ಕುಂದಾಪುರದ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಇಬ್ಬರು ಹೆಣ್ಣು ಮಕ್ಕಳು ರಾಷ್ಟ್ರ ಮಟ್ಟದ ವಿಜ್ಞಾನ ಪ್ರಶಸ್ತಿ ಪಡೆದು ಅಸಾಧಾರಾಣ ಪ್ರತಿಭಾವಂತರೆಂಬ ಪ್ರಶಂಸಗೆ ಪಾತ್ರರಾಗಿದ್ದಾರೆ!
10ನೇ ತರಗತಿಯ ವಿದ್ಯಾರ್ಥಿನಿಯರಾದ ರಕ್ಷಿತಾ ನಾಯ್ಕ್ ಮತ್ತು ಅನುಷಾ ನಾಯ್ಕ್ ರವರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ನಡೆಸುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೌನ್ಸಿಲ್ [ಸಿಎಸ್‌ಐಆರ್] ರಾಷ್ಟ್ರೀಯ ನೂತನ ವಿಜ್ಞಾನ ಆವಿಷ್ಕಾರ ಸ್ಪರ್ಧೆಯ-ಅನ್ವೇ಼ಷಣಾ ಪ್ರಶಸ್ತಿ 2021 ಸಿಕ್ಕಿದೆ.
ಈ ಹುಡುಗಿಯರು ಸಂಶೋಧಿಸಿದ ಹೊಸ ವಿಜ್ಞಾನ ಆವಿಷ್ಕಾರ- ಗ್ಯಾಸ್ ಉಳಿತಾಯದ ಕಿಟ್ [ಜಿಎಸ್‌ಕೆ]ಗೆ ದೇಶದಲ್ಲಿ ನಾಲ್ಕನೇ ಸ್ಥಾನ ಬಂದಿದೆ. ಅನುಷಾ ಮತ್ತು ರಕ್ಷಿತಾ ಇಬ್ಬರೂ ಕಾಡಲ್ಲಿ ನೆಲೆ ಕಂಡುಕೊಂಡಿರುವ ತೀರಾ ಹಿಂದುಳಿದ ಕುಡುಬಿ ಸಮುದಯದ ಬಾಲಕಿಯರು. ಇವರು ವಾಸಿಸುವ ಹಳ್ಳಿ ಮಡಾಮಕ್ಕಿಯೂ ಹಿಂದುಳಿದ ಗ್ರಾಮೀಣ ಪ್ರದೇಶ. ಪಾಲಕರು ಕೂಲಿ ಕಾರ್ಮಿಕರು.
ಮಡಾಮಕ್ಕಿ ಗ್ರಾಮದ ಮಾರಾಡಿ ಮಾರ್ಕೈನ ಅನುಷಾ ತಂದೆ ಅಣ್ಣಯ್ಯ ನಾಯ್ಕ್, ತಾಯಿ ಪಾರ್ವತಿ ಗಾರೆ ಕೆಲಸ ಮಾಡಿ ಸಂಸಾರ ನಡೆಸಿಕೊಂಡಿದ್ದಾರೆ. ಮಡಾಮಕ್ಕಿಯ ಬಡಾ ಬೆಪ್ಪ ನಿವಾಸಿ ರಕ್ಷಿತಾ ತಂದೆ ರವಿ ನಾಯ್ಕ್- ತಾಯಿ ಜಲಜಾ ಶಾಮಿಯಾನ ಹಾಕುವುದು, ಗಾರೆ ಕೆಲಸಕ್ಕೆ ಹೋಗುತ್ತಾರೆ. ತಳ ಸಮುದಾಯದ ಈ ಮಕ್ಕಳು ರಾಷ್ಟ್ರ ಪ್ರಶಸ್ತಿ ತಂದಿರುವುದು ಪ್ರತಿಭಾವಂತಿಕೆ-ಹೆಮ್ಮೆಯ ಸಂಗತಿಯೆಂದು ಎಲ್ಲೆಡೆಯಿಂದ ಪ್ರಶಂಸೆ ಬರುತ್ತಿದೆ.
ಶಿಕ್ಷಣ ಇಲಾಖೆಯ ಆಯುಕ್ತರು ಅನುಷಾ ಮತ್ತು ರಕ್ಷತಾರಿಗೆ ತಲಾ 10 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ. ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳು ವಿಧ್ಯಾರ್ಥಿನಿಯರ ಮನೆಗೆ ಹೋಗಿ ಗೌರವಿಸಿ, ಪಾಲಕರಿಗೆ ಅಬಿನಂದಿಸಿದ್ದಾರೆ. ವಿದ್ಯಾರ್ಥಿನಿಯರ ಹೈಸ್ಕೂಲಿಗೆ ತೆರಳಿ ಶಿಕ್ಷಕ ಸಮುದಾಯವನ್ನು ಅಭಿನಂದಿಸಿದ್ದಾರೆ.
ಈ ಹಳ್ಳಿಗಾಡಿನ ಬುಡಕಟ್ಟು ಸಮುದಾಯದ ಜಾಣ ಹುಡುಗಿಯರು ಪಡೆದ ಪ್ರಶಸ್ತಿ ವಿಶೇಷವೂ ಹೌದು. ಸಿಎಸ್‌ಐಆರ್ ಪ್ರಶಸ್ತಿಗೆ ಆಯ್ಕೆಯಾಗಿರುವ ದೇಶದ ಒಟ್ಟು 14 ಶಾಲೆಗಳ ಸ್ಪರ್ಧಿಗಳಲ್ಲಿ ಸರಕಾರಿ ಶಾಲೆಯಿಂದ ಭಾಗವಹಿಸಿದ್ದ ಮಕ್ಕಳೆಂದರೆ ರಕ್ಷತಾ ಮತ್ತು ಅನುಷಾ ಮಾತ್ರ!
ಸಮಾಜಿಕ-ಶೈಕ್ಷಣಿಕವಾಗಿ ತೀರಾ ಹಿಂದುಳಿದ ಸಮುದಾಯ ಹೆಣ್ಣು ಮಕ್ಕಳು ವಿಜ್ಞಾನದಲ್ಲಿ ರಾಷ್ಟ್ರ ಪ್ರಶಸ್ತಿ ತಂದಿರುವುದು ಕರಾವಳಿಯ ಶೈಕ್ಷಣಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ಅವರಿಗೆ ಅಭಿನಂದನೆಗಳು.
ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ ಬಿಚ್ಚಿಟ್ಟ ರಾಣಿ ರಾಂಪಾಲ್



ಈ ಹೆಣ್ಣುಮಕ್ಕಳ ಸಾದನೆ ಶ್ಲಾಘನೀಯ.