(ಈ ಲೇಖನ ನ್ಯಾಯಪಥ ಪತ್ರಿಕೆಯಲ್ಲಿ ಮುದ್ರಣಕ್ಕೆ ಹೋಗುವ ಸಮಯಕ್ಕೆ ಸಚಿವಸಂಪುಟದ ಹೆಸರುಗಳು ಘೋಷಣೆಯಾಗಿರಲಿಲ್ಲ. ಈಗ ಹೆಸರುಗಳು ಘೋಷಣೆಯಾಗಿ, ಪ್ರಮಾಣ ವಚನ ಸ್ವೀಕರಿಸಿ ಎರಡು ದಿನ ಕಳೆದಿದ್ದರೂ ಖಾತೆಗಳು ಹಂಚಿಕೆಯಾಗಿಲ್ಲ. ಒಟ್ಟಿನಲ್ಲಿ ಅನಿಶ್ಚಿತತೆ ಮಾತ್ರ ನಿರಂತರವಾಗಿ ಮುಂದುವರೆದಿದೆ.)

’ನಾನು ಯಾರ ರಬ್ಬರ್ ಸ್ಟಾಂಪೂ ಅಲ್ಲ’ ಎಂದು ಘೋಷಿಸಿದ ಮೂರನೆಯ ದಿನ ಕರ್ನಾಟಕದ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ’ಒಬ್ಬನೇ ಕೆಲಸ ಮಾಡೋದು ಕಷ್ಟ ಆಗುತ್ತಿದೆ. ಆದಷ್ಟು ಬೇಗ ಸಚಿವ ಸಂಪುಟ ಆಗಬೇಕು’ ಎಂಬಂತಹ ಹೇಳಿಕೆಯನ್ನೂ ಕೊಟ್ಟರು. ಸಚಿವ ಸಂಪುಟ ರಚನೆ ಮಾಡಿಕೊಳ್ಳುವುದು ಮುಖ್ಯಮಂತ್ರಿಯ ಪರಮಾಧಿಕಾರ ಎಂದು ಹೇಳಲಾಗುತ್ತದೆ. ಆದರೆ ಬಿಜೆಪಿಯೇ ಇರಲಿ, ಕಾಂಗ್ರೆಸ್ಸೇ ಇರಲಿ ಮುಖ್ಯಮಂತ್ರಿಗಳು ಅಂತಹ ಪರಮಾಧಿಕಾರವನ್ನು ಹೊಂದಿಲ್ಲವೆಂಬುದು ಸ್ಪಷ್ಟ. ಎರಡೂ ಕಡೆ ಹೈಕಮಾಂಡ್ ಎಂಬ ದೆಹಲಿ ವರಿಷ್ಠರು ಬೆಂಗಳೂರಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಬೇಕಾದವರು ಯಾರ್‍ಯಾರು ಎಂಬುದನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬಿಜೆಪಿಯ ಮಟ್ಟಿಗೆ ಅಂತಹವರ ಪಟ್ಟಿಯನ್ನು ನಿರ್ಧರಿಸುವ ವಿಚಾರದಲ್ಲಿ ಜಾತಿಶ್ರೀಗಳ (ಜಾತಿ ಉಪಜಾತಿಗಳ ಮಠಗಳ ಮುಖ್ಯಸ್ಥರು) ಬ್ಲ್ಯಾಕ್‌ಮೇಲ್ ಸಹಾ ಮುಖ್ಯವಾಗುತ್ತದೆ.

ಮೇಲಿನ ಹೇಳಿಕೆಯ ಎರಡು ದಿನಗಳ ನಂತರ ಬಸವರಾಜ ಬೊಮ್ಮಾಯಿಯವರು ದೆಹಲಿಗೇ ಓಡಿದರು. ಅಲ್ಲಿ ಬಿಜೆಪಿಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಡನೆ ಮಾತುಕತೆಯ ನಂತರ, ಹೊರಗಡೆ ಕಾದುಕೊಂಡಿದ್ದ ಕರ್ನಾಟಕದ ಮಾಧ್ಯಮಗಳ ದೆಹಲಿ ಪತ್ರಕರ್ತರು ಅವರಿಗೆ ಅಕ್ಷರಶಃ ಮುತ್ತಿಗೆ ಹಾಕಿದರು. ಅವರಿಗೆಲ್ಲಾ ಹೊಸ ಮುಖ್ಯಮಂತ್ರಿಯಿಂದ ಒಂದೇ ಒಂದು ಬೈಟ್ ಪಡೆಯುವ ಕಾತುರ. ಆದರೆ, ಆ ಹೊಸ ಮುಖ್ಯಮಂತ್ರಿ ಅರ್ಧ ಪೋಸ್ಟ್‌ಮನ್ ಮತ್ತರ್ಧ ಬೇಡಿಕೊಳ್ಳಲು ಬಂದಿರುವ ಸಾಮಂತರಷ್ಟೇ ಆಗಿದ್ದರು. ಅಲ್ಲಿನ ಸಂಭಾಷಣೆಯು ವಿಡಿಯೋ ರೂಪದಲ್ಲಿ ಲಭ್ಯವಿದ್ದು, ಅದರ ಆಯ್ದ ಪಾಠ ಈ ರೀತಿ ಇದೆ.

’ಹೈಕಮಾಂಡ್ ಜೊತೆ ಚರ್ಚೆ ನಡೆದಿದ್ದು, ಅಂತಿಮವಾದ ಪಟ್ಟಿಯನ್ನು ಅವರೇ ಪ್ರಕಟ ಮಾಡ್ತಾರೆ’. ’ನಾವು ಎರಡು ಪಟ್ಟಿಗಳನ್ನು ಕೊಟ್ಟಿದ್ದೇವೆ, ಆದರೆ ಎಷ್ಟನ್ನು ಮಾಡಬೇಕು, ಎಷ್ಟನ್ನ ಬಿಡಬೇಕು ಅಂತ ಅವರು ತೀರ್ಮಾನ ಮಾಡ್ತಾರೆ’. ’ಡಿಸಿಎಂ ಸ್ಥಾನಗಳ ಕುರಿತು ತೀರ್ಮಾನ ಆಗಿದೆಯಾ?’, ’ಅದನ್ನೂ ಅವರೇ ಫೈನಲ್ ಮಾಡ್ತಾರೆ’. ’ಮೊದಲ ಬಾರಿಗೆ 25 ಜನ ಸಚಿವರು ಆಗಬಹುದಾ?’ ’ಅವರು (ಹೈಕಮಾಂಡ್) ಏನು (ತೀರ್ಮಾನ) ಮಾಡ್ತಾರೆ ಅಂತ ನನಗೂ ಗೊತ್ತಿಲ್ಲ. ಬಹುತೇಕ ಅವರು ಇನ್ನೊಂದು ಬಾರಿ ಚರ್ಚೆ ಮಾಡಿ ಫೈನಲ್ ಮಾಡ್ತಾರೆ; ಆಗ ನಂಬರ್ ಕೂಡಾ ಗೊತ್ತಾಗುತ್ತದೆ.’

ಮರುದಿನ ರಾತ್ರಿ ಮತ್ತೆ ಸಿಎಂ ಪತ್ರಕರ್ತರಿಗೆ ಸಿಕ್ಕರು. ಆದರೆ ಹಿಂದಿನ ದಿನದಷ್ಟು ಆತುರ ಪತ್ರಕರ್ತರಿಗೂ ಇರಲಿಲ್ಲ, ಬೊಮ್ಮಾಯಿಯವರಿಗೂ ಇರಲಿಲ್ಲ. ’ಹಿರಿಯರನ್ನು ತೆಗೆಯಬೇಕು ಅಂತ ವಾದ ಕೇಳಿಬಂದಿದೆಯಂತಲ್ಲಾ?’ ಪತ್ರಕರ್ತರ ಪ್ರಶ್ನೆಗೆ, ಏನೋ ಅರ್ಧಂಬರ್ಧ ಹೇಳಿದರು. ಅಷ್ಟರಲ್ಲಿ ಅವರಿಗೆ ಇನ್ನೊಂದು ಪ್ರಶ್ನೆ ತೂರಿ ಬಂದಿತು. ’ಎಷ್ಟು ಜನ ಇರುತ್ತಾರೆ?’, ’ನಾನು ಹೇಳೋಕಾಗಲ್ಲ’. ’ಒಂದೇ ಹಂತದ ವಿಸ್ತರಣೆಯಾ?’, ’2 ಹಂತ ಅಂತ ನಿರೀಕ್ಷೆ ಮಾಡ್ತೀನಿ’.

’ಹಳಬರನ್ನು ಎಷ್ಟು ಜನರನ್ನು ತೆಗೀತೀರಿ?’, ’ತೆಗೆಯೋದಾಗಲಿ, ಸೇರಿಸೋದಾಗಲಿ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾಳೆ ತಿಳಿಸ್ತೀನಿ’. ಬೊಮ್ಮಾಯಿಯವರ ಪರಿಸ್ಥಿತಿ ನೋಡಿ, ಒಬ್ಬ ಪತ್ರಕರ್ತರು ಹೀಗೂ ಹೇಳಿದರು. ’ಯೂ ಆರ್ ಲುಕಿಂಗ್ ಟೈರ್‍ಡ್’. ’ಹೇ ಹಾಗೇನಿಲ್ಲ ಚೆನ್ನಾಗಿಯೇ ಇದ್ದೀನಿ’ ಎಂದ ಸಿಎಂರ ದನಿಯಲ್ಲಿ ಸುಸ್ತಿತ್ತು. ಆದರೆ, ’ನಾಳೆ ಬೆಳಿಗ್ಗೆಯ ಹೊತ್ತಿಗೆ ಶುಭ ಸೂಚನೆ ಸಿಗಬಹುದು’ ಎಂದರು. ದೇವರ ಮುಂದೆ ಹೂವಿಗಾಗಿ ಕಾದು ಕೂತವರ ರೀತಿ ಧ್ವನಿಸುತ್ತಿದ್ದ ಆ ಮಾತುಗಳನ್ನು ಮುಂದುವರೆಸಿ, ’ನಡ್ಡಾಜಿಯವರು ನಿನ್ನೆಯೂ ಮಾಹಿತಿ ಪಡೆದುಕೊಂಡರು, ಕೆಲವು ಕ್ಲಾರಿಫಿಕೇಷನ್ ಕೇಳಿದರು. ಅವನ್ನು ಒದಗಿಸಿದ್ದೇವೆ…… ಅವರು ಅಂತಿಮವಾಗಿ ಹೇಳಿದ ನಂತರ ಪಟ್ಟಿಯನ್ನು ರಾಜಭವನಕ್ಕೆ ಕಳಿಸಿಕೊಡುತ್ತೇವೆ.’ ಎಂದರು. ಕೊನೆಗೆ ’ಹೈಕಮಾಂಡ್ ಒಳ್ಳೆಯ ತೀರ್ಮಾನ ಮಾಡ್ತಾರೆ ಅನ್ನೋ ವಿಶ್ವಾಸವಿದೆ’ ಎಂದು ಮುಗಿಸಿದರು.

ಇಡೀ ಎಪಿಸೋಡು ಕರ್ನಾಟಕದ ಹೊಸ ಮುಖ್ಯಮಂತ್ರಿಯ ಪರಿಸ್ಥಿತಿಯನ್ನು ತೋರಿಸುತ್ತದೆ. ಅವರು ಏನೊಂದನ್ನೂ ತೀರ್ಮಾನಿಸುವ ಸ್ಥಿತಿಯಲ್ಲಿಲ್ಲ ಅಥವಾ ಒಂದು ಪ್ರಸ್ತಾಪವನ್ನು ಅವರ ಪಕ್ಷದ ವರಿಷ್ಠರ ಮುಂದಿಟ್ಟರೂ ಅದಕ್ಕೆ ತಾನು ಹೊಣೆ ಹೊರುವ ಶಕ್ತಿ ಹೊಂದಿಲ್ಲ. ಏಕೆಂದರೆ ನಂತರ ಯಡಿಯೂರಪ್ಪನವರಾಗಲೀ, ಪಕ್ಷದ ಇತರರಾಗಲೀ, ವಿವಿಧ ಬ್ಲ್ಯಾಕ್‌ಮೇಲ್ ಜಾತಿಮಠಶ್ರೀಗಳಾಗಲೀ ಕೇಳಿದರೆ ಅದ್ಯಾವುದನ್ನೂ ತೀರ್ಮಾನಿಸಿದ, ತೀರ್ಮಾನಿಸುವ ವ್ಯಕ್ತಿ ನಾನಲ್ಲ ಎಂದು ಬಿಂಬಿಸಿಕೊಳ್ಳುವುದೇ ಅವರಿಗೆ ಸುರಕ್ಷಿತವಾದುದು. ಇಂತಹ ಒಂದು ಕೆಟ್ಟ ಪರಿಸ್ಥಿತಿಗೆ ಕರ್ನಾಟಕ ರಾಜ್ಯ ಹಾಗೂ ಕರ್ನಾಟಕ ಸರ್ಕಾರ ಬಂತೇ ಎಂದು ಆತಂಕ ಪಡಬೇಕಿದೆ.

ವಿವಿಧ ಜಾತಿ ಸಮುದಾಯಗಳ ಲಾಬಿಗಳ ಒತ್ತಡ, ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಒತ್ತಡ ಹಾಗೂ ನಿರ್ಣಾಯಕ ಸ್ಥಾನದಲ್ಲಿರುವ ಹೈಕಮಾಂಡ್‌ನ ಒತ್ತಡ ಇವುಗಳ ನಡುವೆ ಒಬ್ಬ ಅಸಹಾಯಕ ಮುಖ್ಯಮಂತ್ರಿಯಾಗಷ್ಟೇ ಬಸವರಾಜ ಬೊಮ್ಮಾಯಿಯವರು ಪ್ರತಿಷ್ಠಾಪನೆಗೊಂಡಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಯಡಿಯೂರಪ್ಪನವರಿಗೂ ಸಂಪುಟ ರಚನೆ ಮಾಡಲು ಹೈಕಮಾಂಡ್ ಬಹಳ ಕಾಲ ಬಿಟ್ಟಿರಲಿಲ್ಲ. ಆದರೆ ಆ ವಿಚಾರದಲ್ಲಿ ಒಂದಷ್ಟು ತನ್ನ ಅಭಿಪ್ರಾಯಗಳನ್ನೂ ಮುಂದಿಟ್ಟು ಒಪ್ಪಿಸಿಕೊಳ್ಳುವ ಶಕ್ತಿ ಅವರಿಗಿತ್ತು. ಈಗ ಆ ಶಕ್ತಿಯೂ ಇಲ್ಲದ, ಬದಲಿಗೆ ಯಡಿಯೂರಪ್ಪನವರ ವಿರುದ್ಧವೂ ದಾಳವಾಗಿ ಪ್ರಯೋಗಿಸಲ್ಪಡಲೆಂದೇ ಪ್ರತಿಷ್ಠಾಪನೆಗೊಂಡಿರುವ ಹೊಸ ಸಿಎಂ ಇನ್ನು ಯಾವ ಬಗೆಯ ಆಡಳಿತವನ್ನು ಕರ್ನಾಟಕಕ್ಕೆ ನೀಡಿಯಾರು ಎಂಬ ಪ್ರಶ್ನೆ ನಮ್ಮ ಮುಂದಿದೆ.

ಆದರೆ ಇದು ಸಿಎಂ ಒಬ್ಬರ ವ್ಯಕ್ತಿಗತ ಅಶಕ್ತತೆ ಮತ್ತು ಅಸಹಾಯಕತೆಯ ವಿಚಾರವಷ್ಟೇ ಆಗಿಲ್ಲ. ಕೋಟ್ಯಾಂತರ ಜನರ ಪ್ರತಿನಿಧಿಯಾಗಿ ಅವರಿರುವುದರಿಂದ, ಈ ರಾಜ್ಯದ ಅಸಹಾಯಕತೆ ವಿಚಾರವಾಗಿಯೂ ಇದನ್ನು ನೋಡಬೇಕಿದೆ. ಇಂತಹ ಸಂಗತಿಗಳಲ್ಲೇ ಬಳಲಿ ಬೆಂಡಾಗಿಬಿಡುವ ಇವರು ಇನ್ನು ಜಿಎಸ್‌ಟಿ ಪರಿಹಾರ, ನೆರೆ ಬರ ಪರಿಹಾರ, ವಿಶೇಷ ಪ್ಯಾಕೇಜ್, ಹಣಕಾಸು ಅನುದಾನ ಇತ್ಯಾದಿಗಳನ್ನು ತರುವ ಪ್ರಶ್ನೆ ದೂರವೇ ಉಳಿದೀತು.

ಬಹುತೇಕ ನಾಳೆ ಅಥವಾ ನಾಳಿದ್ದು ರೂಪುಗೊಳ್ಳಲಿರುವ (?) ಮೊದಲ ಹಂತದ ಸಚಿವ ಸಂಪುಟ ಹಾಗೂ ಖಾತೆ ಹಂಚಿಕೆಯು ಕರ್ನಾಟಕದ ಬಿಜೆಪಿಯಲ್ಲಿ ಈ ಸದ್ಯ ಇರುವ ಬಣಗಳು ಹಾಗೂ ಅವುಗಳ ಪ್ರಾಬಲ್ಯದ ಕುರಿತು ಒಂದು ಅಂದಾಜನ್ನು ನೀಡಲಿವೆ. ಆದರೆ, ಕರ್ನಾಟಕದ ಪ್ರಾಬಲ್ಯವಂತೂ ಕುಸಿದುಹೋಗಿದೆ ಎಂಬುದರಲ್ಲಿ ಸಂಶಯವಿಲ್ಲ.


ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದ 5 ನೂತನ ಸಚಿವರಿವರು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಡಾ. ಎಚ್. ವಿ ವಾಸು
+ posts

LEAVE A REPLY

Please enter your comment!
Please enter your name here