀನುಗಾರರು ದೋಣಿ ಕಟ್ಟಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಎರಡು ತಿಂಗಳಿಂದ ಮೀನುಗಾರರು ಅಧಿಕೃತ ಮಾತುಕತೆ-ಪರ್ಯಾಯ ಜಾಗ ತೋರಿಸದೆ ದೋಣಿಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲವೆಂದು ಹೇಳುತ್ತಲೇ ಇದ್ದಾರೆ. ಇದ್ಯಾವುದನ್ನು ಕೇಳದ ಜಿಲ್ಲಾಡಳಿತ ಈಗ ಹಠಾತ್ತಾಗಿ ಪೋಲೀಸ್ ಬಲದಿಂದ ದೋಣಿ ತೆರವುಗೊಳಿಸಲು ಮುಂದಾಗಿದೆ. ಅಧಿಕಾರಿಗಳು ಸರ್ವಾಧಿಕಾರದಿಂದ ವರ್ತಿಸುತ್ತಿದ್ದು, ಜಿಲ್ಲಾಡಳಿತ ಸಭೆ ನಡೆಸದೆ ದೋಣಿ ತೆರವಿಗೆ ಅವಕಾಶ ಕೊಡುವುದಿಲ್ಲವೆಂದು ಸಾಂಪ್ರದಾಯಿಕ ಮೀನುಗಾರರ ಸಂಘ ಎಚ್ಚರಿಸಿದೆ.
ಸಾಗರ ಮಾಲಾದಿಂದ ಮನೆ ಕಳೆದುಕೊಳ್ಳವ ಮೀನುಗಾರರಿಗೆ ಪುನರ್ವಸತಿ, ದೋಣಿ ನಿಲ್ಲಿಸಲು ಸರಿಯಾದ ವ್ಯವಸ್ಥೆ ಕುರಿತು ಬಾಯಿ ಮಾತಿನ ಭರವಸೆ ಬದಲಿಗೆ ಅಧಿಕೃತ ಸಭೆ ಕರೆದು ಜಿಲ್ಲಾಡಳಿತ ಮೀನುಗಾರರಿಗೆ ತೊಂದರೆಯಾಗದಂಥ ತೀರ್ಮಾನ ಪ್ರಕಟಿಸಬೇಕೆಂದು ಸಾಂಪ್ರದಾಯಿಕ ಮಿನುಗಾರರ ಸಂಘ ಜಿಲ್ಲಾಡಳಿತಕ್ಕೆ ಹೇಳಿತ್ತು. ಮೂರು ವಾರದ ಹಿಂದೆ ಜಿಲ್ಲಾ ಉಸ್ತವಾರಿ ಮಂತ್ರಿಯಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಒಂದು ವಾರದಲ್ಲಿ ಅಧಿಕೃತ ಸಭೆ ಏರ್ಪಡಿಸುವುದಾಗಿ ಹೇಳಿದ್ದರು. ಆದರೆ ಈಗ ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳು ಯಾವುದೆ ಸಭೆ, ಸಮಾಲೋಚನೆ ಇಲ್ಲದೆ ದೋಣಿ ತೆರವಿಗೆ ಒತ್ತಾಯಿಸುತ್ತಿದೆ; ಒಪ್ಪದಿದ್ದರೆ ಪೊಲೀಸ್ ಬಲ ಪ್ರಯೋಗಿಸುವ ಬೆದರಿಕೆ ಹಾಕುತ್ತಿದ್ದಾರೆಂದು ಮೀನುಗಾರ ಮುಖಂಡರು ಹೇಳುತ್ತಿದ್ದಾರೆ.
ಜಿಲ್ಲಾಡಳಿತದ ಈ ಸರ್ವಾಧಿಕಾರಿ ಧೋರಣೆ ಖಂಡಿಸುವುದಾಗಿ ಹೇಳಿರುವ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ, ನ್ಯಾಯಯುತ ಪರಿಹಾರ ಘೋಷಿಸದೆ ದೋಣಿ ತೆರವಿಗೆ ಅವಕಾಶ ಕೊಡುವುದಿಲ್ಲವೆಂದು ಹೆಳಿದೆ. ಬಲಾತ್ಕಾರಕ್ಕೆ ಮುಂದಾದರೆ ಮೀನುಗಾರರು ಒಗ್ಗಟ್ಟಾಗಿ ಶಾಂತಿಯುತ ಹೋರಾಟದಿಂದ ಎದುರಿಸುವುದಾಗಿ ಮೀನುಗಾರ ಮಖಂಡರು ಹೇಳುತ್ತಿದ್ದಾರೆ. ಇನ್ನಾದರು ಬಡ ಮೀನುಗಾರರಿಗೆ ನ್ಯಾಯ ಸಿಗುವುದೇ ಕಾದು ನೋಡಬೇಕಿದೆ.
ಇದನ್ನೂ ಓದಿ: ಹೊನ್ನಾವರ ಖಾಸಗಿ ಬಂದರು ಯೋಜನೆ ನೀಲ ನಕ್ಷೆಯಂತೆ ನಡೆಯುತ್ತಿಲ್ಲ: ಮಾಜಿ ಶಾಸಕ ಮಂಕಾಳ್ ವೈದ್ಯ


