ರಾಜ್ಯದ ನೂತನ ಸಚಿವ ಸಂಪುಟದ ಖಾತೆಗಳನ್ನು ಕೊನೆಗೂ ಶನಿವಾರ ಹಂಚಿಕೆ ಮಾಡಲಾಗಿದೆ. ಅದಾಗ್ಯೂ ಸಚಿವ ಆನಂದ್ ಸಿಂಗ್ ತಮಗೆ ಸಿಕ್ಕ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ತಾನು ಕೇಳಿದ್ದು ಬೇರೆ ಖಾತೆ, ತನಗೆ ಸಿಕ್ಕ ಖಾತೆ ಬೇರೆ’ ಎಂದು ಖಾಸಗಿ ವಾಹಿಯೊಂದಕ್ಕೆ ನೀಡಿದ ಸಂದರ್ಶನಲ್ಲಿ ಹೇಳಿದ್ದಾರೆ.
“ನಾನು ನಿರೀಕ್ಷೆ ಮಾಡಿದ ಖಾತೆಯನ್ನು ಮುಖ್ಯಮಂತ್ರಿಯವರು ಕೊಟ್ಟಿಲ್ಲ. ನಾನು ಬೇರೆ ಖಾತೆಯನ್ನು ನಿರೀಕ್ಷೆ ಮಾಡಿದ್ದೆ, ಆದರೆ ನನಗೆ ಬೇರೆ ಖಾತೆಯನ್ನು ನೀಡಲಾಗಿದೆ. ಮುಖ್ಯಮಂತ್ರಿ ಮತ್ತು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಈ ಬಗ್ಗೆ ಮತ್ತೊಮ್ಮೆ ಮನವಿ ಮಾಡಲಿದ್ದೇನೆ” ಎಂದು ಆನಂದ್ ಸಿಂಗ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಈ ಅಸಹಾಯಕತೆ ಸಿಎಂ ಬೊಮ್ಮಾಯಿಯವರದ್ದಾ? ಕರ್ನಾಟಕದ ಜನರದ್ದಾ?
“ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನೇ ಕಾರಣ. 2019 ರಲ್ಲಿ ಮೊದಲು ರಾಜೀನಾಮೆ ನೀಡಿದ್ದೂ ನಾನೇ. ಎಂಟು ದಿನಗಳ ನಂತರ ಒಬ್ಬೊಬ್ಬರಾಗಿ ರಾಜೀನಾಮೆ ನೀಡಿದ್ದರು. ಪರಿಣಾಮವಾಗಿ ಬಿಜೆಪಿ ಸರ್ಕಾರ ಬಂತು. ಇದನ್ನು ವರಿಷ್ಠರು ಗಮನದಲ್ಲಿ ಇಟ್ಟುಕೊಂಡು ಖಾತೆ ಹಂಚಿಕೆ ಮಾಡಬೇಕಾಗಿತ್ತು” ಎಂದು ಆನಂದ್ ಸಿಂಗ್ ಹೇಳಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.
“ಸಿಎಂ ಮುಂದೆ ಇಂತಹದ್ದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿದ್ದೆ. ಆದರೆ ನನ್ನ ನಿರೀಕ್ಷೆಯ ಖಾತೆ ಕೊಟ್ಟಿಲ್ಲ. ಬಯಸಿದ ನನಗೆ ಖಾತೆ ಸಿಗದೆ ಇದ್ದರೆ ರಾಜೀನಾಮೆಗೆ ಸಿದ್ಧ” ಎಂದು ಅವರು ಹೇಳಿದ್ದಾರೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.
ಹೊಸ ಸಚಿವ ಸಂಪುಟದಲ್ಲಿ ಸಚಿವ ಆನಂದ್ ಸಿಂಗ್‌ಗೆ ಪ್ರವಾಸೋದ್ಯಮ, ಪರಿಸರ ಮತ್ತು ಪರಿಸರ ಖಾತೆ ಖಾತೆಯನ್ನು ನೀಡಲಾಗಿದೆ. ಆದರೆ ಅವರು ಮುಖ್ಯಮಂತ್ರಿಗೆ ‘ಇಂಧನ ಮತ್ತು ಲೋಕೋಪಯೋಗಿ ಖಾತೆ’ ನೀಡುವಂತೆ ಕೇಳಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೊನೆಗೂ ಖಾತೆ ಹಂಚಿಕೆ; ಯಾರಿಗೆ ಯಾವ ಇಲಾಖೆ? ಸಂಪೂರ್ಣ ಮಾಹಿತಿ ಇಲ್ಲಿದೆ


