ದೆಹಲಿಯ ನಂಗಲಿ ದಲಿತ ಮಗುವಿನ ಬರ್ಬರ ಅತ್ಯಾಚಾರವನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಏಕೆ ಮಾತನಾಡಲಿಲ್ಲ? ದೇಶದ ಹೆಣ್ಣು ಮಕ್ಕಳ ಆಕ್ರಂದನ ಕೇಳುತ್ತಿಲ್ಲವೇ? ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ರಾಜ್ಯಾಧ್ಯಕ್ಷರಾದ ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯ ಅಪ್ರಾಪ್ತ ದಲಿತ ಮಗುವಿನ ಅತ್ಯಾಚಾರ ಖಂಡಿಸಿ ದಸಸಂ ಒಕ್ಕೂಟ (ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ಒಕ್ಕೂಟ), ಕರ್ನಾಟಕ ಜನಶಕ್ತಿ ಮತ್ತು ತಮಟೆ ವೇದಿಕೆಗಳ ವತಿಯಿಂದ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಉನ್ನತ ಕುಟುಂಬದ ಹೆಣ್ಣು ಮಗಳಿಗೆ ಅನ್ಯಾಯವಾದರೆ ಇಡೀ ನಾಗರೀಕ ಸಮಾಜ ಪ್ರತಿಭಟಿಸುತ್ತದೆ. ಮಾಧ್ಯಮಗಳು ದೊಡ್ಡ ಸುದ್ದಿ ಮಾಡುತ್ತವೆ. ಇದು ಒಳ್ಳೆಯದು. ಆದರೆ ತಳಸಮುದಾಯದ, ದಲಿತರ ಮೇಲಿನ ಅತ್ಯಾಚಾರಗಳಿಗೆ ಇದೇ ರೀತಿಯ ಸ್ಪಂದನೆ ಇರುವುದಿಲ್ಲ. ಈ ತಾರತಮ್ಯ ಏಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಂಧ್ರಪ್ರದೇಶದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಘಟನೆಗೆ ಇಡೀ ದೇಶ ತೀವ್ರವಾಗಿ ಸ್ಪಂದಿಸಿತು. ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಗುಂಡಿಟ್ಟು ಹತ್ಯೆ ಮಾಡಲಾಯಿತು. ಇದು ಮಾನವ ಹಕ್ಕುಗಳ ಉಲ್ಲಂಘನೆ ಸಹ. ಆದರೆ ಹತ್ರಾಸ್ ದಲಿತ ಮಗಳ ಅತ್ಯಾಚಾರಗೈದು ಕೊಲೆ ಮಾಡಿ ಶವ ಕೂಡದೇ ಸುಟ್ಟು ಹಾಕಿತು ಆದಿತ್ಯನಾಥ್ ಸರ್ಕಾರ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರದ ಮೋದಿ ಸರ್ಕಾರ ಮನುಶಾಸ್ತ್ರದ ಅಡಿಪಾಯದ ಮೇಲೆ ನಡೆಯುತ್ತಿದೆ. ಹಾಗಾಗಿ ಅದಕ್ಕೆ ದಲಿತ ದಮನಿತರ ಕೂಗು ಕೇಳುತ್ತಿಲ್ಲ. ಪಂಚೇಂದ್ರೀಯ ಕಳೆದುಕೊಂಡಿರುವ ಸರ್ಕಾರಕ್ಕೆ ನಾವು ಬಿಸಿಮುಟ್ಟಿಸಿಬೇಕಿದೆ ಎಂದು ಅವರು ಹೇಳಿದರು.

ಹಿರಿಯ ಹೋರಾಟಗಾರರಾದ ಬಿ.ಶ್ರೀಪಾದ್ ಭಟ್ ಮಾತನಾಡಿ, “ಇಷ್ಟು ವರ್ಷಗಳಾದರೂ ಬರ್ಬರ ಅತ್ಯಾಚಾರಗಳನ್ನು ತಡೆಯಲು ನಾವು ವಿಫಲರಾಗಿದ್ದೇವೆ. ನಾಚಿಕೆಯಿಂದ ತಲೆತಗ್ಗಿಸಿ ಮಾತನಾಡುತ್ತಿದ್ದೇನೆ. ಇಲ್ಲಿ ಮಾತೇ ಒಂದು ಕ್ರೌರ್ಯದ ರೂಪದಲ್ಲಿದೆ. ನ್ಯಾವ್ಯಾರು ಮಾತನಾಡುವ ಅರ್ಹತೆ ಉಳಿಸಿಕೊಂಡಿಲ್ಲ” ಎಂದು ವಿಷಾಧ ವ್ಯಕ್ತಪಡಿಸಿದರು.

ಮಹಿಳೆಯರಿಗೆ ಸಾಮಾಜಿಕ ಭದ್ರತೆ ಬಗ್ಗೆ ನಾವು ಮಾತನಾಡುತ್ತಿಲ್ಲ. ದುಷ್ಕರ್ಮಿಗಳು ಭಾರತ ತಂಡದ ಹಾಕಿ ಆಟಗಾರ್ತಿ ವಂದನಾ ಕಠಾರಿಯ ಮನೆ ಮುಂದೆ ಹೋಗಿ ಜಾತಿ ನಿಂದನೆ ಮಾಡುವ ಧೈರ್ಯ ಎಲ್ಲಿಂದ ಬಂತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಮಗಳೂ ದೇಶದ ಮಗಳು ಎಂಬ ಘೋಷಣೆಗಳು ಮೊಳಗಿದವು. ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ಜನಶಕ್ತಿಯ ಗೌರವಾಧ್ಯಕ್ಷರಾದ ಗೌರಿ, ದಸಸಂ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್ ಬೆಂಕಿಕೆರೆ ಮಾತನಾಡಿದರು. ಹಿರಿಯ ದಲಿತ ಹೋರಾಟಗಾರರಾದ ವಿ.ನಾಗರಾಜ್, ರಾಜಾಸಾಬ್ ಮತ್ತಿತರರು ಉಪಸ್ಥಿತರಿದ್ದರು.


ಇದನ್ನೂ ಓದಿ: ದಲಿತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಮತ್ತು ಬಲವಂತದ ಶವಸಂಸ್ಕಾರ: ಪೂಜಾರಿಯ ಬಂಧನ

1 COMMENT

LEAVE A REPLY

Please enter your comment!
Please enter your name here