Homeಅಂಕಣಗಳುಕಳೆದುಹೋದ ದಿನಗಳು - 4: ಗಣಪಯ್ಯನವರು ಹಾರ್ಲೆ ಎಸ್ಟೇಟ್ ಮಾಲೀಕರಾಗಿದ್ದು ಹೇಗೆ?

ಕಳೆದುಹೋದ ದಿನಗಳು – 4: ಗಣಪಯ್ಯನವರು ಹಾರ್ಲೆ ಎಸ್ಟೇಟ್ ಮಾಲೀಕರಾಗಿದ್ದು ಹೇಗೆ?

ಗಣಪಯ್ಯನವರು ಯಾವಾಗಲೂ ಹೇಳುತ್ತಿದ್ದ‌ ಮಾತು. ನೀನು ತೋಟವನ್ನು ಚೆನ್ನಾಗಿ ಕೃಷಿ ಮಾಡಿದರೆ ಸಾಲದು. ನೆರೆಯವರನ್ನೂ ಹಾಗೇಯೇ ಕೃಷಿ ಮಾಡಬೇಕು, ಅದೇ "ಬದುಕು" ಎಂದು.

- Advertisement -
- Advertisement -

ಕೊಡಗಿನ ಸಾಕಮ್ಮ 1950 ರಲ್ಲಿಯೇ ತೀರಿಕೊಂಡಿದ್ದರು. ತೋಟ ಅವರ ವಾರಸುದಾರರಿಗೆ ಬಂದಿತ್ತು.

ಗಣಪಯ್ಯನವರಿಗೆ ಒಬ್ಬರು ತಮ್ಮ ಕೃಷ್ಣಮೂರ್ತಿ. ಅವರೂ ಕೂಡಾ ಸಾಕಮ್ಮನವರ ತೋಟದಲ್ಲಿಯೇ ಉದ್ಯೋಗಿಯಾಗಿದ್ದರು. (ಇವರೇ ನಂತರ ಸಕಲೇಶಪುರ ತಾಲ್ಲೂಕಿನ ಗಣ್ಯ ಪ್ಲಾಂಟರ್‌ಗಳಲ್ಲಿ ಒಬ್ಬರಾದ ಕೋಗರವಳ್ಳಿ ಕೃಷ್ಣಮೂರ್ತಿ)

ಈ ಸಹೋದರರಿಗೆ ಕೊಡಗಿನಲ್ಲಿ ಪಿತ್ರಾರ್ಜಿತವಾಗಿ ಬಂದ ಸಣ್ಣ ಜಮೀನೊಂದು ಇತ್ತು.

ಈ ಅಣ್ಣ ತಮ್ಮಂದಿರು ‌ತಾವು ಸ್ವತಂತ್ರವಾಗಿ ಬದುಕಲು ತೀರ್ಮಾನಿಸಿ, ಸಾಕಮ್ಮನವರ ‌ತೋಟವನ್ನು ಬಿಟ್ಟು ಬೇರೆ ಕಡೆ ತೋಟ ಮಾಡಲು ತೀರ್ಮಾನಿಸಿದರು.

ಆಗ ಇವರ ನೆರವಿಗೆ ಬಂದವರು ಗುಂಡುಕುಟ್ಟಿ ಮಂಜುನಾಥಯ್ಯ.

ಗಣಪಯ್ಯ ಮತ್ತು ಕೃಷ್ಣಮೂರ್ತಿ ತಮ್ಮ ಕೊಡಗಿನ‌ ಪಿತ್ರಾರ್ಜಿತ ಜಮೀನನ್ನು ಮಾರಿದರು. ಅದರಿಂದ ದೊರೆತ ಹಣವಲ್ಲದೆ ಜೊತೆಯಲ್ಲಿ ಆ ಕಾಲದಲ್ಲಿ ಬಹುದೊಡ್ಡ ಮೊತ್ತ ಎನ್ನಬಹುದಾದ ಹಣದ ಸಹಾಯವನ್ನು ಮಂಜುನಾಥಯ್ಯನವರು ಮಾಡಿದರು. 1955ರಲ್ಲಿ ಗಣಪಯ್ಯ, ಕೃಷ್ಣಮೂರ್ತಿ ಮತ್ತು ಗುಂಡುಕುಟ್ಟಿ ಕುಟುಂಬದವರು ಒಟ್ಟಾಗಿ ಪಾಲುದಾರಿಕೆಯಲ್ಲಿ ಸಕಲೇಶಪುರ ತಾಲ್ಲೂಕಿನ ಕುಂಬರಡಿ ಗ್ರಾಮದ ಹಾರ್ಲೆ ಎಸ್ಟೇಟ್ ಮತ್ತು ಸಿದ್ದಾಪುರ ಗ್ರಾಮದ ಕೋಗರವಳ್ಳಿ ಎಸ್ಟೇಟ್‌ನ್ನು‌ ಖರೀದಿಸಿದರು.

ಗಣಪಯ್ಯನವರಿಗಿಂತ ಒಂದು ವರ್ಷ ಮೊದಲೇ ಕೃಷ್ಣಮೂರ್ತಿಯವರು ಕೋಗರವಳ್ಳಿಯ ತೋಟಕ್ಕೆ ಬಂದು ನೆಲೆಸಿ ಎರಡೂ ಕಡೆ ಕಾಫಿ ಕೃಷಿ ಪ್ರಾರಂಭಿಸಿದರು. ನಂತರ ಗಣಪಯ್ಯನವರು ಬಂದು ಹಾರ್ಲೆ ಎಸ್ಟೇಟ್‌ನಲ್ಲಿ ನೆಲೆ ನಿಂತರು.

ಹಾರ್ಲೆ ಎಸ್ಟೇಟ್

ಹಾರ್ಲೆ ಎಸ್ಟೇಟ್ ‌ಬ್ರಿಟಿಷರಿಂದ ಪ್ರಾರಂಭಿಸಲ್ಪಟ್ಟ ಕಾಫಿ ತೋಟ. Edmund Broughton elicott ಎಂಬಾತ ಸಕಲೇಶಪುರ ತಾಲ್ಲೂಕಿನ ಕುಂಬರಡಿ ಗ್ರಾಮದ ಕೆಂಗನ ಮಡಿ ಎಂಬಲ್ಲಿ ಒಂದು ತೋಟವನ್ನು ಮಾಡಿದ್ದ. 1894 ರಲ್ಲಿ Charles Henry Godfrey ಇದನ್ನು ಖರೀದಿಸಿದ. ಈತ ಇಂಗ್ಲೆಂಡ್‌ನಲ್ಲಿ ಮಿಲಿಟರಿ ಅಧಿಕಾರಿಯಾಗಿದ್ದು ಭಾರತಕ್ಕೆ ಒಮ್ಮೆ ಮಾತ್ರ ಭೇಟಿ ನೀಡಿದ. ಹಾರ್ಲೆ ಎಸ್ಟೇಟ್‌ಗೆ ಬರಲೇ ಇಲ್ಲ. ಎಲ್ಲವನ್ನೂ ಈತನ ಮ್ಯಾನೇಜರ್ A. middleton ನಿಭಾಯಿಸುತ್ತಿದ್ದರು.

ಈ ಮಿಡ್ಲ್ ಟನ್‌ನ ತಂದೆ ಜೆ.ಎಸ್. ಮಿಡ್ಲ್‌ಟನ್ ಕರ್ನಾಟಕದ ಅತಿ ದೊಡ್ಡ ಎಸ್ಟೇಟುಗಳಲ್ಲಿ ಒಂದಾದ ಸಕಲೇಶಪುರ ತಾಲ್ಲೂಕಿನ ಕಾಡುಮನೆ ಎಸ್ಟೇಟನ್ನು ಮಾಡಿದವರು. ಸುಮಾರು ಏಳು ಸಾವಿರ ಎಕರೆ ಪ್ರದೇಶವಾದ ಕಾಡುಮನೆ ಎಸ್ಟೇಟಿನಲ್ಲಿ ಜೆ.ಎಸ್. ಮಿಡ್ಲ್‌ಟನ್ ಮೊದಲು ಕಾಫಿ ಕೃಷಿ ಮಾಡಿದರು. ಅತಿಹೆಚ್ಚು ಮಳೆಯ ಪ್ರದೇಶವಾದ ಇಲ್ಲಿ ಕಾಫಿ ಕೈಗೂಡಲಿಲ್ಲ. ಜೆ.ಎಸ್. ಮಿಡ್ಲ್‌ಟನ್ ನಿಧನಾನಂತರ ಮಗ ಎ.ಮಿಡ್ಲ್‌ಟನ್ ಇಲ್ಲಿನ ಸಹಜ ಬೆಳೆಯಾದ ಏಲಕ್ಕಿ ಮತ್ತು ಮೆಣಸನ್ನು ಬೆಳೆಯಲಾರಂಭಿಸಿ ಅದೂ ರೋಗದಿಂದ ನಾಶವಾದ ಮೇಲೆ ಬೇರೊಬ್ಬ ಬ್ರಿಟಿಷರಿಗೆ ತೋಟವನ್ನು ಮಾರಿದರು. ಆಗ ಕಾಡುಮನೆ ಎಸ್ಟೇಟನ್ನು ಕೊಂಡವರು Earl of Warvick. ನಂತರ ಮಿಡ್ಲಟನ್ ಅವರಲ್ಲೇ ಮ್ಯಾನೇಜರ್ ಆಗಿ ಕೆಲಸಕ್ಕೆ ನಿಂತರು. ವಿಶಾಲವಾದ ಅರಣ್ಯ ಪ್ರದೇಶ ಹೊಂದಿದ್ದ ಕಾಡುಮನೆಯಲ್ಲಿ ಶಿಕಾರಿ ಮಾಡುವ ಉದ್ದೇಶದಿಂದ Earl of Warvick. ಅವರು ಅದನ್ನು ಕೊಂಡಿದ್ದರು. ಆದರೆ ಅನಾರೋಗ್ಯದಿಂದಾಗಿ ಅವರು ಭಾರತಕ್ಕೆ ಬರಲೇ ಇಲ್ಲ. ನಂತರ ಅವರು ಕಾಡುಮನೆ ಎಸ್ಟೇಟನ್ನು ಬ್ರೂಕ್ ಬಾಂಡ್ ಕಂಪೆನಿಗೆ ಮಾರಾಟ ಮಾಡಿದರು. ಬ್ರೂಕ್ ಬಾಂಡ್ ಕಂಪನಿಯವರು ಕಾಡುಮನೆಯನ್ನು ಚಹಾ ತೋಟವಾಗಿ ಪರಿವರ್ತಿಸಿದರು. ಕಾಡುಮನೆ ಎಸ್ಟೇಟ್ ಈಗ ಬೇರೆಯವರ ಒಡೆತನದಲ್ಲಿ ಇದ್ದರೂ ಚಹಾತೋಟವಾಗಿಯೇ ಮುಂದುವರೆದಿದೆ.

ಕಾಡುಮನೆ ತೋಟ ಬ್ರೂಕ್ ಬಾಂಡ್ ಕಂಪೆನಿಗೆ ಮಾರಾಟವಾದ ನಂತರವೂ ಕೆಲಕಾಲ ಎ.ಮಿಡ್ಲಟನ್ ಅಲ್ಲಿ ಕೆಲಸಮಾಡಿದರು. ನಂತರ ಹೆನ್ರಿಗಾಡ್ ಫ್ರೆಗೆ ಸೇರಿದ ಹಾರ್ಲೆ ಮತ್ತು ಯಲಗುಡಿಗೆ ತೋಟಗಳಿಗೆ ಮ್ಯಾನೇಜರ್ ಆಗಿ ಸೇರಿದರು.

ಹಾರ್ಲೆ ತೋಟವನ್ನು ಸುಮಾರು ನಾಲ್ಕುನೂರು ಎಕರೆಗಳಿಗೆ ವಿಸ್ತರಿಸಿದ್ದು ಮಿಡ್ಲ್‌ಟನ್ ಅವರು. ಆದರೆ ಅದೂ ಕೂಡಾ ಹೆಚ್ಚಿನ ಭಾಗ ಏಲಕ್ಕಿ ತೋಟವಾಗಿತ್ತು. 1921 ರಿಂದ 1955ರ ವರೆಗೆ ಹಾರ್ಲೆ ಎಸ್ಟೇಟ್‌ನ ಅಭಿವೃದ್ಧಿಯಲ್ಲಿ ಮಿಡ್ಲಟನ್‌ನ ಕೊಡುಗೆ ದೊಡ್ಡದು.

1955 ರಲ್ಲಿ ಮಿಡ್ಲ್‌ಟನ್ ಹಾರ್ಲೆ ಎಸ್ಟೇಟ್‌ನ್ನು ಗಾಡ್ ಫ್ರೆಯ ಪರವಾಗಿ ಮಾರಾಟ ಮಾಡಿ ಗಣಪಯ್ಯ ಸಹೋದರರಿಗೆ ಹಸ್ತಾಂತರಿಸಿ ಚಿಕ್ಕಮಗಳೂರು ಜಿಲ್ಲೆಯ ಯಲಗುಡಿಗೆಯಲ್ಲಿದ್ದ ತೋಟದಲ್ಲಿ ಮ್ಯಾನೇಜರ್ ಆಗಿ ಮುಂದುವರೆದರು. ಗಾಡ್ ಫ್ರೆ ನಿಧನಾನಂತರ ಎ.ಮಿಡ್ಲ್‌ಟನ್ ಅದನ್ನು ಸ್ವಂತಕ್ಕೆ ಖರೀದಿಸಿ ಅಲ್ಲಿಯೇ ನೆಲೆನಿಂತರು.

ಮಿಡ್ಲ್‌ಟನ್ ಯಲಗುಡಿಗೆಯಲ್ಲೇ ನಿಧನರಾದರು. ನಂತರ ಆ ತೋಟ ಕೆ.ಆರ್. ಸೇತ್ನಾ ಎಂಬವರಿಗೆ ಮಾರಾಟವಾಯಿತು. ಅವರು ಒಳ್ಳೆಯ ಪರಿಸರಾಸಕ್ತ ಹಾಗೂ ಸಾವಯವ ಕೃಷಿಕರು. ಅವರು ದೊಡ್ಡ ಮಟ್ಟದ ಆರ್ಕಿಡ್‌ಗಳ ಸಂಗ್ರಾಹಕರೂ ಹೌದು. ಪೂರ್ಣಚಂದ್ರ ತೇಜಸ್ವಿ ಪಕ್ಷಿತಜ್ಞ ಸಲೀಅಲಿ ಮುಂತಾದವರ ನಿಕಟವರ್ತಿಗಳೂ ಆಗಿದ್ದರು. ಆ ತೋಟವೀಗ ಅವರ ಕುಟುಂಬದವರಲ್ಲಿ ಇದೆ.

ಗಣಪಯ್ಯನವರು ಹಾರ್ಲೆಯಲ್ಲಿ ನೆಲೆ ನಿಂತ ನಂತರ ಈ ಪ್ರದೇಶದ ಸಾಂಸ್ಕೃತಿಕ-ಆರ್ಥಿಕ ಚಹರೆ ಬದಲಾಗುತ್ತಾ ಹೋಯಿತು.

ಇದರ ಮೊದಲ ಉದಾಹರಣೆಯಾಗಿ ಒಂದು ಘಟನೆ ನಡೆಯಿತು.

ಇವರು ಇಲ್ಲಿ ಬಂದು ನೆಲೆಸಿದಾಗ ಸಹಜವಾಗಿಯೇ ಸುತ್ತಲಿನ ಕೃಷಿಕರಿಗೆ ಕುತೂಹಲ, ಏನೋ ಆತಂಕ. ಬ್ರಿಟಿಷರಿಂದ ತೋಟ ಖರೀದಿಸಬೇಕೆಂದರೆ ಪ್ರಭಾವಿಗಳೇ ಇರಬೇಕು, ಕೊಡಗಿನಿಂದ ಬಂದವರು, ಸಾಕಮ್ಮನವರ ತೋಟದ ಮ್ಯಾನೇಜರ್, ಗುಂಡುಕುಟ್ಟಿಯವರ ಬೆಂಬಲ. ಮುಂದೆ ಹೇಗೋ ಎನ್ನುವ ಚಡಪಡಿಕೆ. ಇದಕ್ಕೆ ಕಾರಣಗಳೂ ಇದ್ದವು ಅವನ್ನು ಮುಂದೆ ವಿವರಿಸುವೆ.

ತೋಟವನ್ನು ಕೊಂಡನಂತರ ಸಹಜವಾಗಿಯೇ ಗಣಪಯ್ಯನವರು ಜಮೀನಿನ ಸರ್ವೆ ಮಾಡಿಸಿದರು. ಒಂದು ಪಕ್ಕದಲ್ಲಿ ಸ್ಥಳೀಯ ಸಣ್ಣ ಬೆಳೆಗಾರರೊಬ್ಬರ ಜಮೀನು. ಅಲ್ಲಿ ಸುಮಾರು ಮೂರು ಎಕರೆಗಳಷ್ಟು ಜಾಗದಲ್ಲಿ ಹಾರ್ಲೆ ಎಸ್ಟೇಟ್‌ಗೆ ಸೇರಬೇಕಾದ ಜಾಗದಲ್ಲಿ ಅವರು ಕಾಫಿ ಕೃಷಿ ಮಾಡಿದ್ದರು. ಗಿಡಗಳನ್ನು ನೆಟ್ಟು ಎರಡು ವರ್ಷಗಳು ಕಳೆದಿದ್ದವು. ಅವರು ದುರುದ್ದೇಶದಿಂದ ಆ ರೀತಿ ಮಾಡಿರಲಿಲ್ಲ. ಜಮೀನಿನ ಸರ್ವೆ ಮಾಡಿಸದೆ ಅಂದಾಜಿನಲ್ಲಿ ತೋಟ ಮಾಡಿದ್ದರಿಂದ ಹಾಗಾಗಿತ್ತು. ಪಕ್ಕದಲ್ಲಿ ಅವರಿಗೆ ಸೇರಬೇಕಾದ ಜಮೀನು ಅವರು ಖಾಲಿ ಬಿಟ್ಟಿದ್ದರು.

ಕಾನೂನಿನಂತೆ ಅವರು ಕೃಷಿ ಮಾಡಿದ ಜಮೀನು ಗಣಪಯ್ಯನವರಿಗೆ ಬಿಟ್ಟು ಕೊಡಬೇಕು. ಅವರಿಗೆ ತಲೆಬಿಸಿಯಾಯಿತು. ಮೂರು ಎಕರೆ ಕೃಷಿಮಾಡಿ ಎರಡು ವರ್ಷ ಸಾಕಿದ ಖರ್ಚು ಕೈ ಬಿಟ್ಟು ಹೋಗುವ ಚಿಂತೆಗೊಳಗಾದರು. ಅಕ್ಕ ಪಕ್ಕದವರಲ್ಲಿ ಕೆಲವರು “ನೀವು ಬಿಡಬೇಡಿ ಕೋರ್ಟಿಗೆ ಹೋಗಿ” ಎಂದೂ ಇನ್ನುಕೆಲವರು “ಅದು ನಿಮ್ಮ ಕೈ ಬಿಟ್ಟಂತೆಯೇ ಅವರು ದುಡ್ಡಿದ್ದವರು ಅವರದ್ದೇ ಮಾತು ನಡೆಯುವುದು” ಎಂದೂ ಹೀಗೆ ತಮಗೆ ತೋಚಿದಂತೆ ಮಾತಾಡುತ್ತ ಕುಳಿತರು.

ಆಗ ಗಣಪಯ್ಯನವರು ಆ ಕಾಫಿ ಬೆಳೆಗಾರರನ್ನು ಭೇಟಿ ಮಾಡಿ “ಈಗ ಕಾನೂನಿನಂತೆ ನೀವು ಕೃಷಿ ಮಾಡಿದ ಭೂಮಿ ನಮ್ಮದು ಆದರೆ ಚಿಂತೆ ಮಾಡಬೇಡಿ ನೀವು ಹೇಳಿದಲ್ಲಿ ನಿಮ್ಮ ಜಾಗದಲ್ಲಿ ನಾನು ನಮ್ಮದೇ ಖರ್ಚಿನಲ್ಲಿ ಅಷ್ಟೇ ಜಾಗ ಕೃಷಿ ಮಾಡಿಕೊಡುತ್ತೇನೆ.” ಎಂದು ಹೇಳಿ ಅವರನ್ನು ಸಮಾಧಾನಮಾಡಿ ಒಪ್ಪಿಸಿದರು.

ಮುಂದೆ ಆ ಮಾತಿನಂತೆಯೇ ಗಣಪಯ್ಯ ಆ ಕೃಷಿಕರ ಮೂರು ಎಕರೆ ನೆಲದಲ್ಲಿ ಗಿಡ ನೆಡಿಸಿ ಎರಡು ವರ್ಷ ಸಂಪೂರ್ಣ‌ ಕೃಷಿಮಾಡಿ ಕೊಟ್ಟರು.

ಆ ನಂತರ ಸುತ್ತಲಿನ ಕೃಷಿಕರು “ಪರವಾಗಿಲ್ಲ ಬಿಡಿ ಇವರು ಧರ್ಮಾತ್ಮರು” ಎಂದು‌ ಹೇಳ ತೊಡಗಿದರು.

ಗಣಪಯ್ಯನವರು ಯಾವಾಗಲೂ ಹೇಳುತ್ತಿದ್ದ‌ ಮಾತು. ನೀನು ತೋಟವನ್ನು ಚೆನ್ನಾಗಿ ಕೃಷಿ ಮಾಡಿದರೆ ಸಾಲದು. ನೆರೆಯವರನ್ನೂ ಹಾಗೇಯೇ ಕೃಷಿ ಮಾಡಬೇಕು, ಅದೇ “ಬದುಕು” ಎಂದು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು -1: ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಆಂಧ್ರದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲಾಗಿದೆ ಎಂಬ...

0
"ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಆಂಧ್ರ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿಮೆ ಮಾಡಿದೆ. ಇದೊಂದು ಪ್ರಮುಖ ಯೋಜನೆಯಾಗಿದ್ದು, ಇದನ್ನು ಇಡೀ ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಬಯಸಿದೆ" ಎಂದು ಟೋಂಕ್‌ನಲ್ಲಿ ಮಂಗಳವಾರ (ಏ.23)...