ರೈತನ ಮಗನಾದ ನಾನು ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದು 2004ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕವಾದೆ. ಹತ್ತು ವರ್ಷಗಳ ನಂತರ 2014ರಿಂದ ದೆಹಲಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕವಾದೆ. ಇಷ್ಟೆಲ್ಲಾ ಸಾಧ್ಯವಾಗಿದ್ದು ಸಂವಿಧಾನದಿಂದ ಮಾತ್ರ ಎಂದು ಜಸ್ಟಿಸ್ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಹಿಂದುತ್ವವಾದಿಗಳ ಗುಂಡೇಟಿಗೆ ಹುತಾತ್ಮರಾದ ಗೌರಿ ಲಂಕೇಶ್, ಎಂ.ಎಂ ಕಲಬುರ್ಗಿ, ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಬೋಲ್ಕರ್ ನೆನಪಿನಲ್ಲಿ ಗೌರಿ ಸ್ಮಾರಕ ಟ್ರಸ್ಟ್ ಮತ್ತು ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಸಂಸ್ಥೆಗಳ ಸಹಯೋಗದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳ ಮುಂದಿರುವ ಸವಾಲುಗಳು’ ವಿಷಯದ ಕುರಿತ ವೆಬಿನಾರ್ ಸರಣಿಯಲ್ಲಿ ಅವರು ಮಾತನಾಡಿದರು.
ಇಂದು ಸ್ವಾತಂತ್ರ್ಯ ದಿನಾಚರಣೆ. ನಮ್ಮ ಸ್ವಾತಂತ್ರ್ಯಕ್ಕಾಗಿ ಹಲವು ದಶಕಗಳ ಕಾಲ ಜನ ಹೋರಾಡಿ ಪ್ರಾಣ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನಗಳನ್ನು ಮರೆಯಬಾರದು. ಅಂಬೇಡ್ಕರ್ ಹೇಳಿದಂತೆ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬುದನ್ನು ನೆನೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಭಾರತದ ಸ್ವಾತಂತ್ರ್ಯ ಹೋರಾಟ ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ಅದು ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದ ಹೋರಾಟವೂ ಆಗಿತ್ತು. ಉಳುವವನಿಗೆ ಭೂಮಿ, ದುಡಿಯುವವರಿಗೆ ನ್ಯಾಯಯುತ ಕೂಲಿ ಸಿಗಬೇಕು. ಸತಿ ಪದ್ದಿತಿ, ಬಾಲ್ಯವಿವಾಹ ಪದ್ದತಿ ನಿರ್ಮೂಲನೆಯಾಗಬೇಕು ಎಂಬ ಹಕ್ಕೊತ್ತಾಯಗಳು ಅದರೊಡನಿದ್ದವು ಎಂದರು.
ಇಂದು ದೇಶದಲ್ಲಿ ಕೇವಲ ರಾಜಕೀಯ ಪ್ರಜಾಪ್ರಭುತ್ವದ ಬಗ್ಗೆ, ಚುನಾವಣೆಗಳ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಬಗ್ಗೆ ನಾವು ಮಾತನಾಡಲಿಲ್ಲ, ಅವನ್ನು ರಾಜಕೀಯ ಪ್ರಜಾಪ್ರಭುತ್ವದೊಂದಿಗೆ ಸಮೀಕರಿಸಲಿಲ್ಲ. ಆದ್ದರಿಂದ ಚುನಾವಣೆ ಎಂದರೆ ಭಾವನಾತ್ಮಕ ವಿಚಾರಗಳು ಚರ್ಚೆಗೆ ಬರುತ್ತವೆಯೇ ಹೊರತು ಬದುಕಿನ ಬಗ್ಗೆ ಚರ್ಚೆಗಳಾಗುವುದಿಲ್ಲ. ನಿರುದ್ಯೋಗ, ಕೈಗಾರಿಕಾ ಬಿಕ್ಕಟ್ಟು, ಕೃಷಿ ಬಿಕ್ಕಟ್ಟನ ಕುರಿತು ಚರ್ಚೆಯಾಗುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಧರ್ಮ, ಭಾಷೆ, ನಮ್ಮ ಮೂಲ ಯಾವುದು, ಮಂದಿರ, ಮಸೀದಿಯ ಬಗ್ಗೆ ಭಾವನಾತ್ಮಕ ವಿಚಾರದಲ್ಲಿಯೇ ಮುಳುಗಿ ಹೋಗಿದ್ದೇವೆ. ಮಹಿಳೆಯರು, ದಲಿತರ ಮೇಲೆ ದೌರ್ಜನ್ಯ ದಾಳಿ ನಡೆಯುತ್ತಿದ್ದರೂ ಅದನ್ನು ಚುನಾವಣೆ ಸಂದರ್ಭದಲ್ಲಿ ಚರ್ಚೆಗೆ ಬರುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಹಣ, ಜಾತಿ ಮತ್ತು ಧರ್ಮದ ಪ್ರಭಾವ ತಾಂಡವವಾಡುತ್ತಿವೆ. ಶೇ.88 ರಷ್ಟು ಚುನಾಯಿತ ಸಂಸತ್ ಸದಸ್ಯರು ಕೋಟ್ಯಾಧೀಶ್ವರರಾಗಿದ್ದಾರೆ. ಶೇ.43 ರಷ್ಟು ಜನರ ಮೇಲೆ ಕ್ರಿಮಿನಲ್ ಕೇಸುಗಳಿವೆ. 54% ವಂಶಪಾರಂಪರ್ಯ ರಾಜಕೀಯ ಮಾಡುತ್ತಿದ್ದಾರೆ. ಅವರಲ್ಲಿ ಬಹುತೇಕರು ರಿಯಲ್ ಎಸ್ಟೇಟ್, ಕೈಗಾರಿಕೆ ಹಿನ್ನೆಲೆಯವರು. ಹಾಗಾದರೆ ರೈತರನ್ನು, ಕಾರ್ಮಿಕರನ್ನು ಪ್ರತಿನಿಧಿಸುವವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಬಂದ ನಂತರ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಯಿಂದ ಅತಿ ಹೆಚ್ಚು ಉತ್ಪಾದಿಸಿದ್ದೇವೆ. ಭಾರತ ಇಂದು ಎಂದಿಗಿಂತಲೂ ಅತಿ ಹೆಚ್ಚು ಶ್ರೀಮಂತ ರಾಷ್ಟ್ರವಾಗಿದೆ. ಆದರೆ ಶೇ.60 ರಷ್ಟು ಸಂಪತ್ತು ಕೇವಲ ಶೇ.1 ರಷ್ಟು ಜನರ ಕೈಯಲ್ಲಿದೆ. ಶೇ.20 ರಷ್ಟು ಸಂಪತ್ತು ಶೇ.9 ರಷ್ಟು ಜನರ ಕೈನಲ್ಲಿದೆ. ಉಳಿದ ಶೇ.20 ರಷ್ಟು ಸಂಪತ್ತು ಶೇ.90 ಜನರ ಕೈನಲ್ಲಿದೆ. ಈ ಅಸಮಾನ ಭಾರತವನ್ನು ಕಟ್ಟಿದ್ದೇವೆ. ಸಂಪತ್ತಿದ್ದರೂ ಬಡತನ, ನಿರುದ್ಯೋಗ, ಅನಾರೋಗ್ಯ, ಅನಕ್ಷರತೆ ಇದೆ. ನಾವು ಈ ಅಸಮಾನತೆಯನ್ನು ಮುಂದುವರೆಸಿಕೊಂಡು ಪ್ರಜಾಪ್ರಭುತ್ವವನ್ನು ಕಾಣಲು ಸಾಧ್ಯವಿಲ್ಲ. ಹಾಗಾಗಿ ರಾಜಕೀಯ ಸ್ವಾತಂತ್ರ್ಯದೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಿದೆ ಎಂದರು.
ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಬಲಹೀನಗೊಳಿಸಲಾಗುತ್ತಿದೆ. ಚುನಾವಣಾ ಆಯೋಗ, ಸಿಬಿಐ, ವಿಚರಣಾ ತನಿಖಾ ಸಂಸ್ಥೆಗಳು, ಆರ್‌ಬಿಐ, ಆದಾಯ ತೆರಿಗೆ ಇಲಾಖೆ ಎಲ್ಲವನ್ನು ದುರ್ಬಲಗೊಳಿಸಿ ತಮ್ಮ ಮೂಗಿನ ನೇರಕ್ಕೆ ಕುಣಿಸಲಾಗುತ್ತಿದೆ. ಕಳೆದ ಸಂಸತ್ ಅಧಿವೇಶನದಲ್ಲಿ ಒಂದೇ ಒಂದು ಮಸೂದೆಯನ್ನು ಸರಿಯಾಗಿ ಚರ್ಚೆ ನಡೆಸಲಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಒಬಿಸಿ ಬಿಲ್ ಮಾತ್ರ ಪಾಸು ಮಾಡಿದರು. ಆದರೆ ಕೊರೊನಾದ ಕುರಿತಾಗಿ, ಅಸಂಘಟಿತ ಕಾರ್ಮಿಕರ ಕುರಿತಾಗಿ, 18-20 ಕೋಟಿ ಯುವಜನರು ನಿರುದ್ಯೋಗಿಗಳಾಗಿದ್ದಾರೆ ಇದರ ಬಗ್ಗೆ ಚರ್ಚೆ ನಡೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ 72 ವರ್ಷಗಳಲ್ಲಿ ಭೂ ಸುಧಾರಣೆ, ಆರೋಗ್ಯ ಸುಧಾರಣೆ, ಕೈಗಾರಿಕೆ ಸುಧಾರಣೆ ಕಂಡೆವು. ಇದರಿಂದ ಜನಜೀವನ ಸ್ವಲ್ಪ ಉತ್ತಮವಾಗಿತ್ತು. ಆದರೆ ಇವತ್ತು ಅಪ್ರಜಾತಾಂತ್ರಿಕ ಸುಧಾರಣೆಗಳ ಪರ್ವ ಶುರುವಾಗಿದೆ. ರೈತರು ಬಿಕ್ಕಟ್ಟಿನಲ್ಲಿದ್ದಾರೆ. ಆತ್ಮಹತ್ಯೆಗಳತ್ತ ಮುಖಮಾಡಿ ಪರಿಹಾರ ಬಯಸುತ್ತಿದ್ದರೆ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿತು. ವಿದ್ಯುತ್ ಮಸೂದೆ ತಂದಿದೆ. ಎಪಿಎಂಸಿ ಕಾಯ್ದೆ ರದ್ದುಪಡಿಸಿದೆ. ರೈತರನ್ನು ಗುಲಾಮರನ್ನಾಗಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡುವುದು ಸಂವಿಧಾನದ ಆಶಯ. ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸಬೇಕು. ಸರ್ಕಾರಕ್ಕೆ ಯಾವುದೇ ಧರ್ಮವಿರಬಾರದು. ಆದರೆ ಇವತ್ತು ನಮ್ಮ ದುರಾದೃಷ್ಟ ಮಠಾಧೀಶರು, ಧಾರ್ಮಿಕ ಮುಖಂಡರು ಸಕ್ರಿಯ ರಾಜಕೀಯಕ್ಕೆ ಇಳಿಯುತ್ತಿದ್ದಾರೆ. ಕರ್ನಾಟಕದಲ್ಲಿ ಮೀಸಲಾತಿ ವಿಚಾರ ಒಂದು ರಾಜಕೀಯ ನಿರ್ಣಯವಾಗಬೇಕು. ಆದರೆ ಅದು ಸ್ವಾಮೀಜಿಗಳು ಮತ್ತು ಮಠಾಧೀಶರ ಹೋರಾಟವಾಗಿ ನಿಂತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಲಿತರು, ಮಹಿಳೆಯರು, ಬುಡಕಟ್ಟು ಜನಾಂಗ, ಅಲ್ಪಸಂಖ್ಯಾತ ಜನ ಇಂದು ಎಲ್ಲಾ ವಿಭಾಗಗಳಿಗೆ ಪ್ರವೇಶ ಪಡೆಯಬೇಕಾಗಿದೆ. ಅವರು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಕ್ಷೇತ್ರಗಳಿಗೆ ಪ್ರವೇಶ ಮಾಡುವ ಮೂಲಕ ಒಂದಷ್ಟು ಘನತೆ ಮತ್ತು ಸ್ವಾಭಿಮಾನವನ್ನು ತಂದುಕೊಡಲು ಸಾಧ್ಯವಾಗಿದೆ. ಆದರೆ ಸಾಮಾಜಿಕ ನ್ಯಾಯ ಎಂಬುದು ಅಪ್ರಸ್ತುತಗೊಳಿಸುತ್ತಿದ್ದೇವೆ. ಇಂದು ಕೇಂದ್ರ ಸರ್ಕಾರದಲ್ಲಿ 62 ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ. ಇದನ್ನು ತುಂಬುತ್ತಿಲ್ಲ. ಈ ಸವಾಲುಗಳನ್ನು ಹಿಮ್ಮೆಟ್ಟಿಸಬೇಕು. ಈ ಎಲ್ಲಾ ಬಿಕ್ಕಟ್ಟಿಗೆ ಪರಿಹಾರ ಸಂವಿಧಾನ ಮಾರ್ಗವಾಗಿದೆ. ಅದನ್ನು ಓದಿ, ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಈ ದೇಶವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ವೆಬಿನಾರ್‌ನಲ್ಲಿ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಸಂಸ್ಥೆಯ ತೀಸ್ತಾ ಸೆಟ್ಲವಾದ್, ಚಿಂತಕರಾದ ಪ್ರೊ.ವಿ.ಎಸ್ ಶ್ರೀಧರ್, ನಗರಗೆರೆ ರಮೇಶ್ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: ರೈತ ಹೋರಾಟ: ದೆಹಲಿಯ ಗಡಿಗಳಲ್ಲಿ ರೈತರ ತಿರಂಗಾ ಯಾತ್ರೆ



ಜಸ್ಟಿಸ್ ನಾಗಮೋಹನದಾಸ್ ಅನುಭವ ಮತ್ತು ಅನಿಸಿಕೆ ನಮ್ಮೆಲ್ಲರದೂ ಆಗಿದೆ. ನೆಹರು, ಶಾಸ್ತ್ರಿ ಅಧಿಕಾರದಲ್ಲಿ ಇದ್ದಾಗ ನಾವು ತುಂಬಾ ಚಿಕ್ಕವರು. ಇಂದಿರಾ ಬಂದಾಗ ನಾವು ಬ್ಯಾಂಕ್ ರಾಷ್ಟ್ರೀಕರಣ, , ಸರ್ಕಾರಿ ಸೇವೆಯಲ್ಲಿ ರಿಸರ್ವೇಸನ್, ಮತ್ತು ಭೂಮಿ ಪಡೆಯಲು ಅವಕಾಶ ಆಯ್ತು. ಭಾರತೀಯ ಸಂದರ್ಭದಲ್ಲಿ ಅದೊಂದು ರೆಸಲ್ಯೂಶನ್ ಕಂಡ ಯುಗ! ಅವುಗಳಿಲ್ಲದಿದ್ದಲ್ಲಿ ನಾವು ಆತ್ಮ ಗೌರವದಿಂದ ಬಾಳುವುದು ಕನಸಿನ ಮಾತಾಗಿತ್ತು.
ನನ್ನಂಥಹ ವಿಚಾರವಂತರನ್ನು ಕಾಡುತ್ತಿರುವ ಅನೇಕ ವಿಚಾರಗಳ ಬಗ್ಗೆ ಜಸ್ಟಿಸ್ ನಾಗಮೋಹನದಾಸ್ ಮನಬಿಚ್ಚಿ ಮಾತಾಡಿದ್ದಾರೆ. ಸತ್ಯವನ್ನು ಹೇಳಲು ಜನ ಹಿಂಜರಿಯುತ್ತಿರುವ ಈ ಸಂಧರ್ಭದಲ್ಲಿ ದಾಸ್ ಅವರು ದೇಶ ಅದಪಾತಾಳಕ್ಕೆ ತಲುಪಿರುವ ಬಗ್ಗೆ ಸವಿಸ್ತಾರವಾಗಿ ತಮ್ಮ ನೋವನ್ನು ಹೊರಹಕಿದ್ದಾರೆ. ಮಾನ್ಯರ ಈ ಮಾತುಗಳು ಹೆಚ್ಚು ಜನಕ್ಕೆ ತಲುಪಬೇಕಾಗಿದೆ. Hats off to you Sir.