Homeಅಂಕಣಗಳುಕಳೆದುಹೋದ ದಿನಗಳುಕಳೆದುಹೋದ ದಿನಗಳು -1: ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು

ಕಳೆದುಹೋದ ದಿನಗಳು -1: ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು

- Advertisement -
- Advertisement -

1930 ರ ದಶಕ ಬ್ರಿಟಿಷರ ಆಳ್ವಿಕೆ. ಕೊಡಗು ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಮಡಿಕೇರಿಯ ಕೋಟೆ ಹೆಬ್ಬಾಗಿಲ ಬಳಿ ಈಗ ಇರುವ ಕಾಸ್ಮೋಪಾಲಿಟನ್ ಕ್ಲಬ್ ನ ಕಟ್ಟಡ ಅಂದಿನ ಜಿಲ್ಲಾ ಕಲೆಕ್ಟರ್‌ರ ನಿವಾಸ. ಅದು ಈಗ ಇರುವಂತಹ ವಿದ್ಯುತ್, ಗ್ಯಾಸ್, ಸೀಮೆಎಣ್ಣೆ ಸ್ಟವ್ ಮುಂತಾದ ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದ ಕಾಲ. ಮಡಿಕೇರಿ ಪೇಟೆಯಲ್ಲಿ ಒಲೆ ಉರಿಯಬೇಕಾದರೆ ಹಳ್ಳಿಯಿಂದ ಸೌದೆ ಬರಬೇಕು.

ಪ್ರತಿದಿನ ಮದ್ಯಾಹ್ನ ಮೂರುಗಂಟೆಯ ವೇಳೆಗೆ ಸೌದೆ ತುಂಬಿದ ಎತ್ತಿನ ಗಾಡಿಗಳು ಟೋಲ್ ಗೇಟ್ (ಇಂದಿನ ಜನರಲ್ ತಿಮ್ಮಯ್ಯ ಸರ್ಕಲ್) ನಲ್ಲಿ ಸುಂಕ ಕಟ್ಟಿ ಊರೊಳಗೆ ಬರಬೇಕು.

ಅಲ್ಲಿಂದ ಮುಂದೆ ಬಂದು ಕೋಟೆ ಬಾಗಿಲು ದಾಟಿದ ಕೂಡಲೇ ರಸ್ತೆ ಕಡಿದಾದ ಇಳಿಜಾರು. ಸೌದೆ ತುಂಬಿದ ಎತ್ತಿನಗಾಡಿಗಳು ಬಿರಿ (ಎತ್ತಿನ ಗಾಡಿಗಳ ದೇಸೀ ಬ್ರೇಕ್) ಹಾಕಿಯೇ ಮುಂದೆ ಸಾಗಬೇಕು. ಎತ್ತಿನ ಗಾಡಿಗೆ ಬಿರಿ ಹಾಕಿದರೆ ಆಗುವ ಕಿರ್ರೋಂ….. ಎನ್ನುವ ಸದ್ದು ಮೈಲು ದೂರಕ್ಕೂ ಕೇಳುತ್ತದೆ.

ಕೋಟೆ ಬಾಗಿಲ ಮುಂದಿದ್ದ ಜಿಲ್ಲಾ ಕಲೆಕ್ಟರ್ ಮನೆಯಲ್ಲಿ ಕಲೆಕ್ಟರ್‌ರ ಪತ್ನಿ‌ಗೆ ಅದು ಮದ್ಯಾಹ್ನದ ನಿದ್ದೆಯ ಸಮಯ. ಈ ಎತ್ತಿನ ಗಾಡಿಗಳ ಬಿರಿಗಳ ಸದ್ದಿನಿಂದ ಆಕೆಯ ಮಧ್ಯಾಹ್ನದ ನಿದ್ದೆಗೆ ಬಾಧೆ ಬಂತು. ಆಕೆ ಗಂಡನಲ್ಲಿ ದೂರಿರಬಹುದು.

ಮಡಿಕೇರಿಯ ಕಾಸ್ಮೋಪಾಲಿಟನ್ ಕ್ಲಬ್ ನ ಕಟ್ಟಡ

ಸೌದೆ ತುಂಬಿದ ಎತ್ತಿನಗಾಡಿಗಳು ಟೋಲ್ ಗೇಟ್ ನಿಂದ ಮುಂದೆ ಊರೊಳಕ್ಕೆ ಬರಬಾರದು, ಎಂದು ಕಲೆಕ್ಟರ್ ಸಾಹೇಬರು ಫರ್ಮಾನು ಹೊರಡಿಸಿದರು. ಗಾಡಿಗಳು ಊರೊಳಗೆ ಬರುವುದು ನಿಂತುಹೋಯಿತು.

ಶ್ರೀಮಂತರು ಕೈಗಾಡಿಗಳ ಮೂಲಕ ಅಲ್ಲಿಂದಲೇ ಸೌದೆಯನ್ನು ತರಿಸಿಕೊಂಡರು. ಆದರೆ ಬಡವರ ಮನೆಯಲ್ಲಿ ಒಲೆ ಉರಿಯುವುದು ಕಷ್ಟವಾಯಿತು. ಹಾಗೇ ಎತ್ತಿನ ಗಾಡಿಗಳಲ್ಲಿ ಹಳ್ಳಿಯಿಂದ ಸೌದೆ ತಂದು ಮಾರಿ ಅದರಿಂದ ನಿತ್ಯದ ಅನ್ನ ಕಾಣುತ್ತಿದ್ದವರಿಗೂ ಸಮಸ್ಯೆಯಾಯಿತು.

ಆ ಸಮಯದಲ್ಲಿ ಮಂಗಳೂರಿನಿಂದ “ದೀನ ಬಂಧು” ಎನ್ನುವ ಪತ್ರಿಕೆಯೊಂದು ಪ್ರಕಟವಾಗುತ್ತಿತ್ತು. ಕೆಲವೇ ದಿನಗಳಲ್ಲಿ ಆ ಪತ್ರಿಕೆಯಲ್ಲಿ “ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು” ಎಂಬ ಲೇಖನ ಪ್ರಕಟವಾಯಿತು.

ಒಂದೆರಡು ದಿನಗಳಲ್ಲಿಯೇ ಬ್ರಿಟಿಷ್ ಅಧಿಕಾರಿಯ ವಿರುದ್ಧ ಬರೆಯುವ ದುಸ್ಸಾಹಸ ಮಾಡಿದ  ವ್ಯಕ್ತಿಯನ್ನು ಬಂಧಿಸಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಆ ಲೇಖನ ಬರೆದವನು ಒಂಬತ್ತನೇ ತರಗತಿ ಓದುತ್ತಿರುವ ಒಬ್ಬ ಶಾಲಾ ಬಾಲಕ ಎಂದು ಗೊತ್ತಾಗಿ ನ್ಯಾಯಾಲಯದಲ್ಲಿ ಜನ ಸೇರಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಕೂಡಾ ಅಲ್ಲಿ ಜಮಾಯಿಸಿದರು.

ಆ  ಲೇಖನವನ್ನು ಬರೆದ ಶಾಲಾ ಬಾಲಕ ಎನ್.ಕೆ ಗಣಪಯ್ಯ.

ಆಗ ಜಿಲ್ಲಾ ನ್ಯಾಯಾಧೀಶರಾಗಿದ್ದವರು ಕೊಡಗಿನವರೇ ಆದ ಬೋಪಯ್ಯ ಎಂಬವರು. ಅವರಿಗೆ ಪರಿಸ್ಥಿತಿ ಅರಿವಾಯಿತು

ಅವರು ಬಾಲಕ ಗಣಪಯ್ಯನಿಗೆ ಇನ್ನು ಮುಂದೆ ಹೀಗೆ ಮಾಡಿದರೆ ಶಿಕ್ಷೆ ವಿಧಿಸುತ್ತೇನೆ. ಎಂದು ಎಚ್ಚರಿಸಿ ಬಿಟ್ಟು ಬಿಟ್ಟರಂತೆ.

ಬಹುಶಃ ಕಲೆಕ್ಟರ್ ಸಾಹೇಬರಿಗೂ ತಮ್ಮ ತಪ್ಪು ಅರಿವಾಯಿತೋ ಅಥವಾ ಯಾರಾದರೂ ತಿಳಿಹೇಳಿದರೋ ಗಾಡಿಗಳು ಊರೊಳಗೆ ಬರಬಹುದೆಂದು ಅಪ್ಪಣೆಯಾಯಿತು.

ಈ ವಿಚಾರವನ್ನು ನನಗೆ ತಿಳಿಸಿದವರು ಸಿ.ಎಂ. ಪೂಣಚ್ಚನವರು. ಮೇಲಿನ ಘಟನೆ ನಡೆದಾಗ ಅವರು ಅದೇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ.

“ನಾವೆಲ್ಲ ಆಶ್ಚರ್ಯ, ಕುತೂಹಲಗಳಿಂದ ಗಣಪಯ್ಯನವರನ್ನು ನೋಡುತ್ತಿದ್ದೆವು. ನಮ್ಮಂತವರ ಕಣ್ಣಿನಲ್ಲಿ ಅವರೊಬ್ಬ ಹೀರೋ… ಮುಂದೆ ಅವರನ್ನು ನನ್ನ ಗುರುಗಳೆಂದೇ ಪರಿಗಣಿಸಿದೆ ಎಂದರು ಪೂಣಚ್ಚ. ಆ ಘಟನೆಯ ನಂತರ ಗಣಪಯ್ಯನವರನ್ನು ಸಹಪಾಠಿಗಳು ಮತ್ತು ಕೆಲವರು ಪರಿಚಿತರು “ದೀನಬಂಧು ಗಣಪಯ್ಯ” ಎನ್ನುತ್ತಿದ್ದರಂತೆ!

ಕೊಡಗಿನ ವಿರಾಜಪೇಟೆ ತಾಲ್ಲೂಕು ನರಿಯಂದಡ ಗ್ರಾಮದ ಕೃಷ್ಣಯ್ಯನವರ ಮಗ   ಗಣಪಯ್ಯನವರದ್ದು ಕಷ್ಟದ ಬದುಕು. ಮನೆಯಲ್ಲಿ ಬಡತನ, ಪ್ರೌಢಶಾಲೆ ತಲಪಿದ್ದೇ ದೊಡ್ಡದು. ಅಲ್ಲಿಗೇ ವಿದ್ಯೆ ಮೊಟಕಾಯಿತು, ಜೀವನ ನಿರ್ವಹಣೆಗೆ ಹಲವು ಸಣ್ಣ ಪುಟ್ಟ ಚಾಕರಿಗಳನ್ನು ಮಾಡಿದರು.

ಬಾಲ್ಯದಿಂದ ಬಂದ ಕೃಷಿ ಅನುಭವವಿತ್ತು. ನಂತರದ ದಿನಗಳಲ್ಲಿ ಸಣ್ಣ ಪ್ರಾಯದಲ್ಲೇ ಕೊಡಗಿನ ಸಾಕಮ್ಮನವರ ಕಾಫಿತೋಟದಲ್ಲಿ ಕೆಲಸಕ್ಕೆ ಸೇರಿದರು.

(ಮುಂದುವರೆಯುತ್ತದೆ…)

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಸಂವಿಧಾನದಿಂದ ಮಾತ್ರ ರೈತನ ಮಗನಾದ ನಾನು ಸುಪ್ರೀಂ ಕೋರ್ಟ್‌ವರೆಗೂ ತಲುಪಲು ಸಾಧ್ಯವಾಯಿತು: ಜಸ್ಟಿಸ್ ನಾಗಮೋಹನ್ ದಾಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಚೆನ್ನಾಗಿದೆ. ಪ್ರಸಾದರೆ. ಕೆಲವೊಂದನ್ನು ಓದಿದ್ದೆ. ಇನ್ನು ಮುಂದೆ ಎಲ್ಲವನ್ನೂ ಓದಬಹುದು. ಶುಭಾಶಯಗಳು.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...