Homeಕರ್ನಾಟಕಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

ಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

- Advertisement -
- Advertisement -

ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆಯುತ್ತ ಬಂದಿರುವ ಜಯಂತ ಕಾಯ್ಕಿಣಿಯವರ ಹೊಸ ಕಥಾ ಸಂಕಲನ ’ಅನಾರ್ಕಲಿಯ ಸೇಫ್ಟಿಪಿನ್’ ಈಚೆಗೆ ಪ್ರಕಟವಾಗಿದೆ. ಅವರ ಮೊದಲ ಕಥಾ ಸಂಕಲನ ’ತೆರೆದಷ್ಟೇ ಬಾಗಿಲು’ ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಪ್ರಕಟವಾಗಿತ್ತು. ಅದರ ನಂತರದಲ್ಲಿ ’ದಗಡೂ ಪರಬನ ಅಶ್ವಮೇಧ’, ’ಅಮೃತಬಳ್ಳಿ ಕಷಾಯ’, ’ಬಣ್ಣದ ಕಾಲು’, ’ತೂಫಾನ್ ಮೇಲ್, ’ಚಾರ್‌ಮಿನಾರ್’ ಕಥಾ ಸಂಕಲನಗಳು ಬಂದಿವೆ. ಅಂದಿನ ಎಂಬತ್ತು ತೊಂಬತ್ತರ ಕಾಲಘಟ್ಟವೇ ಕಾಯ್ಕಿಣಿ ಅವರಿಂದ ಅತ್ಯುತ್ತಮ ಕತೆಗಳನ್ನು ಬರೆಯಿಸಿದೆ. ಈಗ ಕಳೆದೆಂಟು ವರ್ಷಗಳಲ್ಲಿ ಬರೆದಿರುವ ಕತೆಗಳು ’ಅನಾರ್ಕಲಿಯ ಸೇಫ್ಟಿಪಿನ್’ ಸಂಕಲನದಲ್ಲಿವೆ.

ಕಾಯ್ಕಿಣಿಯವರು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು; ತಮ್ಮ ಶಿಕ್ಷಣದ ನಂತರದಲ್ಲಿ ಉದ್ಯೋಗಕ್ಕಾಗಿ ಮುಂಬಯಿಗೆ ಹೋದವರು; ಅಲ್ಲಿಯೇ ಎರಡು ದಶಕಗಳ ಕಾಲ ವಾಸ್ತವ್ಯ ಹೂಡಿದವರು. ಕಾಯ್ಕಿಣಿಯವರು ಕನ್ನಡ ಸಾಹಿತ್ಯದ ಯಾವುದೇ ಚಳವಳಿಯೊಂದಿಗೆ ಗುರುತಿಸಿಕೊಂಡವರಲ್ಲ; ತಮ್ಮ ಪಾಡಿಗೆ ತಾವು ಕಳೆದ ನಾಲ್ಕು ದಶಕಗಳಿಂದ ಕತೆಗಳನ್ನು ಬರೆಯುತ್ತ ಬಂದಿದ್ದಾರೆ; ತಮ್ಮದೇ ಲಯಬದ್ಧ ಭಾಷಿಕ ಗದ್ಯವನ್ನು ರೂಪಿಸಿಕೊಂಡಿದ್ದಾರೆ. ಅವರು ಕತೆ, ಪ್ರಬಂಧ, ಅಂಕಣ, ಅನುವಾದ, ನಾಟಕ-ಏನನ್ನೇ ಬರೆದರೂ ಅಚ್ಚುಕಟ್ಟಾಗಿಯು ಹಾಗೂ ಕಲಾತ್ಮಕವಾಗಿಯು ಬರೆಯಬೇಕೆಂಬ ಅಲಿಖಿತ ನಿಯಮವನ್ನು ಪಾಲಿಸುತ್ತ ಬಂದಿದ್ದಾರೆ.

’ಅನಾರ್ಕಲಿಯ ಸೇಫ್ಟಿಪಿನ್’ ಸಂಕಲನದ ಕತೆಗಳ ಪಾತ್ರಗಳು ಎಂದಿನಂತೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಕುಮಟ, ಶಿರಸಿ, ಕಾರವಾರ, ತದಡಿ, ಸಿದ್ಧಾಪುರ ಅಥವಾ ಅಲ್ಲಿಯ ಯಾವುದೋ ಊರುಗಳಿಂದ ಎದ್ದು ಬಂದಿವೆ. ಈ ಪಾತ್ರಗಳು ಬೇರೆ ಬೇರೆ ಕಾರಣಗಳಿಂದ ತಂತಮ್ಮ ಊರುಗಳನ್ನು ತೊರೆದು ಮುಂಬಯಿ, ಬೆಂಗಳೂರು, ಪುಣೆ, ಮೀರಜ, ಕೊಲ್ಲಾಪುರದಂತಹ ಮೊದಲಾದ ನಗರಗಳಿಗೆ ಹೊರಟು ನಿಂತಾಗಲೆಲ್ಲ ಹುಟ್ಟುವ ವಿಚಿತ್ರ ಚಡಪಡಿಕೆ, ಸಂಕಟ, ಒದ್ದಾಟಗಳು ಇಲ್ಲಿಯ ಕತೆಗಳಲ್ಲಿವೆ. ವಯೋವೃದ್ಧ ತಂದೆತಾಯಿಗಳು ತಮ್ಮ ಮಕ್ಕಳನ್ನು ಕಾಣಲು ನಗರಗಳಿಗೆ ಬಂದಾಗ ಅನುಭವಿಸುವ ಒಂಟಿತನ, ಅನಾಥಪ್ರಜ್ಞೆ, ಅನಾಮಿಕತೆಗಳ ಚಿತ್ರಣಗಳನ್ನು ನೋಡುತ್ತೇವೆ. ಇಲ್ಲಿಯ ಕತೆಗಳು ವೈವಿಧ್ಯಮಯ ಮನುಷ್ಯ ವ್ಯಾಪಾರಗಳಿಂದ ತಕ್ಷಣಕ್ಕೆ ಆಕರ್ಷಿಸುತ್ತವೆ. ಕರಾವಳಿಯ ಜನರ ದೈನಂದಿನ ಜೀವನದ ವಿವರಗಳು ಮತ್ತೆ ಮತ್ತೆ ಚಿತ್ರಣಗೊಂಡಿವೆ. ಆದರೆ ಕಾಯ್ಕಿಣಿಯವರ ಹಿಂದಿನ ಕತೆಗಳಲ್ಲಿದ್ದ ಬಿಗಿಯಾದ ನಿರೂಪಣೆ, ಕಥನದ ತೀವ್ರತೆ, ಘಟನೆಗಳ ಸಂಯೋಜನೆ ಹಾಗೂ ಅವು ಕೊಡುತ್ತಿದ್ದ ಜೀವನಾನುಭೂತಿ-ಇಲ್ಲಿಯ ಕತೆಗಳಲ್ಲಿ ತೆಳುವಾಗಿದೆ.

ಸಂಕಲನದ ಮೊದಲ ಕತೆ ’ಕುತನಿ ಕುಲಾವಿ’ ಉದ್ಯೋಗದ ಭದ್ರತೆಯಿಲ್ಲದ ಕುಟುಂಬವೊಂದು ಬದುಕಲು ನಡೆಸುವ ಸೆಣಸಾಟದ ವಿವರಗಳಿಂದ ಗಮನ ಸೆಳೆಯುತ್ತದೆ. ಈ ಕತೆಯಲ್ಲಿ ಬರುವ ತಂದೆಯು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಪೋಷಿಸುವ ಸಲುವಾಗಿ ಮಹಾರಾಷ್ಟ್ರದ ಬೇರೆ ಬೇರೆ ಊರುಗಳಿಗೆ ಕೆಲಸ ಅರಸಿಕೊಂಡು ಪರದಾಡುವ ಚಿತ್ರವು ಪರಿಣಾಮಕಾರಿಯಾಗಿ ಮೂಡಿಬಂದಿದೆ. ಆತ ಕೆಲಸ ಕಳೆದುಕೊಂಡು ಪುನಃ ಧಾರವಾಡಕ್ಕೆ ಬಂದು ಯಾವ ಯಾವುದೋ ಕೆಲಸಗಳನ್ನು ಮಾಡಿಕೊಂಡಿರುತ್ತಾನೆ. ಮೆಸ್ ನಡೆಸುತ್ತಿರುವ ಇವರ ಮಗಳು ಚಿತ್ರಲೇಖಾ ಒಂದು ದಿನ ಹಠಾತ್ತನೇ ತಾಯಿಯ ಕಣ್ಮುಂದೆಯೇ ತಾನು ಇಷ್ಟಪಡುವ ಹುಡುಗನೊಂದಿಗೆ ಹೊರಟುಹೋಗುತ್ತಾಳೆ. ತಮ್ಮ ತನ್ನ ಅಕ್ಕಳನ್ನು ಹುಡುಕುತ್ತಿರುತ್ತಾನೆ; ಆಕೆ ಸಿಗುತ್ತಾಳೋ ಇಲ್ಲವೋ ಎಂಬ ಅನಿಶ್ಚಿತತೆಯಲ್ಲಿಯೇ ಕತೆ ಮುಗಿಯುತ್ತದೆ. ಈ ಕತೆಯು ಲಹರಿಯಂತೆ ಮನಬಂದ ಕಡೆ ಹರಿದುಹೋಗಿದೆ.

ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿಗಳಾದ ಪದ್ಮಾಕರ ಮಾಸ್ತರರು ತಮ್ಮ ಹೆಂಡತಿಯೊಂದಿಗೆ ಕರಾವಳಿಯಿಂದ ಬೆಂಗಳೂರಿನಲ್ಲಿರುವ ಮಗನ ಮನೆಗೆ ಬರುವ ಕತೆಯೇ ’ಭಾಮೆ ಕೇಳೊಂದು ದಿನ’. ಈ ಕತೆಯು ಪದ್ಮಾಕರರ ಕಣ್ಣೋಟದಲ್ಲಿ ನಗರ ಜೀವನದ ಅನಾಮಿಕ ಇಕ್ಕಟ್ಟುಗಳನ್ನು ಯಕ್ಷಗಾನದ ಶೈಲಿಯಲ್ಲಿ ರಮ್ಯವಾಗಿಯೇ ತೆರೆದಿಡುತ್ತದೆ. ಪದ್ಮಾಕರರು ನಗರದಲ್ಲಿದ್ದರೂ ಅವರ ಮನಸ್ಸು ಹಳ್ಳಿಯ ಜೀವನದ ನೆನಪುಗಳಿಂದ ತುಂಬಿರುತ್ತದೆ; ಈ ನೆನಪುಗಳ ಭಾರಕ್ಕೆ ಅವರು ಕುಸಿದಂತೆಯು ತೋರುತ್ತದೆ. ಆದರೆ ಈ ಕತೆಯು ಪದ್ಮಾಕರರ ವ್ಯಕ್ತಿ ಪರಿಚಯದಂತೆ ಭಾಸವಾಗುತ್ತದೆ.

’ಬೆಳಕಿನ ಬಿಡಾರ’ ಕತೆಯಲ್ಲಿ ತದಡಿಯಲ್ಲಿದ್ದ ಕುಟುಂಬವೊಂದು ಉದ್ಯೋಗದ ನಿಮಿತ್ತ ಮಹಾರಾಷ್ಟ್ರದ ರತ್ನಗಿರಿಗೆ ವಲಸೆ ಹೋಗುತ್ತದೆ. ಕತೆ ಎಲ್ಲಿಂದ ಶುರುವಾಗಿತ್ತೋ ಪುನಃ ಒಂದು ಸುತ್ತು ಹೊಡೆದುಕೊಂಡು ಅಲ್ಲಿಯೇ ಮುಕ್ತಾಯವಾಗುತ್ತದೆ. ಕತೆಯಲ್ಲಿ ಬಬನ್ ಎಂಬ ಹುಡುಗನ ನೆನಪಾಗಿ ಮತ್ತೆ ಕತೆಯು ಹಿಮ್ಮುಖವಾಗಿ ಚಲಿಸುತ್ತದೆ. ಮಕ್ಕಳಾದ ಬೇಬಿ ಮತ್ತು ಮುನ್ನಾ ಇವರ ಮುಗ್ಧ ಕಣ್ಣಿನಿಂದ ಲೋಕವನ್ನು ಕಾಣುವಂತೆ ಮಾಡಿದ್ದು ವಿಶಿಷ್ಟವಾಗಿದೆ. ಆದರೂ ಈ ಕತೆಯ ಬಂಧವು ಸಡಿಲಗೊಂಡು ವಿವಣಾತ್ಮಕ ಮಟ್ಟದಲ್ಲಿಯೇ ವಿರಮಿಸುತ್ತದೆ.

’ವಾಯಾ ಚಿನ್ನದ ಕೇರಿ’ ಕತೆಯಲ್ಲಿ ಮನೆಗಳಿಗೆ ಪೇಪರ್ ಹಾಕುವ ವಿಹಂಗಮ ಎಂಬ ಹುಡುಗ ಮಹಾದೇವಕ್ಕಳಿಂದ ಒಂದು ಜೊತೆ ಬೂಟುಗಳನ್ನು ಪಡೆದುಕೊಳ್ಳುತ್ತಾನೆ. ಈ ವಿದೇಶಿ ಬೂಟುಗಳನ್ನು ಕತೆಯಲ್ಲಿ ಅತಿಯಾದ ಭಾವುಕತೆ ಹಾಗೂ ರಮ್ಯತೆಯಿಂದ ವರ್ಣಿಸಲಾಗಿದೆ. ಇದರಿಂದಾಗಿ ವಿಹಂಗಮ ಆ ಬೂಟುಗಳಲ್ಲಿಯೇ ಮುಳುಗಿಹೋಗಿರುವಂತೆ ಕಾಣುತ್ತಾನೆ. ನಿರೂಪಕನ ಒಲವು ವಿಹಂಗಮನ ಪರವಾಗಿಯೇ ಇರುವುದರಿಂದ ಅನ್ಯರ ವಸ್ತು ತನಗೆ ಬೇಡವೆಂದು ಹೇಳದಷ್ಟು ಮುಗ್ಧನನ್ನಾಗಿ ಚಿತ್ರಿಸಲಾಗಿದೆ. ಹಾಗಾಗಿ ವಿಹಂಗಮನಿಗೆ ಯಾವುದೇ ಲಜ್ಜೆಯು ಇಲ್ಲ; ಆತನ ಅಮ್ಮ ಹಾಗೂ ಅಜ್ಜಿಯು ಕೂಡ ಆ ವಿದೇಶಿ ಬೂಟುಗಳ ಮೇಲೆ ತಮ್ಮ ಹಕ್ಕಿದೆ ಎಂದೇ ಮಾತಾಡುತ್ತಾರೆ. ಹೀಗೆ ಏಕಮುಖಿ ನಿಲುವುಗಳಿಂದ ಕತೆಯು ಓದುಗರಲ್ಲಿ ಕಿರಿಕಿರಿಯುಂಟುಮಾಡುತ್ತದೆ. ಇದೆಲ್ಲದರ ಪರಿಣಾಮದಿಂದಾಗಿ ಸದರಿ ಕತೆಯ ಆಶಯಕ್ಕೆ ಸ್ಪಷ್ಟವಾದ ದಿಕ್ಕುದೆಸೆಯಿಲ್ಲದಂತಾಗಿದೆ.

ಸದರಿ ಕಥಾ ಸಂಕಲನದ ಶೀರ್ಷಿಕೆಯಾಗಿರುವ ’ಅನಾರ್ಕಲಿಯ ಸೇಫ್ಟಿಪಿನ್’ ಕತೆಯು ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಸಮುದ್ರದಲ್ಲಿರುವ ನಡುಗಡ್ಡೆಯೊಂದಕ್ಕೆ ಪ್ರವಾಸಕ್ಕೆಂದು ಕರೆದುಕೊಂಡು ಹೋದಾಗ ಅಲ್ಲಿ ಹುಡುಗಿಯರ ನಡುವೆ ನಡೆಯುವ ಅವಘಡಗಳನ್ನು ನಿರೂಪಿಸುತ್ತದೆ. ಅದರ ಜೊತೆಯಲ್ಲಿ ಅನುಕ್ತಾ ಮತ್ತು ಚಮೇಲಿ ಎಂಬ ಹುಡುಗಿಯರ ನೆನಪುಗಳ ಮೂಲಕ ತಂದೆತಾಯಿಗಳ ನಡುವಿನ ಇರುಸುಮುರಿಸು,
ಜಗಳ, ರಾದ್ಧಾಂತಗಳು ಬೀದಿಗೆ ಬರುತ್ತಿದ್ದುದರ ವಿವರಗಳಿವೆ. ಈ ಹದಿಹರೆಯದ ಹುಡುಗಿಯರು ತಮ್ಮ ಅಪ್ಪ ಅಮ್ಮಂದಿರನ್ನು ಸೂಕ್ಷ್ಮವಾಗಿ ಅವಲೋಕಿಸುವ ಹಾಗೂ ಅವರು ಅನುಭವಿಸುವ ಗೋಳನ್ನು ತಂತಮ್ಮ ಗ್ರಹಿಕೆಗೆ ನಿಲುಕುವಷ್ಟರ ಮಟ್ಟಿಗೆ ವ್ಯಾಖ್ಯಾನಿಸಿಕೊಳ್ಳುತ್ತಾರೆ. ಕತೆಯು ಹದಿಹರೆಯದ ಮನಸ್ಸುಗಳ ಆಕರ್ಷಣೆ-ವಿಕರ್ಷಣೆಗಳನ್ನು ನಿರೂಪಿಸಿದೆ. ಆದರೆ ಸೇಫ್ಟಿಪಿನ್ ಮಾತ್ರವೇ ಹೆಣ್ಣಿನ ಮಾನಮರ್ಯಾದೆಗಳನ್ನು ಕಾಪಾಡುವ ಏಕೈಕ ಆಯುಧದಂತೆ ನೋಡಲಾಗಿರುವುದೇ ಈ ಕತೆಯ ದೊಡ್ಡ ಮಿತಿಯಾಗಿದೆ.

’ಅನಾರ್ಕಲಿಯ ಸೇಫ್ಟಿಪಿನ್’ ಸಂಕಲನದ ಬಹುತೇಕ ಕತೆಗಳಲ್ಲಿ ಎದ್ದು ಕಾಣುವ ಗುಣವೆಂದರೆ ಕುಂದಿಲ್ಲದ ಕಾಯ್ಕಿಣಿಯವರ ಉತ್ಸಾಹ. ಕತೆಗಳನ್ನು ಬರೆಯುವ ಅವರ ಉಮೇದಿಗೆ ಧಕ್ಕೆಯಾಗಿಲ್ಲದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಇಲ್ಲಿಯ ಕತೆಗಳನ್ನು ಓದಿದ ನಂತರದಲ್ಲಿ ಅವು ಧ್ವನಿಪೂರ್ಣವಾಗಿಲ್ಲ ಅನ್ನಿಸಲು ಶುರುವಾಗುತ್ತದೆ. ಕೆಲವು ಕತೆಗಳ ವಸ್ತುವಿನ್ಯಾಸವು ಲಲಿತ ಪ್ರಬಂಧದ ಧಾಟಿಯಲ್ಲಿದೆ. ಮತ್ತೆ ಕೆಲವು ಕತೆಗಳಲ್ಲಿ ಬರುವ ಘಟನೆಗಳ ವರ್ಣನೆಗೆ ಹೆಚ್ಚಿನ ಒತ್ತು ಬಿದ್ದಿದೆ. ಕೆಲವು ಬಾರಿ ಕತೆಯನ್ನು ಮುನ್ನಡೆಸುವ ಅಸಹಾಯಕತೆ ತಲೆದೋರಿದಾಗ ಅನಗತ್ಯ ವರ್ಣನೆಗೆ ಇಳಿದು ಹಿಗ್ಗಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಕಾಯ್ಕಿಣಿಯವರ ಹಳೆಯ ಕತೆಗಳು ನೆನಪಾದವು. ’ಇದ್ದದು ಇದ್ದಾಂಗ’, ’ದಗಡು ಪರಮನ ಅಶ್ವಮೇಧ’, ’ಅಮೃತಬಳ್ಳಿ ಕಷಾಯ’ ಹಾಗೂ ಇನ್ನೂ ಅನೇಕ ಕತೆಗಳು ಒಂದು ಕಾಲಘಟ್ಟದಲ್ಲಿ ಓದುಗರನ್ನು ಇನ್ನಿಲ್ಲದಂತೆ ಆಕರ್ಷಿಸಿದ್ದವು. ವೈವಿಧ್ಯಮಯ ಮನುಷ್ಯ ಪ್ರವೃತ್ತಿಗಳ ಚಿತ್ರಣದಿಂದ ಮನ ಸೆಳೆದಿದ್ದವು; ಸಹಜ ನಿರೂಪಣೆಯಿಂದ ಬೆರಗುಮೂಡಿಸಿದ್ದವು. ಅವುಗಳಲ್ಲಿ ಸಾಕಷ್ಟು ರೂಪಕ, ಪ್ರತಿಮೆ, ಸಂಕೇತಗಳಿದ್ದವು. ಕೆಲವು ಕತೆಗಳು ಇಡಿಯಾಗಿ ರೂಪಕವಾಗಿದ್ದವು. ಆದರೆ ಹೊಸ ಸಂಕಲನದ ಕತೆಗಳಲ್ಲಿ ಕಾಯ್ಕಿಣಿಯವರ ಕಥನದ ಮಾಂತ್ರಿಕ ಶಕ್ತಿಯೇ ಕಣ್ಮರೆಯಾಗಿದೆ.

ಕಾಯ್ಕಿಣಿಯವರ ಈ ಸಂಕಲನದ ಕತೆಗಳಲ್ಲಿ ಮೂರು ಸಂಗತಿಗಳು ಗೈರುಹಾಜರಾಗಿವೆ. ಮೊದಲನೆಯದಾಗಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಜೀವನಕ್ಕೆ ಸಂಬಂಧಿಸಿದಂತೆ ಸಮುದ್ರ, ದೋಣಿ, ಲಾಂಚು, ಧಕ್ಕೆ ಹಾಗೂ ಇವುಗಳ ಜೊತೆಯಲ್ಲಿನ ಅಲ್ಲಿಯ ಪಾತ್ರಗಳ ನಂಟು ಕೇವಲ ಮೇಲು ಹೊದಿಕೆಯಾಗಿಯಷ್ಟೇ ಬರುತ್ತವೆ. ಅಲ್ಲಿ ಪ್ರಮುಖ ಆಹಾರವಾಗಿರುವ ಮೀನು, ಏಡಿ, ಸೀಗಡಿ, ಮಳಿ-ಇವುಗಳಿಗೆ ಸಂಬಂಧಿಸಿದ ಭಕ್ಷ್ಯಗಳ ವಿವರಗಳೇ ಮಾಯವಾಗಿವೆ. ಎರಡನೆಯದಾಗಿ, ಕರಾವಳಿ ಪ್ರದೇಶವು ಹಲವು ದಶಕಗಳಿಂದ ಕೋಮುದಳ್ಳುರಿಯಿಂದ ಹೊತ್ತಿಕೊಂಡು ಉರಿಯುತ್ತಿದೆ. ಹಿಂದೂ-ಮುಸ್ಲಿಂರ ನಡುವಿನ ಗಲಾಟೆಗಳು ಅಲ್ಲಿಯ ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಇಂತಹ ರಾಜಕೀಯ ಮತ್ತು ಕೋಮುವಾದದ ಸಂಘರ್ಷಗಳು ಕಾಯ್ಕಿಣಿಯವರ ಕತೆಗಳಲ್ಲಿ ಯಾಕಿಲ್ಲ ಎಂಬ ಪ್ರಶ್ನೆಯು ಕಾಡುತ್ತದೆ. ಮೂರನೆಯದಾಗಿ, ಕರಾವಳಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳೀಯ ಜಲ, ಕಾಡು, ಬೆಟ್ಟ-ಗುಡ್ಡ-ಪರ್ವತಗಳನ್ನು ನಿರ್ನಾಮಗೊಳಿಸುವ ಯೋಜನೆಗಳು ಲಾಗಾಯ್ತಿನಿಂದ ನಡೆಯುತ್ತಿವೆ. ಅಭಿವೃದ್ಧಿ ಎಂಬ ಕಣ್ಕಟ್ಟು ತಂದೊಡ್ಡುವ ಬಿಕ್ಕಟ್ಟುಗಳು ಕಾಯ್ಕಿಣಿಯವರ ಕತೆಗಳಲ್ಲಿ ಪ್ರಧಾನ ವಸ್ತುವಾಗಿ ಬರುವುದಿಲ್ಲ. ಯಾವುದೇ ಲೇಖಕ ತನ್ನ ಪರಿಸರದ ವಾಸ್ತವತೆಗಳೊಂದಿಗೆ ಮುಖಾಮುಖಿಯಾಗುವುದು ಮುಖ್ಯವಾಗಿರುತ್ತದೆ.

ಕಾಯ್ಕಿಣಿಯವರು ಬರೆಯುವ ಕನ್ನಡದಲ್ಲಿ ಕೊಂಕಣಿ, ಮರಾಠಿ, ಹಿಂದಿ, ಇಂಗ್ಲಿಷ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಆಡುನುಡಿಯ ಪದಗಳು ವಿಶಿಷ್ಟವಾದ ರೀತಿಯಲ್ಲಿ ಸಂಯೋಗವಾಗಿರುತ್ತವೆ. ಕಾಯ್ಕಿಣಿಯವರ ಮನೆಮಾತು ಕೊಂಕಣಿ ಆಗಿರುವುದರಿಂದ ಕತೆಗಳಲ್ಲಿ ಕೊಂಕಣಿ ವಾಕ್ಯಗಳು ಕೂಡ ಬರುತ್ತವೆ. ಉತ್ತರ ಕನ್ನಡ ಜಿಲ್ಲೆಯವರಾದ ಹಾಗೂ ಕೊಂಕಣಿ ಮನೆಮಾತಾಗಿದ್ದ ಯಶವಂತ ಚಿತ್ತಾಲ, ವಿವೇಕ ಶಾನಭಾಗರ ಕತೆ-ಕಾದಂಬರಿಗಳಲ್ಲಿ ಕೂಡ ಕೊಂಕಣಿ ಪದಗಳು ಸಂಕರಗೊಂಡಿರುತ್ತವೆ. ಇದು ಪದಗಳ ಏಕತಾನತೆಯನ್ನು ತೊಡೆದು ಹಾಕುವುದರ ಮುಖಾಂತರ ಕನ್ನಡ ಭಾಷೆಯ ಕಸುವನ್ನು ಹೆಚ್ಚಿಸುತ್ತವೆ. ಈ ಹಿನ್ನೆಲೆಯಲ್ಲಿ ಕಾಯ್ಕಿಣಿಯವರ ಕತೆಗಳಲ್ಲಿ ’ಮಳ್ಳ, ’ನಮೂನಿ’, ’ಉಮೇದು’ ಎಂಬ ಪದಗಳು ಮತ್ತೆ ಮತ್ತೆ ಬಳಕೆಯಾಗಿವೆ. ಒಂದೇ ಕತೆಯಲ್ಲಿ ಮೂರ್ನಾಲ್ಕು ಬಾರಿ ಕಾಣಿಸಿಕೊಂಡಿವೆ. ಇವು ಲೇಖಕರಿಗೆ ಹೆಚ್ಚು ಪ್ರಿಯವಾಗಿರಬಹುದು; ಆದರೆ ಕತೆಗಳಲ್ಲಿ ಇವು ಪುನರಾವರ್ತನೆಗೊಳ್ಳುವುದರಿಂದ ಓದುವಾಗ ಕೊಂಚ ಕಿರಿಕಿರಿಯಾಗುತ್ತದೆ.

ಸದರಿ ಸಂಕಲನದ ಕತೆಗಳ ವಸ್ತು ವಿನ್ಯಾಸ, ಗುಣಾತ್ಮಕತೆ ಹಾಗೂ ಕಲಾತ್ಮಕತೆಯ ದೃಷ್ಟಿಕೋನದಿಂದ ದುರ್ಬಲವಾಗಿವೆ. ಕತೆಗಾರ ತಾನು ಈಗಾಗಲೇ ತುಳಿದು ಸವಕಲಾಗಿರುವ ದಾರಿಯನ್ನು ಬಿಡಬೇಕಾಗುತ್ತದೆ. ಹೊಸ ಪಥವನ್ನು ಹಾಗೂ ಅದಕ್ಕೆ ತಕ್ಕ ಶಿಲ್ಪವನ್ನು ಸಾಧಿಸಿಕೊಳ್ಳುವುದು ಅನಿವಾರ್ಯವೇ ಆಗುತ್ತದೆ. ಕತೆಗಾರನೊಬ್ಬ ಒಂದು ಕಾಲಘಟ್ಟದಲ್ಲಿ ತಾನು ನಿರ್ಮಿಸಿದ ಕಥನ ಮಾದರಿಗಳನ್ನು ನಿರಾಕರಿಸಿ ಹೊಸದನ್ನು ಕಟ್ಟದಿದ್ದರೆ ಏಕಮುಖಿ ಕಥನಗಳದ್ದೇ ಗೂಡಾಗುತ್ತದೆ.

ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...