Homeಅಂಕಣಗಳುಕಳೆದುಹೋದ ದಿನಗಳುಕಳೆದುಹೋದ ದಿನಗಳು -1: ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು

ಕಳೆದುಹೋದ ದಿನಗಳು -1: ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು

- Advertisement -
- Advertisement -

1930 ರ ದಶಕ ಬ್ರಿಟಿಷರ ಆಳ್ವಿಕೆ. ಕೊಡಗು ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಮಡಿಕೇರಿಯ ಕೋಟೆ ಹೆಬ್ಬಾಗಿಲ ಬಳಿ ಈಗ ಇರುವ ಕಾಸ್ಮೋಪಾಲಿಟನ್ ಕ್ಲಬ್ ನ ಕಟ್ಟಡ ಅಂದಿನ ಜಿಲ್ಲಾ ಕಲೆಕ್ಟರ್‌ರ ನಿವಾಸ. ಅದು ಈಗ ಇರುವಂತಹ ವಿದ್ಯುತ್, ಗ್ಯಾಸ್, ಸೀಮೆಎಣ್ಣೆ ಸ್ಟವ್ ಮುಂತಾದ ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದ ಕಾಲ. ಮಡಿಕೇರಿ ಪೇಟೆಯಲ್ಲಿ ಒಲೆ ಉರಿಯಬೇಕಾದರೆ ಹಳ್ಳಿಯಿಂದ ಸೌದೆ ಬರಬೇಕು.

ಪ್ರತಿದಿನ ಮದ್ಯಾಹ್ನ ಮೂರುಗಂಟೆಯ ವೇಳೆಗೆ ಸೌದೆ ತುಂಬಿದ ಎತ್ತಿನ ಗಾಡಿಗಳು ಟೋಲ್ ಗೇಟ್ (ಇಂದಿನ ಜನರಲ್ ತಿಮ್ಮಯ್ಯ ಸರ್ಕಲ್) ನಲ್ಲಿ ಸುಂಕ ಕಟ್ಟಿ ಊರೊಳಗೆ ಬರಬೇಕು.

ಅಲ್ಲಿಂದ ಮುಂದೆ ಬಂದು ಕೋಟೆ ಬಾಗಿಲು ದಾಟಿದ ಕೂಡಲೇ ರಸ್ತೆ ಕಡಿದಾದ ಇಳಿಜಾರು. ಸೌದೆ ತುಂಬಿದ ಎತ್ತಿನಗಾಡಿಗಳು ಬಿರಿ (ಎತ್ತಿನ ಗಾಡಿಗಳ ದೇಸೀ ಬ್ರೇಕ್) ಹಾಕಿಯೇ ಮುಂದೆ ಸಾಗಬೇಕು. ಎತ್ತಿನ ಗಾಡಿಗೆ ಬಿರಿ ಹಾಕಿದರೆ ಆಗುವ ಕಿರ್ರೋಂ….. ಎನ್ನುವ ಸದ್ದು ಮೈಲು ದೂರಕ್ಕೂ ಕೇಳುತ್ತದೆ.

ಕೋಟೆ ಬಾಗಿಲ ಮುಂದಿದ್ದ ಜಿಲ್ಲಾ ಕಲೆಕ್ಟರ್ ಮನೆಯಲ್ಲಿ ಕಲೆಕ್ಟರ್‌ರ ಪತ್ನಿ‌ಗೆ ಅದು ಮದ್ಯಾಹ್ನದ ನಿದ್ದೆಯ ಸಮಯ. ಈ ಎತ್ತಿನ ಗಾಡಿಗಳ ಬಿರಿಗಳ ಸದ್ದಿನಿಂದ ಆಕೆಯ ಮಧ್ಯಾಹ್ನದ ನಿದ್ದೆಗೆ ಬಾಧೆ ಬಂತು. ಆಕೆ ಗಂಡನಲ್ಲಿ ದೂರಿರಬಹುದು.

ಮಡಿಕೇರಿಯ ಕಾಸ್ಮೋಪಾಲಿಟನ್ ಕ್ಲಬ್ ನ ಕಟ್ಟಡ

ಸೌದೆ ತುಂಬಿದ ಎತ್ತಿನಗಾಡಿಗಳು ಟೋಲ್ ಗೇಟ್ ನಿಂದ ಮುಂದೆ ಊರೊಳಕ್ಕೆ ಬರಬಾರದು, ಎಂದು ಕಲೆಕ್ಟರ್ ಸಾಹೇಬರು ಫರ್ಮಾನು ಹೊರಡಿಸಿದರು. ಗಾಡಿಗಳು ಊರೊಳಗೆ ಬರುವುದು ನಿಂತುಹೋಯಿತು.

ಶ್ರೀಮಂತರು ಕೈಗಾಡಿಗಳ ಮೂಲಕ ಅಲ್ಲಿಂದಲೇ ಸೌದೆಯನ್ನು ತರಿಸಿಕೊಂಡರು. ಆದರೆ ಬಡವರ ಮನೆಯಲ್ಲಿ ಒಲೆ ಉರಿಯುವುದು ಕಷ್ಟವಾಯಿತು. ಹಾಗೇ ಎತ್ತಿನ ಗಾಡಿಗಳಲ್ಲಿ ಹಳ್ಳಿಯಿಂದ ಸೌದೆ ತಂದು ಮಾರಿ ಅದರಿಂದ ನಿತ್ಯದ ಅನ್ನ ಕಾಣುತ್ತಿದ್ದವರಿಗೂ ಸಮಸ್ಯೆಯಾಯಿತು.

ಆ ಸಮಯದಲ್ಲಿ ಮಂಗಳೂರಿನಿಂದ “ದೀನ ಬಂಧು” ಎನ್ನುವ ಪತ್ರಿಕೆಯೊಂದು ಪ್ರಕಟವಾಗುತ್ತಿತ್ತು. ಕೆಲವೇ ದಿನಗಳಲ್ಲಿ ಆ ಪತ್ರಿಕೆಯಲ್ಲಿ “ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು” ಎಂಬ ಲೇಖನ ಪ್ರಕಟವಾಯಿತು.

ಒಂದೆರಡು ದಿನಗಳಲ್ಲಿಯೇ ಬ್ರಿಟಿಷ್ ಅಧಿಕಾರಿಯ ವಿರುದ್ಧ ಬರೆಯುವ ದುಸ್ಸಾಹಸ ಮಾಡಿದ  ವ್ಯಕ್ತಿಯನ್ನು ಬಂಧಿಸಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಆ ಲೇಖನ ಬರೆದವನು ಒಂಬತ್ತನೇ ತರಗತಿ ಓದುತ್ತಿರುವ ಒಬ್ಬ ಶಾಲಾ ಬಾಲಕ ಎಂದು ಗೊತ್ತಾಗಿ ನ್ಯಾಯಾಲಯದಲ್ಲಿ ಜನ ಸೇರಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಕೂಡಾ ಅಲ್ಲಿ ಜಮಾಯಿಸಿದರು.

ಆ  ಲೇಖನವನ್ನು ಬರೆದ ಶಾಲಾ ಬಾಲಕ ಎನ್.ಕೆ ಗಣಪಯ್ಯ.

ಆಗ ಜಿಲ್ಲಾ ನ್ಯಾಯಾಧೀಶರಾಗಿದ್ದವರು ಕೊಡಗಿನವರೇ ಆದ ಬೋಪಯ್ಯ ಎಂಬವರು. ಅವರಿಗೆ ಪರಿಸ್ಥಿತಿ ಅರಿವಾಯಿತು

ಅವರು ಬಾಲಕ ಗಣಪಯ್ಯನಿಗೆ ಇನ್ನು ಮುಂದೆ ಹೀಗೆ ಮಾಡಿದರೆ ಶಿಕ್ಷೆ ವಿಧಿಸುತ್ತೇನೆ. ಎಂದು ಎಚ್ಚರಿಸಿ ಬಿಟ್ಟು ಬಿಟ್ಟರಂತೆ.

ಬಹುಶಃ ಕಲೆಕ್ಟರ್ ಸಾಹೇಬರಿಗೂ ತಮ್ಮ ತಪ್ಪು ಅರಿವಾಯಿತೋ ಅಥವಾ ಯಾರಾದರೂ ತಿಳಿಹೇಳಿದರೋ ಗಾಡಿಗಳು ಊರೊಳಗೆ ಬರಬಹುದೆಂದು ಅಪ್ಪಣೆಯಾಯಿತು.

ಈ ವಿಚಾರವನ್ನು ನನಗೆ ತಿಳಿಸಿದವರು ಸಿ.ಎಂ. ಪೂಣಚ್ಚನವರು. ಮೇಲಿನ ಘಟನೆ ನಡೆದಾಗ ಅವರು ಅದೇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ.

“ನಾವೆಲ್ಲ ಆಶ್ಚರ್ಯ, ಕುತೂಹಲಗಳಿಂದ ಗಣಪಯ್ಯನವರನ್ನು ನೋಡುತ್ತಿದ್ದೆವು. ನಮ್ಮಂತವರ ಕಣ್ಣಿನಲ್ಲಿ ಅವರೊಬ್ಬ ಹೀರೋ… ಮುಂದೆ ಅವರನ್ನು ನನ್ನ ಗುರುಗಳೆಂದೇ ಪರಿಗಣಿಸಿದೆ ಎಂದರು ಪೂಣಚ್ಚ. ಆ ಘಟನೆಯ ನಂತರ ಗಣಪಯ್ಯನವರನ್ನು ಸಹಪಾಠಿಗಳು ಮತ್ತು ಕೆಲವರು ಪರಿಚಿತರು “ದೀನಬಂಧು ಗಣಪಯ್ಯ” ಎನ್ನುತ್ತಿದ್ದರಂತೆ!

ಕೊಡಗಿನ ವಿರಾಜಪೇಟೆ ತಾಲ್ಲೂಕು ನರಿಯಂದಡ ಗ್ರಾಮದ ಕೃಷ್ಣಯ್ಯನವರ ಮಗ   ಗಣಪಯ್ಯನವರದ್ದು ಕಷ್ಟದ ಬದುಕು. ಮನೆಯಲ್ಲಿ ಬಡತನ, ಪ್ರೌಢಶಾಲೆ ತಲಪಿದ್ದೇ ದೊಡ್ಡದು. ಅಲ್ಲಿಗೇ ವಿದ್ಯೆ ಮೊಟಕಾಯಿತು, ಜೀವನ ನಿರ್ವಹಣೆಗೆ ಹಲವು ಸಣ್ಣ ಪುಟ್ಟ ಚಾಕರಿಗಳನ್ನು ಮಾಡಿದರು.

ಬಾಲ್ಯದಿಂದ ಬಂದ ಕೃಷಿ ಅನುಭವವಿತ್ತು. ನಂತರದ ದಿನಗಳಲ್ಲಿ ಸಣ್ಣ ಪ್ರಾಯದಲ್ಲೇ ಕೊಡಗಿನ ಸಾಕಮ್ಮನವರ ಕಾಫಿತೋಟದಲ್ಲಿ ಕೆಲಸಕ್ಕೆ ಸೇರಿದರು.

(ಮುಂದುವರೆಯುತ್ತದೆ…)

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಸಂವಿಧಾನದಿಂದ ಮಾತ್ರ ರೈತನ ಮಗನಾದ ನಾನು ಸುಪ್ರೀಂ ಕೋರ್ಟ್‌ವರೆಗೂ ತಲುಪಲು ಸಾಧ್ಯವಾಯಿತು: ಜಸ್ಟಿಸ್ ನಾಗಮೋಹನ್ ದಾಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚೆನ್ನಾಗಿದೆ. ಪ್ರಸಾದರೆ. ಕೆಲವೊಂದನ್ನು ಓದಿದ್ದೆ. ಇನ್ನು ಮುಂದೆ ಎಲ್ಲವನ್ನೂ ಓದಬಹುದು. ಶುಭಾಶಯಗಳು.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...